ಮಾರಾಟಕ್ಕೆಂದೆ ಸಿಕ್ಕವರ ಚೀಲದೊಳಗೆ
ಬೆಲೆ ನೀಡಿದ ಶ್ರೀಮಂತರ ಪಟ್ಟಿಗೆಯೊಳಗೆ
ಬ್ಯಾಂಕಿನ ಬಿಗಿ ಭದ್ರತೆಯಲ್ಲಿ
ಕಳ್ಳರ ಕೈಯಲ್ಲಿ
ಪರದಾಡುವ
ಕಟ್ಟುನಿಟ್ಟಿನ ಕಣ್ಣಗಾವಲಿರುವ
ಚಿನ್ನ ಆಗಲಾರೆ
ಎಲ್ಲರ ಕೈಯಲ್ಲೂ ಪಳಗುವ
ಬಡಿದ ನೋವಿಗೆ ಕೆಂಡ ಕಾರುತ್ತಾ
ಮೆಲ್ಲನೆ ತಣ್ಣಗಾಗಿ ಗಟ್ಟಿ ಹದಕ್ಕೆ
ಮನೆ ಕೋಟೆ ಇನ್ನಿತರ ಕಬ್ಬಿಣದ
ಬಾಗಿಲಾದರೂ ಆಯಾಸವಿಲ್ಲ
ತುಳಿದು ನಾದು ಕುಂಬಾರನ ಕೈಯಲ್ಲಿ
ಮಡಿಕೆಯಾಗಿ ಬಡವನ ಜೊತೆಯಿರುವೆ
ದುಬಾರಿ ಹಂಗಿನಲ್ಲಿ ಏರಿ ಹೋಗುವ
ಚಿನ್ನ ಆಗಲಾರೆ
ಕುರ್ಚಿ ಕಿಟಕಿ ಕಂಬದೊಳಗಿನ
ಚಿತ್ತಾರವಾಗಿರುವೆ
ಇಲ್ಲ ಗರಿ ಎಲೆ ಕಾಗದವಾಗಿ
ಹೃದಯ ಓಲೆಯಾಗಿರುವೆ
ಅಂತಸ್ತಿನ ಒಳಗಿರುವ
ಭಯದ ಜಡ ಮನುಷ್ಯನ
ಉಸಿರುಗಟ್ಟುವ ಕೋಣೆಯಲ್ಲಿ
ಚಿನ್ನ ಆಗಲಾರೆ
ತನ್ನವರಷ್ಟೆ ಹೊತ್ತು ಕೊಂಡಾಡಿದ
ಇದ್ದಕ್ಕಿದ್ದಂತೆ ಕುಂಟುವ ಕುದುರೆ
ಲಾಭದ ಹಿಂದೆ ಓಡುವ
ಕಾಗೆ ಬಂಗಾರದವರ ಸಾಲು
ಈ ಗಿರಿಗಿಟ್ಲೆ ಸಹವಾಸದಲ್ಲಿ ಟೊಳ್ಳಾದವರ ಪಟ್ಟಿಯಿಂದ ಸರಿದು ಬಿಡುವೆ
ಒಟ್ಟಾರೆ ಚಿನ್ನ ಆಗಲಾರೆ
ಎಂ.ಜಿ.ತಿಲೋತ್ತಮೆ,ಭಟ್ಕಳ
Comments