ನಾವು ತಿಳಿದಷ್ಟು ಹಗುರವಲ್ಲ ಯಾವುದು
ಬರುವುದು ಬರುವ ಕಾಲಕೆ ಬಹುದು
ಅರ್ಥಕ್ಕೆ ದಕ್ಕದ ಸಂಗತಿಗಳು ಸಂಗಾತಿಗಳು
ಉರಿವ ಕೆಂಡದ ಮೇಲಿನ ಹುಲ್ಲು ಕಡ್ಡಿ
ಲೆಕ್ಕಕ್ಕೆ ಸಿಗದ ಗುಣಾಕಾರ ಅಸಲು ಬಡ್ಡಿ
ತೆರೆ ಬಂದು ಅಪ್ಪಳಿಸಿ ಗುರುತುಗಳ ಅಳಿಸಿ
ಸಪಾಟದ ದಡದ ಮುಂದೆ ಸೊಕ್ಕಿ ಉಕ್ಕುವ
ಆಳೆತ್ತರದ ತೆರೆಗಳ ರುದ್ರ ನರ್ತನ
ವೀಡಿಯೋದಲ್ಲಿ ನೋಡಲು ಚೆಂದ
ಬಳಿ ಸಾರಿದರೆ ಕಾಲು ತಪ್ಪಿಸುವ ಅಲೆಗಳು
ಸೃಷ್ಟಿಸುವ ಭಯ ಆತಂಕಗಳು
ದೂರದಲ್ಲಿ ಚಿಕ್ಕೆಯಂತೆ ಕಾಣುವ ಹಡಗು
ಲಂಗರು ಹಾಕಿರುವರೊ ಚಲಿಸುತಿಹುದೊ
ತೆರೆಗಳ ಹೊಡೆತಕ್ಕೆ ಹೊಯ್ದಾಡುವ ಮನಸು
ಪುಟ್ಟ ಗುಡಿಸಲಿನಲ್ಲಿ ಹಚ್ಚಿಟ್ಟ ಬುರುಡೆ ದೀಪ
ಬಿರುಗಾಳಿಯ ಅಬ್ಬರ ಸುಯ್ಯೆಂಬ ಕೂಗು
ಗಾಳಿಯ ಹೊಯ್ಲಿಗೆ ಕಿರಿದಾಗಿ ನಂದಿ
ಹೋದಿತೆಂಬ ಭಯ ಬೆಂಕಿ ಪೊಟ್ಟಣ ಖಾಲಿ
ಗಾಳಿ ಬಿಡದೆ ಬೀಸುತ್ತಲೇ ಇದೆ ಅದಕೇನು ಗೊತ್ತು
ದೀಪ ನಂದಿ ಮನೆ ಕತ್ತಲಾಗುವುದೆಂದು
ನಂದಿ ಹೋಗುವುದು ಖಾತ್ರಿ ಒಂದಲ್ಲ ಒಂದು ದಿನ
ಮನೆಯಲ್ಲಿ ಇಲ್ಲ ಮತ್ತೆ ಹಿರಿಯರು
ಮನೆಮಂದಿ ಕಂಗಾಲಾಗಿ ಕುಳಿತಿದ್ದಾರೆ
ದೀಪ ಆರದಿರಲಿ ಎಂದು ಬೇಡುತ್ತಾ
ಮುಂದೇನು ಎಂದು ಅರಿತವರು ಯಾರು
ಅದು ಗಾಳಿಗೊಡ್ಡಿದ ಸೊಡರು!
==00==
Comments