top of page

ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ

ಭಾಗ-4ಕುಟ್ಟಣ್ಣನ ಊರು ಇಡಗುಂಜಿಯ ಮಾವಿನಕೆರೆ. ಅವರ ಮನೆಯವರೆಲ್ಲ ಯಕ್ಷಗಾನದಲ್ಲಿ ತೊಡಗಿ ಕೊಂಡವರೇ! ಶ್ರೀ ಗೋವಿಂದ ಯಾಜಿ ಹಾಗೂ ಹೊನ್ನಮ್ಮ [ಅಮ್ಮಮ್ಮ] ರಿಗೆ ಜನಿಸಿದ ಎರಡನೆಯ ಮಗನೇ ಶ್ರೀ ಕೃಷ್ಣ ಯಾಜಿ.

ಅವರ ಚಿಕ್ಕಪ್ಪ, ಸ್ವಾತಂತ್ರಯ ಹೋರಾಟಗಾರರಾದ ಗಣೇಶ ಯಾಜಿ. ಅವರ ಮಗಳು ಶಕುಂತಲಾಳನ್ನೇ ಶ್ರೀ ರಾಮಕೃಷ್ಣ ಹೆಗಡೆ ಮಾಜಿ ಮುಖ್ಯಮಂತ್ರಿಗಳು ಮದುವೆಯಾದುದು. ಚಿನ್ನವನ್ನೇ ಧರಿಸದ ಹೆಣ್ಣು ಮಗಳೆಂಬ ಖ್ಯಾತಿಗೆ ಒಳಗಾದವಳು. ಸಹೃದಯಳು.

ಮನಸ್ಸು ಮಾಡಿದ್ದರೆ ಯಾವ ಸಹಾಯವನ್ನೂ ಶ್ರೀ ರಾಮಕೃಷ್ಣ ಹೆಗಡೆಯವರಿಂದ ಪಡೆಯ ಬಹುದಿತ್ತು. ಆದರೆ ಕುಟ್ಟಣ್ಣ ಸ್ವಾಭಿಮಾನಿ. ತನಗಾಗಿ ಏನನ್ನೂ ಕೇಳದವನು. ಕೇವಲ ಕಲಾ ದೇವಿಯ ಆರಾಧಕ. ಕಲಾ ಸೇವೆಯಿಂದ ಬಂದುದೇ ಪಂಚ ಪರಮಾನ್ನ. ಜೀವನವೂ ಕಲೆಯಿಂದಲೇ ಸಾಗಬೇಕು.

ಇವನ ಚಿಕ್ಕಪ್ಪ ವೆಂಕಟ್ರಮಣ ಯಾಜಿಯವರು ಇಡಗುಂಜಿ ಮೇಳದ ಸಂಸ್ಥಾಪಕರು. ಇಡಗುಂಜಿಯ ಗಣಪತಿಯ ಹೆಸರಿನಲ್ಲಿ ಸಿದ್ಧವಾದ… ನಿತ್ಯ ಪೂಜಿಸುವ ಗಣಪತಿ ಕಿರೀಟ ಇವರ ಮನೆಯಲ್ಲಿಯೇ ಇತ್ತು! ಅದನ್ನು ಗಣಪತಿ ಎಂದೇ ಭಾವಿಸಿದ್ದರು. ತನ್ನ ನಂತರವೂ ಅದಕ್ಕೆ ಮಾನ್ಯತೆಯನ್ನು ತಂದು ಕೊಡುವವರು ಯಾರೆಂದು ಚಿಂತನೆಯನ್ನು ಮಾಡಿ, ‘ಕೆರೆಮನೆ ದಂತಕಥೆಯಾದ ಶಿವರಾಮ ಹೆಗಡೆಯವರ ಕೈಗೆ ನೀಡಿ ಇದರ ಸೇವೆ ಮಾಡಬೇಕು’ ಎಂದು ವಿನಂತಿಸಿರು. ಶ್ರೀ ಶಿವರಾಮ ಹೆಗಡೆಯವರು ಅಷ್ಟೇ ಭಯ – ಭಕ್ತಿಯಿಂದ ಇದನ್ನು ಸ್ವೀಕರಿಸಿದರು. ಪೂಜಿಸಿದರು. ತಲೆಯಮೇಲೆ ಏರಿಸಿ ಕೊಂಡರು. ರಂಗಸ್ಥಳದ ತುಂಬಾ ಕುಣಿದಾಡಿದರು. ವಿವಿಧ ಪಾತ್ರಗಳ ಮೂಲಕ ಜೀವಂತ ದಂತಕಥೆಯಾದರು.

“ಕುಟ್ಟಣ್ಣನವರು ಆ ಗಣಪತಿ ಕಿರೀಟವನ್ನು ಇಡಗುಂಜಿ ಗಣಪತಿಯ ಸಾಕ್ಷಾತ್ ಸ್ವರೂಪ ಎಂದು ತಿಳಿದವರು. ಅದಕ್ಕೆ ಅವರು ತೋರುವ ಭಕ್ತಿ ವರ್ಣನಾತೀತ” ಎಂದು ವಿಶ್ವಪ್ರಸಿದ್ಧ ಕಲಾವಿದ ಶ್ರೀ ಶಿವಾನಂದ ಹೆಗಡೆಯವರು ಸ್ಮರಿಸಿಕೊಳ್ಳುವರು.

ಕುಟ್ಟಣ್ಣನ ಮೊದಲ ಉದ್ದೇಶ ಯಕ್ಷಗಾನ ಪಾತ್ರಧಾರಿ ಆಗಬೇಕೆನ್ನುವುದೇ ಇತ್ತು! ಆದರೆ ಕಿನ್ನೀರ ನಾರಾಯಣ ಹೆಗಡೆಯವರ ಮದ್ದಲೆ ನಾದ ಅವನನ್ನು ಆಕರ್ಷಿಸಿತ್ತು. ಮದ್ದಲೆಗೆ ಅವನ ಗುರುಗಳು ಕಿನ್ನೀರ ನಾರಾಯಣ ಹೆಗಡೆಯವರು. ಅವರ ಮದ್ದಲೆಯ ನುಡಿಸುವಿಕೆ ಇಂಪಾಗಿತ್ತು. ಸರ್ವರನ್ನೂ ಆಕರ್ಷಿಸುವಂತೆಯೇ ಇತ್ತು. ಆದರೆ ಚೆಂಡೆ ಕುಟ್ಟಣ್ಣನನ್ನು ಕೈಬೀಸಿ ಕರೆಯುತ್ತಿತ್ತು!

ಜಾನಪದದ ಯಾವ ವಾದ್ಯವು, ಏಕೆ - ಹೇಗೆ - ಎಲ್ಲಿ ಜನಿಸಿತು ಎಂದು ಖಚಿತವಾಗಿ ಹೇಳುವಂತಿಲ್ಲ! ಅದಕ್ಕೆ ಇತಿಹಾಸವೂ ಇಲ್ಲ. ತಾಸುಮಾರಿನ ಬಳಕೆ ಮೊದಲು ಹೆಚ್ಚಾಗಿತ್ತು! ಇದು ಏರು ಚಂಡೆಯ ಕೆಲಸವನ್ನು ಮಾಡುತ್ತಿತ್ತು. ಅದಕ್ಕೆ ಶೃತಿ ಇಲ್ಲವೆನ್ನುವುದು ತಪ್ಪು. ದೇವಸ್ಥಾನದಲ್ಲಿ ಬಾರಿಸುವ ವಾದ್ಯಕ್ಕೆ ಶೃತಿ ಇಲ್ಲವೆಂದು ವಾದಿಸಬೇಕಾಗುತ್ತೆ. ನೃತ್ಯ – ನೃತ್ಯ ಕುಣಿಸಲು ಇರುವ ಸಾಧನಗಳಿಗೆ ಶೃತಿ ಇಲ್ಲವೇ? ಅಷ್ಟಾವಧಾನದಲ್ಲಿ ಪ್ರಾಮುಖ್ಯದ ಸ್ಥಾನವನ್ನು ಕಂಡ ನಾಟ್ಯಾರಾಧನೆ ಶೃತಿ ಇಲ್ಲದ್ದೇ? ದೇವಸ್ಥಾನದ ಒಂದು ಅಂಗವಾಗಿರುವ ನೃತ್ಯಗಾರ್ತಿಯರ ನಾಟ್ಯವೇ ತಪ್ಪೇ?

ನಾವು ಕಂಡರಿತಂತೆ ಸಿಗುವ ದಾಖಲಿಕೆ ಮಾತ್ರ ನಮಗೀಗ ಲಭ್ಯವಾದ ಆಕರಗಳು. ಒಂದು ವಾದ್ಯ ತುಂಬಾ ಪ್ರಚಲಿತವಾಯಿತೆಂದರೆ ಅದನ್ನು ಎಲ್ಲರೂ… ಎಲ್ಲ ಕಲೆಗಳಲ್ಲಿಯೂ ಬಳಸಲ್ಪಡುವುದು. ನವೀನ ಪ್ರಯೋಗಗಳಲ್ಲಿ ಇವು ಪ್ರವೇಶಿಸುತ್ತವೆ. ಕಡಲ ಭಾರ್ಗವ ಶಿವರಾಮ ಕಾರಂತರು ಸೆಕ್ಸೋಫೋನ್ ಮತ್ತು ವಾಯಲಿನ್ ಬಳಸಿದಂತೆ!

ಕಥಕ್ಕಳಿಯು ಅದಕ್ಕಿಂತ ಮೊದಲಿನ ನೃತ್ಯ-ನಾಟಕ ರೂಪವಾದ ರಾಮನಾಟ್ಟಂನಿಂದ ವ್ಯುತ್ಪನ್ನಗೊಂಡಿತು, ಜೊತೆಗೆ ಕೃಷ್ಣನಾಟ್ಟಂನಿಂದ ಕೆಲವು ತಂತ್ರಗಳನ್ನು ತೆಗೆದುಕೊಂಡಿತು. "ಆಟ್ಟಂ" ಎಂದರೆ ಅಭಿನಯಿಸುವುದು ಎಂದರ್ಥ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಥಕ್ಕಳಿಗೆ ಮೊದಲಿನ ಈ ಎರಡೂ ಸ್ವರೂಪಗಳು ಹಿಂದೂ ದೇವರುಗಳಾದ ರಾಮ ಮತ್ತು ಕೃಷ್ಣನ ಕಥೆಗಳನ್ನು ಪ್ರಸ್ತುತಪಡಿಸುವುದಕ್ಕೆ ಸಂಬಂಧಿಸಿದ್ದವು.

ಪೊಟ್ಟಂಕಾಳಿ ಎಂದೂ ಕರೆಯುತ್ತಿದ್ದರು. ಮಾತಿಲ್ಲದೇ ಅಭಿನಯಿಸುವುದು ಎಂದರ್ಥ. ಇದೇ ಶಿವರಾಮಕಾರಂತರ ಬ್ಯಾಲೆಗೆ ಪ್ರಭಾವ ಬೀರಿದ್ದಿರಬಹುದೇ? ಬ್ಯಾಲೆ ನೃತ್ಯದ ಉಗಮವಾಗಿದ್ದು ರಷ್ಯ, ಇಟಲಿ ಮತ್ತು ಫ್ರಾನ್ಸ್ನಲ್ಲಿ ಎಂದು ಹೇಳಲಾಗುತ್ತದೆ. ಇಟಲಿ ಮತ್ತು ಫ್ರಾನ್ಸ್ನ ಪುನರುತ್ಥಾನದ ವೇಳೆ ಈ ನೃತ್ಯ ಬೆಳಕಿಗೆ ಬಂತು. ಸುಂದರವಾದ ದೃಶ್ಯಕಾವ್ಯ ಮಾತಿಲ್ಲದ ನರ್ತನ. ಇದು ಕಥಕ್ಕಳಿಯಲ್ಲಿಯೂ ಕಂಡುಬರುವುದರಿಂದ ಇಟಲಿ ಮತ್ತು ಫ್ರಾನ್ಸ್-ನಿಂದ ಬಂದಿದೆ ಎನ್ನುವುದು ಅವಶ್ಯಕವೇ?

“ಚಂಡೆಯನಾದ ಕೆರಳದ ತುದಿಯಿಂದ ದಕ್ಷಿಣ ಕನ್ನಡದ ಮೂಲಕ, ಉತ್ತರ ಕನ್ನಡಕ್ಕೂ ವ್ಯಾಪಿಸಿ ಬಯಲು ಸೀಮೆಯನ್ನು ತಲುಪಿದೆ. ಒಂದು ಕಾಲದಲ್ಲಿ 'ಗಂಡು ಕಲೆ' ಎಂದೇ ಹೆಸರಾಗಿದ್ದ ಡೊಳ್ಳು ಬಾರಿಸುವುದನ್ನು ಮಹಿಳೆಯರೂ ಕರಗತ ಮಾಡಿಕೊಂಡು ಸಾಗರದಾಚೆಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ”, [ಎಸ್.ಜಲಂದರ್]

ಇದೇ ನಿಟ್ಟಿನಲ್ಲಿ ಮಹಿಳಾ ತಂಡವೊಂದು 'ಚಂಡೇವಾದ್ಯ'ದಲ್ಲಿ ಅರೆ ಮಲೆನಾಡು ಹಾಗೂ ಬಯಲು ಸೀಮೆಯಲ್ಲಿ ಸದ್ದು ಮಾಡುತ್ತಿದೆ. ಬಯಲು ಸೀಮೆಯಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡರೆ ಆಶ್ಚರ್ಯವಿಲ್ಲ. “ತಂಡವೊಂದು ಚಂಡೆ ಬಾರಿಸುತ್ತಿದ್ದರೆ ಕುಣಿಯಬೇಕೆನ್ನಿಸುತ್ತದೆ, ಹೆಜ್ಜೆ ಹಾಕಬೇನ್ನಿಸುತ್ತದೆ. ಆ ವಾದ್ಯದ ನಾದವೇ ಹಾಗೆ. ಎಂಥವರನ್ನೂ ಬಡಿದೆಬ್ಬಿಸುತ್ತದೆ. ಕರಾವಳಿ ಹಾಗೂ ಮಲೆನಾಡು ಕೆಲವೆಡೆ ಪರುಷರು ಮಾತ್ರ ಚಂಡೆಯನ್ನು ಬಾರಿಸುತ್ತಿದ್ದರು. ಇದೀಗ ಒಂದು ಹೆಜ್ಜೆ ಮುಂದು ಹೋದ ಮಹಿಳೆಯರ ತಂಡವೊಂದು ನಾವ್ಯಾರಿಗೂ ಕಮ್ಮಿ ಇಲ್ಲ ಎಂದು ವಾದ್ಯದಲ್ಲಿ ತರಬೇತಿ ಪಡೆದು ಕೊಪ್ಪ ಭಾಗದಲ್ಲೀಗ ಸದ್ದು ಮಾಡುತ್ತಿದೆ”.[ಎಸ್. ಜಲಂಧರ್]

ಕೇರಳದ ಕಥಕ್ಕಳಿಯಲ್ಲಿ ಬಳಸುವ ಚಂಡೆಯನ್ನು ತೆಂಕಿನವರೂ ಬಳಸುತ್ತಿದ್ದರು. ಅಲ್ಲಿ ಭಾಗವತನ ಎಡಬದಿಗೆ ನಿಂತು ಬಾರಿಸುವ ಪದ್ಧತಿ ಇದೆ. ಅವರು ಜಾಗಟೆಯನ್ನು ಬಳಸುವರು.

ಹಲವು ಪ್ರಾಜ್ಞರಲ್ಲಿ ಜಾಗಟೆಯನ್ನು ಏಕೆ ಬಳಸುವರು ಎಂದು ಕೇಳಿದರೆ ನನಗೆ ಸಮರ್ಪಕವಾದ ಉತ್ತರ ಸಿಗಲಿಲ್ಲ! ದೇವಸ್ಥಾನದಲ್ಲಿ ಜಾಗಟೆಗಳನ್ನು ಬಳಸುವರು. ಆದರೆ ಆಟದಲ್ಲಿ ಬಳಸುವ ಜಾಗಟೆ ಚಿಕ್ಕದಾಗಿ ಪಂಚಲೋಹದಿಂದ ತಯಾರಿಸಿದ್ದೇ ಆಗಿರುವುದು. ನಾದ ಮಾಧರ್ಯತೆಯೇ ಜಾಗಟೆಯ ಉದ್ದೇಶ ಎನ್ನುವುದು ನನ್ನ ಅನಿಸಿಕೆ. ಜಾಗಟೆಯನ್ನು ಬಾರಿಸಲು ಪ್ರಾಣಿಯ ಕೊಂಬನ್ನು ಉಪಯೋಗಿಸುವುದನ್ನು ನಾನು ನೋಡಿದ್ದೇನೆ. ಚಕ್ರತಾಳವನ್ನು ಕಥಕ್ಕಳಿಯಲ್ಲಿಯೂ ಬಳಸುವರು. ಅಬ್ಬರದ ಸನ್ನಿವೇಷಗಳಲ್ಲಿ ತೆಂಕು ತಿಟ್ಟಿನಲ್ಲಿಯೂ ಬಳಸುವರು.

ಚಂಡೆಯನ್ನು ವಿಶೇಷವಾದ ಪ್ರಾಣಿಯ ಕೊಂಬಿನ ಸಾಧನದಿಂದ ನುಡಿಸುವರು ಎಂದು… ಎಲ್ಲೆಡೆಯಂತೆ ನಾಗಬೆತ್ತವನ್ನೇ ಉಪಯೋಗಿಸುವರೆಂದು ಎರಡು ವಾದವಿದೆ. ಜಾಗಟೆ ಮತ್ತು ಚಕ್ರತಾಳವನ್ನು ದೇವರಿಗೆ ಮಂಗಳಾರತಿ ಮಾಡುವ ಸಂದರ್ಭದಲ್ಲಿ ಬಳಸುವುದು ವೇದ್ಯ. ತಾಳವನ್ನು ಭಜನೆಯಲ್ಲಿ ಮಾತ್ರ ಬಳಸುವರು.

ರಂಗದ ಎಡಬದಿಗೆ… ಭಾಗವತರಿಗಿಂತಲೂ ಮೊದಲು ಚೆಂಡೆಯವರು ಇರುತ್ತಿದ್ದರು. ಬೆಳಗಿನವರೆಗೆ ಹೆಗಲಿಗೆ ಜೋತು ಹಾಕಿಕೊಂಡು ನಿಂತೇ ಬಾರಿಸುವ ಪದ್ಧತಿ ಕಥಕ್ಕಳಿಯಿಂದ ಬಂದಿತ್ತು! ಹಲವಡೆ ಮಹಿಳೆಯರು ಚೆಂಡೆಯನ್ನು ಬಾರಿಸುವರು. ಚಂಡೆ ಬಾರಿಸುವಲ್ಲಿ ಉತ್ತಮ ಕಲಾವಿದೆಯರು ಎನಿಸಿಕೊಂಡವರೂ ಇದ್ದಾರೆ. ಸುಳ್ಯದ ದಿವ್ಯಶ್ರೀ, ಅಪೂರ್ವ ಸುರತ್ಕಲ್ ಇವರುಗಳ ಹೆಸರು ಕೇಳಿದ್ದೇನೆ. ಇನ್ನೆಷ್ಟು ಬೆಳಗಲಿರುವ ಕಲಾವಿದರಿದ್ದಾರೋ ತಿಳಿಯೆ. [ಈ ಲೇಖಕನಿಗೆ ತೆಂಕು #ಸ್ತ್ರೀ_ಭಾಗವತರು, ಮದ್ದಲೆಗಾರರು, ಚಂಡೆಯವರು, ಚಕ್ರತಾಳದವರು, ವೇಷಧಾರಿಗಳು, ತಾಳಮದ್ದಲೆಯ ಅರ್ಥಧಾರಿಗಳು ಸಂಪರ್ಕಿಸಿದರೆ ತೆಂಕಿನ ಹಿನ್ನೆಲೆಯ ಕುರಿತು… ಬರೆಯುವ ಆಸೆ ಇದೆ. ಅಭಿಪ್ರಾಯಕ್ಕೂ ಸ್ವಾಗತವಿದೆ. ನಿಮ್ಮ ಸಂಪೂರ್ಣ ಸಾಧನಾ ಸಿದ್ಧಿಯ ಕುರಿತು ಮಾಹಿತಿಗಳಿರಲಿ. ಸಂರ್ಕಿಸಬೇಕಾದ ವಿಳಾಸ:-- e-mail: anantvaidyayellapur@gmail.com ]

ಬಡಗು ತಿಟ್ಟಿನಲ್ಲಿ ಪ್ರಸಿದ್ಧಿಯನ್ನು ಪಡೆದ ಚಂಡೆವಾದಕರು… ಆನಂದ ಕೆಮ್ಮಣ್ಣು. ಸತ್ಯನಾರಾಯಣ ಭಂಡಾರಿ, ಪ್ರಭಾಕರ ಭಂಡಾರಿಯವರು. ಇವರೆಲ್ಲರೂ ಸಮತೂಕದವರು. ಆದರೆ ಸ್ತ್ರೀ ಪಾತ್ರವು ರಂಗಸ್ಥಳಕ್ಕೆ ಬಂತೆಂದರೆ ಇವರುಗಳೆಲ್ಲ ರಂಗಸ್ಥಳದಲ್ಲಿ ಇರುವುದಿಲ್ಲವಾಗಿತ್ತು! ಸ್ತ್ರೀ ಪಾತ್ರದ ನಯ ನಾಜೂಕಿಗೆ ಚೆಂಡೆಯ ಅಗತ್ಯವಿಲ್ಲ ಎನ್ನುವುದೇ ಅವರ ಭಾವನೆಯಾಗಿತ್ತು!

ಕುಟ್ಟಣ್ಣ ಇದನ್ನೆಲ್ಲಾ ಗಮನಿಸಿ, ಮೊದಲು ಚೆಂಡೆಯ ಕುರಿತು ಕೂಲಂಕಷವಾಗಿ ಅಭ್ಯಸಿಸಿದವ. ಅದರಿಂದ ಜನ-ಮನ ಒಪ್ಪುವಂತೆ ನಾದದ ಸೊಬಗನ್ನು ನುಡಿಸಬಹುದೆಂದು ತಿಳಿದವ. ಅವನು ಚೆಂಡೆಯನ್ನು ಬಾರಿಸುವುದಲ್ಲ. ನುಡಿಸುವುದು. ಸ್ತ್ರೀ ವೇಷಕ್ಕೂ ಚಂಡೆ ನುಡಿಸುವುದು ಹೇಗೆಂದು ತೋರಿಸಿಕೊಟ್ಟ ಪ್ರಪ್ರಥಮವಾದನ ಪಟು. ಕುಟ್ಟಣ್ಣ ಚಂಡೆಗೆ ವಿಶೇಷವಾದ ಸ್ಥಾನ – ಮಾನವನ್ನು ಗಳಿಸಿ ಕೊಟ್ಟವನು! ಚಂಡೆಯನ್ನು ತೆಂಕತಿಟ್ಟಿನಂತೆ ಭುಜಕ್ಕೆ ತೂಗುಹಾಕಿ ಚೌಕಿಮನೆ, ಸೇವೆ ಸಲ್ಲಿಸಲು ಹೋಗುವಾಗ ನುಡಿಸಿದವನು.ಅನಂತ ವೈದ್ಯ , ಯಲ್ಲಾಪುರ

27 views2 comments
bottom of page