ಹಿರಿಯ ಗೆಳೆಯರಾದ ಬೆಳಗಾವಿಯ ಶ್ರೀ ಎಲ್. ಎಸ್. ಶಾಸ್ತ್ರಿ ವಿದ್ವನ್ಮಣಿಗಳು. ಬರೆಹದಂತೆ ಅವರ ಬದುಕು ಕೂಡ "ಲಿಂಗ ಮೆಚ್ಚುವಂತಹದು". ಸ್ಫಟಿಕದ ಸಲಾಕೆಯಂತೆ ಸರ್ವಜನರಿಗೂ ಬೇಕಾಗುವಂಥ ವ್ಯಕ್ತಿತ್ವ ಕಟ್ಟಿಕೊಂಡು ಬಂದವರು. ಬಹುಶ್ರುತರಾಗಿರುವ ಶಾಸ್ತ್ರೀಜಿ ಬರೆಯದೇ ಇದ್ದ ವಿಷಯಗಳೇ ಇಲ್ಲ. ಆಡಿನ ಹಾಗೆ ಎಲ್ಲದರ " ಸವಿ" ಅನುಭವಿಸುತ್ತ, ಅಭಿವ್ಯಕ್ತಿಸುತ್ತ ಬಂದಿದ್ದಾರೆ. ಸಾಹಿತ್ಯವಂತೂ ಸರಿಯೇ ಸರಿ. ಅದರೊಂದಿಗೆ ಪತ್ರಿಕೆ, ಸಂಗೀತ, ನಾಟಕ, ಗಮಕ, ಯಕ್ಷಗಾನ ಇತ್ಯಾದಿ ಇತ್ಯಾದಿ ಕುರಿತು ನೂರಾಹತ್ತು ಪುಸ್ತಕಗಳನ್ನೂ, ನಾಲ್ವತ್ತು ಸಾವಿರಕ್ಕೂ ಹೆಚ್ಚು ಬಿಡಿ ಬರೆಹಗಳನ್ನೂ ಬರೆದು ಮುಡಿಗೇರಿಸಿಕೊಂಡಿರುವ ಎಪ್ಪತ್ತೆಂಟರ "ಹರೆಯದ ಯುವಕ" ಇವರು. ಈಚೆಗಿನ ಕೃತಿ " ವಿಶ್ವವಂದ್ಯ ಬಸವಣ್ಣನವರು" ಅವರ ಮುಡಿಗೆ ಹೊನ್ನ ಕಿರೀಟವಾಗಿ ಶೋಭಾಯಮಾನವಾಗುವಂಥದ್ದು. ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ವಿಶೇಷ ಗ್ರಂಥವಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಳಿಯುವಂತಹದು. ಬಸವಣ್ಣನವರ ಕುರಿತಾಗಿ , ೧೨ ನೇ ಶತಮಾನದ ಶರಣರ ಬಗ್ಗೆ, ಬಸವಯುಗದ ಸಾಹಿತ್ಯದ ಬಗ್ಗೆ ಈಗಾಗಲೇ ಲೆಕ್ಕವಿಲ್ಲದಷ್ಟು ಪುಸ್ತಕಗಳು ಬಂದಿವೆ, ಬರುತ್ತಿವೆ. ಆದರೂ " ವಿಶ್ವವಂದ್ಯ..." ದ ಹಾಗೆ ಖಚಿತವಾದ ಮಾಹಿತಿ ಒದಗಿಸುವ ಪುಸ್ತಕಗಳು ವಿರಳ. ಅಂಥ ವಿರಳಾತಿವಿರಳ ಗ್ರಂಥಗಳಲ್ಲಿ ಇದೂ ಒಂದು ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ.
ಬಸವಣ್ಣನವರನ್ನು ಕೇಂದ್ರವಾಗಿರಿಸಿಕೊಂಡು , ಸಮಗ್ರ ಶರಣಯುಗದ ಅವಲೋಕನ ಮಾಡುವ ಪ್ರಯತ್ನ ಇಲ್ಲಿದೆ. ಜೀವನ ಚರಿತ್ರೆಯನ್ನು ಬರೆಯುವಾಗ ಭಾವಾತಿರೇಕತೆ, ಪ್ರಶಂಸೆಗಳೇ ಅಧಿಕವಾಗಿ ವಾಸ್ತವಾಂಶಗಳು ಸೊರಗುತ್ತವೆ. ಈ ಆತಂಕದಿಂದ ಮುಕ್ತವಾಗಿ ಖಚಿತ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಎಚ್ಚರಿಕೆಯಿಂದ ಈ ಕೃತಿ ರಚಿತವಾಗಿದೆ ಎಂದು ಲೇಖಕರು ಹೇಳುತ್ತಾರೆ.
ಬಸವಣ್ಣನವರ ಕುರಿತು ಏಕರೂಪವಾದ ಅಭಿಪ್ರಾಯಗಳು ಇಲ್ಲದಿರುವದು, ಚರಿತ್ರೆಯ ಅನೇಕ ಪ್ರಸಂಗಗಳಲ್ಲಿ ಗೊಂದಲಗಳಿರುವುದು ಪ್ರಾರಂಭದಲ್ಲಿ ಲೇಖಕರಿಗೆ ಆತಂಕ ಹುಟ್ಟಿಸಿರುವುದು ಸಹಜ. ಜನಪದರಲ್ಲಿ ದಟ್ಟವಾಗಿರುವ ಪವಾಡಗಳು, ದಂತಕಥೆಗಳು, ಮತ್ತು ಅವುಗಳಲ್ಲಿನ ಅವಾಸ್ತವಿಕತೆಗಳನ್ನು " ಸೋಸಿ ತೆಗೆಯುವದಕ್ಕಾಗಿ" ಹಲವಾರು ಘನ ವಿದ್ವಾಂಸರ ಗ್ರಂಥಗಳನ್ನು ಲೇಖಕರು ಸಮಗ್ರವಾಗಿ ಅಧ್ಯಯನ ಮಾಡುತ್ತಾರೆ. ಹೀಗಾಗಿ ಅವರ ಪರಿಶ್ರಮ ವ್ಯರ್ಥವಾಗುವದಿಲ್ಲ.
ಬಸವಣ್ಣನವರೇ ಇಲ್ಲಿ ಕೇಂದ್ರ ವ್ಯಕ್ತಿ. ಹಾಗಿದ್ದರೂ, ವೇದಪೂರ್ವ ಭಾರತದ ಇತಿಹಾಸ, ಅದರ ನಂತರದ ವೇದಯುಗ, ಸೂತ್ರಯುಗ, ಮಹಾಕಾವ್ಯಗಳ ಯುಗ, ಪುರಾಣ ಯುಗ, ಮತ್ತು ದರದಶನಯುಗಗಳಲ್ಲಿನ ಧಾರ್ಮಿಕ ಸ್ವರೂಪ, ಸಾಮಾಜಿಕ ವ್ಯವಸ್ಥೆ, ಮತ್ತು ಜೀವನ ಶೈಲಿಯ ಕುರಿತು ಚಿಂತನೆ ನಡೆಸುತ್ತಾರೆ. ಲಿಂಗವಂತ ( ಲಿಂಗಾಯತ) ಧರ್ಮದ ಹುಟ್ಟಿಗೆ ಕಾರಣವಾದ ಶೈವ ಸಿದ್ಧಾಂತ , ಶಿವೋಪಾಸನೆಗಳನ್ನು ಪರಿಚಯಿಸುತ್ತ, ಆಚಾರ್ಯತ್ರಯರಾದ ಮಧ್ವಾಚಾರ್ಯ, ಶಂಕರಾಚಾರ್ಯ,ರಾಮಾನುಜಾಚಾರ್ಯರುಗಳು ಉಲ್ಲೇಖಿಸಿರುವ ಶಿವನ ಬಗ್ಗೆಯೂ ಬರೆಯುತ್ತಾರೆ. ವೀರಶೈವ ಮತ್ತು ಲಿಂಗಾಯತ ಧರ್ಮಗಳಲ್ಲಿನ ಪ್ರಭೇದಗಳನ್ನು ಗುರುತಿಸುತ್ತಾರೆ. " ಬಸವಣ್ಣನವರಿಗಿಂತ ಪೂರ್ವದಲ್ಲಿ ವೀರಶೈವ ಧರ್ಮ ಇತ್ತು. ಆದರೆ ಅದಕ್ಕೊಂದು ಸ್ಪಷ್ಟ ಸ್ವರೂಪ ಇರಲಿಲ್ಲ. "( ಹರ್ಡೇಕರ ಮಂಜಪ್ಪ). " ಲಿಂಗಾಯತ " ಎಂಬ ಸ್ವತಂತ್ರ ಧರ್ಮ ಹುಟ್ಟಿಕೊಳ್ಳಲು ಬಸವಣ್ಣನವರೇ ಕಾರಣಪುರುಷರು. ಇದು ಬಸವಣ್ಣನವರ ಮಹತ್ಕಾರ್ಯ" ಎನ್ನುತ್ತಾರೆ ಲೇಖಕರು.
ಬಸವಪೂರ್ವ ಯುಗದ ತ್ರಿಷಷ್ಟಿಪುರಾತನರು, ಹಿರಿಯ ಸಮಕಾಲೀನರಾದ ಗುಡ್ಡ ತವರ, ಜೇಡರ ದಾಸಿಮಯ್ಯ ಮುಂತಾದವರನ್ನು ಗುರುತಿಸುವಂತೆ, ೧೮-೧೯ ನೇ ಶತಮಾನದ ಶಿವಯೋಗಿಗಳ ಪರಂಪರೆ ಉಲ್ಲೇಖಿಸುವ ಮೂಲಕ ಬಸವೋತ್ತರ ಕಾಲಘಟ್ಟದ ಧಾರ್ಮಿಕ ಜಾಗೃತೆಯ ಬಗ್ಗೆಯೂ ಬರೆಯುತ್ತಾರೆ.
ಬಸವಣ್ಣನವರ ಜನನ ( ೧೧೦೫/ ೧೧೦೬) , ಅವರ ತಂದೆತಾಯಿ, ಬಾಲ್ಯ, ಅವರ ಮನೆತನದ ಆಚರಣೆಗಳ ವಿವರಣೆ ನೀಡುತ್ತಾರೆ. ಮನೆ ಬಿಟ್ಟು ಹೊರಟ ಬಸವಣ್ಣನವರ ಕೂಡಲ ಸಂಗಮ ಯಾತ್ರೆ, ಅಲ್ಲಿಂದ ಕಲ್ಯಾಣ, ಶರಣರೊಂದಿಗಿನ ಒಡನಾಟ, ವಚನ ರಚನೆ, ಸಾಮಾಜಿಕ ಸಮಾನತೆಗಾಗಿ ನಡೆದ ಹೋರಾಟ, ಅವರ ಕ್ರಾಂತಿಯ ವೈಫಲ್ಯ, ಮರಳಿ ಕೂಡಲಸಂಗಮನೆಡೆಗೇ ಬಂದುದು....ಹೀಗೆ ಚರಿತ್ರೆ ಸಾಗುತ್ತದೆ. ಇಲ್ಲೆಲ್ಲ ವ್ಯಕ್ತಿಗಳ ಬಗ್ಗೆ , ಪ್ರಸಂಗಗಳ ಬಗ್ಗೆ ಬರೆಯುವಾಗ ಲೇಖಕರು ತುಂಬ ಎಚ್ಚರಿಕೆ ವಹಿಸುತ್ತಾರೆ. ಅನೇಕ ವಿದ್ವಾಂಸ- ಸಂಶೋಧಕರ ಅಭಿಪ್ರಾಯಗಳನ್ನು ಉಲ್ಲೇಖಿಸುತ್ತಾರೆ. ಅಂತೆಯೇ ಬಸವಣ್ಣನವರ ಜೀವನ ಚರಿತ್ರೆ ಎಂದರೆ ಅದು ಆ ಶರಣಯುಗದ ಸಮಗ್ರ ಚರಿತ್ರೆ" ಎಂದು ಪ್ರಸ್ತಾವನೆಯಲ್ಲಿ ಬರೆದಿರುವಂತೆಯೇ ಬಸವಣ್ಣನವರ ಚರಿತ್ರೆ ಬರೆಯುತ್ತ ಹೋಗುತ್ತಾರೆ.
ಬಸವಣ್ಣನವರ ಸ್ವಭಾವ ವೈಶಿಷ್ಟ್ಯ ಹೇಳುವಾಗ ಬಸವಣ್ಣನವರ ವಚನಗಳ ಸಾಲುಗಳನ್ನು ಉದ್ಧರಿಸುತ್ತಾರೆ. ಅನುಭವ ಮಂಟಪದ ವಿಶೇಷತೆ, ಶರಣ ಸಂಕುಲದ ಅದು ಬೀರಿದ ಪ್ರಭಾವ, ವಚನ ಸಾಹಿತ್ಯಕ್ಕೆ ಅದು ನೀಡಿದ ಕೊಡುಗೆಯನ್ನು ಸಾದ್ಯಂತವಾಗಿ ಬರೆಯುತ್ತಾರೆ. ಲಿಂಗಾಯತ ಧರ್ಮದ ಲಕ್ಷಣಗಳು, ಅಷ್ಟಾವರಣ, ಪಂಚಾಚಾರ, ಲಿಂಗದೀಕ್ಷೆ, ಲಿಂಗಾಂಗ ಸಾಮರಸ್ಯದ ಕುರಿತು ಬರೆಯುತ್ತಾರೆ.ಶರಣರು ಸಂಸಾರ ಬಾಹಿರರಲ್ಲ, ಸಂಸಾರದಲ್ಲಿದ್ದುಕೊಂಡೇಶರಣ ಧರ್ಮ ಪಾಲಿಸಬೇಕು. " ಲಿಂಗದ ನಡೆ, ಲಿಂಗದ ನುಡಿ, ಲಿಂಗದ ನೋಟ, ಲಿಂಗದ ಬೇಟ, ಲಿಂಗದ ಕೂಟ" ಇವೇ ಭಕ್ತನ ಪರಮಗುರಿ. ಶರಣರಿಗೆ ಕಾಯಕವೇ ಕೈಲಾಸ ಎನ್ನುತ ಬಸವಣ್ಣನವರು. ವಚನ ಸಾಹಿತ್ಯದ ವೈಶಿಷ್ಟ್ಯ, ಬೆಡಗಿನ ವಚನಗಳ ವಿಶೇಷತೆಗಳನ್ನೂ ವಿವರಿಸುತ್ತಾರೆ. ಬಸವಣ್ಣನವರ ಆಯ್ದ ವಚನಗಳ ವಿವರಣೆಯ ಜೊತೆಗೆ ವಚನಗಳಲ್ಲಿನ ಸಾಹಿತ್ಯಿಕ ಮೌಲ್ಯ, ಅವುಗಳ ಕಾವ್ಯ ಸೌಂದರ್ಯದ ಅವಲೋಕನವೂ ಇದೆ.
ಬಸವಣ್ಣನವರ ಸಮಕಾಲೀನರಾದ ಅಲ್ಲಮಪ್ರಭುಗಳಾದಿಯಾಗಿ ಕೆಲ ವಚನಕಾರರ ಬಗ್ಗೆಯೂ, ಶರಣೆಯರ ಬಗ್ಗೆಯೂ ಪರಿಚಯಾತ್ಮಕ ಬರೆಹಗಳಿವೆ. ಇದಲ್ಲದೇ ಅನುಬಂಧದಲ್ಲಿ೧೨ ನೇ ಶತಮಾನದ ಪುರುಷ/ ಮಹಿಳಾ ವಚನಕಾರರು, ಬಸವೋತ್ತರ ಯುಗದ ಶರಣರು, ವಚನ ಪಿತಾಮಹ ಫ. ಗು. ಹಳಕಟ್ಟಿ ಅವರನ್ನೂ ಬಿಟ್ಟಿಲ್ಲ.
ಹೀಗೆ ಬಸವ ಚರಿತೆಯ ಮೂಲಕ , ಶರಣರ ಆಶಯವನ್ನು, ಧಾರ್ಮಿಕ ಚಳುವಳಿಯ ಪ್ರೇರಣೆಗಳನ್ನು ಮತ್ತು ಅವುಗಳ ಅನುಷ್ಠಾನಕ್ಕಾಗಿ ಅವರು ನಡೆಸಿದ ಹೋರಾಟವನ್ನೂ ಅದರ ವೈಫಲ್ಯವನ್ನೂ ಸೋದಾಹರಣವಾಗಿ ಬರೆದಿದ್ದಾರೆ. ಒಂದು ರೀತಿಯಲ್ಲಿ ಇದು " ಬಸವಲೋಕ"ದ ಸಮಗ್ರ ಚಿತ್ರಣವೇ ಆಗಿದೆ. " ವಿಶ್ವವಂದ್ಯ ಯುಗಪುರುಷ ಬಸವಣ್ಣ"ನವರ ಮಹಾನ್ ವ್ಯಕ್ತಿತ್ವವನ್ನು ಈ ಪುಸ್ತಕದಲ್ಲಿ ಸೆರೆ ಹಿಡಿಯುವ ಅವರ ಪ್ರಯತ್ನ ಶೇ. ೧೦೦ ರಷ್ಟು ಯಶಸ್ವಿಯಾಗಿದೆ.
" ಬಸವಣ್ಣನವರು ತಮ್ಮೊಬ್ಬರಿಗಾಗಿ ಬದುಕಿದವರಲ್ಲ. ಸಮಾಜಕ್ಕಾಗಿ ಬದುಕಿದವರು. ಅಂದಿನ ಇಡೀ ಸಮಾಜವನ್ನು ಅವರು ತಮ್ಮೊಂದಿಗೆ ಒಯ್ಯಲು ಪ್ರಯತ್ನಿಸಿದರು. ಕೆಳವರ್ಗದವರು, ಶೋಷಿತರು, ಅಸ್ಪೃಶ್ಯರು, ಎಂದೆಲ್ಲ ಕರೆಯಲ್ಪಡುತ್ತಿದ್ದ ನೊಂದ ಜನರನ್ನು ಅನುಭವ ಮಂಟಪದಡಿ ಒಂದುಗೂಡಿಸಿದರು. ...ಆ ಜನರಲ್ಲಿ ತುಂಬಿದ್ದ ಕೀಳರಿಮೆ, ಆತಂಕಗಳನ್ನು ನಿವಾರಿಸಿದರು. ಆತ್ಮಸ್ಥೈರ್ಯ ತುಂಬಿದರು" ಎಂದು ಬರೆಯುವಲ್ಲಿನ ಲೇಖಕರ ಕಾಳಜಿ, ಮತ್ತು ಆಶಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಆದರೆ ದುರ್ದೈವ ನೋಡಿರಿ, ಬಸವಣ್ಣನವರನ್ನು ಒಂದು ಜಾತಿಗೆ ಕಟ್ಟಿಹಾಕುವ ಸಂಕುಚಿತ ಮನಸ್ಸುಗಳೇ ಇಂದು ಅಧಿಕವಾಗಿವೆ, ಪ್ರಬಲವಾಗಿವೆ. ಬಸವಣ್ಣನವರ ಹೆಸರಲ್ಲಿ ದುಡ್ಡು ಮಾಡುವವರೂ ಇದ್ದಾರೆ. ಅವರ ಹೆಸರು ಬಳಸಿಕೊಂಡು ರಾಜಕೀಯ ಲಾಭ ಪಡೆಯುವ ಕುತ್ಸಿತ ಜನರೂ ಇದ್ದಾರೆ. ಅವರಿಗೆ ಬಸವಣ್ಣನ ನಾಮದ ಬಲ ಬೇಕು. ಆತನ ತತ್ವಾಚರಣೆ ಯಾರಿಗೂ ಬೇಡ.
ಒಂದು ಸಮಾಧಾನದ ಸಂಗತಿ : ಬಸವ ತತ್ವ ಇಂದು ವಿಶ್ವಮಾನ್ಯವಾಗಿದೆ. ಬಸವಣ್ಣ ವಿಶ್ವಂದ್ಯನಾಗಿದ್ದಾನೆ. ಜಾತಿಯ ಬೇಲಿ ದಾಟಿ ಬೆಳೆದುನಿಂತಿದ್ದಾನೆ. ಇದಕ್ಕೆ ಕಾರಣರಾದವರು ಶ್ರೀ ಎಲ್. ಎಸ್. ಶಾಸ್ತ್ರಿ ಮತ್ತು ಅವರಂತಹ ವಿಶಾಲ ಮನಸ್ಸಿನ ಮಹಾನುಭಾವರು. ಅದಕ್ಕಾಗಿ ಅವರು ಅಭಿನಂದನಾರ್ಹರು. ತಮ್ಮ ಯಾವುದೇ ಪಾಂಡಿತ್ಯ ಪ್ರದರ್ಶನ ಮಾಡದೇ ಸರಳ ಸಹಜ ಭಾಷೆಯಲ್ಲಿ ಜನಸಾಮಾನ್ಯರಿಗೂ ಕೂಡ ಗ್ರಾಹ್ಯವಾಗುವ ರೀತಿಯಲ್ಲಿ ಒಂದು ಸಂಗ್ರಾಹ್ಯ ಕೃತಿ ನೀಡಿದ ಲೇಖಕರಿಗೆ ಕನ್ನಡಿಗರೆಲ್ಲ ಕೃತಜ್ಞರಾಗಿರಬೇಕಾಗಿದೆ. ಹಾಗೆಯೇ ಪ್ರಕಾಶಕರಾದ ತೋಂಟದಾರ್ಯ ಸಂಸ್ಥಾನ ಮಠ, ಗದಗ ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಗೂ ಅಭಿವಂದನೆಗಳು.
- ಮಲ್ಲಿಕಾರ್ಜುನ ಹುಲಗಬಾಳಿ, ಬನಹಟ್ಟಿ
ಮೊ. ೯೯೪೫೧೧೯೫೨೮

Comments