ಮಳೆಯೊಡನೆ ಒಂದು ಸ್ಮರಣೆ
ಸುರಿವ ಬಿರುಮಳೆಯ
ಹನಿಯ ಅಡಿಯಲ್ಲಿ,
ಚಿಕ್ಕ ಮಗುವಂತೆ ಹೋಗಿ ನಿಲ್ಲುವಾಸೆ.
ಒಳಗೆ ಹೆದರಿದ ಅಮ್ಮ,
ಬಂದು ಕರೆಯುವ ಮುನ್ನ,
ಮರದ ಅಡಿಯಲಿ ನಿಂತು ನೆನೆಯುವಾಸೆ.
ಕೆಸರು ಕಾಲಲಿ ಬಂದು,
ಒದ್ದೆ ಮೈಯಯಲಿ ನಿಂದು,
ಅಪ್ಪನೆದುರಲಿ ಅಡಗಿ ನಲುಗುವಾಸೆ.
ಓ ಸುರಿವ ಬಿರುಮಳೆಯೆ,
ಮತ್ತೆ ಬಾಲ್ಯವ ಬಾಳಲ್ಲಿ ಸ್ಪುರಿಸು,
ಹಳೆಯ ಅನುಭವ ಮತ್ತೆ ಪಡೆಯುವಾಸೆ!
ನಾನೂ ಹೆಣ್ಣಲ್ಲವೇ..
ಹಿಂದೆಲ್ಲ ನಾನೂ ಹೇಳುತ್ತಿದ್ದೆ ಎಲ್ಲ ಕವಿಗಳ ಹಾಗೆ,
‘ಈ ಹುಡುಗಿಯರೇ ಹೀಗೆ,
ಹೇಳುವುದಿಲ್ಲ ಯಾರಿಗೂ ತಮ್ಮೆದೆಯ ಬೇಗೆ’.
ಮನವ ನೀಡುತ್ತಾರೆ ಯಾರದೋ ಪ್ರೀತಿಗೆ,
ಮದುವೆಯಾಗುತ್ತಾರೆ ಇನ್ನಾರದೋ ಜೊತೆಗೆ.
ಸೇರಿಹೋಗುತ್ತಾರೆ ಕಪ್ಪಿಡಿದ ಒಲೆಯ ಒಳಗೆ,
ಹೋಲಿಸಿಕೊಳ್ಳುತ್ತಾರೆ ಮನದ ಗಾಯವ ಒಲೆಯ ಮೇಲಿನ ಕಲೆಗೆ.
ಕಟ್ಟು ಹಾಕುವುದಿಲ್ಲ ಹರಿವ ಕಣ್ಣೀರ ಧಾರೆಗೆ,
ನಲ್ಲನಲ್ಲದ ಪತಿ ಬಂದು “ಏನಾಯ್ತೇ” ಎಂದು ಕೇಳುತ್ತಿದ್ದ ಹಾಗೆ,
ಉತ್ತರಿಸುತ್ತಾರೆ, “ಏನಿಲ್ಲ! ಹೆಚ್ಚುತ್ತಿದ್ದೇನೆ ನೀರುಳ್ಳಿಯನ್ನು ಸಾರಿಗೆ”
ಇದು ನೆಡೆಯುತ್ತಲೇ ಇರುತ್ತದೆ ಅವರ ಕೊನೆಯುಸಿರಿರುವವರೆಗೆ,
ಮಾಸಿಹೋಗುತ್ತದೆ ‘ಬರೆಯದ ಕತೆ’ ಅವರ ಬದುಕಿನೊಂದಿಗೆ.
ಕಾರಣ ಅದಲ್ಲ ನನ್ನ ಚಿಂತೆಗೆ,
ಭಯಪಡುತ್ತಿದ್ದೇನೆ ನನ್ನಷ್ಟಕ್ಕೆ ನನ್ನೆದೆಯ ಒಳಗೆ
ನಾನೂ ಸೇರುತ್ತಿದ್ದೇನೆಯೇ ‘ಇವರು’ಗಳ ಸಾಲಿಗೆ?!
ಗ್ರೀಷ್ಮಾ ಬಿ.ಏ.
ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜನಿಯರಾಗಿರುವ ಗ್ರೀಷ್ಮಾ, ಬಿ.ಏ ಇವರು ಬಾಲ್ಯದಿಂದಲೂ ಓದು, ಬರೆಹಗಳಲ್ಲಿ ಅಪಾರ ಆಸಕ್ತಿ ಹೊಂದಿರುವವರು. ಇವರ ಹಲವು ಕವನಗಳು ಕನ್ನಡ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಣೆಗೊಂಡಿವೆ. ಪ್ರಸ್ತುತದಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ಇವರು ತಮ್ಮ ವೃತ್ತಿ ಜೀವನದ ಒತ್ತಡಗಳ ಮಧ್ಯೆಯೂ ಸಾಹಿತಿಕ ಓದು ಮತ್ತು ಬರೆಹಗಳಲ್ಲಿ ತೊಡಗಿಕೊಂಡಿದ್ದಾರೆ. ಬದುಕಿನ ಸರಳ ವಾಸ್ತವಿಕತೆಯನ್ನು ಅತ್ಯಂತ ನವೀರಾದ ಭಾಷೆಯಲ್ಲಿ ಮೂಡಿಸುವ ಗ್ರೀಷ್ಮಾರವರ ಕಾವ್ಯ ಶೈಲಿ ಓದುಗನಿಗೆ ಸಹಜವಾಗಿಯೇ ಆಪ್ತವಾಗುತ್ತದೆ. ಜೊತೆಗೆ ಭರವಸೆಯನ್ನು ಮೂಡಿಸುತ್ತದೆ.
'ನಾನೂ ಹೆಣ್ಣಲ್ಲವೇ' ನ ಕಡೆಯಲ್ಲಿ ಕವಿಯ ಮೊದಲ ಹೆಜ್ಜೆಯಂತೆ ಒಂದು ಜಾಗ್ರತ ಅರಿವು ಪಡಿ ಮೂಡಿದೆ. ಮದುವೆ ಎಂಬ ಸಂಸ್ಥೆಯು ಒಂದು ಹೆಣ್ಣಿಗೆ ಅದಕ್ಕರಿವಿದ್ದೋ ಇಲ್ಲದೆಯೋ ಎಷ್ಟೆಲ್ಲ ಅಂತಿಮ ರೇಖೆಗಳನ್ನು ಎಳೆದು, ಅವಳ ಸ್ವಂತ ಬದುಕಿನ ಕೇಂದ್ರವನ್ನು ಹೇಗೆ ಇಡಿಯಾದ ಕುಟುಂಬಕ್ಕೆ ಕಟ್ಟಿಹಾಕಿದೆ ಎಂಬುದನ್ನು ಕವಿತೆ ಚಿತ್ರಗಳಲ್ಲೇ ಧ್ವನಿಸುವುದು ನಿಜಕ್ಕೂ ಭರವಸೆದಯಕವಾದದ್ದು..
'ಮಳೆಯೊಡನೆ ಒಂದು ಸ್ಮರಣೆ'ಗೆ ಒದಗಿದ ಆಪ್ತವಾದ ಲಯ ಇಷ್ಟವಾಗುವಂತಿದೆ,
ಚೆನ್ನಾಗಿದೆ