ಅತಿ ಕಪ್ಪಿನ ಡಾಂಬರು ದಾರಿಯಂಚಿಗೆ
ಸಿಮೆಂಟು ಲೇಪಿತ
ಮರದ ಬುಡಗಳು
ಸುರಿವ ಮಳೆಯೂ ಇಂಗದ
ಉದುರಿದ ಎಲೆಗಳು
ಕೊಳೆತು ಗೊಬ್ಬರವಾಗಲೂ
ಅವಕಾಶವಿಲ್ಲ
ಜೀವಸೆಲೆಯಿಲ್ಲ !
ಅತಿ ಸ್ವಚ್ಛವಾಗಿರುವ
ಮನೆಗಳು
ಒಂದಿನಿತೂ ಅಸ್ತವ್ಯಸ್ತಗೊಳ್ಳದಂತೆ
ವಸ್ತುಗಳ ಕಾಪಿಡುವ
ಶಿಸ್ತಿನ ಮಿಲಿಟರಿ
ಸಿಪಾಯಿಗಳಂತಿರುವ
ಹಿರಿಯರು
ಕುಣಿದು ಕುಪ್ಪಳಿಸುವ
ಮನಸಾರೆ ಖಷಿಪಡುವ
ಸ್ವಾತಂತ್ರ್ಯವೂ ಮನೆಯ
ಚಿಣ್ಣರಿಗಿಲ್ಲ
ಜೀವಸೆಲೆಯಿಲ್ಲ !
ಅತಿ ದಟ್ಟನೆಯ ಹಿಮ
ಮಂಜು ಕವಿದ
ನಸುಗತ್ತಲ ಶಿಶಿರದ
ಶೀತಲ ಮೌನ
ಒಣಮರದ ನಿಟ್ಟುಸಿರು
ಹಸಿರಿಲ್ಲ ; ಹೂವಿಲ್ಲ
ಹಕ್ಕಿಗಳ ದನಿಯಿಲ್ಲ
ಚೈತನ್ಯ ನೀಡುವ
ರವಿಯಿಲ್ಲ
ಜೀವಸೆಲೆಯಿಲ್ಲ !
ಅತಿ ವಿದ್ಯಾವಂತರು
ನಾಜೂಕು ನಾಗರಿಕರು
ಭಾವನೆಗಳನ್ನೆಲ್ಲ
ಮುಚ್ಚಿಟ್ಟು
ಸದಾ ಇಸ್ತ್ರಿ ಹಾಕಿದಂತ
ಮುಖ ಹೊತ್ತ ಘನ ಗಂಭೀರರ
ಬಣ್ಣದ ಮುಖಗಳಿಗೆ
ಕಿರುನಗೆಯಿಲ್ಲ
ಜೀವಸೆಲೆಯಿಲ್ಲ !
ಶಾಂತಲಾ ರಾಜಗೋಪಾಲ್
ಬೆಂಗಳೂರು
Comments