top of page

ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ

Updated: Aug 29, 2020

‘ಹರಿವ ತೊರೆಗೆ ಮೈಯೆಲ್ಲ ಕಾಲು’ ಎಂಬ ಅಲ್ಲಮನ ವಚನದಂತೆ ಚಂಡೆ ಮಾಂತ್ರಿಕ ಖ್ಯಾತಿ ದಿ.ಕೃಷ್ಣಯಾಜಿಯವರ ತ್ರಿಕರಣಗಳಲ್ಲಿ ತೊಟ್ಟಿಕ್ಕುವ ಪ್ರೀತಿಯನ್ನು ಅನುಭವಿಸಿದವರೇ ದನ್ಯರು. ‘ಆಲೋಚನೆ’ ಬಳಗ ಅಗಲಿದ ಆ ಚೇತನಕ್ಕೆ ನಮಿಸುತ್ತಾ ಹೆಸರಾಂತ ಸಾಹಿತಿ, ಅಂಕಣಕಾರ ಶ್ರೀ ಅನಂತ ವೈದ್ಯರು ದಿ.ಯಾಜಿಯವರ ಕುರಿತು ಬರೆದ ಸ್ಮರಣೆಗಳು ಏಳು ಕಂತುಗಳಲ್ಲಿ ನಿಮ್ಮ ಓದಿಗಾಗಿ- ಸಂಪಾದ


ಹೆಜ್ಜೆ -1


ಉತ್ತರ ಕನ್ನಡ ಜಿಲ್ಲೆಯ [ಕಾರವಾರ ಜಿಲ್ಲೆಯ] ಅಂಕೋಲ ತಾಲೂಕಿನ ವೈದ್ಯಹೆಗ್ಗಾರ ಶ್ರೀ ಮಹಾಬಲೇಶ್ವರ ವೈದ್ಯರ ಮನೆಯಲ್ಲಿ ಯಕ್ಷಗಾನ ತಾಳಮದ್ದಲೆ! ಇಲ್ಲಿಯ ತಾಳಮದ್ದಲೆಗೆ ಮುನ್ನೂರು ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಎಣ್ಣೆ ದೀಪ, ದೊಂದಿ, ಪೆಟ್ರೋಮೆಕ್ಸ್, ಝಗ-ಝಗಿಸುವ ವಿದ್ಯುದ್ ದೀಪಗಳವರೆಗಿನ ಬೆಳಕಿನ ವ್ಯವಸ್ಥೆಯನ್ನು ಕಂಡಿದೆ. ಧ್ವನಿವರ್ಧಕದ ಮೊರೆತವನ್ನೂ ಕೇಳಿದೆ.

ಇಲ್ಲಿ ಪ್ರತಿವರ್ಷವೂ ‘ಅನಂತನ ವ್ರತ’ ವಿಜ್ರಂಭಣೆಯಿಂದ ನಡೆಯುತ್ತಿತ್ತು. ಪರಂಪರೆಯಿಂದ ಬಂದ ಕಾರ್ಯಕ್ರಮವಾಗಿತ್ತು. ಭೈರವೇಶ್ವರ ವೈದ್ಯರೆಂದರೆ ಅತಿ ಹಿಂದಿನ ತಲೆಮಾರು. ಅವರು ತಲೆಗೆ ಹೆಂಡತಿಯ ಸೀರೆಯನ್ನು ಸುತ್ತಿಕೊಳ್ಳುತ್ತಿದ್ದರಂತೆ. ಅದು ಪತ್ನಿ ವೈಭವದ ಸೂಚಕ ಎನ್ನುತ್ತಿದ್ದರಂತೆ. ಇಡೀ ಊರಿಗೆ ಇರುವುದು ಒಂದೇ ವೈದ್ಯರ ಕುಟುಂಬ! ವೈದ್ಯಹೆಗ್ಗಾರ ಎಂಬ ಹೆಸರೂ ಅದಕ್ಕೇ ಬಂದಿರಬೇಕು. ಹೆಗ್ಗೆರೆ [ದೊಡ್ಡಕೆರೆ] ಬರುಬರುತ್ತ ಹೆಗ್ಗಾರಾಗಿರ ಬೇಕು ಎನ್ನುವುದು ಒಂದು ಅಭಿಪ್ರಾಯ. ಸಿದ್ದಾಪುರದ ಬಿಳಗಿ ರಾಜಮನೆತನದ ವೈದ್ಯರಾಗಿದ್ದರು ಎನ್ನುವುದು ಇತಿಹಾಸ. ಸಿದ್ದಾಪುರದ ಒಂದು ಮನೆಯಲ್ಲಿ ಇಂದಿಗೂ ಔಷಧಿಯ ಹದಿನಾರು ಗುಂಡಿದೆ. ಅದನ್ನು ಉಪಯೋಗಿಸುವುದು ಹೇಗೆಂದು ತಿಳಿಯಲಾರದೇ ದೊಡ್ಡ ಬಾವಿಗೆ ಎಸೆದಿದ್ದಾರೆ ಎನ್ನುವ ಕಥೆಯನ್ನು ಬಾಳೆಹದ್ದದ ಶ್ರೀಕೃಷ್ಣ ಭಾಗವತರು ಹೇಳಿದ್ದರು.

ವೈದ್ಯರ ಮನೆಯಲ್ಲಿ ಹಿರಿತನಕ್ಕೆ ಅನುಸರಿಸಿ ಚತುರ್ದಶಿ ನಡೆಯಲೇ ಬೇಕು. ಅದರ ನಿಮಿತ್ತ ರಾತ್ರಿಯಿಡಿ ತಾಳಮದ್ದಲೆ ನಡೆಯಬೇಕಿತ್ತು. ಮರುದಿನ ತೀರ್ಥಸ್ನಾನ, ಭೋಜನ ಸಂತರ್ಪಣೆಯ ನಂತರ ಜನ ಹೋಗುತ್ತಿದ್ದರು…. ಕೆಲವೊಮ್ಮೆ ಮರುದಿನವೂ ಜನರಿದ್ದರೆ ‘ತಾಳಮದ್ದಲೆ’ ನಡೆಯುತ್ತಿತ್ತು. ಊರ, ಪರಸ್ಥಳದ ಕಲಾವಿದರ ಆಗಮನವಾಗುತ್ತಿತ್ತು.

ಶ್ರೀ ಮೂರೂರು ದೇವರ ಹೆಗಡೆಯವರು, ಶ್ರೀ ಮಹಾಬಲೇಶ್ವರ ವೈದ್ಯರಿಗೆ ಆತ್ಮೀಯರು. ಅಲ್ಲಿಂದ ತಾಳಮದ್ದಲೆಯ ದಿಕ್ಕೇ ಬದಲಾಯಿತು. ಮೊದಲ ವರ್ಷ ಅವರೊಬ್ಬರೇ ಬಂದಿದ್ದರು. ಎರಡನೆಯ ವರ್ಷ ಅವರ ಜೊತೆ ಹಾಸ್ಯಕಲಾವಿದ ಈಶ್ವರ ಹೆಗಡೆ, ಮಧುಕೇಶ್ವರ ಭಟ್ಟ ಅಡ್ಕೊಳ್ಳಿ ಮೂರೂರು ಬಂದಿದ್ದರು.

ದೇವರು ಹೆಗಡೆಯವರು ‘ವೈದ್ಯರೇ ತಾಳ ಮದ್ದಲೆ ಉಠಾವಾಗಬೇಕೋ ಭಾಗವತರು ಚೆನ್ನಾಗಿರ ಬೇಕು’ ಎಂದರು. ಆಗ ವೈದ್ಯರೆಂದರು… ‘ಹೆಗಡೆಯವರೇ! ನಿಮಗೇ ಗೊತ್ತು. ನನಗೆ ತಾಳಮದ್ದಲೆ ಮಾಡಿಸುವುದು, ಆಟಕುಣಿಸುವುದು ಗೊತ್ತು. ಆದರೆ ಯಾರು ಚಲೋ ಭಾಗವತರು, ಯಾರು ಚಲೋ ಕಲಾವಿದರು ಎನ್ನುವುದೆಲ್ಲ ತಿಳಿಯದು. ತಿಳಿದರೂ ಅವರ ಸಂಪರ್ಕವಿಲ್ಲ! ನೀವೇ ಯಾರನ್ನ ಎಂದು ಕರೆದುಕೊಂಡು ಬನ್ನಿ’.

ಮರುವರ್ಷ ಕಡತೋಕಾ ಕೃಷ್ಣ ಭಾಗವತರ ಆಗಮನವಾಯಿತು. ಅವರಿಗೆ ಮೈಕೆಲ್ಲ ಬೇಕಾಗುವುದಿಲ್ಲ. ಇಟ್ಟರೆ ಬಹುಷ್ಯಃ ಮೈಕೇ ಒಡೆದು ಹೋಗುತ್ತದೇನೋ?! ಆದರೆ ಮದ್ದಲೆಗಾರರೇ ಇಲ್ಲ! ಒಬ್ಬರು ಒತ್ತಾಯಕ್ಕೆ…. ‘ತಾಳಮದ್ದಲೆ ನಿಲ್ಲುತ್ತದಲ್ಲ’ ಎಂಬ ಕಾರಣಕ್ಕೆ ಮದ್ದಲೆ ನುಡಿಸಿದರು. ಅಂತೂ ಇಂತೂ ತಾಳಮದ್ದಲೆ ಮುಗಿಯಿತು….! ಭಾಗವತಿಕೆ ಅತ್ಯಂತ ಆಕರ್ಷಕವಾಗಿತ್ತು. ಆದರೆ….

ಶ್ರೀ ಕೃಷ್ಣ ಭಾಗವತರು ಹೇಳಿದರು… ‘ವೈದ್ಯರೇ! ಮುಂದಿನ ವರ್ಷ ಬರುವಾಗ ನಾನೇ ಮದ್ದಲೆಗಾರರನ್ನು ಕರೆದುಕೊಂಡು ಬರುವೆ’ ಎಂದರು. ನವಿಲಗೋಣಿನಲ್ಲಿ ಜಮೀನು ಖರಿದಿಸಿದ್ದರಿಂದ ವೈದ್ಯರಿಗೆ ಘಟ್ಟದ ಕೆಳಗಿನ ಸಂಪರ್ಕ ಆಗಲೇ ಚೆನ್ನಾಗಿ ಬೆಳೆದಿತ್ತು. ಶ್ರೀ ಕೃಷ್ಣ ಭಾಗವತರ ಮನೆಗೆ ಆಗಾಗ ಹೋಗುತ್ತಿದ್ದರು. ಶ್ರೀ ದೇವರು ಹೆಗಡೆಯವರ ಮನೆಗೂ ಹೋಗುತ್ತಿದ್ದರು.

ಮರುವರ್ಷದ ತಾಳಮದ್ದಲೆಗೆ ಭಾಗವತರೇ ಮೃದಂಗಕಾರರಿಗೆ ಹೇಳಿದ್ದರು. ಮದ್ದಲೆಗಾರರು ಅವರ ಜೊತೆ ಬರಲೇ ಇಲ್ಲ. ಒಂಬತ್ತೂವರೆಗೆ ತಾಳಮದ್ದಲೆ ಶುರುವಾಯಿತು. ಆದರೆ ಮದ್ದಲೆಗಾರರಿಲ್ಲ!


ಅಂದು ಅನಂತನ ಚತುರ್ದಶಿ. ಧೋ ಎಂದು ಮಳೆ ಸುರಿಯುತ್ತಿತ್ತು. ಗಂಗಾವಳಿ ನದಿ ತುಂಬಿ ಹರಿಯುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಿಂದ ನದಿಯವರೆಗೆ ಒಂದೂವರೆ ಕಿ. ಮಿ…. ನದಿ ದಾಟಿದ ಮೇಲೆ ಒಂದು ಕಿ, ಮಿ. ವೈದ್ಯರ ಮನೆಗೆ ನಡೆಯಬೇಕಿತ್ತು. ಮಲೆನಾಡಿನ ದಟ್ಟಾರಣ್ಯ. ಹೆಬ್ಬಾವು, ಕಾಳಿಂಗ ಸರ್ಪಗಳು, ಕರಡಿ, ಹುಲಿ, ಚಿರತೆಗಳೆಲ್ಲ ಅಲ್ಲಿಯ ಸಂಗಾತಿಗಳು.

ಅಲ್ಲಿಯ ವಾತಾವರಣವನ್ನು ಶ್ರೀ ಪ್ರಮೋದ ಹೆಗಡೆಯವರು ವಿವರಿಸಿದ್ದು ಹೀಗೆ …. ‘ನದಿಯ ಆರ್ಭಟ ಹೃದಯವನ್ನು ನಡುಗಿಸುತ್ತಿತ್ತು. ಹಿಂದೆ ಹೋಗೋಣವೆಂದರೂ ಹೆದರಿಕೆ ಮತ್ತು ಆಗ ಯಾವ ವಾಹನವೂ ಸಿಗುವುದು ಸಂಶಯ. ಮುಂದೆ ನದಿಯ ರುದ್ರನರ್ತನ. ನಿಲ್ಲಲೂ ಆಗದು. ಉಕ್ಕೇರುವ ನದಿಯ ನೀರು ದೆವ್ವದಂತೆ ನುಂಗಲು ಬಂದಂತೆ ಭಾಸವಾಗುತ್ತಿತ್ತು. ಅಂತೂ ನಾವಿಕ ಬಂದ. ಆದರೆ ತೂಗಾಡುವ ದೋಣಿಯಲ್ಲಿ ಕೂರಲೂ ಭಯವಾಗುತ್ತಿತ್ತು! ಹೇಗೋ ‘ಸತ್ತರೆ ಸಾಯಲಿ’ ಎಂದು ಕಣ್ಣುಮುಚ್ಚಿ ಕುಳಿತೆ. ಅಂತೂ ಬಂದು ತಲುಪಿದೆ.


ಹನ್ನೆರಡು ಗಂಟೆಯಾದರೂ ಮದ್ದಲೆಗಾರರ ಸದ್ದಿಲ್ಲ. ಒಂದುವರೆ-ಎರಡು ಗಂಟೆಯ ಸನಿಹ ಮದ್ದಲೆಗಾರರು ಬಂದರು! ಮೈಯೆಲ್ಲ ಒದ್ದೆಯಾಗಿತ್ತು. ಸೊಣಕಲು ದೇಹ. ಬೆಳ್ಳಗಿನ ವಸ್ತ್ರ. ಚಳಿಯಿಂದ ಮೈ ನಡುಗುತ್ತಿದ್ದರೂ ಮಾಸದ ಮುಗಳ್ನಗೆ…. ‘ಓ! ಹೋ! ಅಲ್ಲಿನೋಡ್ರಾ…. ಕಳ್ಳಕೃಷ್ಣ ಬಂದ’ ಎಂದು ಹರ್ಷದಿಂದ ಶ್ರೀ ಕೃಷ್ಣ ಭಾಗವತರು ಕೂಗಾಡಿದರು. ಶ್ರೀ ದೇವರೂ ಹೆಗಡೆಯವರು ಉಲ್ಲಸಿತರಾದರು. ಏನಾಯಿತು ಎಂದು ಕೇಳದೇ… ಊಟ, ತಿಂಡಿ ಕೊಡಲು ಬಿಡದೇ ಭಾಗವತರು ಮದ್ದಲೆ ಬಾರಿಸಲು ಕರೆದರು. ತಾಳಮದ್ದಲೆ ರಂಗೇರಿದ ಮೇಲೆಯೇ ಊಟ… ಆದರಾತಿಥ್ಯ. ಇದು ವೈದ್ಯರ ಮನೆಯ ಸಂಪ್ರದಾಯವಾಗಿರಲಿಲ್ಲ!! ಶ್ರೀ ಮಹಾಬಲೇಶ್ವರ ವೈದ್ಯರು ಆತಿಥ್ಯ ಮೊದಲಾಗಲಿ ಎಂದರೂ ಕಲಾವಿದರು, ಭಾಗವತರು ಕೇಳಲೇ ಇಲ್ಲ!

ಶ್ರೀ ಮಹಾಬಲೇಶ್ವರ ವೈದ್ಯರು ಪದ್ಯ ಕೇಳಿ ಕುಣಿದಾಡಿದರು. ಅಂದಿನ ರಸದೌತಣ ಮರೆಯಲಾಗದ್ದು! ಅಂತಹ ಸುಂದರ ತಾಳಮದ್ದಲೆಯನ್ನು ಕಂಡುದೇ ಇಲ್ಲ!! ಊಟಕ್ಕಿಲ್ಲದೇ ಬರಗೆಟ್ಟವನಿಗೆ ಪಂಚ ಪರಮಾನ್ನ ಬಡಿಸಿದಂತಾಯಿತು!!!

ಶ್ರೀ ಮಹಾಬಲೇಶ್ವರ ವೈದ್ಯರು ನನ್ನ ತಂದೆಯವರು. ಅವರನ್ನು ಮಾಚ ವೈದ್ಯರು ಎಂದೂ ಕರೆಯುತ್ತಿದ್ದರು.

ಅಪರಾತ್ರಿಯಲ್ಲಿ ಬಂದ ಮಹಾನುಭಾವರೇ ಶ್ರೀ ಕೃಷ್ಣಯಾಜಿ. ಮುಂದೆ ನನ್ನ ಅಚ್ಚು ಮೆಚ್ಚಿನ ಸ್ನೇಹಿತ, ಹೃದಯವಂತ ಶ್ರೀ ಕೃಷ್ಣಯಾಜಿ.

[ಮುಂದುವರಿಯುವುದು…]


ಅನಂತ ವೈದ್ಯ, ಯಲ್ಲಾಪುರ


ಅಂಕೋಲಾ ತಾಲೂಕಿನ ವೈದ್ಯ ಹೆಗ್ಗಾರಿನವರಾದ ಶ್ರೀ ಅನಂತ ವೈದ್ಯರದು ಬಹುಮುಖ ವ್ಯಕ್ತಿತ್ವ. ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಚಿರಪರಿಚತರಾದ ಶೇಣಿ ಗೋಪಾಲಕೃಷ್ಣ ಭಟ್ಟ, ಸಾಮಗ, ಆನಂದ ಮಾಸ್ತರ, ಪೆರ್ಲ ಕೃಷ್ಣ ಭಟ್ಟ, ವೆಂಕಟಾಚಲ ಭಟ್ಟ, ಮಹಾಬಲ ಹೆಗಡೆ, ಜಬ್ಬರ ಸಮೋ ಮುಂತಾದ ತಾಳ ಮದ್ದಳೆಯ ದಿಗ್ಗಜರ ಸಮ್ಮುಖದಲ್ಲಿ ಮಾತಿನ ಮಲ್ಲಯುದ್ಧದಲ್ಲಿ ಇವರು ಸಮರ್ಥವಾಗಿ ಹಲವಾರು ಯಕ್ಷಗಾನ ಪಾತ್ರಗಳನ್ನು ನಿರ್ವಹಿಸಿದ್ದು ಇಲ್ಲಿ ಉಲ್ಲೇಖನಾರ್ಹ. ಇದರ ಬೆನ್ನಲ್ಲೆ ವಿಜಯವಾಣಿ, ಸಂಯುಕ್ತ ಕರ್ನಾಟಕ, ಕರ್ಮವೀರ ಮುಂತಾದ ನಾಡಿನ ಮುಂಚೂಣಿ ಪತ್ರಿಕೆಗಳಿಗೆ ಪ್ರಮುಖ ಅಂಕಣಕಾರರಾಗಿ ಕಾರ್ಯ ನಿರ್ವಹಿಸಿದ ಶ್ರೀ ವೈದ್ಯರು ಯಕ್ಷಗಾನ ಹಾಗೂ ಪುರಾಣ ಸಾಹಿತ್ಯದ ಮೇಲೆ ಹಲವಾರು ಕೃತಿಗಳನ್ನು ನೀಡಿದ್ದಾರೆ. ಜ್ಞಾನ ಯಜ್ಞ, ಪಾದುಕಾ ಪ್ರಧಾನ, ಕೃಷ್ಣ ಸಂಧಾನ ಮುಂತಾದವು ಇವರ ಜನಪ್ರಿಯ ಕೃತಿಗಳು. ಇದಲ್ಲದೆ ಇನ್ನೂ ಸುಮಾರು 35 ಕ್ಕೂ ಹೆಚ್ಚಿನ ಕೃತಿಗಳು ಮುದ್ರಣದ ಹಾದಿಯಲ್ಲಿವೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಪ್ರಾರಂಭದಲ್ಲಿ ಸರಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಭೋದಕರಾಗಿ ಸೇವೆ ಸಲ್ಲಿಸಿದ್ದಲ್ಲದೆ ನಾಡಿನ ಪ್ರಮುಖ ಪತ್ರಿಕೆಗಳಿಗೆ ವರದಿಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆಕಾಶವಾಣಿ ಧಾರವಾಡ ಮತ್ತು ಕಾರವಾರ ನಿಲಯಗಳಲ್ಲಿ ಅವರ ಹಲವಾರು ಚಿಂತನಗಳು ಭಿತ್ತರಗೊಂಡಿವೆ. ‘ಯಕ್ಷಗಾನ’ ವೆಂಬ ಮಾಸಪತ್ರಿಕೆಯ ಸಂಪಾದಕರಾಗಿ ಇವರು ಪತ್ರಿಕೋಧ್ಯಮದಲ್ಲೂ ತಮ್ಮನ್ನು ಕೆಲವು ಕಾಲ ತೊಡಗಿಸಿಕೊಂಡಿದ್ದರು. ಯಲ್ಲಾಪುರ ತಾಲೂಕಿನ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸಾಹಿತ್ಯ ಸೇವೆ ಸಲ್ಲಿಸಿದ ಇವರು ಹಲವಾರು ಯಕ್ಷಗಾನ ಮತ್ತು ಸಾಹಿತಿಕ ಸಂಘಟನೆಗಳಿಗೆ ಪ್ರೇರಕಶಕ್ತಿಯಾಗಿ ಕಾರ್ಯ ನಿರ್ವಿಸಿದ್ದಾರೆ. ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿದ ನಾಡಿನ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ಅವುಗಳಲ್ಲಿ ಶಂಭು ಹೆಗಡೆ ದತ್ತಿ ಪ್ರಶಸ್ತಿ, ಉಡುಪಿ ಮತ್ತು ಬ್ರಹ್ಮಾವರ ಸಾಹಿತ್ಯ ಪರಿಷತ್ತು, ಸಾವಣ್ಣ ಪ್ರಕಾಶನ, ಬೆಂಗಳೂರು ಇವರ ಸಹಯೋಗದಲ್ಲಿ ವೇದಬ್ರಹ್ಮರ್ಷಿ ಸುರಾಲು ದೇವಿಪ್ರಸಾದ ತಂತ್ರಿಗಳಿಂದ ‘ನಿಷ್ಕಾಮ’ ಪ್ರಶಸ್ತಿ, ದಿ.ಗೋಪಾಲ ಕೃಷ್ಣ ಶೇಣಿ ವೇದಿಕೆ, ನವಿ ಮುಂಬಯಿ ಇವರಿಂದ ಸನ್ಮಾನ ಮುಂತಾದವುಗಳನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಪ್ರಸ್ತುತದಲ್ಲಿ ಇವರ ಅಪಾರ ಜ್ಞಾನ ಮತ್ತು ಅನುಭವದಿಂದ ಮೂಡಿಬರುತ್ತಿರುವ ವಿಜಯವಾಣಿ ಪತ್ರಿಕೆಯ ವಾರದ ಅಂಕಣ ‘ಪ್ರಾಚೀನ ಜ್ಞಾನ’ ಇಂದು ನಾಡಿನಾದ್ಯಂತ ಜನಪ್ರಿಯವಾಗಿದೆ -ಸಂಪಾದಕ.

Commenti


©Alochane.com 

bottom of page