top of page

ಜಾನಪದ ಜಂಗಮ ಡಾ.ಎಲ್.ಆರ್ ಹೆಗಡೆ
ಡಾ.ಎಲ್.ಆರ್ ಹೆಗ್ಡೆಯವರು ನನ್ನ ಪರಮ ಆಪ್ತರು. ನಾನು ಅವರ ವಿದ್ಯಾರ್ಥಿಯಲ್ಲ. ೧೯೮೦ ರಲ್ಲಿ ಕುಮಟಾದಲ್ಲಿ ನಡೆದ ಜಾನಪದ ಕಾರ್ಯಕ್ರಮದಲ್ಲಿ‌ ಆದ ಪರಿಚಯ ಸ್ನೇಹವಾಗಿ ಒಡನಾಟ ಬೆಳೆದು ಅವರು ನನ್ನ ಆರೋಗ್ಯಕ್ಕೆ ಔಷಧಿ ಹೇಳುವ ,ನೀಡುವ ವೈದ್ಯರು ಆದರು. ನಾನು ಕಂಡ ಮಗುಮನದ ಮುಗ್ಧ ವಿದ್ವಾಂಸರು ಅವರು. ಎಲ್ಲರ ಡಾಕ್ಟರ ಎಲ್.ಆರ್.ಹೆಗ್ಡೆ ಎಂದು ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದೆ. ಹೊನ್ನಾವರಕ್ಕೆ ಬಂದಾಗ ನಮ್ಮ ಮನೆಗೆ ಬಂದು ಊಟ ಮಾಡಿ,ನನ್ನ ಮಗಳು ಗೌತಮಿಗೆ ತಾವು ಸಂಪಾದಿಸಿದ ಕತೆಯ ಪುಸ್ತಕ ನೀಡಿ,ಊಟ ಮಾಡುವಾಗಲು ಆರೋಗ್ಯದ ಪಾಠ ಮಾಡಿದ ಸಜ್ಜನರು ಅವರು.ಅವರು ಕಾಸರಕೋಡಿನ ಸ ಸ್ನೇಹ ಕುಂಜದಲ್ಲಿದ್ದಾಗ ದಿನಂಪ್ರತಿ ಅವರನ್ನು ಕಂಡು ಮಾತನಾಡಿ ಯೋಗ ಕ್ಷೇಮ ವಿಚಾರಿಸಿ ಬಂದಾಗ ಮಾತ್ರ ಅವರಿಗೆ ಮತ್ತು ನನಗೆ ಸಮಾಧಾನ. ಈ ಜಿಲ್ಲೆ ಕಂಡ ಅಪರೂಪದ ಜಾನಪದ ವಿದ್ವಾಂಸ, ಸಂಶೋಧಕ, ಕತೆಗಾರ, ಕವಿ ಡಾ.ಎಲ್.ಆರ್.ಹೆಗಡೆ ಅವರ ಕುರಿತು ನಮ್ಮ ಪತ್ರಿಕೆಯ ಹಿರಿಯ ಹಿತೈಷಿ ಶ್ರೀ ಲಕ್ಷ್ಮಿನಾರಾಯಣ ಶಾಸ್ತ್ರಿ ಅವರ ಬರಹ ನಿಮ್ಮ ಓದಿಗಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂಈ ವರ್ಷ ಡಾ. ಎಲ್. ಆರ್. ಹೆಗಡೆಯವರ ಜನ್ಮ ಶತಮಾನೋತ್ಸವ ವರ್ಷ. ಘನ ವಿದ್ವಾಂಸರಾಗಿದ್ದ ಅವರು ೧೯೨೩ ಜನೆವರಿ ೨ ರಂದು ಹುಟ್ಟಿದವರು. ಜಾನಪದ/ ವೈದ್ಯಕೀಯ/ ಕನ್ನಡ ಸಾಹಿತ್ಯದ ಕಣಜದಂತಿದ್ದ ಅವರನ್ನು ಉತ್ತರ ಕನ್ನಡ ಜಿಲ್ಲೆ ಮರೆತೇಬಿಟ್ಟಿರುವುದು ವಿಷಾದದ ಸಂಗತಿ. ಇನ್ನಾದರೂ ಅವರ ಜನ್ಮಶತಮಾನೋತ್ಸವ ಆಚರಿಸಲು ಉ.ಕ. ಜಿಲ್ಲೆಯ ಸಾಹಿತ್ಯಲೋಕ ಮನಸ್ಸು ಮಾಡಲಿ.

************************

ಜಾನಪದ ಕಣಜದಂತಿದ್ದ

ಡಾ. ಎಲ್. ಆರ್. ಹೆಗಡೆಯವರು

*

ಡಾ. ಎಲ್. ಆರ್. ಹೆಗಡೆಯವರು ಕುಮಟಾ ಕೆನರಾ ( ಬಾಳಿಗಾ) ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ನಾನು ೧೯೬೨ ರಲ್ಲಿ ಅವರ ಶಿಷ್ಯ. (ಆಗ‌ ಡಾ. ಕೆ. ಜಿ. ಶಾಸ್ತ್ರಿಯವರೂ ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು). ಕಾಲೇಜಿಗೆ ಹತ್ತಿರದ ಹೆಗಡೆ ಎಂಬ ಊರಲ್ಲಿ ಅವರ ವಾಸ. ಅವರ ಪಾಠಗಳೆಂದರೆ ಹಲವು ಬಗೆಯ ವಿಷಯಗಳ ಜ್ಞಾನ ಸಂಪತ್ತೇ ಆಗಿರುತ್ತಿತ್ತು.

ಡಾ. ಹೆಗಡೆಯವರು ಉತ್ತರ ಕನ್ನಡದ ಜಾನಪದ ಸಂಪತ್ತನ್ನು ಅಪಾರ ಪ್ರಮಾಣದಲ್ಲಿ ಅಗೆದು ತೆಗೆದವರು. ಆ ಕ್ಷೇತ್ರದಲ್ಲಿ ತುಂಬ ಕ್ಷೇತ್ರಕಾರ್ಯವನ್ನೂ ಮಾಡಿದರು. ( ಅವರಂತೆ ಡಾ. ಎನ್. ಆರ್. ನಾಯಕ ಮತ್ತು ಶಾಂತಿ ನಾಯಕ ದಂಪತಿಗಳು ಸಹ).

ಸಂಗಡ ಎಲ್. ಆರ್. ಹೆಗಡೆಯವರು ಓರ್ವ ಪರಿಣಿತ ಹೋಮಿಯೋಪತಿ, ಆಯುರ್ವೇದ ವೈದ್ಯರೂ‌ ಆಗಿದ್ದರು. ಅದರ ಕುರಿತು ಸಾಕಷ್ಟು ಪುಸ್ತಕವನ್ನೂ ಬರೆದಿದ್ದಾರೆ. ದಿನಾಲು ಅವರ ಮನೆ ಮುಂದೆ ಬೆಳಿಗ್ಗೆ ೨೫-೩೦ ಜನ ಅವರಿಂದ ಔಷಧಿ ಪಡೆಯಲು ಬರುತ್ತಿದ್ದರು. ನಾನು ಒಂದೆರಡು ಸಲ ಅವರ ಮನೆಗೆ ಹೋದಾಗ ಅದನ್ನು ನೋಡಿದ್ದೇನೆ. ವಿಶೇಷವಾಗಿ ಹಳೆಗನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿದವರು. ಕೇವಲ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿದಿದ್ದರೂ ಅವರು‌ ದೊಡ್ಡ ಹೆಸರು‌ ಗಳಿಸುತ್ತಿದ್ದರು. ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದು.

ಅವರು ಜಾನಪದ ಮತ್ತು ಆರೋಗ್ಯ ಕ್ಷೇತ್ರಕ್ಜೆ ಸಂಬಂಧಿಸಿದಂತೆ ಸುಮಾರು ಎಪ್ಪತ್ತಾರು ಕೃತಿಗಳನ್ನು ರಚಿಸಿದ್ದಾರೆ. ಕುಮಾರವ್ಯಾಸನ ಪಾತ್ರಸೃಷ್ಟಿ ಎಂಬ ವಿಷಯವಾಗಿ ಮಹಾಪ್ರಬಂಧ ಬರೆದು ಪಿಎಚ್ ಡಿ ಪದವಿ ಪಡೆದ ಅವರು ಅಗಾಧ ಸಾಹಿತ್ಯ ಸೃಷ್ಟಿ ಮಾಡಿದರು. ಉತ್ತರ ಕನ್ನಡದ ಹಳ್ಳಿಹಳ್ಳಿಗಳ ಮೂಲೆಗೆ ಹೋಗಿ ಹಲವು ಗ್ರಾಮೀಣ ಸಂಸ್ಕೃತಿ, ಜನಜೀವನಗಳ, ಮತ್ತು ಜಾನಪದ ಸಾಹಿತ್ಯದ ಸಂಗ್ರಹ, ಸಂಶೋಧನೆ ಅಧ್ಯಯನ ನಡೆಸಿದರು. ಉತ್ತರ ಕನ್ನಡದ ಗೊಂಡರು, ಸಿದ್ಧಿ ಜನರು, ಕುಮರಿ ಮರಾಠಿಗರ ಕುರಿತು ಪುಸ್ತಕ ಬರೆದರು. ಜಿಲ್ಲೆ ಜಾನಪದ ಕಥೆಗಳನ್ನಂತೂ ಬಹಳ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ‌ ಪ್ರಕಟಿಸಿದರು. ಗ್ರಾಮೀಣ ಔಷಧಿ ಮತ್ತು ಚಿಕಿತ್ಸೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಪ್ರಚಲಿತವಿದ್ದ ಕಥೆಗಳು, ಗಾದೆಗಳು,, ಹಾಡುಗಳು, ಗುಮ್ಮಟೆ ಪದಗಳು, ಲಾವಣಿ ಪದಗಳು, ಜನಪದ ವೈದ್ಯ, ಮಕ್ಕಳ ಕಥೆಗಳು, ಅಡಿಗೆ ಪದ್ಧತಿಗಳು, , ಮೂಢ ನಂಬಿಕೆಗಳು, ದನಗಳ ವೈದ್ಯಕೀಯ, ಜನಪದ ಭಾರತದ ಕಥೆಗಳು, ಮುಕ್ರಿ ಮತ್ತು ಹೊಲೆಯರ ಪದಗಳು, ಹಕ್ಕಿನರಸಣ್ಣಕಥೆಗಳು, ಮದುವೆ ಹಾಡುಗಳು ಹೀಗೆ ಅವರ ಕೃತಿಗಳನ್ನು ಗಮನಿಸಿದರೆ ಅವರು ನಿಜಕ್ಕೂ ಒಂದು ಜಾನಪದ ವಿಶ್ವಕೋಶವೇ ಆಗಿದ್ದರೆನ್ನಲಡ್ಡಿಯಿಲ್ಲ.

ಹೆಗಡೆಯವರ ಕಥೆಗಳು ರಶ್ಯನ್ ಮತ್ತು ಫ್ರೆಂಚ್ ಭಾಷೆಗಳಿಗೂ ಅನುವಾದವಾಗಿದ್ದು ಇವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, , ಉ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವಗಳು ಲಭಿಸಿವೆ. ಅವರಿಂದ ಜಿಲ್ಲೆಯ ಜಾನಪದ, ವೈದ್ಯಕೀಯ ಕ್ಷೇತ್ರಗಳಿಗೆ ಸಂದ ಕೊಡುಗೆ ಅಪೂರ್ವವಾದದ್ದು.

೧೯೨೩ ಜನೆವರಿ ೨ ರಂದು ಜನಿಸಿದ ಅವರು ೨೦೦೫ ಸೆಪ್ಟೆಂಬರ್ ೧೫ ರಂದು ನಿಧನ ಹೊಂದಿದರು. ಅವರ ಹೆಸರು ಲಕ್ಷ್ಮೀನಾರಾಯಣ ಮತ್ತು ಪತ್ನಿಯ ಹೆಸರು‌ ಅನಸೂಯಾ. ತಂದೆ ರಾಮ, ತಾಯಿ ಮಹಾಲಕ್ಷ್ಮಿ.


- ಎಲ್. ಎಸ್. ಶಾಸ್ತ್ರಿ


49 views0 comments

Comments


bottom of page