top of page

ಚಾರುಕೇಶಿ

ಅನ್ಯದೇಶೀಯರ, ಅನ್ಯಧರ್ಮೀಯರ ದಾಸ್ಯಕ್ಕೊಳಪಟ್ಟು ಅವರು ನಮ್ಮ ಬದುಕಿನ ಮೇಲೆ ಸವಾರಿ ಮಾಡಿದಾಗ ಹೇಗೆ ನಾವು ನಮ್ಮ ಅಸ್ಮಿತೆಯನ್ನು ಮರೆತು ಅವರನ್ನು ಅನುಕರಿಸುತ್ತೇವೆ ಎಂಬುದಕ್ಕೆ ಕೆಲವು ಹೆಸರುಗಳು, ಶಬ್ದಗಳು ಕೂಡ ದೃಷ್ಟಾಂತ ಒದಗಿಸಬಲ್ಲವು ಎಂಬುದು ಕುತೂಹಲಕರವಾಗಿದೆ.


‘ಚಾರುಕೇಶಿ’ ಎಂಬುದು ಅಂತಹ ಹೆಸರುಗಳಲ್ಲೊಂದು. ಸಂಗೀತದಲ್ಲಿ ‘ಚಾರುಕೇಶಿ’ ಎಂಬ ಒಂದು ರಾಗವೂ ಇದೆ. ಚಾರುಕೇಶಿ ಎಂದರೆ ಸುಂದರವಾದ ಕೂದಲುಳ್ಳವನು ಎಂದು ಅರ್ಥ. ಇದು ಸ್ತ್ರೀಯರ ಹೆಸರಲ್ಲ; ಪುರುಷರದ್ದು.


ಹಿಂದಿನ ಕಾಲದಲ್ಲಿ ಹೆಂಗಸರಂತೆ ಪುರುಷರೂ ಉದ್ದಕೂದಲು ಬಿಟ್ಟು ತುರುಬು ಕಟ್ಟಿಕೊಳ್ಳುತ್ತಿದ್ದರು; ಹೆಣೆದು ಜಡೆ ಕಟ್ಟಿಕೊಳ್ಳುತ್ತಿದ್ದರು. ಕೆಲವರು ಹೂ ಮುಡಿದುಕೊಳ್ಳುತ್ತಿದ್ದುದೂ ಉಂಟು. ಕೂದಲನ್ನು ಬಾಚಿ ಜಡೆ ಹೆಣೆದು ತುರುಬು ಕಟ್ಟಿ (ಅಭಿರುಚಿ ಉಳ್ಳವರು ಹೂ ಮುಡಿದು) ಹಣೆಗೆ ಕುಲಸಂಪ್ರದಾಯದಂತೆ ತಿಲಕವಿಟ್ಟುಕೊಂಡರೆ ಅಲಂಕಾರ ಸಂಪನ್ನಗೊಂಡಂತೆ! ತೀರಾ ಹಿಂದಿನ ಮಾತೇಕೆ, ಈಗ್ಗೆ ಸುಮಾರು ಐವತ್ತು ವರ್ಷಗಳ ಹಿಂದೆ, ನನ್ನ ಪತ್ನಿಯ ದೊಡ್ಡಪ್ಪ ಜಡೆ ಹೆಣೆದು ಮುಡಿ ಕಟ್ಟಿ ಮಲ್ಲಿಗೆ ದಂಡೆ ಮುಡಿಯುತ್ತಿದ್ದುದನ್ನು, ಮಾತಿನ ಮಧ್ಯೆ, ನನ್ನ ಶ್ರೀಮತಿ ಆಗಾಗ ನೆನಪಿಸಿಕೊಳ್ಳುತ್ತಾರೆ.


ದೇವಸ್ಥಾನಗಳಲ್ಲಿ ದೇವರ ಪ್ರಸಾದವಾಗಿ ತೀರ್ಥದ ಬಳಿಕ ಗಂಧ ಪುಷ್ಪಗಳನ್ನು ಕೊಡುತ್ತಾರಷ್ಟೆ. ಕೊಟ್ಟ ಹೂವನ್ನು ಎಷ್ಟೋ ಮಂದಿ ಗಂಡಸರು ಕಿವಿಯ ಮೇಲೆ ಇಟ್ಟುಕೊಳ್ಳುತ್ತಾರೆ. ಹೂವನ್ನು ಕಿವಿಯ ಮೇಲೆ ಇಟ್ಟುಕೊಳ್ಳುವುದಲ್ಲ! ಹೂ ಮುಡಿದುಕೊಳ್ಳುವುದಕ್ಕಾಗಿ ಇದೆ. ಹೂವನ್ನು ಶಿರದ ಮೇಲಿಟ್ಟುಕೊಳ್ಳಬೇಕಲ್ಲದೆ ಕಿವಿಯಲ್ಲಿಟ್ಟುಕೊಳ್ಳಬಾರದೆಂಬ ಶಾಸ್ತ್ರವೇ ಇದೆ! ('ನಾನು ಕಿವಿಯ ಮೇಲೆ ಹೂ ಇಟ್ಟುಕೊಂಡಿಲ್ಲ' ಎಂಬ ಒಂದು ಸಾಮತಿ ಬಳಕೆಗೆ ಬಂದಿರುವುದನ್ನು ಗಮನಿಸಬಹುದು). ಶಿರದ ಮೇಲಿಟ್ಟುಕೊಳ್ಳಬೇಕಾದರೆ ತುರುಬು ಇರುವುದು ಅನಿವಾರ್ಯವಷ್ಟೆ! ಮುಡಿಯೇ ಇಲ್ಲದ ಮೇಲೆ ಮುಡಿದುಕೊಳ್ಳುವುದು ಹೇಗೆ!


ತಮಿಳುನಾಡಿನಲ್ಲಿ ಅರ್ಚಕರು ಮುಡಿ ಕಟ್ಟಿ ತಮ್ಮ ಪಾರಂಪರಿಕ ಶೈಲಿ ಉಳಿಸಿಕೊಂಡಿರುವುದನ್ನು ಇವತ್ತಿಗೂ ಕಾಣಬಹುದು. ನಮ್ಮಲ್ಲಿ ಮುಡಿ ಕಣ್ಮರೆಯಾಗಿ ಕ್ರಾಪು ಬಂದುಬಿಟ್ಟಿದೆ. ನಮ್ಮಲ್ಲಿ ಇವತ್ತು ಚಾರುಕೇಶಿಯರನ್ನು ಎಲ್ಲಿಯೂ ಕಾಣಲಾರೆವು.


ಹಿಂದಿನ ಕಾಲದಲ್ಲಿ ನಾಲ್ಕು ವರ್ಣದ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ಪುರುಷರೂ ಕೇಶ ಬಿಡುತ್ತಿದ್ದರು. ಋಷಿಮುನಿಗಳು ಜಟಾಜೂಟರಾಗಿರುವುದು ನಮಗೆಲ್ಲ ಗೊತ್ತಿರುವ ವಿಷಯವೇ ಆಗಿದೆ. ಪುರಾಣ - ಇತಿಹಾಸ - ಚರಿತ್ರೆಗೆ ಸಂಬಂಧಿಸಿದ ಚಿತ್ರ ಶಿಲ್ಪಗಳನ್ನು ನೋಡಿದರೆ ಪುರುಷರು ಚಾರುಕೇಶಿಯರಾಗಿರುವುದು ಕಂಡುಬರುತ್ತದೆ. ಕ್ಷತ್ರಿಯ ಯುವಕರು ಉದ್ದ ಕೂದಲು ಬಿಟ್ಟು ಹಿಂದಕ್ಕೆ ಬಾಚಿಕೊಂಡಿರುವ ಚಿತ್ರಗಳು ‘ಚಂದಮಾಮ’ದಂತಹ ಪತ್ರಿಕೆಗಳಲ್ಲಿ ಕಾಣುತ್ತವೆ. ಸಮಾಜದಲ್ಲಿ ಆ ಪದ್ಧತಿ ಇದ್ದುದರಿಂದ ಚಿತ್ರಿಸಿದರು. ಅದೇನೂ ಕಲ್ಪನೆಯಲ್ಲ.


ಕೇಶವು ಶಿರಕ್ಕೆ ಭೂಷಣ; ಜೊತೆಗೆ ರಕ್ಷಣೆಯೂ ಹೌದು. ಕೂದಲನ್ನು ಒಪ್ಪವಾಗಿ ಬಾಚಿ ತುರುಬು ಕಟ್ಟುವುದರಿಂದ ತಲೆಗೆ ರಕ್ಷೆ. ನೋಡಲು ಚಂದವಾಗಿಯೂ (ಚಾರುತರವಾಗಿ) ಇರುತ್ತದೆ. ಗಂಡಸರು ಕೇಶ ಕತ್ತರಿಸಿಕೊಳ್ಳುವ ಪದ್ಧತಿ ಬ್ರಿಟಿಷರು ಹೇರಿದ ದಾಸ್ಯ ಬದುಕಿನ ಕಾರಕೂನ ಪದ್ಧತಿಯಿಂದ ನಮ್ಮಲ್ಲಿ ಬಂತು.


ಇವತ್ತು ಎಲ್ಲ ಗಂಡಸರೂ ನಾನಾ ರೀತಿ, ನಾನಾ ನಮೂನೆಗಳಲ್ಲಿ ಕೂದಲು ಕತ್ತರಿಸಿಕೊಳ್ಳುವ ಫ್ಯಾಷನ್ ಬಂದು ಬಿಟ್ಟಿದೆ. ಕೂದಲು ಬಿಟ್ಟವರನ್ನು ಹಾಸ್ಯ ಮಾಡುವ, ಗೇಲಿ ಮಾಡುವ ಜನವರ್ಗ ಕಂಡು ಬರುತ್ತದೆ. ಇವತ್ತು ಚಾರುಕೇಶಿಯರನ್ನು, ಕೇಶಿರಾಜರನ್ನು ಕಾಣಲಾರೆವು. ಹಾಗಾಗಿ ‘ಚಾರುಕೇಶಿ’ಯಂತಹ ಹೆಸರು ಕೂಡ ಚಾಲ್ತಿಯಲ್ಲಿಲ್ಲ


- ಡಾ. ವಸಂತಕುಮಾರ ಪೆರ್ಲ.

19 views0 comments

Comments


bottom of page