ಇಂದಿನ ಈ ಚುಟುಕು ಅಂಗಳ ಖ್ಯಾತ ಚುಟುಕು ಕವಿ ಜರಗನಹಳ್ಳಿ ಶಿವಶಂಕರ ಅವರಿಗೆ ಅರ್ಪಣೆ.
ಜ. ಶಿ. ಅವರು ಹನಿಗವನ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಮಾರ್ಗ ತುಳಿದವರು. ಚುಟುಕುಗಳೆಂದರೆ ನಗಿಸಲಿಕ್ಕಾಗಿಯೇ ಇರುವಂಥವು ಎಂದು ಬಹಳಷ್ಟು ಕವಿಗಳು ಭಾವಿಸಿಕೊಂಡು ಬರೆಯುತ್ತಿದ್ದಂತಹ ಸಮಯದಲ್ಲಿ ಜ. ಶಿ. ಅವರು ಗಂಭೀರವಾದ ಚಿಂತನಾತ್ಮಕ ವಿಷಯಗಳನ್ನೊಳಗೊಂಡ ಪ್ರಬುದ್ಧ ಹನಿಗವನಗಳನ್ನು ರಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
*
ಹತ್ತಾರು ವರುಷ
ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
.ನೂರಾರು ವರುಷ ;
ನೂರು ವರುಷ ಆಳಿದ ಅರಸ
ಹೆಣವಾಗಿ
ಉಳಿಯಲಿಲ್ಲ
ಮೂರುದಿವಸ.
*
ಏರಿದರೆ
ಮಂಚ, ಗದ್ದುಗೆ , ಸಿಂಹಾಸನ
ಹೆಚ್ಚೆಂದರೆ
ಎರಡು ಮೂರಡಿ ಮೇಲೆ;
ಇಳಿದರೆ
ಗೋರಿ ಸಮಾಧಿ, ...
ಹೆಚ್ಚೆಂದರೆ
ಎರಡು ಮೂರಡಿ ಕೆಳಗೆ
*
ಕುಂಬಾರರು ಮಾಡಿದ ಹಣತೆಗೆ
ಗಾಣಿಗರ ಎಣ್ಣೆಯ ತುಂಬಿ
ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು
ಬತ್ತಿಯ ಮಾಡಿ ದೀಪ ಹಚ್ಚಿದರೆ
ಹಲವು ಜಾತಿಗಳು ಕೂಡಿ
ಕುಲಗೆಟ್ಟ ಬೆಳಕ ನೋಡಾ.
*
ಬೇಕೆ ಕವಿತೆಗೆ
ಸಾವಿರ ಸಾಲು
ಮುದ್ದು ಮಗುವಿಗೆ
ಅಂಬೆಗಾಲ ನಾಲ್ಕು ಕಾಲು!
*
ಆಕಾಶ ಹಾಕಿರುವ
ಹನಿಹನಿಗಳ ಕೂಡಿಟ್ಟು
ಕಡಲಾಗಿಸಿದೆಭೂಮಿ
( ಜಿಪುಣೆ)
*
ಆಕಾಶ ಮನಬಂದಂತೆ
ಸುರಿಸಿ ಮಳೆ
ನಿರ್ಮಲವಾಗಿಬಿಡುತ್ತೆ
ಆ ನೀರನ್ನೆಲ್ಲ
ಕಡಲಿಗೆ ತಲುಪಿಸಬೇಕಾದ
ಅದೆಷ್ಟು ಜವಾಬ್ದಾರಿ
ಈ ನೆಲಕ್ಕೆ!
*
ಬತ್ತಿಯಾದ ಹತ್ತಿ
ನೊಂದುಕೊಳ್ಳುತ್ತದೆ
ತನ್ನೊಡಲೊಳಗೆ
ಬೆಚ್ಚಗೆ ಅಡಗಿದ್ದ
ಬೀಜವೇ ಎಣ್ಣೆಯಾಗಿ
ತನ್ನನ್ನೇ
ಸುಡುತ್ತಿದೆಯೆಂದು
( ವಿಯೋಗ)
( ಜವಾಬ್ದಾರಿ)
- ಎಲ್ಲೆಸ್ಸೆಸ್ (L S Shastri)