ನವ ವಧುವಂತೆ ಬಂದೆನು ಮನೆಗೆ
ಸ್ವಾಗತಿಸಿದಿರಿ ನನ್ನನು ಮನ್ನಿಸಿ.
ಹೊರಟೆವು ನಾವು ಜೋಡಿಲಿ ಜಾತ್ರೆಗೆ
ಕದ್ದೊಯ್ದರು ನಮ್ಮನು ಅಗಲಿಸಿ.
ನನ್ನೆದುರಲ್ಲೇ ಯಾರದೋ ಜೊತೆಯಲಿ
ಮರೆಯಾದನು ನನ್ನಯ ನಲ್ಲ.
ಇದ್ದನು ಅವನು ನನ್ನೆದೆ ಉಸಿರಲಿ
ಬೇರೆ ಮಾಡಿದರೆ ಬದುಕಿಲ್ಲ.
ಬರಿಗಾಲಲಿ ಬೇಕಾದೆ ನಡೆವಾಗ ಅಂದು
ಜೊತೆಯಾದಳೇ ಬೂಟು.
ಸ್ವಲ್ಪವೇ ಹರಿದರೂ ಎಸೆವಿರಿ ಬದಿಯಲಿ
ನಾನಾದೆ ಬೇಡದ ಸಗಟು.
ಮನ್ನಣೆ ನನಗಿದೆ ನಿಮ್ಮಯ ಸಿಟ್ಟಲಿ
ಕಳ್ಳನ ಮುಖಕೆ ಎಸೆಯುವಿರಿ.
ಮರುದಿನ ತೋರ್ವರು ದಿನಪತ್ರಿಕೆಯಲಿ
ಖುಷಿಯೋ ದುಃಖವೋ ನೋಡುವಿರಿ.
ಒಂದಾಗುವಿರಿ ಮದುವೆಯ ನೆಪದಲಿ
ಬೇರೆ ಆಗದಿರಿ ನೀವೆಂದು.
ಜೋಡಿಯಾಗಿಯೇ ಇರುವೆವು ಮನುಜ
ನಮ್ಮನು ನೋಡಿ ಕಲಿ ಇಂದು.

ಅರುಣ ಗೌಡ. ಜೂಗ