ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ
- ಶ್ರೀಪಾದ ಹೆಗಡೆ
- Sep 9, 2020
- 3 min read
ಹೆಜ್ಜೆ -7


ಚಂಡೆಗೆ ಮೆರಗು ನೀಡಿದವರು.
“ಆಟಕ್ಕೆ ಚಂಡೆಯ ಅಬ್ಬರ. ತೋಟಕ್ಕೆ ಗೊಬ್ಬರ” ಎನ್ನುವುದನ್ನು ಪರಿಷ್ಕರಿಸಿ ನವನವೀನತೆಯನ್ನು ಮೆರೆದವರು. ಯಕ್ಷಗಾನಕ್ಕಷ್ಟೇ ಸೀಮಿತವಾದ ಚಂಡೆಯನ್ನು ನಾಟಕರಂಗಕ್ಕೂ ವಿಸ್ತರಿಸುವ ಮೂಲಕ ಹೊಸ ಪ್ರಯೋಗವನ್ನು ಮಾಡಿ ನಾಟಕರಂಗದ ಪ್ರೇಕ್ಷಕರ ಹೃದಯವನ್ನು ಕುಟ್ಟಣ್ಣ ತಲುಪಿದವರು. ಇತ್ತೀಚಿನ ಆವಿಷ್ಕಾರವಾದ ಶತಾವಧಾನಿ ಡಾ.ಆರ್. ಗಣೇಶ್ ಅವರ ನಿರ್ದೇಶನದ, ಪ್ರಭಾಕರ ಮಂಟಪ ಉಪಾಧ್ಯರ ನರ್ತನಕ್ಕೆ ‘ಭಾಮಿನಿ ಹಾಗೂ ಕೃಷ್ಣಾರ್ಪಣ’ ಕಾರ್ಯಕ್ರಮಗಳಲ್ಲಿ ಚಂಡೆವಾದನದ ವಿಶೇಷ ಛಾಪು ಮೂಡಿಸಿದ ಹಿರಿಮೆ ಕುಟ್ಟಣ್ಣನದು. ಕಲ್ಭಾಗದ ಗೋಪಾಲಕೃಷ್ಣ ಹೆಗಡೆ ನೇತೃತ್ವದ 'ಲಯಲಾಸ್ಯ' ಕಾರ್ಯಕ್ರಮದಲ್ಲಿ ತಬಲಾ ಮತ್ತು ಮೃದಂಗಗಳೊಂದಿಗೆ ಚಂಡೆವಾದನದ ವಿಭಿನ್ನ ಆಯಾಮಗಳನ್ನು ತೋರಿಸಿದವ. ಚೆಂಡೆಯಿಂದ ಏನೇನು ಪ್ರಯೋಗ ಮಾಡಬಹುದೆಂದು ಸೂಕ್ಷ್ಮಾತಿಸೂಕ್ಷ್ಮವಾಗಿ ಕಾಣಿಸಿಕೊಟ್ಟ ಮಹಾನು ಭಾವ ಕುಟ್ಟಣ್ಣ!
ವಿಶ್ವದೆಲ್ಲಡೆ ಚಂಡೆಯ ನಿನಾದ
ದೆಹಲಿ, ಮುಂಬಯಿ, ಕೋಲ್ಕತ್ತಾ, ಅಮೃತಸರ, ತ್ರಿವೇಂಡ್ರಂ, ಭೋಪಾಲ್, ಝಾನ್ಸಿ, ಬೆಂಗಳೂರು ಮುಂತಾದೆಡೆ ಕಾರ್ಯಕ್ರಮ ನೀಡಿರುವ ಇವರು ವಿದೇಶಗಳಲ್ಲಿಯೂ ಚಂಡೆಯ ಸದ್ದು ಮೊಳಗಿಸಿದ್ದಾರೆ. ಲಂಡನ್, ಸ್ಪೇನ್, ಫ್ರಾನ್ಸ್, ಚೀನಾ, ನೇಪಾಳ, ಬರ್ಮಾ, ಲಾಹೋತ್ಸೆ, ಮಲೇಶಿಯಾ, ಸಿಂಗಾಪುರ, ಫಿಲಿಪ್ಪೀನ್ಸ್ ರಾಷ್ಟ್ರಗಳಿಗೆ ಇವರು ಇಡಗುಂಜಿ ಮೇಳದೊಂದಿಗೆ ತೆರಳಿದ್ದರು.
ಕಿನ್ನೀರು ನಾರಾಯಣ ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿಯಲ್ಲಿ ಮೊದಲಿಗರಾದ ಕೃಷ್ಣ ಯಾಜಿ ಅವರು, ೨೦೧೨ರಲ್ಲಿ ಉಡುಪಿ ಕಲಾಕೇಂದ್ರದಿಂದ ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ, ಕಾಶ್ಶಪ ಪ್ರತಿಷ್ಠಾನದ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ಗೌರವ ಮೊದಲಾದ ಯಕ್ಷರಂಗದ ಸಾಧಕರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿ, Ashvasan foundation award,ಸಾಧಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ವಾದನ ರತ್ನಾಕರ’ರೆಂಬ ಬಿರುದನ್ನು ಜನಮಾನಸದಿಂದ ಪಡೆದಿದ್ದಾರೆ.
ಕಿನ್ನೀರು ನಾರಾಯಣ ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿಯಲ್ಲಿ ಮೊದಲಿಗರಾದ ಇವರು, 2011ರಲ್ಲಿ ಉಡುಪಿ ಕಲಾಕೇಂದ್ರದಿಂದ

ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ, 2012ರಲ್ಲಿ ಕಾಶ್ಶಪ ಪ್ರತಿಷ್ಠಾನ, ವಿದ್ಯಾ ಸಂಸ್ಕೃತಿ ಟ್ರಸ್ಟ್ ಗಡಿಗೆಹೊಳೆ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಮೊದಲಾದ ಯಕ್ಷರಂಗದ ಸಾಧಕರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮದ್ದಲೆ ಹಾಗೂ ಚಂಡೆ ವಾದನಗಳೆರಡರಲ್ಲೂ ಅತ್ಯುನ್ನತ ಕಲಾವಿದ. ಆದರೂ ಇನ್ನೂ ಹೆಚ್ಚು ಸಾಧಿಸ ಬೇಕಿತ್ತು ಎಂಬ ಮನೋಭಾವ ಹೊಂದಿದವರು. ವಿನಯ ಮತ್ತು ಶಿಸ್ತು ಜೀವನದ ಜೀವಾಳವಾಗಿರಬೇಕೆಂಬ ಸಂಕಲ್ಪದಿಂದ ಬದುಕಿದವರು.
ಸೋಲೊಪ್ಪದ ಸಂಯಮದ ಬದುಕು ಇವರದು. ಯಕ್ಷಗಾನ ಕಲೆಗಾಗಿ ಜೀವ ತೇಯುತ್ತಿರುವ ಯಾಜಿಯವರರಿಗೆ ಕಲೆಯೇ ಕಾಯಕ. ಯಕ್ಷಗಾನವೇ ಅನ್ನದ ದಿಕ್ಕು- ಬದುಕಿನ ದಾರಿ.
ಕೆಮ್ಮಣ್ಣು ಆನಂದ ರಾವ್ ಅವರ ಬಳಿಕ ಬಡಗು ತಿಟ್ಟಿನಲ್ಲಿ ಕಾಣಿಸಿಕೊಂಡ ಪ್ರಶಸ್ತ ಚೆಂಡೆವಾದಕರಲ್ಲಿ ಬೇರೆಯೆ ಔನ್ನತ್ಯ ಸ್ಥಾಪಿಸಿದ ಉಜ್ವಲ ಕೀರ್ತಿ ಇಡಗುಂಜಿ ಕೃಷ್ಣಯಾಜಿಯವರದು. ಕೃಷ್ಣ ಯಾಜಿ ಅವರು ನೆಬ್ಬೂರು ನಾರಾಯಣ ಭಾಗವತ, ಮದ್ದಳೆಗಾರ ಕಿನ್ನೀರು ನಾರಾಯಣ ಹೆಗಡೆ ಅವರೊಂದಿಗೆ ಎರಕವಾಗಿದ್ದರು. ಚೆಂಡೆವಾದನದ ನಾದ-ಲಯ ಸುಖವನ್ನು ಕೆರೆಮನೆ ಕುಟುಂಬದ ಜನ್ಮಜಾತ ಕಲಾಕಾರರ ಮೂಲಕ ಯಕ್ಷಗಾನವನ್ನು ವಿದ್ವತ್ತಿನ ಕಲಾರಂಗವನ್ನಾಗಿ ಮಾಡಿದೆ. ಆನುವಂಶಿಕತೆ ಮತ್ತು ಪರಿಸರ ಅವರನ್ನು ಮೇರು ಶಿಖರವನ್ನಾಗಿಸಿತು.
ಆನಂದ ಅವರನ್ನು ಮೊದಲಿಗೆ ನೆನಪಿಸಿದ್ದೇಕೆಂದರೆ ಬಡಗುತಿಟ್ಟಿನಲ್ಲಿ ಪದದೊಂದಿಗೆ ಚೆಂಡೆ ನುಡಿಯತೊಡಗಿದ ಮೇಲೆ ಹಿಮ್ಮೇಳದ ಅಲೆಯನ್ನು ಮುಂದಕ್ಕೆ ಒಯ್ಯುವ ಚೆಂಡೆಯ ಮೇಲುಗೈ ರೀತಿಯನ್ನು ಅಳವಡಿಸಿದ ಆದ್ಯಪ್ರವರ್ತಕ ಅವರು! ಆದರೆ ಆ ರೀತಿಯ ಒಟ್ಟು ಕಲಾಮೌಲ್ಯದ ಬಗೆಗೆ ಸರಿಯಾದ ಮಾಪನ ನಡೆದುದಿಲ್ಲ. ವಿವಿಧ ಬಾಂಧವ್ಯ ಪಾಶಗಳ ಜಗ್ಗಾಟ ಯಕ್ಷಗಾನ ಹಿಮ್ಮಳವನ್ನು ಅರಿವಿಲ್ಲದವರ ರಂಜನೆಗೆ ಮೀಸಲು ಮಾಡಿದುದನ್ನು ಕಾಣಬಹುದು. ಈ ಹಿನ್ನೆಲೆಯೊಂದಿಗೆ ಕೃಷ್ಣಯಾಜಿ ಅವರ ಕಾಯಕದ ಮಹತ್ತ್ವ ಗೋಚರವಾಗುತ್ತದೆ.
ತೆಂಕುತಿಟ್ಟಿನ ಪರಿಭಾಷೆಯಲ್ಲಿ ಕೃಷ್ಣಯಾಜಿ ಅವರು ಆಟದ ಇಡಿಮದ್ಲೆಗಾರ. ಅಂದರೆ ಮದ್ದಳೆ ಚೆಂಡೆ ಎರಡರಲ್ಲೂ ಸಮಾನ ಪ್ರಾವೀಣ್ಯವಿದ್ದವರು. ಮದ್ದಳೆಯನ್ನೂ ಸೊಗಸಾಗಿ ನುಡಿಸುತ್ತಿದ್ದ ಯಾಜಿಗಳು ಕಲಾತ್ಮಕ ಆವಶ್ಯಕತೆಗಳಿಗೆ ತಕ್ಕಂತೆ ವ್ಯವಸಾಯವನ್ನು ಮರುಹೊಂದಿಸುವುದರಲ್ಲಿ ಉತ್ಸಾಹವನ್ನಲ್ಲದೆ ಬೇರೇನನ್ನೂ[ಹಮ್ಮು ಬಿಮ್ಮು]ತೋರಿದವರಲ್ಲ. ಆದ್ದರಿಂದಲೇ ಅವರಿಗೆ ಶ್ರೀಮಯ ಕೇಂದ್ರದ ಆಟದಷ್ಟೇ ಡಾ. ಆರ್.ಗಣೇಶ್-ಮಂಟಪ ಪ್ರಭಾಕರ ಉಪಾಧ್ಯಾಯ ಅವರ ನವೀನ ಗೀತರೂಪಕ ಪ್ರಯೋಗಗಳಲ್ಲೂ ಬೇಡಿಕೆ ಇದ್ದುದು.
ಕೃಷ್ಣಯಾಜಿಯವರ ಕಸುಬಿನ ಪ್ರತ್ಯೇಕತೆಯನ್ನು ಬೆಟ್ಟುಮಾಡಲುಂಟು. ಬಡಗುತಿಟ್ಟಿಗೆ ಇದ್ದುದು ಚೆಂಡೆಯನ್ನು ನೆಲದಲ್ಲಿಟ್ಟು ನುಡಿಸುವ ವಾದನ ಪರಂಪರೆ. ಆದರೆ ಚೌಕಿಯಿಂದ ರಂಗಸ್ಥಳಕ್ಕೆ ಬರುವಾಗಲೂ, ರಂಗಸ್ಥಳದಿಂದ ಚೌಕಿಗೆ ಹೋಗುವಾಗಲೂ ಚೆಂಡೆ ಒಂಟಿಗೈ ಹೊಡೆತದ ವಾದನವಾಗುತ್ತಿತ್ತು. ತೆಂಕುತಿಟ್ಟಿನಲ್ಲಿ ಹೆಗಲಿನಿಂದ ನೇತುಬಿಡುವ ವಾದ್ಯ. ಆದ್ದರಿಂದ ವಾದನ ನಿಂತು ನುಡಿಸುವಾಗಲೂ, ನಡೆಯುತ್ತ ಬಾರಿಸುವಾಗಲೂ ಸರಳ-ಸರಾಗವೆನಿಸುತ್ತದೆ.
ಹಳೆಗಾಲದಲ್ಲಿ ರಂಗಸ್ಥಳದಲ್ಲಿ ಚೆಂಡೆ ಇದ್ದಲ್ಲೆ ಇದ್ದು ಭಾಗವತ, ಮದ್ದಳೆಗಾರ, ಶ್ರುತಿಯವನು ಮಾತ್ರ ರಂಗಕ್ರಿಯೆ ಬಯಸುವ ಹಿಮ್ಮೇಳದವರ ಚಲನೆಯಲ್ಲಿ ಪಾಲುಗೊಳ್ಳುತ್ತಿದ್ದರು. ಕೃಷ್ಣಯಾಜಿಗಳು ಚೆಂಡೆಯನ್ನು ತೆಂಕಿನಂತೆ ಹೆಗಲಿಂದ ನೇತು ಬಿಡುವ ವ್ಯವಸ್ಥೆಗೆ ಒಳಪಡಿಸಿದ ಸಂದರ್ಭವನ್ನು ನೋಡಿದ್ದೇನೆ.
ಇದಲ್ಲದೆ ಚೆಂಡೆವಾದನದಲ್ಲಿ ತೆಂಕುತಿಟ್ಟಿನಂತೆ ಕೋಲನ್ನು ಉರುಳುಕೈಯಾಗಿ ಬಳಸುವ ರೀತಿಯನ್ನೂ ಅವರು ಆವಿಷ್ಕರಿಸಿದ್ದಾರೆ. ತೆಂಕುತಿಟ್ಟಿನಂತೆ ಒಡ್ಡೋಲಗಕ್ಕೆ ಮೊದಲಿನ ಪೀಠಿಕೆಚೆಂಡೆವಾದನಕ್ಕೆ ಹೊಸಮೆರುಗನ್ನು ಅವರು ತಂದಿದ್ದಾರೆ. ಅವರು ಮಾಡಿರುವ ಆವಿಷ್ಕಾರ ಯಾವುದೂ ಪೂರ್ವಪದ್ಧತಿಯ ಕೊಲೆಯ ಮೂಲಕ ಆದುದಲ್ಲ. ಬದಲು ಇರುವ ಅವಯವಗಳನ್ನು ಉಳಿಸಿಕೊಂಡು ಮಾತ್ರವಲ್ಲ ಪುಷ್ಟಿಗೊಳಿಸಿ ಮಾಡಿದ ಅಲಂಕರಣ.
ಜೀವನದಲ್ಲಿ ನಾವು ಬಯಸುವ ಸಜ್ಜನ ಪದ್ಧತಿಯ ಸರಳತೆ, ಸಮಾಧಾನದ ಚಿತ್ತವೃತ್ತಿ , ಪ್ರಾಮಾಣಿಕ ದುಡಿಮೆ ಇತ್ಯಾದಿಗಳ ಪ್ರತಿಮೂರ್ತಿಯಾಗಿದ್ದ ಇಡಗುಂಜಿ ಕೃಷ್ಣಯಾಜಿ ಕಲಾಭಿಮಾನಿಗಳಲ್ಲಿ,ಅವರಲ್ಲೂ ಅರಿತವರ ಹೃದಯಗಳಲ್ಲಿ, ಶಾಶ್ವತ ಸ್ಥಾನ ಹೊಂದಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಅವರ ಆತ್ಮೀಯತೆ ನನಗೆ ಶಾಶ್ವತವಾಗಿ ನಷ್ಟವಾಯಿತು. ಅವರ ಅವಲಂಬಿತರಿಗೆ ಅಗಲಿಕೆಯನ್ನು ಸಹಿಸುವ ಶಕ್ತಿ ಒದಗಲೆಂದು ಹಾರಯಿಸುವೆ. ಲೇಖಕರು - ಡಾ. ಕೆ. ಎಂ. ರಾಘವ ನಂಬಿಯಾರ್
ಕಲಾವಿದನಿಗೆ ಇರಬೇಕಾದ ಪರಿಶುದ್ಧತೆ, ಭಾವುಕ ಮನಸ್ಸು, ಸಂಘಟನೆಯ ಕಷ್ಟ ಇದೆಲ್ಲ ಅರಿತವರು ಒಂದು ಸಂಸ್ಥೆಗೆ ದೊರೆಯುವುದು ಪುಣ್ಯದಿಂದ. ಅದು ನಮ್ಮ ಮೇಳಕ್ಕೆ ಯಾಜಿಯಂಥ ವರಲ್ಲಿ ಪಡಿಮೂಡಿದೆ. ಹೊಂದಾಣಿಕೆ,ಕಲಾಶ್ರದ್ಧೆ,ಯಾವುದೇ ಅಡ್ಡ ವ್ಯಸನಗಳಿಲ್ಲದಿರುವ ಕಲಾವಿದ ಸಮಾಜದ, ಆ ಆ ರಂಗಭೂಮಿಯ ಭಾಗ್ಯವೂ ಹೌದು.ಮತ್ತೆ ಮತ್ತೆ ಈ ಮಾತು ನನ್ನಲ್ಲಿ ಅನುರಣನ ಗೊಳ್ಳುತ್ತಿದೆ.. ಎಂದು ಶ್ರೀಮಯ ಕಲಾಕೇಂದ್ರದ ಗುರು ಮತ್ತು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಅತ್ಯುತ್ತಮ ಕಲಾವಿದ ಶ್ರೀ ಶಿವಾನಂದ ಹೆಗಡೆ ಕೆರೆಮನೆಯವರು ನುಡಿದಿರುವುದು ಅರ್ಥಪೂರ್ಣ.
ಪತ್ನಿ ಶ್ರೀಮತಿ ರತ್ನಾವತಿ. ಮೀರಾ, ತನುಜಾ, ವಾಣಿ ಮೂವರು ಪುತ್ರಿಯರು. ಅನುರಾಗದ ದಾಂಪತ್ಯ. ಅತ್ತಿಗೆ ರತ್ನಾವತಿ ಸಂಸಾರವನ್ನು ತೂಗಿಸುವಲ್ಲಿ ತುಂಬಾ ಸಮರ್ಥಳು. ಮೂವರು ಪುತ್ರಿಯರನ್ನೂ ವಿವಾಹ ಮಾಡಿ ಕರ್ತವ್ಯವನ್ನು ಸಮರ್ಥವಾಗಿ ಪೂರೈಸಿದವರು. ಅರ್ಧಾಂಗಿಯ ನೆರವಿನಿಂದ ಕರ್ತವ್ಯ ಮುಕ್ತ ಕಲಾವಿದ ಕುಟ್ಟಣ್ಣ. ಹುಟ್ಟಿದ ದಿನಾಂಕ 1-2-1946 ಸ್ವಾತಂತ್ರ್ಯಪೂರ್ವದಲ್ಲಿ ಜನಿಸಿ ಯಕ್ಷಗಾನವನ್ನೇ ದೇವರೆಂದು ಪೂಜಿಸಿ, ಪ್ರೇಕ್ಷಕರನ್ನು ಸೂರೆಗೊಂಡು, ಎಲ್ಲರ ಹೃದಯದಲ್ಲಿ ಅಜರಾಮರನಾಗಿ ನಿಂತ ಕುಟ್ಟಣ್ಣ ಭೌತಿಕ ಶರೀರವನ್ನು ತ್ಯಜಿಸಿದುದು 24-4-2020. ಅವನಿಗೆ ಇಡಗುಂಜಿ ಮಹಾಗಣಪತಿಯು ಪೂರ್ಣ ಆಶಿರ್ವಾದವನ್ನು ನೀಡಲಿ. ಅವನ ಪತ್ನಿ-ಪುತ್ರಿಯರಿಗೆ ಅಗಲುವಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯೊಂದಿಗೆ… ಆಯುರಾರೋಗ್ಯ, ನೆಮ್ಮದಿ, ಸಂತೃಪ್ತಿ ನೀಡಲಿ ಎಂದು ಶ್ರೀ ಗಣಪತಿಯಲ್ಲಿ ಹಾರ್ದಿಕವಾಗಿ ಬೇಡಿಕೊಳ್ಳುವೆನು.
00 ಮುಕ್ತಾಯ 00

Comments