top of page

ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ

ಹೆಜ್ಜೆ -3

ಪ್ರತಿಯೊಬ್ಬನಿಗೂ ಒಂದೊಂದು ಅಮೂರ್ತವಾದ ಆಸೆ ಇರುತ್ತದೆ. ಸಾಧಕರನ್ನು ಕಂಡರೆ ಅವರಂತೆ ಆಗಬೇಕೆನ್ನುವ ಬಯಕೆ ಚಿಗುರುತ್ವುತದೆ. ದೊಡ್ಡ ಸಾಹಿತಿಯನ್ನು ಕಂಡರೆ ತಾನೂ ಸಾಹಿತಿ ಆಗಬೇಕು, ಕವಿಯನ್ನು ಕಂಡರೆ ಕವಿಯಾಗಬೇಕು, ಗಾಯಕನನ್ನು ಕಂಡರೆ ಗಾಯಕ ನಾಗಬೇಕು, ಉದ್ಯಮಿಯನ್ನು ಕಂಡರೆ ಉದ್ಯಮಿಯಾಗಬೇಕು, ರಾಜಕಾರಣಿಯನ್ನು ಕಂಡರೆ ರಾಜಕಾರಣಿ ಆಗಬೇಕು, ಸಿನೇಮಾ ನಟನನ್ನು ನೋಡಿದರೆ ಸಿನೇಮಾ ನಟನಾಗಬೇಕೆನ್ನುವ ಬಯಕೆ ಮೂಡುತ್ತದೆ. ಬಯಕೆ ಪ್ರಯತ್ನಾತೀತವಾದರೆ ಸಿದ್ಧಿ ಅಸಾಧ್ಯ. ಎಲ್ಲರಿಗೂ ಆಸೆಗಳ ಸರಮಾಲೆ ಇರುತ್ತದೆ. ಯೋಗವಿದ್ದವನಿಗೆ ಯೋಗ್ಯತೆ ಇರುವುದಿಲ್ಲ. ಯೋಗ್ಯತೆ ಇದ್ದವನಿಗೆ ಯೋಗವಿರುವುದಿಲ್ಲ!! ಯೋಗ ಮತ್ತು ಯೋಗ್ಯತೆ ಕೂಡಿ ಬರುವುದು ಅಪರೂಪ!!

ದುರ್ಗಪ್ಪಣ್ಣನ ಕಂಡರೆ ಮದ್ದಲೆಗಾರನಾಗಬೇಕು. ನಾವುಡರನ್ನು ಕಂಡರೆ ಅಂತಹ ಭಾಗವತ ಆಗಬೇಕು. ಶಂಭು ಹೆಗಡೆಯವರನ್ನು ಕಂಡರೆ ಯಕ್ಷಗಾನ ಕಲಾವಿದನಾಗಬೇಕು. ಪ್ರಭಾಭಕರ ಮಂಟಪರನ್ನು ಕಂಡರೆ ಅಂತಹ ಸ್ತ್ರೀ ವೇಷಧಾರಿ ಆಗಬೇಕು…. ಆದರೆ ಅದು ಒಂದೆರಡು ನಿಮಿಷದಲ್ಲಿ ಆಗುವಂತಹದ್ದಲ್ಲ! ಅದಕ್ಕೆ ಸತತ ಪ್ರಯತ್ನ, ಸಿದ್ಧಿ ಸಿಗುವವರೆಗೆ ಕಾಯುವ ತಾಳ್ಮೆ ಬೇಕು. ಗದಗದ ಗೈಡನ್ನು ಓದಿ ಸಾಹಿತ್ಯವನ್ನು ಬಲ್ಲವರಿದ್ದಾರೆಯೇ? ಹೆಚ್ಚಾಗಿ ಶಾಲಾ ಶಿಕ್ಷರೆಲ್ಲ ಗೈಡನ್ನು ಓದಿಯೇ ಪಾಠಮಾಡುವುದು. ಅದಕ್ಕೆ ಅವರಿಗೆಲ್ಲ ಐದು ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿ ಪುನಃ ಸೇರಿಸಿಕೊಳ್ಳುವ ಗುತ್ತಿಗೆ ಆಧಾರ ಬರಬೇಕೆನ್ನುವುದು. ಶೃತಿ ತಪ್ಪುವವರೆಲ್ಲಾ ಸಂಗೀತದ ಗುರುಗಳಾದರೆ ವಿದ್ಯಾರ್ಥಿಗಳಿಗೂ ಶೃತಿ ತಪ್ಪಿ ಹಾಡುವುದನ್ನೇ ಕಲಿಸುವರು. ಅದು ಕೇವಲ ಶೃತಿತಪ್ಪಿದಾಗ… ಎಂದಷ್ಟೇ ಹೇಳಿಸಿಕೊಳ್ಳುವುದು.

ಚೆಂಡೆಯಲ್ಲಿ ಮಹಾನ್ ಸಾಧನೆ ಕುಟ್ಟಣ್ಣನದು. ಅವನು ಬಡತನವನ್ನೇ ಹೆದರಿಸಿದವನು. ಬದುಕಿನ ದುಃಖದ ಬವಣೆಗಳೆಲ್ಲವನ್ನೂ ಉಂಡವನು. ಯಾರಿಂದಲೂ ಸಹಾಯವನ್ನು ಬೇಡದವನು. ಬದುಕಿನಲ್ಲಿ ಬಂದುದೇ ಪಂಚಾಮೃತವೆಂದು ಸ್ವೀಕರಿಸಿದವನು. ಕಷ್ಟಗಳಿಗೆ ಅಂಜದವನು. ಉಳಿದವರ ಕನಿಕರವನ್ನು, ಸಹಾಯವನ್ನು ಬಯಸದವನು.

ನನಗೆ ಕುಟ್ಟಣ್ಣನ ಮನಸ್ಥಿತಿಯ ಅರಿವಾಗಿತ್ತು. ಅವನ ಹೃದಯ ವೈಶಾಲ್ಯತೆಯ ಅರಿವೂ ಆಗಿತ್ತು. ಅವನ ಸ್ನೇಹ ಮನದ ತುಂಬಾ ಬೆಳಕನ್ನು ನೀಡಿತ್ತು. ನನ್ನ ಜೊತೆ ಅವನ ನವಿರಾದ ಹಾಸ್ಯ ಮರೆಯಲಾಗದ್ದು. ಒಂದು ದಿನ… ಒಂದು ದಿನ… ಎನ್ನುತ್ತ ನನ್ನ ಒತ್ತಾಯಕ್ಕೆಐದು ದಿನ ನನ್ನ ಜೊತೆಯೇ ಉಳಿಸಿ ಕೊಂಡೆ. ಅದರಲ್ಲಿ ಒಂದು ದಿನ ಶ್ರೀ ಕೃಷ್ಣ ಭಾಗವತ ಬಾಳೆಹದ್ದದವರ ಮನೆಗೂ ಹೋಗಿದ್ದೆವು. ಸಿರಸಿ ರೋಡಿನಲ್ಲಿ ಗಾಡಿಗಳು ಕಡಿಮೆ ಇದ್ದ ವೇಳೆ. ಅಲ್ಲಿಯೇ ರಾತ್ರಿ ಉಳಿದುಕೊಂಡೆವು.

ಬಾಳೆಹದ್ದವೆಂದರೆ ಒಂದು ಕಲಾಮಂದಿರ. ಹಿಂದುಸ್ಥಾನಿ ಗಾಯಕರಾದ ಪಂ. ಗಣಪತಿ ಭಟ್ಟ, ಪಂ. ಶ್ರೀಪಾದ ಹೆಗಡೆ, ಪಂ. ರಘುನಾಥನಾಕೋಡ್, ಪಿಟಿಲು ಕಲಾವಿದರು ಮುಂತಾದ ಸಂಗೀತ ದಿಗ್ಗಜರುಗಳು ಒಂದೆಡೆ… ಇನ್ನೊಂದೆಡೆ… ಶ್ರೀ ಮಂಜುನಾಥ ಭಾಗವತ ಹೊಸ್ತೋಟ ಅವರು, ಶ್ರೀ ದುರ್ಗಪ್ಪ ಗುಡಿಗಾರರು ಮುಂತಾದ ಯಕ್ಷಗಾನದ ಕಲಾವಿದರ ಉಪಸ್ಥಿತಿಗಳು ಇದ್ದೇ ಇರುತ್ತಿದ್ದವು. ಹೊಸ್ತೋಟದವರಂತೂ ಅಲ್ಲಿಯೇ ಹಲವಾರು ಪ್ರಸಂಗಗಳನ್ನು ಬರೆದಿರುವವರು!! ಕಲಾವಿದ ಎನಿಸಿಕೊಂಡವನು ಬಾಳೆಹದ್ದಕ್ಕೆ ಹೋಗಿಲ್ಲವೆಂದರೆ ಅದು ಅವನ ಅಪೂರ್ಣತೆಯಲ್ಲಿ ಒಂದೆನಿಸಿಕೊಳ್ಳುತ್ತಿತ್ತು! ಈಗ ಅವರ ಮಗ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ಶ್ರೀ ತಿಮ್ಮಪ್ಪ ಭಾಗವತ ಬಾಳೆಹದ್ದ ಎಂದರೆ ಒಂದು ಬೇರೆಯ ಸ್ಥಾನ-ಮಾನವೇ ಇದೆ.

ಬಾಳೆಹದ್ದದವರ ಪದ್ಯ ಕುಟ್ಟಣ್ಣನ ಜೋಡಿ ಅಂದು ಎರಡು ಗಂಟೆಯವರೆಗೆ ಕರ್ಣಮಧುರವಾಗಿ ನಡೆಯಿತು. ಕುಟ್ಟಣ್ಣನ ಲಯದ ಗಟ್ಟಿತನವೂ ಅಲ್ಲಿ ಒರೆಗೆ ಹಚ್ಚಲ್ಪಟ್ಟಿತು. ಬಾಲಕನಾದ ತಿಮ್ಮಪ್ಪನು ಪದ್ಯವನ್ನು ಹೇಳಿದ್ದ.

ಕುಟ್ಟಣ್ಣ ಮತ್ತು ನಾನು ಒಂದಿಲ್ಲೊಂದು ಕಡೆ ಭೇಟಿಯಾಗುತ್ತಿದ್ದೆವು. ಅದರಲ್ಲಿ ಮರೆಯಲಾಗದ್ದು ಅಗಸಾಲ ಬೊಮ್ಮನಲ್ಲಿಯಲ್ಲಿ ನಡೆದ ತಾಳಮದ್ದಲೆ. ಕೃಷ್ಣ ಭಾಗವತರು ಹಾಗೂ ಕುಟ್ಟಣ್ಣನ ಹಿನ್ನೆಲೆ ಅದ್ಭುತವಾಗಿತ್ತು. ನನ್ನ ಗೆಳೆಯ ಎಲ್. ಎನ್. ಹೆಗಡೆ ಏರ್ಪಡಿಸಿದ ತಾಳಮದ್ದಲೆ. ಪ್ರಸಂಗ ‘ಕರ್ಣಪರ್ವ’. ಈ ತಾಳಮದ್ದಲೆಯು ನನ್ನನ್ನು ಬೆಳಗಾಗುವುದರ ಒಳಗೆ ಅರ್ಥಧಾರಿ ಪಟ್ಟವನ್ನು ಕೊಟ್ಟದ್ದು! ಅದರ ಅನುಭವವನ್ನು ಇನ್ನೊಮ್ಮೆ ಹೇಳುವೆ.

ಕೊಳಗಿಬೀಸ್ ಮಂಡಳಿಯಲ್ಲಿ ಕುಟ್ಟಣ್ಣನ ಚಂಡೆವಾದನವನ್ನು ಪ್ರಪ್ರಥಮವಾಗಿ ಕೇಳಿದ್ದು. ಅದು ಅವಿಸ್ಮರಣೀಯ ಅನುಭವಗಳಲ್ಲಿ ಒಂದಾಗಿತ್ತು! ನೀರ್ನಳ್ಳಿಯಲ್ಲಿ ನಡೆದ ಯಕ್ಷಗಾನ ಸಪ್ತಾಹವೂ ಮರೆಯಲಾರದ ಅನುಭವಗಳಲ್ಲಿ ಒಂದು! ನನ್ನ ಮತ್ತು ಕುಟ್ಟಣ್ಣನ ಸ್ನೇಹ ಸದಾ ಹಸಿರಾಗಿಯೇ ಇತ್ತು.


ಕುಟ್ಟಣ್ಣ ಚೆಂದನೆಯ ಅನುಭವಗಳನ್ನು ಅಂತರಂಗದಿಂದ ಪ್ರೋತ್ಸಾಹಿಸುತ್ತಿದ್ದನು. ಬೆನ್ನು ಚಪ್ಪರಿಸುತ್ತಿದ್ದನು. ಆಕಾಶವಾಣಿಯಲ್ಲಿ ಬಾಳೆಹದ್ದದವರ ಪರಿಚಯದಿಂದಾಗಿ ‘ಶ್ರೀ ಕೃಷ್ಣ ಸಂಧಾನ’ ತಾಳಮದ್ದಲೆ ನಡೆದಿತ್ತು. ವಿಶೇಷ ಸಮಯವೆಂದು ಒಂದು ತಾಸು ನೀಡಿದ್ದರು. ಅದರಲ್ಲಿ ನನ್ನ ಅರ್ಥ ಕೇಳಿ ತುಂಬಾ ಮೆಚ್ಚಿಕೊಂಡಿದ್ದ. ಶ್ರೀ ಶಂಭು ಹೆಗಡೆಯವರು ಮೆಚ್ಚಿಕೊಂಡಿದ್ದನ್ನೂ ಹೇಳಿದ್ದ. ಇನ್ನೊಮ್ಮೆ ಸಿದ್ದಾಪುರದಲ್ಲಿ ತುಳಸಿಕಟ್ಟೆ ಪ್ರಸಂಗ. ತೆಂಕು-ಬಡಗಿನ ಸವ್ಯಸಾಚಿ ಕಡತೋಕಾದವರು ಇಂತಹ ಹೊಸ - ಹೊಸ ಪ್ರಯೋಗವನ್ನು ತಂದವರು! ಉಪ್ಪೂರರು, ಕಡತೋಕಾ, ನೆಬ್ಬೂರರ ಪದ್ಯಗಳು. ತುಳಸಿಕಟ್ಟೆ ಪ್ರಸಂಗವೆಂದರೆ ಒಬ್ಬರ ಪದ್ಯವಾದ ಮೇಲೆ ಇನ್ನೊಬ್ಬರು ಪದ್ಯವನ್ನು ಹೇಳುವುದು. ಭಾಗವತರು ಹೇಳಿದ ತತ್ಕಾರಕ್ಕೆ ಮದ್ದಲೆಯವನು ಬಾರಿಸುವುದು. ಅರ್ಥ ಅತ್ಯಂತ ಕಡಿಮೆ. ‘ಹೆಂಗಾತ ಮಾಣಿ’ ಎಂದು ಉಪ್ಪೂರರು ನನ್ನನ್ನು ಕೇಳಿದರು ಚೆನ್ನಾಗಿತ್ತು ಎಂದೆ. ಬರುವಾಗ ಕುಟ್ಟಣ್ಣ ಹೇಳಿದ ‘ಅನಂತ! ನಿಜವಾಗಿಯೂ ಚೆನ್ನಾಗಿತ್ತಾ?’ ನಾನೆಂದೆ… ‘ಉಪ್ಪೂರರು ಹಿರಿಯ ಜೀವ. ಎಲ್ಲ ಭಾಗವತರೂ ಅಲ್ಲಿಯೇ ಇದ್ದಾರೆ. ಚೆನ್ನಾಗಿಲ್ಲ ಎನ್ನುವುದು ಸರಿ ಕಾಣಲಿಲ್ಲ’! ‘ಹೌದಾ! ಚಪ್ಪಾಳೆ ಎನೋ ರಾಶಿ ಬಿದ್ದಿದೆ. ಆದರೆ ಚಪ್ಪಾಳೆ ಬಡಿದವರೆಲ್ಲಾ ತಮಗೆ ಮಲಗಲು ಅವಕಾಶ ಸಿಗುವುದೆಂದು ಬಡಿಯುತ್ತಿದ್ದರು.


ಸುಮ್ಮನೆ ಮಲಗಿದವರನ್ನು ಏಳಿಸಲು ಜಾಗವಿಲ್ಲದೇ ಕುಳಿತವರು ಚಪ್ಪಾಳೆ ತಟ್ಟುತ್ತಿದ್ದರು. ನೋಡಿದೆಯಾ?.... ಅದು ನಿಜವೂ ಆಗಿತ್ತು! ಕುಟ್ಟಣ್ಣನ ಹೇಳಿಕೆ ಏನೆಂದರೆ…. ಚಪ್ಪಾಳೆಯನ್ನು ಕಿವಿ ಗಡಚಿಕ್ಕುವ ಹಾಗೆ ತಟ್ಟಿದರೆ ಏನಾಯಿತೆಂದು ನೋಡಲು ಮಲಗಿದವರು ಏಳುತ್ತಿದ್ದರು. ಚಪ್ಪಾಳೆ ತಟ್ಟಿದವರು ಇದೇ ಸುಸಮಯವೆಂದು ಖಾಲಿ ಆದ ಜಾಗದಲ್ಲಿ ಮಲಗುತ್ತಿದ್ದರು!! ಎಷ್ಟು ಸೂಕ್ಮವಾದ ವಿಹಂಗಮ ನೋಡಿ.

ಶಿರಸಿ ಗೋಳಿಯಲ್ಲಿ ಯಕ್ಷಗಾನ ಶಾಲೆ. ಗುರುಗಳು ಹೊಸ್ತೋಟ ಮಂಜುನಾಥ ಭಾಗವತರು ಮತ್ತು ದುರ್ಗಪ್ಪ ಗುಡಿಗಾರ. ಅಲ್ಲಿಗೆ ಕುಟ್ಟಣ್ಣನನ್ನು ಕರೆದುಕೊಂಡು ಹೋಗಿದ್ದೆ. ಕುಟ್ಟಣ್ಣನನ್ನು ಸಾಕಷ್ಟು ಗೌರವದಿಂದ ಅವರು ಕಂಡರು. ಆ ಶಾಲೆಯ ವಿದ್ಯಾರ್ಥಿ ನಾನೂ ಆಗಿದ್ದೆ. ಆದರೆ ನಾನು ಅಲ್ಲಿ ಕಲಿತದ್ದಕ್ಕಿಂತ ಊರು-ಊರಿನಲ್ಲಿ ತಾಳ ಮದ್ದಲೆಯ ಅರ್ಥ ಹೇಳಿದ್ದೇ ಹೆಚ್ಚು! ಶ್ರೀ ಗಜಾನನ ಪ್ರೌಡ ಶಾಲೆ ಸಂಪಖಂಡದಲ್ಲಿ ಮುಖ್ಯ ಅತಿಥಿಯಾಗಿ ಹೋದದ್ದೇ ನನ್ನ ಮುಂದಿನ ಬದುಕಿನ ಅಡಿಪಾಯವಾಯಿತು.

ಕುಟ್ಟಣ್ಣ ಮತ್ತು ನಾನು ಬಹಳ ಕಡೆ ತಿರುಗಾಡಿದ್ದೇವೆ. ಶ್ರೀ ಶಿವಾನಂದ ಹೆಗಡೆಯವರು ನನ್ನ ಮೆಚ್ಚಿನ ಕಲಾವಿದ ಶ್ರೀಶಂಭು ಹೆಗಡೆಯವರ ಪ್ರಶಸ್ತಿಯನ್ನು ಕೊಡುವಾಗ ನನ್ನ ಶ್ರೀಮತಿಯೊಂದಿಗೆ ಅವನನ್ನು ಕಂಡು ಮಾತನಾಡಿದ್ದು ಮರೆಯಲಾಗದು.


ಶರಾವತಿಯ ನದಿಯ ದಡದಲ್ಲಿರುವವರಿಗೂ ಗಂಗಾವಳಿಯ ನದಿಯ ದಡದಲ್ಲಿರುವ ನನಗೂ ಏನೋ ಹೇಳಲಾಗದ ನಂಟು. ಘಟ್ಟದ ಕೆಳಗಿರುವ ಹಳದಿಪುರ-ಕಡತೋಕಾಗಳಲ್ಲಿ ನನ್ನ ವಿದ್ಯಾಭ್ಯಾಸ. ಘಟ್ಟದ ಕೆಳಗೇ ನನ್ನ ವಂಶದ ಕುಡಿ ಬೆಳೆದದ್ದು! ನನ್ನ ಶ್ರೀಮತಿ ವಿಜಯಶ್ರೀಯ ತವರ ಮನೆ ಕೂಜಳ್ಳಿ! ನನ್ನ ನೆಚ್ಚನ ಕಲಾವಿದರ ಮನೆಯಿರುವುದೆಲ್ಲ ಹೆಚ್ಚಾಗಿ ಇಡಗುಂಜಿಯಲ್ಲಿ. ಶರಾವತಿ ನದಿಯ ದಡದಲ್ಲಿರು ಕೆಳದಿ ನನ್ನ ಮಗಳು ಸಂಗೀತಾಳ ಮನೆ.

ಯಾಜಿಮನೆತನಕ್ಕೂ ನನಗೂ ಏನೋ ನಂಟು. ರಾಮಚಂದ್ರ ಯಾಜಿ ಕಾಲೇಜಿನ ಗೆಳೆಯ. ನನಗೆ ಭಾಷಣ ಮಾಡಲು ಕಲಿಸಿದವನೇ ಈತ. ಹಂಪಿ ಶ್ರೀ ಗಣೇಶ ಯಾಜಿ, ಶ್ರೀ ನಾರಾಯಣ ಯಾಜಿ [ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್], ಇವರೆಲ್ಲ ಅರಿವಿಗೇ ಬರದೇ ಸ್ನೇಹಿತರಾದವರು. ಶ್ರೀ ನಾರಾಯಣ ಯಾಜಿಯವರನ್ನು ‘ನಾನು ನೋಡಿಯೇ ಇಲ್ಲ’ ಎಂದು ತಿಳಿದುಕೊಂಡವ. ಆದರೆ ಅವರು ಶ್ರೀ ಮಹಾಬಲೇಶ್ವರ ವೈದ್ಯರ ಮನೆಗೆ ತಾಳಮದ್ದಲೆಗೆ ಬಂದವರು!

[ಚಿತ್ರಗಳು : ಕೃಪೆ ಅಂತರ್ಜಾಲ ]

45 views1 comment

1 Comment


ಚಂಡೆ ಮಾಂತ್ರಿಕನೊಂದಿಗಿನ ತಮ್ಮ ಸ್ಮರಣೆ ಯ ಆಪ್ತ ಪಯಣವನ್ನು ಸುಂದರವಾಗಿ ಚಿತ್ರಿಸಿದ್ದೀರಿ .

Like
bottom of page