ಹಸಿಮಾಂಸ ಹರಿದು ತಿನ್ನುತ್ತಿದ್ದ ನರ ಮಾನವ
ಪೂರ್ವಇತಿಹಾಸ ಕಾಲ ನೆನಪಿಸಿಕೊಳ್ಳಲೇಬೇಕು ಇವ
ಗುಡ್ಡ ಗವಿ ಗವಾರದಾಗ ಬದುಕಿತ್ತಾಗ ಬಡಜೀವ
ಈಗ್ಯಾಕೊ ಬಂತು ಜಾತಿ ಧರ್ಮಾಂಧತೆ ಭಾವ!
ಬಟ್ಟೆ ಬರಿ ಇಲ್ಲದೆ ಬೆತ್ತಲೆ ಬದುಕಿದ್ದ ಆವಾಗ
ಕಲ್ಲಿನಾಯುಧ ಹಿಡಿದಿದ್ದ ಕೈಯಾಗ
ಪ್ರಾಣಿಯಂತೆ ಧ್ವನಿ ಮಾಡಿ ಕೂಗುತ್ತಿದ್ದನಾಗ
ಈಗ ಜಾತಿ ಧರ್ಮದ ಜಿಡ್ಡು ಹಿಡದೈತೆ ಹೆಂಗ!
ಮನೆಮಠ ಗುಡಿಚರ್ಚು ಗೊತ್ತಿದ್ದಿಲ್ಲ ಆಗ ನಿನಗ
ಗಿಡ ಮರ ಪೊಟರೆ ವಾಸಕ್ಕೆ ಆಸರೆ ನಿನಗಾಗ
ಮುಟ್ಟುತಟ್ಟು ಮಡಿ ಮೈಲಿಗೆ ಎಲ್ಲಿತ್ತು ಆವಾಗ
ಮಠ ಮಂದಿರಗಳ ಜಗಳ ಯಾಕೆ ಈಗೀಗ!
ನಮ್ಮ ಪೂರ್ವಜರ ಬಗ್ಗೆ ಅರಿತಿಲ್ಲವೇನು
ಮಂಗನಿಂದ ಮಾನವ ಇದು ಸತ್ಯ ಅಲ್ಲವೇನು
ಮನುಷ್ಯಮನುಷ್ಯರ ಮಧ್ಯೆ ದ್ವೇಷ ಯಾಕೇನು
ಮಾನವ ಕುಲವೊಂದೇ ತಿಳಿದು ಬಾಳೋ ನೀನು!
ಮನುಷ್ಯತ್ವ ಮರೆತು ಸಾಧಿಸಿದ್ದು ಯಾರು ಏನನ್ನು
ನಾವು ಭಾವೈಕ್ಯತೆಯಿಂದ ಬದುಕಬಾರದೇನು
ಎಲ್ಲರಿಗೂ ಭೂಮಿ ಭಾನು ಒಂದೇ ಅಲ್ಲವೇನು
ತಿಳಿಯೋ ಮನುಷ್ಯರ ಮಧ್ಯೆ ದ್ವೇಷ ಸಾಕಿನ್ನು!
🐤 ಮಾರುತೇಶ್ ಮೆದಿಕಿನಾಳ
Comments