*ಚಿನ್ಮಯ*
ಬಾಳ ನಲ್ಮೆಯ
ಗೆಳೆಯನೆ
ನಿನ್ನ ಮುದ್ದು
ಮೊಗದ
ಮುಗಳ್ನಗೆಯು
ಬೈಗಿನ ಬೇಸರ
ಕಿತ್ತೋಡಿಸಿತು.
ಅಪ್ಪಾ.! ಅಪ್ಪಾ.!
ಎಂದೆದೆಗಪ್ಪಿದಾಕ್ಷಣ
ಹೃದಯದ ಭಾರ
ಹಗುರಾಗಿಸಿತು.
ತೊಡರು ನಡೆಯಲಿ
ತೊದಲ ನುಡಿಯಲಿ
ಒಲವ ಮೂಡಿತು
ಹರ್ಷದ ಹೊನಲು
ಹರಿಸಿತು.
ಅಪ್ಪ ಬೈದರೆ
ಅಮ್ಮನಾಸರೆ
ಅಮ್ಮ ಹೊಡೆದರೆ
ಅಪ್ಪನ ಸೆರೆ.
ಇಬ್ಬರೂ ಬೆಪ್ಪರು
ನಿನ್ನಯ ತುಂಟತನದ
ಸೊಬಗಿನಾಟದಲಿ.
ಶಾಲೆಯೆಂದರೆ
ನಿನಗೆ ಕರಕಷ್ಟ
ಮನೆಯೆಂದರೆ
ತುಂಬಾ ಇಷ್ಟ
ಪಾಠ ಎಂದರೆ
ಪ್ರಾಣ ಸಂಕಟ
ಆಟ ಎಂದರೆ
ಬಲು ಚೆಲ್ಲಾಟ.
ನಾವತ್ತರೆ
ಅಳುವ
ನಕ್ಕರೆ ನಗುವ
ಹಗೆಯಿಲ್ಲದ
ಚೆಲುವ
ಈ ದಿವ್ಯ ಚಿನ್ಮಯ.!!
*ಸೋಮನಾಥ.ಡಿ.*
ಮೊರಾರ್ಜಿ ಪಿ.ಯು.ಕಾಲೇಜು ಹಾವೇರಿಯ ಪ್ರಾಂಶುಪಾಲರು,ಕವಿಗಳು,ಶರಣ ತತ್ವ ಚಿಂತನೆಯಲ್ಲಿ ಅನುದಿನ ತೊಡಗಿಕೊಂಡಿರುವವರು ಆದ ಸೋಮನಾಥ ಡಿ. ಅವರು ತಮ್ಮ ಮಗ ಚಿನ್ಮಯನ ಬಗ್ಗೆ ಬರೆದ ಕವನ ನಿಮ್ಮ ಸಹಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ
Comentários