top of page

ಗೌರವ ಪ್ರಶಸ್ತಿಯೊಂದರ ಅವಸಾನ

ಇತ್ತೀಚೆಗೆ ಭಾರತ ರತ್ನವನ್ನೂ ಒಳಗೊಂಡಂತೆ ಯಾವುದೇ ಗೌರವ ಪ್ರಶಸ್ತಿಗಳನ್ನು ನೀಡಲು ಇರುವ ನೈತಿಕ ಚೌಕಟ್ಟು ಮತ್ತು ಮಾನದಂಡಗಳ ಕುರಿತು ಮಾತಾಡದಿರುವುದೇ ಒಳ್ಳೆಯದು. ಜೊತೆಗೆ ಜನ ಸಾಮಾನ್ಯರು ನೀಡುವ ತೆರಿಗೆ ಹಣದಿಂದ ನಡೆಯುವ ಸಂಸ್ಥೆಗಳು ಕನಿಷ್ಟಮಟ್ಟದ ಸಾರ್ವಜನಿಕ ಲಜ್ಜೆಯನ್ನಿಟ್ಟುಕೊಂಡು ತನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಸಂಸ್ಥೆಯೊಂದು ಜನರಿಗೆ ನಿರಂತರ ಉತ್ತರದಾಯಿಯಾಗಿರಬೇಕು, ಮತ್ತು ಜನ ಕೇಳುವ ಪ್ರಶ್ನೆಗಳಿಗೆ ಕಿವಿಗೊಡಬೇಕಾಗುತ್ತದೆ. ಗೌರವ ಪ್ರಶಸ್ತಿಗಳನ್ನು ಕನ್ನಡ ವಿಶ್ವವಿದ್ಯಾಲಯ ಮಾತ್ರ ನೀಡುತ್ತಿಲ್ಲ. ವಿವಿಧ ಅಕಾಡೆಮಿಗಳು, ಸಂಸ್ಕೃತಿ ಇಲಾಖೆ, ಸ್ವತಃ ಸರಕಾರ ಇಂತಹ ಪ್ರಶಸ್ತಿಗಳನ್ನು ನೀಡುತ್ತವೆ. ಪ್ರಶಸ್ತಿ ಘೋಷಣೆಯಾದಾಗ ನೂರೆಂಟು ಚರ್ಚೆಗಳು ಮುಂಚೂಣಿಗೆ ಬಂದು ಸದ್ದು ಮಾಡುತ್ತವೆ. ರಾಜ್ಯೋತ್ಸವ ಪ್ರಶಸ್ತಿಯ ಮೇಲೆ ನಡೆದ, ನಡೆಯುತ್ತಲೇ ಇರುವ ಚರ್ಚೆ ಮತ್ತು ವಾಗ್ವಾದಗಳನ್ನು ಅಧ್ಯಯನ ಮಾಡಿದರೆ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಬೇರೊಂದು ರೀತಿಯಲ್ಲಿ ಬರೆಯಬಹುದಾದಷ್ಟು ಅವು ಸ್ವಾರಸ್ಯಕರವಾಗಿವೆ. ಪ್ರಶ್ನೆ ಇರುವುದು ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪ್ರಶಸ್ತಿಯದು. ಕನ್ನಡ ವಿವಿಯ ನಾಡೋಜ ಗೌರವ ಪ್ರಶಸ್ತಿಯನ್ನು 2019ನೇ ಸಾಲಿನಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಒಬ್ಬ ವ್ಯಕ್ತಿಗೆ ನೀಡಲಾಗಿದೆ. ಈ ನಾಡೋಜ ಗೌರವ ಪ್ರಶಸ್ತಿಯನ್ನು ಕನ್ನಡ ವಿಶ್ವವಿದ್ಯಾಲಯ ನೀಡುತ್ತಿದೆ ಎಂಬ ಕಾರಣಕ್ಕಾಗಿ ಈ ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ. ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ನೀಡುವಾಗ ಇಲ್ಲದ ಪ್ರಶ್ನೆಗಳು ಕನ್ನಡ ವಿಶ್ವವಿದ್ಯಾಲಯಕ್ಕೆ ಮಾತ್ರ ಏಕೆ? ಎಂಬ ಪ್ರಶ್ನೆ ಬರುವುದು ಸಹಜ. ಕನ್ನಡ ವಿವಿಗೆ ಕೇವಲ ಇಪ್ಪತ್ತೈದರ ಹರೆಯ. ವಯಸ್ಸಿನ ಕಾರಣಕ್ಕೆ ಅದು ಬೇರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ, ಗಾತ್ರ ಮತ್ತು ವೈವಿಧ್ಯಗಳಲ್ಲಿ ಕಿರಿದು. ಆದರೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡ ವಿವಿ ತನ್ನನ್ನು ವಿಸ್ತರಿಸಿಕೊಂಡ ರೀತಿ ಮತ್ತು ಅದರ ಶೈಕ್ಷಣಿಕ ಬೆಳವಣಿಗೆ ವಿಭಿನ್ನವಾಗಿದೆ.

ಕರ್ನಾಟಕದ ಹಲವು ಸಾಮಾಜಿಕ ಸ್ತರಗಳಿಂದ ಬಂದ ವಿದ್ವಾಂಸರು, ಹೊಸ ಬಗೆಯ ದೃಷ್ಟಿಕೋನ, ಆನ್ವಯಿಕ ಎನ್ನಿಸುವ ಶೈಕ್ಷಣಿಕ ಕಾರ್ಯಕ್ರಮಗಳ ಕಾರಣಕ್ಕಾಗಿ ಕನ್ನಡ ವಿವಿ ಉಳಿದ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿದೆ. ಕಂಬಾರ್, ಕಲಬುರ್ಗಿ ಮತ್ತು ವಿವೇಕ್ ರೈಯಂತಹ ಜನಪರ ಕಾಳಜಿಯ ಕುಲಪತಿಗಳು ಈ ವಿಶ್ವವಿದ್ಯಾಲಯದ ಸೈದ್ಧಾಂತಿಕ ಚಹರೆಗಳನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ಕನ್ನಡ ನಾಡು, ನುಡಿ ಮತ್ತು ಸಮಾಜಗಳು ಆತಂಕದಲ್ಲಿದ್ದಾಗ ಈ ವಿಶ್ವವಿದ್ಯಾಲಯ ಅಂತಃಕರಣದಿಂದ ಕಾರ್ಯೋನ್ಮುಖವಾಗಿರುವುದನ್ನು ನೋಡಿದ್ದೇವೆ. ಅಲ್ಲಿಯ ಹಲವು ಅಧ್ಯಾಪಕರ ಸಾಮಾಜಿಕ ದೃಷ್ಟಿಕೋನ ಮತ್ತು ಅವರ ಸಂಶೋಧನೆಗಳು ವಿವಿಯೊಂದರ ಪ್ರಾಧ್ಯಾಪಕರು ಹೀಗೂ ಕೆಲಸ ಮಾಡಬಹುದು ಎಂಬುದಕ್ಕೆ ಉದಾಹರಣೆ ಕೊಡುವಷ್ಟು ಜನಪರವಾಗಿವೆ. ಇದರ ಜೊತೆಗೆ ಕನ್ನಡ ವಿವಿ ಕೊಡಮಾಡುವ `ನಾಡೋಜ’ ಎಂಬ ಗೌರವ ಪ್ರಶಸ್ತಿ ಮೊದಲಿಂದಲೂ ಎಲ್ಲರ ಗಮನ ಸೆಳೆಯುತ್ತ ಬಂದಿದೆ. ಕುವೆಂಪು ಹೆಸರು ಹೇಳಿಕೊಂಡು ಅಸ್ತಿತ್ವಕ್ಕೆ ಬಂದ ವಿಶ್ವವಿದ್ಯಾಲಯವೊಂದು ಕಾರ್ಪೋರೇಟ್ ಗುರು ರವಿಶಂಕರಿನಿಗೆ ಗೌರವ ಡಾಕ್ಟರೇಟ್ ಕೊಟ್ಟರೆ, ಅದೇ ವರ್ಷ ಕನ್ನಡ ವಿವಿ ಸಾವಯವ ಕೃಷಿಕ ಎಲ್ ನಾರಾಯಣರೆಡ್ಡಿ ಎಂಬ ಸಾಮಾನ್ಯ ಕೃಷಿಕನಿಗೆ `ನಾಡೋಜ’ ಗೌರವ ಪ್ರಶಸ್ತಿ ಕೊಟ್ಟು ಜನರ ಗಮನ ಸೆಳೆಯಿತು.

1995ರಿಂದ ಕುವೆಂಪು, ನಿಜಲಿಂಗಪ್ಪ ಮತ್ತು ಗಂಗೂಬಾಯಿ ಹಾನಗಲ್ ಅವರಿಗೆ `ನಾಡೋಜ’ ಗೌರವ ಪ್ರದಾನ ಮಾಡುವ ಮೂಲಕ ಕನ್ನಡ ವಿವಿ ತನ್ನ ಘಟಿಕೋತ್ಸವಗಳನ್ನು ಆಚರಿಸಿಕೊಂಡು ಬಂದಿದೆ. ನಂತರ, ಡಾ. ರಾಜಕುಮಾರ್, ಪಾಟೀಲ್ ಪುಟ್ಟಪ್ಪ, ಪುತಿನ, ಶಿವರಾಮ ಕಾರಂತ, ಕರೀಂ ಖಾನ್, ಎಚ್ ನರಸಿಂಹಯ್ಯ, ಷೇಕ್ ಆಲಿ, ಪುಟ್ಟರಾಜ ಗವಾಯಿಗಳು, ಜಾರ್ಜ್ ಮಿಶಲ್, ಎ ಎನ್ ಮೂರ್ತಿರಾವ್, ಜಿಎಸ್ಎಸ್, ಕಂಬಾರ್, ಸುಭದ್ರಮ್ಮ ಮನ್ಸೂರ್, ಚಿದಾನಂದ ಮೂರ್ತಿ, ಸಿರಿಯಜ್ಜಿ, ದರೋಜಿ ಈರಮ್ಮ, ಏಣಗಿ ಬಾಳಪ್ಪ, ಜಿ ವೆಂಕಟಸುಬ್ಬಯ್ಯ, ಕಯ್ಯಾರ ಕಿಞ್ಞಣ್ಣ ರೈ, ಶಾಂತರಸ, ಡಾ. ಸಿದ್ದಲಿಂಗಯ್ಯ, ಎಲ್ ಬಸವರಾಜು, ಅನಂತಮೂರ್ತಿ, ಡಿ ಎನ್ ಶಂಕರಭಟ್ಟ, ವಿ ಟಿ ಕಾಳೆ, ಬರಗೂರು ರಾಮಚಂದ್ರಪ್ಪ, ಹರಿಜನ ಪದ್ಮಮ್ಮ, ಪಿ ಬಿ ಶ್ರೀನಿವಾಸ್, ಎಸ್ ಎಲ್ ಭೈರಪ್ಪ, ದೇವನೂರು ಮಹಾದೇವ, ಕೆ ಪಿ ರಾವ್, ಬೆಳಗಲ್ಲು ವೀರಣ್ಣ, ಸಂತೋಷ್ ಹೆಗಡೆ, ಕೋ ಚನ್ನಬಸಪ್ಪ, ಸಿ ಎನ್ ಆರ್ ರಾವ್, ರಾಜೀವ್ ತಾರಾನಾಥ್ ಮತ್ತು ತಮಟೆ ಕಲಾವಿದ ಮುನಿವೆಂಕಟಪ್ಪನಂತಹ ಪ್ರತಿಭಾವಂತರಿಗೆ ಇಲ್ಲಿಯವರೆಗೆ ನಾಡೋಜ ಪ್ರದಾನ ಮಾಡಲಾಗಿದೆ. ಅಲ್ಲಿಂದ ಕಳೆದ ಇಪ್ಪತ್ತಾರು ವರ್ಷಗಳಲ್ಲಿ ಈ `ನಾಡೋಜ’ ಗೌರವ ಪ್ರಶಸ್ತಿ ನೀಡುವಲ್ಲಿ ಹಲವು ಬದಲಾವಣೆಗಳಾಗುತ್ತಾ ಬಂದಿವೆ. ಈ ಗೌರವ ಪ್ರಶಸ್ತಿಯನ್ನು ನೀಡುವ ಆರಂಭದಲ್ಲಿ ಕನ್ನಡ ವಿವಿಯು ಈ ಮುಖ್ಯ ಉದ್ದೇಶಗಳನ್ನು ಇಟ್ಟುಕೊಂಡಂತಿದೆ. 1. ಕನ್ನಡ ನಾಡನ್ನು ತನ್ನ ಅನನ್ಯ ಪ್ರತಿಭೆಯಿಂದ ಎತ್ತರಕ್ಕೊಯ್ದ, 2. ತನ್ನ ಸೋಪಜ್ಞ ವ್ಯಕ್ತಿದ ಮೂಲಕ ಕನ್ನಡ ನಾಡು ನುಡಿಯ ಬೆಳವಣಿಗೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ, 3. ನಾಡಿನ ಹಲವು ಸಮಾಜಗಳ ಪರಂಪರೆಯ ಸಾರವನ್ನು ಹೀರಿ ಕನ್ನಡ ನಾಡು ಮತ್ತು ವಾಂಙ್ಮಯವನ್ನು ಕಟ್ಟಿದ, 4. ನಾಡಿನ ಜನರ ಬದುಕನ್ನು ಬದಲಿಸುವ ನಿಟ್ಟಿನಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾದವರಿಗೆ ವಿಶ್ವವಿದ್ಯಾಲಯ ಈ ಗೌರವ ಪದವಿಯನ್ನು ನೀಡುತ್ತಾ ಬಂದಿದೆ.

ಆದರೆ ಕಳೆದ ಏಳೆಂಟು ವರ್ಷಗಳಲ್ಲಿ ಅನೇಕ ಅಪಾತ್ರರಿಗೂ ಈ ಗೌರವ ಪದವಿಯನ್ನು ನೀಡಲಾಗಿದೆ ಮತ್ತು `ನಾಡೋಜ’ ಪದವಿಗೇ ಅವಮಾನ ಮಾಡಲಾಗಿದೆ. ದೂರದರ್ಶನದ ನಿರ್ದೇಶಕನಾಗಿದ್ದುಕೊಂಡು ತನ್ನ ಅಧೀನ ನೌಕರರಿಗೆ ಸದಾ ಕಿರಿಕುಳ ಕೊಟ್ಟ ದೂರ್ತನಿಗೆ, ಕೆಪಿಎಸ್ಸಿಯಲ್ಲಿ ಅನೇಕ ಲಂಚ ಪ್ರಕರಣದ ರುವಾರಿಯಾಗಿದ್ದ ಐಎಎಸ್ ಅಧಿಕಾರಿಗೆ, ಕನ್ನಡವೇ ಬಾರದ ಸಾಮಾನ್ಯ ದರ್ಜೆಯ ಕ್ರಿಕೆಟ್ ಆಟಗಾರನಿಗೆ, ಪ್ರತಿಭಾವಂತಳಲ್ಲದ ಒಬ್ಬ ಸುಗಮ ಸಂಗೀತ ಹಾಡುಗಾರ್ತಿಗೆ `ನಾಡೋಜ’ ಪದವಿ ಕೊಟ್ಟಾಗ ಕನ್ನಡ ನಾಡಿನ ಜನರಲ್ಲಿ ಮೊದಲ ಬಾರಿಗೆ ಈ ಗೌರವ ಪ್ರಶಸ್ತಿಯ ಕುರಿತು ಹೇಸಿಗೆ ಹುಟ್ಟಿತು. ಮಂಗಳೂರು ಕಡೆಯ ಕಟ್ಟಡ ಕಟ್ಟುವ ಗುತ್ತಿಗೆದಾರನೊಬ್ಬನಿಗೆ `ನಾಡೋಜ’ ಪದವಿ ಕೊಟ್ಟಾಗ ನಾಡು ತತ್ತರಿಸಿ ಹೋಯಿತು. ಸದರಿ ವರ್ಷ ಇಲ್ಲಿಯವರೆಗೆ ಯಾರೂ ಅರಿಯದ ಒಬ್ಬ ನಿವೃತ್ತ ಕೆಎಎಸ್ ಅಧಿಕಾರಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಹಾಲಿ ಅಧ್ಯಕ್ಷನಿಗೆ ಪ್ರತಿಷ್ಟಿತ `ನಾಡೋಜ’ ಗೌರವ ಪದವಿಯನ್ನು ನೀಡಲಾಗಿದೆ.

ಈ ಅತ್ಯುನ್ನತ ಪ್ರಶಸ್ತಿಯ ಇಂತಹ ಘೋರ ಅವಸಾನಕ್ಕೆ ಕಾರಣಗಳೇನು? ಎಂಬುದನ್ನು ಅರಿಯಲು ಕನ್ನಡ ವಿವಿಯ ನಿವೃತ್ತ ಕುಲಪತಿಯೊಬ್ಬರನ್ನು ಸಂಪರ್ಕಿಸಲಾಯಿತು. ಅವರು ಕೊಟ್ಟ ಕಾರಣಗಳು ಹೀಗಿವೆ. 1. ಸ್ವಂತಿಕೆ ಇಲ್ಲದ, ರಾಜಕೀಯ ವಶೀಲಿಬಾಜಿಯ ಮೂಲಕ ಇತ್ತೀಚಿಗೆ ಹಲವರು ವಿವಿಯ ಕುಲಪತಿಗಳಾಗಿ ಬಂದದ್ದು. 2. 2009ರಿಂದ ಈಚೆಗೆ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರು ಕನ್ನಡ ವಿವಿಯ ಉದ್ದೇಶಗಳನ್ನೇ ಗಾಳಿಗೆ ತೂರಿ ಆಡಳಿತವನ್ನು ದಿಕ್ಕುತಪ್ಪಿಸಿದ್ದು, 3. ವಿಪರೀತ ರಾಜಕೀಯ ಮಧ್ಯಪ್ರವೇಶ, 4. ಕರ್ನಾಟಕದ ಬಗ್ಗೆ ಏನೂ ಗೊತ್ತಿಲ್ಲದ ರಾಜ್ಯಪಾಲರುಗಳು ತಮ್ಮ ಸುತ್ತ ಇರುವ ಮಧ್ಯವರ್ತಿಗಳ ಮಧ್ಯಪ್ರವೇಶದ ಕಾರಣಕ್ಕಾಗಿ ಅನೇಕರಿಗೆ ಈ ಗೌರವ ಪ್ರಶಸ್ತಿ ನೀಡುವಂತೆ ಮಾಡಿದ್ದು, 5. ಕನ್ನಡ ವಿವಿಯ ಸ್ವಾಯತ್ತತೆಯನ್ನು ರಾಜ್ಯಪಾಲರ ಕಛೇರಿ ಕಿತ್ತುಕೊಂಡದ್ದು. ಅದರಲ್ಲೂ ವಿಶ್ವವಿದ್ಯಾಲಯ ಒಂದು ಸ್ವಾಯತ್ತ ಸಂಸ್ಥೆ ಎಂಬುದನ್ನು ಮರೆತ ರಾಜ್ಯಪಾಲರು `ನಾಡೋಜ’ ಪದವಿ ಪಡೆಯುವವರ ಪಟ್ಟಿಯನ್ನು ಅಖೈರು ಮಾಡುವ ಅಧಿಕಾರವನ್ನು ತನಗೆ ವರ್ಗಾಯಿಸಿಕೊಂಡದ್ದು. 6. ಕನ್ನಡ ವಿವಿಯ ಕುಲಪತಿಯಾದವರು ರಾಜ್ಯಪಾಲರನ್ನು ಓಲೈಸುವ ಕಾರಣಕ್ಕಾಗಿಯೇ ವಿಶ್ವವಿದ್ಯಾಲಯದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಕಾರಣಗಳನ್ನು ನೀಡಿದರು.

ಒಂದು ಸ್ವಾಯತ್ತ ಸಾರ್ವಜನಿಕ ಸಂಸ್ಥೆಯ ಆಶಯಗಳನ್ನು ಯಾವ ಸ್ವಂತಿಕೆ ಇಲ್ಲದ, ಅಧಿಕಾರದಾಹಿ ಆಡಳಿತ ವರ್ಗ ಮತ್ತು ಸರಕಾರ ಹೇಗೆ ಮಣ್ಣುಮುಕ್ಕಿಸುತ್ತವೆ ಎಂಬುದನ್ನು ಈ ನಾಡೋಜ ಪದವಿಗೆ ಬಂದ ದುರ್ಗತಿಯ ಮೂಲಕ ಅರ್ಥ ಮಾಡಿಕೊಳ್ಳಬಹುದು. ಈ ವರ್ಷ ನಾಡೋಜ ಪದವಿ ಪಡೆದ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯನೂ ಆಗಿದ್ದಾನೆ. ಒಂದು ವಿವಿಯ ಪ್ರಭಾವಿ ಸಮಿತಿಯ ಸದಸ್ಯನಾಗಿದ್ದುಕೊಂಡು ಆತ ಅದೇ ವಿಶ್ವವಿದ್ಯಾಲಯದ ಪ್ರತಿಷ್ಟಿತ ಪದವಿಯನ್ನು ತೆಗೆದುಕೊಳ್ಳಬಾರದು ಎಂಬ ಸಾಮಾನ್ಯ ಜ್ಞಾನವನ್ನಾದರೂ ಪ್ರಕಟಿಸಿ ಪ್ರಶಸ್ತಿಯನ್ನು ನಿರಾಕರಿಸಬಹುದಿತ್ತು. ತಾಂತ್ರಿಕವಾಗಿ ಮತ್ತು ನೈತಿಕವಾಗಿ ತಾನು ಈ ಪ್ರಶಸ್ತಿಯನ್ನು ತೆಗೆದುಕೊಳ್ಳಬಾರದು ಎಂಬ ನಿಲುವಿಗೆ ಪ್ರಶಸ್ತಿ ಪುರಸ್ಕೃತರು ಬದ್ಧರಾಗಬೇಕಿತ್ತು. ಇಲ್ಲವೆ, ಜಗತ್ತು ಹುಟ್ಟುವ ಮೊದಲೇ ಚಳುವಳಿಗಳನ್ನು ಕಟ್ಟಿ ಅಸ್ತಿತ್ವಕ್ಕೆ ತಂದ ಆ ವಿವಿಯ ಕುಲಪತಿಗಾದರೂ ಈ ಸಾಮಾನ್ಯ ಜ್ಞಾನ ಕೆಲಸ ಮಾಡಬೇಕಿತ್ತು. ಕನ್ನಡ ದೇಶದಲ್ಲಿ ಅನೇಕ ಪ್ರತಿಭಾವಂತ ಅಜ್ಞಾತ ಜನಪದ ಕಲಾವಿದರಿದ್ದಾರೆ. ಕನ್ನಡ ನಾಡು ನುಡಿ, ಜನ ಸಾಮಾನ್ಯರ ನೋವುಗಳ ಭಾಗವಾಗಿ ಇಂದಿಗೂ ಹೋರಾಟಗಳ ಮುಂಚೂಣಿಯಲ್ಲಿರುವ ಸೂಕ್ಷ್ಮಸಂವೇದಿ ವ್ಯಕ್ತಿಗಳಿದ್ದಾರೆ. ಹಾಗೆ ನೋಡಿದರೆ, ನಾಡೋಜ ಪ್ರಶಸ್ತಿಗೆ ನಿಜಕ್ಕೂ ಅರ್ಹರಾದ ಎಚ್ ಎಸ್ ದೊರೆಸ್ವಾಮಿ, ಜಿ ರಾಮಕೃಷ್ಣ, ಎಚ್ ಎಸ್ ವೆಂಕಟೇಶ್ಮೂರ್ತಿ, ಕೋಟಗಾನಹಳ್ಳಿ ರಾಮಯ್ಯ, ವೈದೇಹಿ, ಸಿದ್ಧಗಂಗಾ ಶ್ರೀಗಳಂತಹ ಮಹಾನುಭಾವರು ಇವರ ಇವರ ಕಣ್ಣಿಗೆ ಬೀಳುವುದೇ ಇಲ್ಲ!

ಪ್ರಶಸ್ತಿಗಳಿಗೆ ಯಾವ ಬೆಲೆಯೂ ಉಳಿದಕೊಂಡಿರದ ಇಂದಿನ ದಿನಮಾನದಲ್ಲಿ ಯಾವುದೋ ಗೌರವ ಪ್ರಶಸ್ತಿಯ ಕುರಿತು ಯಾಕಾಗಿ ಚರ್ಚಿಸಬೇಕು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ, ಪ್ರಶಸ್ತಿ ನೀಡುವವರ ಮತ್ತು ತೆಗೆದುಕೊಳ್ಳುವವರ ಸಾಮಾಜಿಕ ಲಜ್ಜೆ ಮತ್ತು ಬದ್ಧತೆಗಳು ನಿರಸನವಾದಾಗ ಇಂತಹ ಸಿನಿಕ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಆದರೆ, ಸಾರ್ವಜನಿಕ ಸಂಸ್ಥೆಗಳು ಮಾತ್ರ ಅಪಾತ್ರರ ಕೈಗೆ ಸಿಕ್ಕು ಸಂಕುಚಿತಗೊಳ್ಳುತ್ತಿರುವಾಗ ಪ್ರಶ್ನೆ ಮಾಡದೆ ಸುಮ್ಮನಿರುವುದೂ ಅತ್ಯಂತ ಅಪಾಯಕಾರಿ ನಿಲುವು. 1964ರಲ್ಲಿ ತನ್ನ 59ನೇ ವಯಸ್ಸಿನಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದ ಜೀನ್ಪಾಲ್ ಸಾತ್ರ್ರೆ ‘ಸಾಂಸ್ಥಿಕ ಪ್ರಶಸ್ತಿಗಳು ನನ್ನ ಬರಹದ ರಾಜಕೀಯ ಸೂಕ್ಷ್ಮತೆಯನ್ನು ಕಡಿಮೆ ಮಾಡಿಬಿಡಬಹುದಾದ ಕಾರಣಕ್ಕಾಗಿ ನಾನು ಈ ನೋಬೆಲ್ ಪ್ರಶಸ್ತಿಯನ್ನು ತಿಸ್ಕರಿಸುತ್ತಿದ್ದೇನೆ’ ಎನ್ನುತ್ತಾನೆ. ಈ ಅರ್ಥದಲ್ಲಿ ಜೀನ್ಪಾಲ್ ಸಾತ್ರ್ರೆ ಮತ್ತು ನೋಬೆಲ್ ಬಹುಮಾನಕ್ಕೆ ಆತನನ್ನು ಆಯ್ಕೆ ಮಾಡಿದ ಸಮಿತಿ ಏಕಕಾಲಕ್ಕೆ ನಮ್ಮ ಮುಂದೆ ಒಂದು ಅನನ್ಯ ಮಾದರಿಯನ್ನು ಮುಂದಿಟ್ಟಿದ್ದಾರೆ. ಈ ತರಹದ ಲಜ್ಜೆ ನಮ್ಮಲ್ಲಿ ಸದಾ ಎಚ್ಚರವಿದ್ದಲ್ಲಿ ಸಾರ್ವಜನಿಕ ಸಂಸ್ಥೆಗಳ ಆರೋಗ್ಯವನ್ನೂ ಸುಧಾರಿಸಬಹುದು.


- ಡಾ.ವಡ್ಡಗೆರೆ ನಾಗರಾಜಯ್ಯ

19 views0 comments

Comments


bottom of page