ನಮ್ಮ ಭಾರತೀಯ ಸಂದರ್ಭದಲ್ಲಿ ಉತ್ಸವಗಳಿಗೆ ವಿಶೇಷವಾದ ಸ್ಥಾನವಿದೆ. ದೇಶದ ಉದ್ದಗಲದಲ್ಲಿ ಇರುವ ಧಾರ್ಮಿಕ ಕೇಂದ್ರಗಳಲ್ಲಿ ವರ್ಷಕ್ಕೊಮ್ಮೆ ಅಥವಾ ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷ ಉತ್ಸವಾದಿಗಳು ಏರ್ಪಡುತ್ತವೆ.
ಉತ್ಸವ ಎಂದರೆ ವೈಭವ, ಅದ್ದೂರಿತನ. ಎಲ್ಲ ವಯೋಮಾನದವರು ಸಂಭ್ರಮದಿಂದ ಒಂದು ನಿರ್ದೀಷ್ಟ ಸ್ಥಳದಲ್ಲಿ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಕಲೆಯುವ ಉತ್ಸವಗಳು ಪರಿಣಾಮದಲ್ಲಿ ಹಲವು ಗುಣಮೌಲ್ಯಗಳನ್ನು ಒಟ್ಟಿಗೇ ನೀಡುತ್ತವೆ. ತುಂಬ ಜನ ಸೇರುವಲ್ಲಿ ವಿವಿಧ ರೀತಿಯ ಆಸಕ್ತಿ ಉಳ್ಳವರಿರುತ್ತಾರೆ. ಎಲ್ಲ ವಯೋಮಾನದವರ ಆಕರ್ಷಣೆ ಉಳಿಸಿಕೊಳ್ಳಲು ಸಂಭ್ರಮ - ಅದ್ದೂರಿತನಗಳು ಬೇಕೇಬೇಕಾಗುತ್ತದೆ.
ಉತ್ಸವ ಎಂಬ ಪರಿಕಲ್ಪನೆ ಕೇವಲ ಧಾರ್ಮಿಕ ಕೇಂದ್ರಗಳ ಸಾಂಪ್ರದಾಯಿಕ ಆಚರಣೆ ಎಂದು ಭಾವಿಸಬೇಕಾಗಿಲ್ಲ. ಪರಿಣಾಮದಲ್ಲಿ ಅದು ಐಹಿಕವಾದದ್ದೇ. ಉತ್ಸವಗಳನ್ನು ಐಹಿಕವಾದ ಲೋಕೋದ್ದೇಶಗಳಿಗಾಗಿ ಬಳಸಿಕೊಂಡ ಉದಾಹರಣೆಗಳು ಸಾಕಷ್ಟು ಕಂಡು ಬರುತ್ತದೆ.
ಮೇಳ ಮತ್ತು ಸಂತೆಗಳು ಉತ್ಸವದ ಒಂದು ಭಾಗ. ತುಂಬ ಜನ ಒಂದೆಡೆ ಸೇರುವುದರಿಂದ ಉತ್ಸವದ ಅಂಗವಾಗಿ ಮೇಳ/ಸಂತೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಂದು ದೇವಸ್ಥಾನದ ಉತ್ಸವ ಕೇವಲ ಐದು/ಏಳು ದಿನಗಳದಾದರೂ ಮೇಳ/ಸಂತೆ ಹದಿನೈದು ದಿನಗಳ ವರೆಗೂ ಮುಂದುವರಿಯುವುದಿದೆ. ಇದರಿಂದ ವ್ಯಾವಹಾರಿಕ ಚಟುವಟಿಕೆಗಳು ವಿಸ್ತರಿಸಿಕೊಳ್ಳಲು ಆಸ್ಪದವಾಗುತ್ತದೆ.
ಆಧುನಿಕ ಕಾಲದಲ್ಲಿ ವಿಭಿನ್ನ ಉದ್ದೇಶಗಳಿಗಾಗಿ ಉತ್ಸವ ಮಾಡುವುದನ್ನು ಕಾಣುತ್ತಿದ್ದೇವೆ. ನದಿ ಉತ್ಸವ, ಕಡಲ ಉತ್ಸವ, ವನಗಳ ಉತ್ಸವ, ಕೃಷಿ ಉತ್ಸವ, ಸಿನಿಮಾ ಉತ್ಸವ, ರಂಗ ಉತ್ಸವ, ಸಾಹಿತ್ಯ ಉತ್ಸವ, ಪುಸ್ತಕ ಉತ್ಸವ - ಹೀಗೆ ವ್ಯಾವಹಾರಿಕ ಲೋಕಕ್ಕೆ ಉತ್ಸವಗಳು ವಿಸ್ತರಿಸಿವೆ. ಅದೇ ರೀತಿ ಹಲವು ಮೇಳಗಳು ಏರ್ಪಡುವುದನ್ನು ನೋಡಬಹುದು. ಹಲಸಿನ ಮೇಳ, ಹಣ್ಣುಗಳ ಮೇಳ, ವಸ್ತ್ರ ಮೇಳ ಮೊದಲಾದವು ಸಂಘಟಿಸಲ್ಪಡುತ್ತವೆ. ಇವೆಲ್ಲ ಒಳ್ಳೆಯ ಉದ್ದೇಶದವು ಅನ್ನುವುದರಲ್ಲಿ ಅನುಮಾನವಿಲ್ಲ.
ಯಾವುದಾದರೂ ವಸ್ತು/ಉತ್ಪನ್ನಗಳನ್ನು ಮುನ್ನೆಲೆಗೆ ತರಲು, ಮಾರುಕಟ್ಟೆ ಮಾಡಲು ಉತ್ಸವ ಮೇಳಗಳು ನೆರವಾಗುತ್ತವೆ. ಒಂದರ್ಥದಲ್ಲಿ ಇವನ್ನು ಉನ್ನತೀಕರಿಸಲ್ಪಟ್ಟ (ಜಿಚಿಛಿe ಟiಜಿಣ ಮಾಡಿದ) ಮಾರುಕಟ್ಟೆಗಳು ಅನ್ನಬಹುದು.
ಎಷ್ಟೋ ಕಡೆ ಹಳ್ಳಿ ಕೇಂದ್ರಗಳಲ್ಲಿ ವಾರದ ಸಂತೆಗಳಿರುತ್ತವೆ. ವಾರದ ಒಂದೊಂದು ದಿನ ಒಂದೊಂದು ಕಡೆ ಸಂತೆಗಳಾಗುತ್ತವೆ. ತಮ್ಮ ಉತ್ಪನ್ನಗಳನ್ನು ಮಾರಲು, ಬೇಕಾದ ಉತ್ಪನ್ನಗಳನ್ನು ಕೊಂಡುಕೊಳ್ಳಲು ಅವು ನೆರವಾಗುತ್ತವೆ. ವಾರದ ಆರು ದಿನಗಳೂ ದುಡಿಯುವ ಜನರಿಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳಲು ವಾರದ ಸಂತೆಯ ಅಗತ್ಯ ತುಂಬ ಇದೆ.
ಕರಾವಳಿ ಜಿಲ್ಲೆಗಳಲ್ಲಿ ವಾರದ ಸಂತೆ ಎಂಬ ಪರಿಕಲ್ಪನೆ ಅಷ್ಟೊಂದು ಸಬಲವಾಗಿಲ್ಲ. ನಮ್ಮ ಸರಕಾರ (ಮಾರುಕಟ್ಟೆ ಇಲಾಖೆ) ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ, ಊರ ಪ್ರಮುಖರೊಂದಿಗೆ ಚರ್ಚಿಸಿ, ಸ್ಥಳೀಯ ಪಂಚಾಯತ್ ಗಳ ಸಹಕಾರ ಪಡೆದು ’ವಾರದ ಸಂತೆ’ ಪರಿಕಲ್ಪನೆಯನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಇದರಿಂದ ಹಳ್ಳಿಗಳ ಕೃಷಿ ಉತ್ಪಾದನೆಗಳಿಗೆ ಮಾರುಕಟ್ಟೆ ಲಭ್ಯವಾಗಿ ಗ್ರಾಮ ಪ್ರದೇಶಗಳ ಆರ್ಥಿಕ ಚಟುವಟಿಕೆ ಕೊಂಚ ಸುಧಾರಿಸೀತು ಅನ್ನಿಸುತ್ತದೆ. ಹಳ್ಳಿಗರಿಗೆ ಹಲಸು ಮಾವು ಹುಣಿಸೆ ಮತ್ತಿನ್ನಿತರ ವಸ್ತುಗಳಿಂದ ತಯಾರಿಸುವ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ.
ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಳ್ಳಿಗರೊಂದಿಗೆ ಸೇರಿಕೊಂಡು ಮಾಡುವ ಕೃಷಿ ಕ್ಷೇತ್ರೋತ್ಸವ ಈ ದೃಷ್ಟಿಯಿಂದ ಒಂದು ಮಾದರಿಯಾದ ಚಟುವಟಿಕೆ. ಇಂತಹ ಚಟುವಟಿಕೆಗಳಿಂದ ಹಳ್ಳಿಗಳ ಬಲವರ್ಧನೆ ಸಾಧ್ಯ. ಕೃಷಿಗೆ ಮತ್ತು ಅವರ ಬದುಕಿಗೆ ಪೂರಕವಾಗಿ ನಡೆಯುವ ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಗರ ಪ್ರದೇಶದ ಮಂದಿ ತಮ್ಮ ’ಹಳದಿಕಣ್ಣು’ಗಳಿಂದ ನೋಡುತ್ತ ಅಪಪ್ರಚಾರ ಮಾಡುವುದನ್ನು ಬಿಟ್ಟು, ಇಂಥವುಗಳು ಗ್ರಾಮೀಣ ಜನರ ಬದುಕನ್ನು ಸಹ್ಯಗೊಳಿಸುವ ಮತ್ತು ಆರ್ಥಿಕತೆಯನ್ನು ಸಬಲಗೊಳಿಸುವ ವಿದ್ಯಮಾನಗಳು ಎಂದು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು. ದುರ್ಬಲವಾದ ಹಳ್ಳಿಗಳು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲಾಗದ ಸ್ಥಿತಿಯಲ್ಲಿವೆ. ಹಳ್ಳಿಗರ ಪರವಾಗಿ ವಾದಿಸುವವರು ಯಾರೂ ಕಾಣಿಸುತ್ತಲಿಲ್ಲ.
ನಮ್ಮ ಪ್ರತಿಯೊಂದು ಹಳ್ಳಿಯಲ್ಲಿರುವ ದೇವಸ್ಥಾನಗಳಲ್ಲಿ ನಡೆಯುವ ಜಾತ್ರೋತ್ಸವಗಳನ್ನು ಉನ್ನತೀಕರಿಸುವ ಅಗತ್ಯವಿದೆ. ಎಲ್ಲ ವರ್ಗ/ಸಮುದಾಯಗಳೊಂದಿಗೆ ಸೇರಿಕೊಂಡು ದೇವಸ್ಥಾನ ವ್ಯವಸ್ಥಾನ ಸಮಿತಿಯವರು ಜಾತ್ರೋತ್ಸವಗಳನ್ನು ಗ್ರಾಮೋತ್ಸವವಾಗಿ ಪರಿವರ್ತಿಸಬೇಕು. ಇದರಿಂದ ಯುವಕರ ಮತ್ತು ಆಧುನಿಕರ ಗಮನವನ್ನು ಸೆಳೆದಂತಾಗುತ್ತದೆ.
ಧಾರ್ಮಿಕ ಚಟುವಟಿಕೆಯ ಜೊತೆಗೆ ಕೃಷಿಯ ಅಭಿವೃದ್ಧಿ, ಗ್ರಾಮೀಣ ಉದ್ಯಮಗಳ ಅಭಿವೃದ್ಧಿ ಮತ್ತು ಮಾರುಕಟ್ಟೆ ವಿಸ್ತರಣೆ ಎಲ್ಲವೂ ಇದರಿಂದ ಸಾಧ್ಯವಾಗುತ್ತದೆ. ಅಲಕ್ಷಿತ ಕ್ಷೇತ್ರಗಳನ್ನು ಮುನ್ನೆಲೆಗೆ ತರಲು ಇದು ಸಹಕಾರಿಯಾಗಬಲ್ಲದು. ಸ್ಥಳೀಯ ಸಂಘ ಸಂಸ್ಥೆಗಳು, ಊರ ಪ್ರಮುಖರು, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ದೇವಸ್ಥಾನ ವ್ಯವಸ್ಥಾಪನ ಸಮಿತಿ ಇವರೆಲ್ಲ ಒಟ್ಟಿಗೆ ಕುಳಿತು ಚರ್ಚಿಸಿ ಮಾಡಬೇಕಾದ ಕೆಲಸ ಇದು ಮತ್ತು ಗ್ರಾಮೋತ್ಥಾನದ ನಿಟ್ಟಿನಲ್ಲಿ ಇಂತಹ ಗಂಭೀರ ಪ್ರಯತ್ನದ ಅಗತ್ಯ ಇವತ್ತು ಹಿಂದೆಂದಿಗಿಂತ ಹೆಚ್ಚಾಗಿದೆ.
-ಡಾ. ವಸಂತಕುಮಾರ ಪೆರ್ಲ.
Comments