top of page

ಜಾನಪದ ಗದ್ದುಗೆಯೇರಿದ ನಿಸರ್ಗದ ಮಗು- ಡಾ. ಶ್ರೀಪಾದ ಶೆಟ್ಟಿ

ಡಾ. ಶ್ರೀಪಾದ ಶೆಟ್ಟಿಯವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ " ಬಿ. ಎಸ್. ಗದ್ದಗಿಮಠ ಪ್ರಶಸ್ತಿ" ದೊರಕಿತೆಂದು ತಿಳಿದಾಗ ಆಶ್ಚರ್ಯವೇನೂ ಆಗಲಿಲ್ಲ. ತಡವಾಗಿ ದೊರಕಿತಲ್ಲ ಎಂದು ಬೇಸರವಾಯಿತು. ಹಾಗೆ ಆಗುವದೇನೂ ನಮ್ಮ ಇಂದಿನ ವ್ಯವಸ್ಥೆಯಲ್ಲಿ ಹೊಸದಲ್ಲ. ಅವರನ್ನು ಹೊನ್ನಾವರ ತಾಲೂಕಾ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದಾಗಲೂ ನಾನು ಬೇಸರ ಪಟ್ಟುಕೊಂಡಿದ್ದೆ. ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಗೌರವ ಪಡೆಯಲು ಬೇಕಾದ ಎಲ್ಲ ಯೋಗ್ಯತೆ, ಸಾಧನೆ ಅವರದು. ಕಳೆದ ನಾಲ್ಕು ದಶಕಗಳಿಗೂ ಮಿಕ್ಕಿದ ಅವರ ಸಾರ್ವಜನಿಕ ಬದುಕಿನತ್ತ ಕಣ್ಣು ಹಾಯಿಸಿದರೆ ನಮಗದು ಸ್ಪಷ್ಟವಾಗುತ್ತದೆ. ಆದರ್ಶ ಪ್ರಾಧ್ಯಾಪಕರಾಗಿ, ಸಮಾಜವಾದಿ ಚಿಂತನೆಯ ಕವಿಯಾಗಿ, ಜಾನಪದ ಜಗತ್ತಿನ ಒಳನೋಟಗಳಿಗೆ ಸಾಕ್ಷಿಯಾದ ಹೃದಯವಂತರಾಗಿ, ಸಾಮಾಜಿಕ ಕಾಳಜಿಯ ಸಂಘಟಕರಾಗಿ, ಹೊಸ ಹೊಸ " ಆಲೋಚನೆ" ಗಳನ್ನು ಹುಟ್ಟುಹಾಕುವ ವೇದಿಕೆಯ ಸೃಷ್ಟಿಕರ್ತರಾಗಿ , ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರನ್ನೂ/ ಎಲ್ಲವನ್ನೂ ತಮ್ಮ ಪ್ರೀತಿಯ ತೆಕ್ಕೆಗೆ ತೆಗೆದುಕೊಳ್ಳುವ ಆತ್ಮೀಯತೆಯ ಸೆಲೆಯಾಗಿ ಶ್ರೀಪಾದ ಶೆಟ್ಟಿಯವರು ತಮ್ಮ ಬಹುಮುಖೀ ವ್ಯಕ್ತಿತ್ವವನ್ನು ಜಗದಗಲ ಮುಗಿಲಗಲ ಹರಡಿಬಿಟ್ಟಿದ್ದಾರೆ‌.

ನಾನು ಹೊನ್ನಾವರದಲ್ಲಿ ಶೃಂಗಾರ ಮಂಟಪ ವೇದಿಕೆಯ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ೬೦-೭೦ ರ ದಶಕಗಳಲ್ಲಿ ಅವರು ಅದೇ ಆಗ ಸಾಹಿತ್ಯ ಲೋಕಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಮ್ಮ ಮಂಟಪದ ಬಳಗದ ಚಟುವಟಿಕೆಗಳನ್ನೆಲ್ಲ ಅವರು ದೂರ ನಿಂತೇ ನೋಡುತ್ತ ಅದರಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದವರು. ನಾನು, ಆರ್. ವಿ. ಭಂಡಾರಿ, ಜಿ. ಎಸ್. ಅವಧಾನಿ, ಮೊದಲಾದವರೆಲ್ಲ ಆಗ ಸಾಹಿತ್ಯ ಕ್ಷೇತ್ರದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೆವು. ಮುಂದೆ ೧೯೮೨ ರಲ್ಲಿ ಶ್ರೀಪಾದ ಶೆಟ್ಟಿಯವರ ಮೊದಲ ಕವನ ಸಂಕಲನ " ಪ್ರಿಯ ಶರಾವತಿ" ಯನ್ನು ಧಾರವಾಡದಲ್ಲಿ ನಾನು ನಡೆಸುತ್ತಿದ್ದ ಸಮತಾ ಮುದ್ರಣಾಲಯದಲ್ಲೇ ಮುದ್ರಿಸಿ ಕೊಡುವ ಸಂದರ್ಭ ಬಂತು. ಅಲ್ಲಿಂದ ನಾನು ಬೆಳಗಾವಿಗೆ ಬಂದು‌ನೆಲೆಸಿದ ನಂತರ ರಾಜ್ಯ ಮಟ್ಟದ ೧೨ ನೇ ಚುಟುಕು ಸಾಹಿತ್ಯ ಸಮ್ಮೇಳನ ಮಾಡಿದಾಗ ಡಾ. ಶ್ರೀಪಾದ ಶೆಟ್ಟಿಯವರನ್ನು ಆಮಂತ್ರಿಸಿ ಅವರಿಂದ ದಿನಕರ ದೇಸಾಯಿಯವರ ಚುಟುಕುಗಳ ಕುರಿತು ಉಪನ್ಯಾಸ ಮಾಡಿಸಿದ್ದೆ. ಅಷ್ಟರಲ್ಲಾಗಲೇ ಅವರೊಬ್ಬ ಉತ್ತಮ ವಾಗ್ಮಿಯಾಗಿ , ಜಾನಪದ ತಜ್ಞರಾಗಿ, ಚಿಂತನಶೀಲ ಸಾಹಿತಿಯಾಗಿ ಬೆಳೆದುನಿಂತಿದ್ದರು. ಅಂಕೋಲಾ ಕಾಲೇಜಿನಿಂದ ಹೊನ್ನಾವರ ಕಾಲೇಜಿಗೆ ಬಂದ ಮೇಲೆ ಅವರ ಚಟುವಟಿಕೆಗಳು ಇನ್ನಷ್ಟು ವಿಸ್ತಾರವಾಗಿ ಗರಿಗೆದರಿದವು. ಹಲವು ಆಸಕ್ತಿಯ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವರಿಗೆ ಅವಕಾಶವಾಯಿತು.

ಹೊನ್ನಾವರದ ಹಳ್ಳಿ ಮೂಲೆಯೊಂದರಲ್ಲಿ ಬಡತನದ ಸಖ್ಯದಲ್ಲೇ ಬೆಳೆದ ಶ್ರೀಪಾದರ ಅದಮ್ಯ ಚೇತನಕ್ಕೆ ಯಾವುದೂ ಅಡ್ಡಿಯಾಗಲಿಲ್ಲ. ನಿಸರ್ಗ ಮತ್ತು ಮಾನವ ಪ್ರೀತಿಯೇ ಅವರ ಬೆಳವಣಿಗೆಗೆ ಮೂಲ ಬಂಡವಾಳವಾಯಿತು. ಬದುಕಿನ ಕಷ್ಟಗಳ ವಿರುದ್ಧ ಹಟಮಾರಿ ಹುಡುಗನಾಗಿ ಹೋರಾಡಿದ ಅವರು ಒಂದರ್ಥದಲ್ಲಿ ತಮ್ಮನ್ನು ತಾವೇ ಬೆಳೆಸಿಕೊಂಡರು. ತಮ್ಮ ಸುತ್ತಲಿನ ಯಕ್ಷಗಾನ, ಜಾನಪದ ಕಲೆಗಳ ಕುರಿತು ಕುತೂಹಲ ಬೆಳೆಸಿಕೊಂಡಿದ್ದ ಅವರಿಗೆ ಮುಂದೆ ಎಸ್. ಕೆ. ಕರೀಂಖಾನ್, ಎಚ್. ಎಲ್‌ . ನಾಗೇಗೌಡ, ಜಿ. ಸಂ. ಪರಮಶಿವಯ್ಯ, ಹಿ. ಚಿ. ಬೋರಲಿಂಗಯ್ಯ ಮೊದಲಾದ ಜಾನಪದ ತಜ್ಞರ ಮಾರ್ಗದರ್ಶನ ದೊರಕಿದ್ದರಿಂದ ಜಾನಪದ ಸಾಹಿತ್ಯ ಕಲೆಗಳ ವಿಶೇಷ ಅಧ್ಯಯನಕ್ಕೆ ಪ್ರೇರಣೆ ದೊರಕಿತು. ಆ ಕ್ಷೇತ್ರದಲ್ಲಿ ಅವರು ಸಾಕಷ್ಟು ಕೆಲಸ ಮಾಡಿದ್ದರೂ, ಪ್ರಚಾರದ ಸದ್ದುಗದ್ದಲವಿಲ್ಲದೆ ತಮ್ಮಷ್ಟಕ್ಕೆ ತಾವೇ ಕೆಲಸ ಮಾಡುತ್ತ ಹೋಗುವ ಅವರ ಸ್ವಭಾವದಿಂದಾಗಿಯೇ ಅವರಿಗೆ ಸಿಗಬೇಕಾದಷ್ಟು ಮಾನಸನ್ಮಾನ ಗೌರವಗಳು ಈತನಕ ಸಿಕ್ಕಿಲ್ಲವೇನೊ ಅನಿಸುತ್ತದೆ. ಈಗ ಅವರನ್ನು ಜಾನಪದ ಅಕಾಡೆಮಿಯೇ ತಜ್ಞರ ಪ್ರಶಸ್ತಿ ನೀಡಿ ಗೌರವಿಸುತ್ತಿರುವದಕ್ಕಾಗಿ ಅವರ ಆಪ್ತವಲಯದಲ್ಲಿ ಸಂತೋಷ ಸಂಭ್ರಮ ಕಂಡುಬರುತ್ತಿರುತ್ತಿದೆ. ಅರ್ಹರಿಗೆ ಪ್ರಶಸ್ತಿ ಸಿಕ್ಕುವದೇ ಅಪರೂಪವೆಂಬಂತಹ ವಾತಾವರಣದಲ್ಲಿ ಡಾ. ಶ್ರೀಪಾದ ಶೆಟ್ಟಿಯವರಿಗೆ ಈ ಪ್ರಶಸ್ತಿ ಸಿಕ್ಕಿರುವದಕ್ಕಾಗಿ ಅವರನ್ನು ಬಲ್ಲ ನಮಗೆಲ್ಲ ಖುಷಿಯಾಗಿದೆ. ಅವರ ಕಾರ್ಯಕ್ಷೇತ್ರ ಹತ್ತು ಹಲವು ಮುಖವಾಗಿ ಹಬ್ಬಿಕೊಂಡಿದ್ದು ಸಾಹಿತ್ಯ, ಪತ್ರಿಕೆ, ಸಮಾಜ, ಸಂಸ್ಕೃತಿ , ಜಾನಪದ ಮೊದಲಾದ ಅವರ ಮೂಲ ಆಸಕ್ತಿ ಅಭಿರುಚಿಗಳಿಗೆ ಪೂರಕವಾಗಿ ಕವಲೊಡೆದುಕೊಂಡಿದ್ದು ಸಹಜ. ಮುಖ್ಯವಾಗಿ ಅವರು ಸ್ನೇಹಜೀವಿ. ಅವರ ಆ ನಿಷ್ಕಲ್ಮಶ , ಮುಗ್ಧ ಸ್ನೇಹದ ಬಲೆಯಲ್ಲಿ ಸಿಲುಕಿದವರು ಹೊರಬರುವದು ಕಷ್ಟ. ಬರಲು ಅವರು ಕೊಡುವದೂ ಇಲ್ಲ. ಏಕೆಂದರೆ ಅವರ ಸ್ವಭಾವವೇ ಹಾಗೆ. ಅವರಿಗೆ ಎಲ್ಲರೂ ಬೇಕು, ಎಲ್ಲವೂ ಬೇಕು. ಅದಕ್ಕೆ ಬೇರೆ ಯಾವ ಅಂಶಗಳೂ ಅಡ್ಡಬರುವದಿಲ್ಲ. ಅವರಿಗೆ ಅನ್ಯಾಯವಾದಾಗಲೂ ಅವರು ಆ ಬೇಸರವನ್ನು ಬಹಳ ದೊಡ್ಡದು ಮಾಡಲು ಹೋಗದೇ ಅಲ್ಲಿಂದಲ್ಲೇ ನುಂಗಿಕೊಂಡು ಮುಖದಲ್ಲಿ ನಗು ಚಿಮ್ಮಿಸುವವರು.

ಅವರಿಗೆ ಪ್ರಶಸ್ತಿ ದೊರಕಿದ್ದಕ್ಕೆ ನಾನಿಲ್ಲಿ ನನಗಾದ ಸಂತೋಷವನ್ನು ಆತ್ಮೀಯವಾಗಿ ಕೆಲ ಶಬ್ದಗಳಲ್ಲಿ ಹಂಚಿಕೊಂಡಿದ್ದೇನೆ ಹೊರತು ಇದು ಅವರ ಸೇವೆ ಸಾಧನೆಯ ಸಮಗ್ರ ಚಿತ್ರಣವಲ್ಲ. ಪ್ರಶಸ್ತಿ ಬರಲಿ ಬಿಡಲಿ, ಅದಕ್ಕಾಗಿ ತಲೆ ಕೆಡಿಸಿಕೊಳ್ಳದೇ ತಮ್ಮಷ್ಟಕ್ಕೆ ತಾವು ಮಾಡಬೇಕಾದ ಕೆಲಸಗಳನ್ನು ಮಾಡುತ್ತ ಹೋಗುವ ಅವರ ನಿರ್ಲಿಪ್ತ ಗುಣದಿಂದಾಗಿಯೇ ಅವರು ನಮ್ಮಂಥವರಿಗೆ ಇಷ್ಟವಾಗುತ್ತಾರೆ. ಅವರು ಬದುಕನ್ನು ಪ್ರೀತಿಸುವವರು. ಮನುಷ್ಯತ್ವವನ್ನು ಪ್ರೀತಿಸುವವರು. ಅವರ ಆ ಪ್ರೀತಿ ನಿಸ್ವಾರ್ಥವಾದುದು . ಆದ್ದರಿಂದಲೇ ಅವರು ಎಲ್ಲರಿಗೂ ಪ್ರಿಯವಾದವರು. ಅವರನ್ನು ಇನ್ನಷ್ಟು ಹೆಚ್ಚಿನ ಪ್ರಶಸ್ತಿ ಗೌರವಗಳು ಹುಡುಕಿಕೊಂಡು ಬರಲಿ , ಅವರಿಂದ ಇನ್ನಷ್ಟು ಹೆಚ್ಚಿನ ಕೆಲಸವಾಗಲಿ ಎನ್ನುವದು ನಮ್ಮೆಲ್ಲರ ಆಸೆ ಅಪೇಕ್ಷೆ.

- ಎಲ್. ಎಸ್. ಶಾಸ್ತ್ರಿ




54 views1 comment

1 Comment


ramachandravm2012
Feb 03, 2022

Congratulations

Like

©Alochane.com 

bottom of page