top of page

ಚತುರ ನಟ ಅನಂತನಾಗ್
ಇಂದು ಜನ್ಮದಿನ


೧೯೭೩

- ಅನಂತನಾಗ್ ಅವರ ಮೊದಲ ಕನ್ನಡ ಚಿತ್ರ " ಸಂಕಲ್ಪ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿತ್ತು. ಆ ಸಂದರ್ಭದಲ್ಲಿ ನಾನು ಬೇರೇನೋ ಕೆಲಸಕ್ಕಾಗಿ ಬೆಂಗಳೂರಲ್ಲಿದ್ದೆ. ಸಂಕಲ್ಪ ಸಿನೆಮಾದ ಮೊದಲ ಶೋ ನೋಡಿದ ನಾನು ಮೆಜೆಸ್ಟಿಕ್ ನಿಂದ ಜಯನಗರದಲ್ಲಿದ್ದ ನಟ ಶ್ರೀನಾಥ್ ಅವರ ಮನೆಗೆ ಹೋದೆ. ಅವರು ನನಗೆ ಮೊದಲೇ ಪರಿಚಯ. ಅಕಸ್ಮಾತ್ ಅಲ್ಲಿಗೆ ಅನಂತನಾಗ್ ಹಾಗೂ ಶ್ರೀನಾಥ್ ಅವರ ಹಿರಿಯ ಸಹೋದರ, ಖ್ಯಾತ ರಂಗನಟ ನಿರ್ದೇಶಕ ಸಿ. ಆರ್. ಸಿಂಹ ಸಹ ಆಗಮಿಸಿದರು. ನಮ್ಮೆಲ್ಲರ ನಡುವೆ ಸಂಕಲ್ಪ ಸಿನೆಮಾ ಕುರಿತು ಬಹಳ ಹೊತ್ತು ಚರ್ಚೆ ನಡೆಯಿತು. ಅನಂತನಾಗ ಅವರಿಗೆ ಜನಾಭಿಪ್ರಾಯ ತಿಳಿಯಬೇಕಿತ್ತು. ನಾನೂ ನನ್ನ ಅನಿಸಿಕೆ ಹೇಳಿದೆ.

ನಾಗ್ ಸಹೋದರರು ಆಗ ಮುಂಬಯಿಯಲ್ಲಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ನಾಗರ ಕಟ್ಟೆ ಸಾರಸ್ವತ ಕುಟುಂಬದವರಾದ ಅವರು ಶಿರಾಲಿಯಲ್ಲಿರುವ ಸಾರಸ್ವತ ಸಮಾಜದ ಮಠಕ್ಕೆ ನಡೆದುಕೊಳ್ಳುವವರಾಗಿದ್ದರು. ಅನಂತನಾಗ ಕೆಲ ಕಾಲ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿದ್ದವರು. ಅಜ್ಜರಕಾಡು ಉಡುಪಿ, ಹೊನ್ನಾವರಗಳಲ್ಲಿ ಅವರ ಪ್ರಾರಂಭಿಕ ಶಿಕ್ಷಣವಾದರೂ‌ ನಂತರ ಮುಂಬಯಿಗೆ ತೆರಳಿದರು. ಒಮ್ಮೆ ಏರ್ ಫೋರ್ಸ್ ಸೇರುವ ಪ್ರಯತ್ನವನ್ನೂ ಮಾಡಿದರು. ಹೊನ್ನಾವರದ ನನ್ನ ಆತ್ಮೀಯ ಗೆಳೆಯ ಕೃಷ್ಣ ಭಟ್ಟ ( ಶರ್ಮಾ) ಅವರಲ್ಲಿ ಅನಂತನಾಗ್ ಮಂತ್ರಗಳನ್ನು ಕಲಿತಿದ್ದರು. ( ವೀಕೆಂಡ್ ವಿತ್ ರಮೇಶ್ ದಲ್ಲಿ ಅನಂತನಾಗರ ಸಂದರ್ಶನ ನಡೆದಾಗ ಕೃಷ್ಣ ಶರ್ಮರನ್ನೂ ಆಮಂತ್ರಿಸಲಾಗಿತ್ತು. ) ಮುಂದೆ ಶಿರಾಲಿ ಸಾರಸ್ವತ ಮಠದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ನನ್ನ ಗೀತರಾಮಾಯಣ ಕಾರ್ಯಕ್ರಮ ನಡೆದಾಗ ಪತ್ರಕರ್ತ ಸಂತೋಷಕುಮಾರ ಗುಲ್ವಾಡಿಯವರೂ ಅನಂತ ನಾಗ್ ಅವರೂ ಅಲ್ಲಿಗೆ ಬಂದಿದ್ದರು.

ಅನಂತನಾಗರ ಅಭಿನಯ ಪ್ರತಿಭೆಯ ಬಗ್ಗೆ ಚಲನಚಿತ್ರಪ್ರಿಯರಿಗೆ ಹೇಳಬೇಕಾದ್ದೇನಿದೆ! ಅವರು ಎಲ್ಲರ ಮೆಚ್ಚಿನ ನಟ. ನಾಯಕ ಪಾತ್ರವಿರಲಿ, ಯಾವ ಪಾತ್ರವೇ ಇರಲಿ , ಅನಂತನಾಗ್ ಅವರು ಅದಕ್ಕೆ ಜೀವ ತುಂಬಬಲ್ಲವರು. ಕನ್ನಡ ಸಿನಿಮಾರಂಗದಲ್ಲಿ ಸುಮಾರು ೪೬ ವರ್ಷಗಳಿಂದಲೂ ಅವರು ತಮ್ಮ ಅಸ್ತಿತ್ವ ಮತ್ತು ಜನಪ್ರಿಯತೆ ಉಳಿಸಿಕೊಂಡು ಬಂದಿದ್ದಾರೆ. ೨೨ ನೇ ವರ್ಷದ ತನಕ ಮುಂಬಯಿಯಲ್ಲಿ ಮರಾಠಿ, ಹಿಂದಿ ಮತ್ತು ಕನ್ನಡ ರಂಗಭೂಮಿಯಲ್ಲಿ ಮಿಂಚಿದ ಅವರು ಹಿಂದಿಯ ಖ್ಯಾತ ನಿರ್ದೇಶಕ ಶ್ಯಾಮ ಬೆನೆಗಲ್ಲರ ಅಂಕುರ, ನಿಶಾಂತ, ಮಂಥನ, ಭೂಮಿಕಾ, ಕೊಂಡುರಾ, ಮತ್ತು ಕಲಿಯುಗ್ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ‌ ಉತ್ತರಭಾರತದಲ್ಲೂ ಹೆಸರು ಗಳಿಸಿಕೊಂಡವರಾಗಿದ್ದಾರೆ.

ಕನ್ನಡದಲ್ಲಿ ಮಿಂಚಿನ ಓಟ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, , ಬೆಂಕಿಯ ಬಲೆ, ಗಣೇಶನ ಮದುವೆ, ಹೆಂಡ್ತಿಗೆ ಹೇಳಬೇಡಿ , ಗೋದಿಬಣ್ಣ ಇತ್ಯಾದಿ ೨೦೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅವರು ವಿವಿಧ ಭಾಷೆಗಳು ಸೇರಿದಂತೆ ೩೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸಿದ್ದಾರಲ್ಲದೆ ಆರು ಸಲ ಫಿಲ್ಮಫೇರ್ ಅವಾರ್ಡ್, ಐದು ಸಲ ರಾಜ್ಯ ಚಿತ್ರ ಪ್ರಶಸ್ತಿ ಶ್ರೇಷ್ಠ ನಟರಾಗಿ‌ ಪಡೆದಿದ್ದಾರೆ. ಜಿ. ವಿ. ಅಯ್ಯರ್ ನಿರ್ದೇಶನದ ತರಾಸು ಅವರ ಕಾದಂಬರಿ ಆಧಾರಿತ ಹಂಸಗೀತೆಗೆ ರಾಷ್ಟ್ರೀಯ ಪ್ರಶಸ್ತಿಯೂ ಬಂದಿದೆ.

ಸ್ವಲ್ಪ ಕಾಲ ರಾಜಕೀಯದಲ್ಲೂ ಕಾಣಿಸಿಕೊಂಡ ಅನಂತ ನಾಗ್ ಪಟೇಲ್ ಸಂಪುಟದಲ್ಲಿ ಮಂತ್ರಿಯೂ ಆಗಿದ್ದರು. ಆದರೆ ರಾಜಕೀಯದೊಡನೆ ಅವರಿಗೆ ಹೊಂದಾಣಿಕೆ ಆಗಲಿಲ್ಲ.

ಅನಂತ ನಾಗ್ ಜನಿಸಿದ್ದು ೧೯೪೮ ರ ಸೆ. ೪ ರಂದು. ೭೫ ವರ್ಷವಾದರೂ ಅವರು ಪ್ರೇಕ್ಷಕರ ಪ್ರೀತಿ ಉಳಿಸಿಕೊಂಡಿದ್ದಾರೆ. ನಾಗ್ - ಲಕ್ಷ್ಮಿ ಕನ್ನಡ ತೆರೆಯ ಜನಪ್ರಿಯ ಜೋಡಿಯಾಗಿತ್ತು. ಕೆಲವು ಚಿತ್ರಗಳಲ್ಲಿ ನಟಿಸಿದ್ದ ಗಾಯತ್ರಿಯವರನ್ನೇ ಮದುವೆಯಾದರು. ಕಿರಿಯ ಸಹೋದರ ಶಂಕರನಾಗ ಪ್ರಚಂಡ ಪ್ರತಿಭೆಯವನಾಗಿದ್ದರೂ ಅವನ ಅಕಾಲಿಕ ಮರಣ ಅನಂತ್ ಅವರಿಗೆ ತೀವ್ರ ಆಘಾತಕಾರಿ ಸಂಗತಿಯಾಯಿತು. ಸಹಜಾಭಿನಯ ಚತುರ ಅನಂತ ನಾಗ್ ಅವರನ್ನು ಇನ್ನಷ್ಟು ಕಾಲ ತೆರೆಯ ಮೇಲೆ ನೋಡುವಂತಾಗಲಿ.

‌‌‌‌‌‌ - ಎಲ್‌ ಎಸ್. ಶಾಸ್ತ್ರಿ

ಸಹಜಾಭಿನಯದ ಚತುರ ನಟ ಅನಂತ ನಾಗರಕಟ್ಟೆ ( ನಾಗ್) ಅವರ ಬಗ್ಗೆ ಬಹುಮುಖ ಪ್ರತಿಭಾವಂತ ಎಲ್.ಎಸ್. ಶಾಸ್ತ್ರಿಯವರು ಬರೆದ ಲೇಖನ ನಿಮ್ಮ ಓದಿಗಾಗಿ.

ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ32 views0 comments

コメント


bottom of page