top of page

ಚತುರ್ಥ ಆಯಾಮ!


ಅಂವ ಹಿಂದೆ ಇದ್ದದ್ದೂ ಹಾಗೇಯ, ಈಗ ಇರೂದು ಹಾಗೇಯ, ಬಹುಶಃ ಮುಂದೆ ಇರಬಹುದಾದ್ದೂ ಹಾಗೇಯ! ಹುಟ್ಟುಗುಣ ಸುಟ್ರೂ ಹೋಗೋದಿಲ್ಲ ನೋಡಿ! ಏನಪಾ ಅಂಥಾ ವಿಶೇಷತೆ ಅವನಲ್ಲಿ ಕೇಳ್ತೀರೊ? ಒಂದೆರಡಲ್ರೀ, ಅವನಲ್ಲಿ ಇರೊದೆಲ್ಲಾನೂ ವಿಶೇಷತೇನೆ! ಒಂದೇ ಮಾತ್ನಲ್ಲಿ ಹೇಳ್ತೇನೆ ಕೇಳಿ, ನಾವೆಲ್ಲ ಸಾಮಾನ್ಯ ನರಮನುಷ್ಯರು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿದ್ರೆ ಈ ಮಾನವಾತೀತ ಮನುಷ್ಯ ಉತ್ತರಗಳಿಗೆ ಪ್ರಶ್ನೆ ಹುಡಕ್ತಾನೆ! ತನ್ನ ಮಾನವಾತೀತ ಗುಣದಿಂದಾಗಿಯೇ ನೂರೇಕೆ, ಸಾವಿರ ಜನರಲ್ಲಿಯೂ ಪ್ರತ್ಯೇಕವಾಗಿ ನಿಲ್ಲುವ ಸಾಮರ್ಥ್ಯವನ್ನವನು ಹುಟ್ಟಿನಿಂದಲೇ ಸ್ವಯಂ ಗಳಿಸಿಕೊಂಡಿದ್ದಾನೆ.


ಕನ್ನಡ ಶಾಲೆಗೆ ಹೋಗುವಾಗಲೇ ಭಟ್ ಮಾಸ್ತರು ಅವನ ಈ ಗುಣವನ್ನು ಓಂಪ್ರಥಮವಾಗಿ ಪತ್ತೆಹಚ್ಚಿದ್ದರು. ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೊಟ್ಟರೆ ಪರೀಕ್ಷೆ ಮುಗಿದ ಮೇಲೆ ‘ನಾನು ಎಲ್ಲ ಪ್ರಶ್ನೇನೂ ಬರೆದಿದ್ದೇನೆ’ ಎನ್ನುವವ. ಮಾಸ್ತರು ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿ ವಾಪಸ್ ಕೊಟ್ಟಾಗ ಮಾತ್ರ ಅವನನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಅಚ್ಚರಿ ಕಾದಿರುತ್ತಿತ್ತು. ಎಲ್ಲ ಪ್ರಶ್ನೆಗಳನ್ನೂ ಬರೆದಿದ್ದೇನೆನ್ನುವ ಅವನಿಗೆ ಅಷ್ಟಕ್ಕೆ ಅಷ್ಟೂ ಮಾರ್ಕ್ಸ್ ಬರಬೇಕೆಂದು ಅವರೆಲ್ಲ ಯೋಚಿಸುತ್ತಿದ್ದರೆ ಭಟ್ ಮಾಸ್ತರು, ‘ಇಲ್ಬಾರ ವಾಸು... ತಗ ನಿಂಗೆ ಸೊನ್ನೆ...’ ಎನ್ನುತ್ತ ಪೇಪರು ಕೊಡುತ್ತಿದ್ದರು! ಇಷ್ಟೇ ಆಗಿದ್ದರೆ ಅವರು ಇವನನ್ನು ‘ಮಾನವಾತೀತ...’ ಎಂದು ಪರಿಗಣಿಸುತ್ತಿರಲಿಲ್ಲವೇನೋ? ಮಾಸ್ತರು ಕೊಟ್ಟ ಎಲ್ಲ ಪ್ರಶ್ನೆಗಳನ್ನೂ (ಉತ್ತರವನ್ನಲ್ಲ!) ಬರೆಯುವ ಅವನು ಅವೆಲ್ಲ ಮುಗಿದ ಮೇಲೆ ಮನುಷ್ಯ ಮಾತ್ರದವರು ಊಹಿಸಲಾರದ ವಿಚಾರಗಳ ಬಗ್ಗೆ ತನಗೆ ಉತ್ತರ ತಿಳಿದಿದ್ದೂ ಬಹುಶಃ ಮಾಸ್ತರು ಏನು ಹೇಳುತ್ತಾರೆ? ಎಂದು ನೋಡುವ ಬಯಕೆಯಿಂದ ಪ್ರಶ್ನೆಗಳನ್ನು ಬರೆದಿಡುತ್ತಿದ್ದ! ಆ ನಂತರ ಅವುಗಳಿಗೆ ಉತ್ತರವನ್ನೂ ತಾನೇ ಹೇಳಿ ಮಾಸ್ತರನ್ನು ದಂಗುಬಡಿಸುತ್ತಿದ್ದ. ಮೇಲ್ನೋಟಕ್ಕೆ ಅವನ ಪ್ರಶ್ನೆಗಳು ತಲೆಹರಟೆ ಎನಿಸಿದರೂ ಅವುಗಳ ಗಮ್ಯವು ಸಾಮಾನ್ಯರ ಗ್ರಹೀತಕ್ಕೆ ಸಿಗದ ಯಾವುದೋ ಹೊಕ್ಕುಳಲ್ಲಿ ಅಡಗಿರುತ್ತಿತ್ತು! ಆ ಹೊಕ್ಕುಳ ಬಳ್ಳಿಯ ಮೂಲವನ್ನರಿಯಲು ಅಸಮರ್ಥರಾದ ಸಾಮಾನ್ಯ ನರಮನುಷ್ಯ ಭಟ್ ಮಾಸ್ತರು ಒಮ್ಮೆ ಹೇಳಿದ್ದ ಮಾತು, ‘ಈ ವಾಸು ಮಾನವಾತೀತ ಮನುಷ್ಯ, ನಾವೆಲ್ಲ ಪ್ರಶ್ನೆಗೆ ಉತ್ತರವನ್ನು ಹುಡುಕಿದರೆ ಈ ಬೃಹಸ್ಪತಿ ಉತ್ತರಕ್ಕೆ ಪ್ರಶ್ನೆಯನ್ನು ಹುಡುಕುತ್ತಾನೆ!’


ಉತ್ತರಗಳಿಗೆ ಪ್ರಶ್ನೆಗಳನ್ನು ಹುಡುಕುವವನೆಂದು ಮಾಸ್ತರು ಹೇಳಿದ್ದನ್ನೇ ಕೇಳಿಕೊಂಡು ಇತರೆ ಹುಡುಗರೂ ಅವನನ್ನು ಹಾಗೆಯೇ ಚಾಳಿಸತೊಡಗಿದ್ದರು. ಯಾವಾಗಲೂ ಯೋಚನಾಮಗ್ನನಾಗಿಯೇ ಇರುವಂತೆ ತೋರುತ್ತಿದ್ದ ಅವನಿಗೆ ‘ಮೌನಮುನಿ’ ಎಂಬ ಅಭಿದಾನವೂ ಪ್ರಾಪ್ತವಾಗಿದ್ದು ಆಗಲೇ! ಯಾರು ಎಷ್ಟೇ ಚಾಳಿಸಲಿ, ಚಾರ್ಯ ಮಾಡಲಿ ಈ ಮೌನಮುನಿ ಮಾತ್ರ ತುಟಿ ಪಿಟಕ್ಕೆಂದಿದ್ದರೆ ಹೇಳಿ! ಮನೆಯಲ್ಲಿಯೂ ಈ ಬ್ರಹ್ಮರ್ಷಿಯದು ಇದೇ ಕಥೆ. ಅಪ್ಪ-ಅಮ್ಮನಿಗೆ ತಲೆ ಚಿಟ್ಟು ಹಿಡಿಸುವಷ್ಟು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದ. ಉತ್ತರಗಳಿಗಾಗಿ ಅವರು ತಿಣುಕಾಡುತ್ತಿದ್ದರೆ ಈ ಚೋಟುದ್ದ ಪೋರ ನಗುತ್ತಲೇ ಉತ್ತರ ಹೇಳಿ ಅವರ ಸಹನೆಯನ್ನು ಹಾಸ್ಯ ಮಾಡುತ್ತಿದ್ದ!


ಒಮ್ಮೆ ಅಜ್ಜನ ಮನೆಗೆ ಹೋದಾಗ ಅಲ್ಲಿ ಗಂಧಮಾಲಾಧರನಾಗಿ ಗೋಡೆಯ ಮೇಲೆ ವಿರಾಜಿಸುತ್ತಿದ್ದ ಅಜ್ಜನ ಫೋಟೊ

ತೋರಿಸಿ, ‘ಇವನು ಯಾರು?’ ಎಂಬ ಪ್ರಶ್ನೆ ಈ ಜಾಬಾಲಿಯದು!

‘ಇವನು ನಮ್ಮನೆ ಅಜ್ಜ’

‘ಈಗ ಅವನೆಲ್ಲಿ?’

‘ಸತ್ತು ಸ್ವರ್ಗದಲ್ಲಿದ್ದಾನೆ?’

‘ಹೇಗೆ ಸತ್ತ...?’

‘.......’

‘ಅಜ್ಜ ಸ್ವರ್ಗದಲ್ಲಿದ್ದಾನೆ ಎಂದು ನೀವು ನಂಬಿಕೊಂಡಿರುವುದು. ಅದು ಬದ್ದೋ ಸುಳ್ಳೋ? ಯಾರಿಗೂ ಗೊತ್ತಿಲ್ಲ. ಸದ್ಯ ಅವನು ನಮ್ಮೊಂದಿಗಿಲ್ಲ ಎಂಬುದಷ್ಟೇ ನಿಜ. ನಮ್ಮ ದೇಹದಲ್ಲಿರುವ ಜೀವಕೋಶಗಳಿಗೂ ಇಂತಿಷ್ಟು ಆಯಸ್ಸು ಎಂಬುದಿರುತ್ತದೆ. ಒಳ್ಳೆಯ ಆಹಾರ ಸೇವನೆ, ಸದ್ವಿಚಾರಗಳ ಪಾಲನೆ, ಸತ್ಸಂಗ ಪರಿಪಾಲನೆಯಂತಹ ಆರೋಗ್ಯಕರ ಅಭ್ಯಾಸಗಳಿಂದ ಈ ಜೀವಕೋಶಗಳನ್ನು ಸದೃಢವಾಗಿಟ್ಟಷ್ಟೂ ನಮ್ಮ ಆಯಸ್ಸು ಹೆಚ್ಚಾಗುತ್ತದೆ. ಯಾವಾಗ ಜೀವಕಣಗಳು ನಿರ್ಜೀವವಾಗುತ್ತ ಹೋಗಿ, ಸಂಪೂರ್ಣವಾಗಿ ಚೈತನ್ಯವನ್ನು ಕಳೆದುಕೊಳ್ಳುತ್ತವೆಯೋ ಆಗ ಜೀವಿಗಳು ಸಾವನ್ನಪ್ಪುತ್ತವೆ!’


ಓ ದೇವ್ರೇ, ಇಷ್ಟು ಸಣ್ಣ ಬಾಯಲ್ಲಿ ಅಷ್ಟು ದೊಡ್ಡ ಮಾತು ಎನ್ನುವಿರೊ?! ಹೌದು ವಾಸು ಚಿಕ್ಕವನಿರುವಾಗಿನಿಂದಲೇ ನಾವೆಲ್ಲ ಅತೀಂದ್ರಿಯ ಎನ್ನಬಹುದಾದ ಶಕ್ತಿಯನ್ನು ಹೊತ್ತು ಬಂದಿದ್ದ. ಭಗತ್ ಸಿಂಗ್ ಚಿಕ್ಕವಯಸ್ಸಿನಲ್ಲಿಯೇ ಹೇಗೆ ಸತ್ತರು? ಚಂದ್ರಶೇಖರ ಆಜಾದರಿಗೆ ಅಷ್ಟು ಬೇಗ ಸಾಯುವಂಥದ್ದೇನಾಗಿತ್ತು? ಆರೇಳು ವರ್ಷದ ಬಾಲಕನಿಂದ ಅಮ್ಮನಿಗೆ ಪ್ರಶ್ನೆ! ಅಮ್ಮ ಪೆಕರು ಪೆಕರಾಗಿ ನಕ್ಕಾಗ ‘ಅಮ್ಮಾ, ಅದು ಹಾಗಲ್ಲ... ಹೀಗೆ....’ ಎಂದು ಮಗನ ವಿವರಣೆ!


ಇಂತಪ್ಪ ಜಾಬಾಲಿಯನ್ನು ಸತ್ಯಕಾಮನನ್ನಾಗಿ ಮಾಡುವ ಗೌತಮರೊಬ್ಬರು ಅವನಿಗೆ ಸಿಕ್ಕೇಬಿಟ್ಟರು. ಹೊಸತಾಗಿ ಆ ಶಾಲೆಗೆ ವರ್ಗವಾಗಿ ಬಂದಿದ್ದ ಪಾರ್ವತಿ ಅಕ್ಕೋರು, ‘ನಿನ್ನಲ್ಲಿ ಮೂಡುವ ಪ್ರಶ್ನೆಗಳನ್ನು ಹಿರಿಯವರಲ್ಲಿ ಕೇಳುವುದರಲ್ಲಿ ತಪ್ಪೇನಿಲ್ಲ ವಾಸು. ಆದರೆ ಪರೀಕ್ಷೆಗಳಲ್ಲಿ ಶಿಕ್ಷಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರೆ ತಾನೇ ಅಂಕ ನೀಡಲು ಸಾಧ್ಯವಾಗುವುದು? ನೀನು ಮುಂದಿನ ತರಗತಿಗಳಿಗೆ ತೇರ್ಗಡೆಯಾಗುವುದು? ಹಾಗಾಗಿ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಬರೆಯದೇ ಉತ್ತರಗಳನ್ನು ಬರೆ. ನಿನಗೆಲ್ಲ ಉತ್ತರಗಳೂ ಬರುತ್ತವೆಂಬುದು ನನಗೆ ಗೊತ್ತಿದೆ. ನಿನ್ನವೇನಾದರೂ ಪ್ರಶ್ನೆಗಳಿದ್ದರೆ ನನಗೆ ಬಾಯಿಂದಲೇ ಕೇಳು. ನನ್ನಿಂದ ಸಾಧ್ಯವಾದರೆ ಉತ್ತರಿಸುತ್ತೇನೆ.’


ಕನ್ನಡ ಶಾಲೆಯಲ್ಲಿ ಓದುತ್ತಿದ್ದಾಗಲೆ ಪಾರ್ವತಿ ಅಕ್ಕೋರು ತೋರಿದ ದಾರಿ ವಾಸುವಿಗೆ ಬಹಳವೆಂದರೆ ಬಹಳ ಇಷ್ಟವಾಯಿತು. ಅವರು ತೋರಿದ ದಾರಿಯಲ್ಲಿಯೇ ಮುನ್ನಡೆದ ವಾಸು ಎಲ್ಲ ಪರೀಕ್ಷೆಗಳಲ್ಲಿಯೂ ಪ್ರಥಮ ಸ್ಥಾನದೊಂದಿಗೇ ತೇರ್ಗಡೆಯಾಗಿ ಮುಂದೆ ಬಾಹ್ಯಾಕಾಶ ವಿಜ್ಞಾನದಲ್ಲಿ ಸ್ನಾತಕೋತ್ತರನೂ ಆದ. ಆ ಯಶಸ್ಸಿನಲ್ಲಿ ಅವನ ಸತ್ಯವನ್ನು ಹುಡುಕುವ ಸ್ವಭಾವದ ಪಾಲೇ ಅಧಿಕವಾಗಿದ್ದುದರಿಂದ ಅವನು ಸತ್ಯಕಾಮನೇ ಆದುದರಲ್ಲಿ ಅಚ್ಚರಿಯೇನಿರಲಿಲ್ಲ.


ವಾಸು ಓದಿದ ವಿಷಯವು ಬಾಲ್ಯದಿಂದಲೂ ಅವನಲ್ಲಿ ಮೊಳೆತು ಚಿಗುರುತ್ತಿದ್ದ ಜಿಜ್ಞಾಸೆಯ ಪ್ರವೃತ್ತಿಗೆ ನೀರೆರೆದು ಪೋಷಿಸಿತು. ಅವನ ವಿಷಯವೇ ಬಾಹ್ಯಾಕಾಶ. ಅಂತರಿಕ್ಷವೆಂಬ ಹೆಸರೂ ಇದಕ್ಕಿದೆ. ವಿಜ್ಞಾನಿಗಳು ಇದರಲ್ಲಿ ಮೂರು ಮುಖ್ಯ ಆಯಾಮಗಳು ಮತ್ತು ಸಮಯವನ್ನು ನಾಲ್ಕನೇ ಆಯಾಮವಾಗಿ ಪರಿಗಣಿಸುತ್ತಾರೆ. ವಾಸು ಈ ನಾಲ್ಕನೇ ಆಯಾಮದಲ್ಲಿ ಐನ್‍ಸ್ಟೀನ್ ಅವರ ಸಿದ್ಧಾಂತವನ್ನು ಒಪ್ಪುತ್ತಲೇ ಅದಕ್ಕೆ ಕೆಲವು ತಾತ್ವಿಕ ವಿಚಾರಗಳನ್ನೂ ಅಳವಡಿಸುತ್ತಾನೆ. ಅವನ ಪ್ರಕಾರ ನಾಲ್ಕನೇ ಆಯಾಮದಲ್ಲಿ ನಾವು ಏನನ್ನು ಸಂಕಲ್ಪ ಮಾಡಿಕೊಳ್ಳುತ್ತೇವೆಯೋ ಅದರ ಇಮ್ಮಡಿಯಷ್ಟು ನಮಗೆ ಸಿಗುತ್ತದೆ. ಹಾಗಾಗಿ ಅಲ್ಲಿ ‘ಬಯಸುವುದು...., ಇಚ್ಛಿಸುವುದು..., ಅಂದುಕೊಳ್ಳುವುದು...’ ಇವುಗಳಿಗೆಲ್ಲ ಜಾಗವಿಲ್ಲ. ಚತುರ್ಥ ಆಯಾಮದಲ್ಲಿ ಏನಿದ್ದರೂ ಸಂಕಲ್ಪಕ್ಕೇ ಮಹತ್ವ. ಅಲ್ಲಿ, ‘ನಾನು ಮಾಡಿದ್ದೇನೆ... (ಮಾಡುತ್ತೇನೆ ಅಲ್ಲ!), ಪಡೆದಿದ್ದೇನೆ... (ಪಡೆಯುತ್ತೇನೆ ಅಲ್ಲ!) ನೋಡಿದ್ದೇನೆ... ಸೇರಿದ್ದೇನೆ...’ ಎಂಬ ಸಂಕಲ್ಪ ಮಾತ್ರದಿಂದಲೇ ಎಲ್ಲವನ್ನೂ ಇಮ್ಮಡಿ ಮುಮ್ಮಡಿಯಾಗಿ ಪಡೆಯಲು ಸಾಧ್ಯ ಎನ್ನುತ್ತಾನೆ! ಅವನ ತತ್ವಜ್ಞಾನವನ್ನು ಒರೆಹಚ್ಚಿ, ಪರೀಕ್ಷಿಸಿ ಆ ಚತುರ್ಥ ಆಯಾಮದ ಬಗ್ಗೆಯೇ ಚಿಂತಿಸುವ ವರ್ಗವೇ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಅವರೆಲ್ಲರೂ ಈ ಸತ್ಯಕಾಮ-ವಾಸುವಿನಂತೆಯೇ ಉತ್ತರಕ್ಕೆ ಪ್ರಶ್ನೆಯನ್ನು ಹುಡುಕುವ ಜಾಯಮಾನದವರೇ ಆಗಿದ್ದರೆಂಬುದು ಇಲ್ಲಿ ಮನನೀಯವಾಗಿದೆ!
ಹುಳಗೋಳ ನಾಗಪತಿ ಹೆಗಡೆ

11 views0 comments

Comentários


bottom of page