" ಚುಟುಕು"
- shreepadns
- Nov 26, 2022
- 1 min read
ಚುಟುಕು ಎಂದರೆ
ಕೇವಲ ನಾಲ್ಕು ಸಾಲು ಎಂದಲ್ಲ. ಚುಟುಕು ಶಬ್ದದ ಅರ್ಥ ಸಣ್ಣದು ಎಂದು. ಚುಟುಕಾಗಿ ಹೇಳುವದು ಎಂದರೆ ಸಂಕ್ಷಿಪ್ತವಾಗಿ ಹೇಳುವದು ಎಂದು. ಆದ್ದರಿಂದ ಚಿಕ್ಕದಾಗಿರುವ ಎಲ್ಲವನ್ನೂ ಚುಟುಕು ಸಾಹಿತ್ಯವೆಂದು ಒಟ್ಟಿನಲ್ಲಿ ಪರಿಗಣಿಸಬೇಕೇ ಹೊರತು ಕೇವಲ ನಾಲ್ಕು ಸಾಲಿನದಷ್ಟೇ ಚುಟುಕು ಎಂದು ಹೇಳುವದು ನನ್ನ ದೃಷ್ಟಿಯಿಂದ ಸರಿಯಲ್ಲ. ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತು ಸಹ ಇದನ್ನು ಗಮನಿಸಬೇಕು.
ನಾಲ್ಕು ಸಾಲಿನದಕ್ಕೆ " ಚೌಪದಿ" ಎಂಬ ಪ್ರತ್ಯೇಕ ಶಬ್ದವೇ ಇದೆ ಎನ್ನುವದನ್ನು ಗಮನಿಸಬೇಕು. ಮೂರು ಸಾಲಿನದು ತ್ರಿಪದಿ.
ಹೀಗೆ ದ್ವಿಪದಿ, ತ್ರಿಪದಿ, ಚೌಪದಿ , ಹನಿಗವನ, ವಚನ, ಸುಭಾಷಿತ, ಮುಕ್ತಕ, ಮಿನಿಗತೆ , ಹಾಸ್ಯ ಚಟಾಕಿ ಮೊದಲಾದವುಗಳೆಲ್ಲವೂ ಚುಟುಕು ಸಾಹಿತ್ಯದಲ್ಲಿ ಒಳಗೊಳ್ಳುತ್ತವೆ. ಚುಟುಕು ಎಂಬ ಶಬ್ದ ಮೊದಲು ಬಳಸಿದ್ದು ವಿ. ಜಿ. ಭಟ್ಟರು. ನಂತರ ದಿನಕರ ದೇಸಾಯಿಯವರು. ಗೋಕಾಕ, ಎಸ್. ವಿ. ಪಿ. , ರಾಜರತ್ನಂ ಮೊದಲಾದವರು ಸಹ ಇದೇ ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಚುಟುಕು ಸಾಹಿತ್ಯವನ್ನು ಚೌಪದಿಯೆಂಬ ಒಂದೇ ಪ್ರಕಾರಕ್ಕೆ ಕಟ್ಟಿಹಾಕದೆ ಚುಟುಕು ಸಾಹಿತ್ಯ ಪರಿಷತ್ತು ಚುಟುಕಿನ ವ್ಯಾಪ್ತಿಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಇದು ನನ್ನ ಸ್ಪಷ್ಟ ಅಭಿಪ್ರಾಯ. ಚೌಪದಿ ಚುಟುಕು ಸಾಹಿತ್ಯದ ಒಂದು ಪ್ರಕಾರ. ದಿನಕರರಿಂದ ಅದು ಹೆಚ್ಚು ಪ್ರಚಾರ ಪಡೆದುಕೊಂಡಿತು, ಅಷ್ಟೇ. ಹಾಗಲ್ಲದೇ ಇದ್ದರೆ ಜಿನದತ್ತರನ್ನೋ ಢುಂಡಿರಾಜರನ್ನೋ, ಜರಗನಹಳ್ಳಿಯವರನ್ನೋ ನಾವು ಚುಟುಕು ಕವಿಗಳೆಂದು ಕರೆಯಲು ಹೇಗೆ ಸಾಧ್ಯ? ಇದನ್ನು ನಾವು ಗಮನಿಸಬೇಕು.
ಇಂಗ್ಲಿಷ್, ಹಿಂದಿ, ಮರಾಠಿ, ಜಪಾನಿ ಮತ್ತಿತರ ಭಾಷೆಗಳಲ್ಲೂ ಚುಟುಕು ಸಾಹಿತ್ಯ ಬೇರೆ ಬೇರೆ ಹೆಸರುಗಳಲ್ಲಿ ಅಸ್ತಿತ್ವದಲ್ಲಿದೆ. ಹೈಕು, ಲಿಮರಿಕ್, ಚಾರೋಳಿ ಇತ್ಯಾದಿ. ಈಗಿತ್ತಲಾಗಿ ಇನ್ನೂ ಕೆಲವು ಸೇರಿಕೊಳ್ಳುತ್ತಿವೆ. ಅವೆಲ್ಲವನ್ನು ಒಳಗೊಂಡಂತೆಯೇ ಚುಟುಕು ಸಾಹಿತ್ಯ ಸಮೃದ್ಧಗೊಳ್ಳುತ್ತಿದೆ.
- ಎಲ್. ಎಸ್. ಶಾಸ್ತ್ರಿ
Comments