top of page

ಗೇಯ್ ದೆ ಮುಪಾಸ್ಸಾ

ಮುಗ್ಧ ಮನಸ್ಸಿನ ಬಂಡಾಯದ ಲೇಖಕ

ನೊಂದವರ ದನಿಯಾಗಿ ಸಮಾಜದ ಓರೆಕೋರೆಗಳನ್ನು ಟೀಕಿಸಿದ ಮಹತ್ವದ ಕಥೆಗಾರ

ನಾರಾಯಣ ಯಾಜಿಸಾಹಿತ್ಯಲೋಕದ ಅಧ್ಯಯನ ನಡೆಸುವಾಗ ಪ್ರೆಂಚ್ ಸಾಹಿತ್ಯವನ್ನು ಬಿಟ್ಟು ಆಲೋಚಿಸಲು ಸಾಧ್ಯವಾಗುವದೇ ಇಲ್ಲ. ವಿಕ್ಟರ್ ಹ್ಯುಗೋ, ಆಲ್ಬರ್ಟ್ ಕಾಮು, ವಾಲ್ಟೈರ್, ಗುಸ್ತೇವ್ ಪ್ಲೇಬರ್ಟ್, ಜೀನ್ ಪಾಲ್ ಸಾತ್ರೆ ಹೀಗೆ ಹಲವಾರು ಲೇಖಕರ ಹೆಸರು ಬರುತ್ತದೆ. ಪ್ರೆಂಚ್ ಕಥಾಲೋಕದ ಹಂದರವೇ ವಿಶಿಷ್ಠವಾದುದು. ಇಲ್ಲಿನ ಕಥೆಗಳಲ್ಲಿ ಇಂಗ್ಲೆಂಡಿನವರಂತೆ ಪ್ರಕೃತಿಯ ಪ್ರೇಮಕ್ಕಿಂತ ಒಂದುರೀತಿಯಲ್ಲಿ ಬಂಡಾಯದ ಬಿಸಿ ಇರುತ್ತದೆ. ಹಾಗಂತ ವ್ಯವಸ್ಥೆಯನ್ನು ನೇರವಾಗಿ ದಿಕ್ಕರಿಸುವದಿಲ್ಲ, ಒಂದುರೀತಿ ವಿಡಂಬಡೆನೆಯೊಂದಿಗೆ ಸಮಾಜದ ಊನಕೋನವನ್ನು ಹಿಂಜುತ್ತಾ ಓದುಗರನ್ನು ಚಿಂತನೆಗೆ ಹಚ್ಚುವ ಈ ನಡೆಯಿಂದಾಗಿ ಪ್ರೆಂಚ್ ಸಾಹಿತ್ಯ ಊಳಿಗಮಾನ್ಯದ ವಿರುದ್ಧದ ಹೋರಾಟಗಾರರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರೇರಣೆ ನೀಡುತ್ತಲೇ ಬಂದಿದೆ. ಇಲ್ಲಿನ ಪಾತ್ರಗಳ ಬದುಕಿನ ಪ್ರೇಮ, ತಮ್ಮ ತಮ್ಮ ಅಸ್ತಿತ್ವದ ಗುರುತಿಸುಕೊಳ್ಳುವಿಕೆಯ ಲಕ್ಷಣಗಳು ಓದುಗರನ್ನು ಕಥೆಯಲ್ಲಿ ಲೀನವಾಗುವಂತೆ ಮಾಡುತ್ತವೆ. ಇಂತಹ ಸಾಹಿತ್ಯಗಳಲ್ಲಿ ಮರೆಯಲಾರದ ಹೆಸರು ‘ಗೇಯ್ ದೆ ಮುಪಾಸ್ಸಾಂ’ ನದ್ದು. ಈತನ ಪೂರ್ತಿ ಹೆಸರು ‘ಹೆನ್ರಿ-ರೇನ್-ಆಲ್ಬರ್ಟ್-ಗೇಯ ಮುಪಾಸಾಂ(ಟ್)’. ಸಾಮರ್ಸೆಟ್ ಮಾಮ್, ಓ ಹೆನ್ರಿ, ಲಿಯೋ ಟಾಲ್ಸ್ಟಾಯ ಮೊದಲಾದವರ ಮೇಲೆ ಪ್ರಭಾವ ಬೀರಿದ ಕತೆಗಾರ ಈತ. ಆಧುನಿಕಸಣ್ಣಕತೆಗಳ ಪಿತಾಮಹ ಎಂದೇ ಈತನನ್ನು ವರ್ಣಿಸಲಾಗುತ್ತಿದೆ. ಟಾಲ್ಸ್ಟಾಯ ಈತನನ್ನು ಎರಡನೇ ಶೇಕ್ಸ್ಫಿಯರ್ ಎಂದೇ ತನ್ನದೊಂದು ಪ್ರಬಂಧ “The works of Guy de Maupassant” ದಲ್ಲಿ ವರ್ಣಿಸಿದ್ದಾನೆ.

ಮುಪಾಸ್ಸಾಂಟ್ ಅಗಷ್ಟ 5, 1850ರಲ್ಲಿ ಪ್ರಾನ್ಚಿನ ಕ್ಯಾಸ್ಟ್ಲ್ ಮಿರೊಮೆಸ್ನಿಲ್ ಎನ್ನುವ ಊರಿನಲ್ಲಿ ಜನಿಸಿದ. ಇದು ಆ ದೇಶದ ಜೀವನದಿಯಾದ ಸಿಯೆನ್ನಾದ ದಂಡೆಯ ಮೇಲೆ ಇದೆ. ಈತನ ತಂದೆ ಗುಸ್ತೇವ್ ದೆ ಮುಪಾಸ್ಸಾಂಟ್, ತಾಯಿ ಲಾರಾ ಲೆ ಪೊಟ್ಟೇವಿನ್. ಇಬ್ಬರೂ ಇಂಗ್ಲೀಷ ಕಾಲುವೆಯಿಂದ ವಲಸೆ ಬಂದ ನಾರ್ಮನ್ ಕುಟುಂಬಕ್ಕೆ ಸೇರಿದವರಾಗಿದ್ದರು. ಇದು ಮೇಲ್ ಮದ್ಯಮವರ್ಗಕ್ಕೆ ಸೇರಿದ ಕುಲೀನ ಮನೆತನವಾಗಿತ್ತು. ಈತನಿಗೆ ಹಾರ್ವೆ ಎನ್ನುವ ಬುದ್ಧಿಮಾಂದ್ಯ ತಮ್ಮನೂ ಇದ್ದ. ಈತನ ತಾಯಿ ಲಾರಾ ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿದ ಮಹಿಳೆಯಾಗಿದ್ದಳು. ಸಾಹಿತ್ಯ, ತತ್ವಶಾಸ್ತ್ರಮುಂತಾದವುಗಳನ್ನೆಲ್ಲಾ ಚನ್ನಾಗಿ ಓದಿಕೊಂಡಿದ್ದಳು. ಆ ಕುರಿತು ತುಂಬಾ ಆಸಕ್ತಿಯನ್ನೂ ಹೊಂದಿದ್ದಳು. ವಿಶೇಷವಾಗಿ ಶೇಕ್ಸ್ಪಿಯರ್ ಆಕೆಯ ಮೆಚ್ಚಿನ ಲೇಖಕನಾಗಿದ್ದ. ಈ ಮನೋಭಾವ ಆ ದಂಪತಿಗಳಲ್ಲಿ ಹೊಂದಾಣಿಕೆಯಾಗಲಿಲ್ಲ. ಅವರಿಬ್ಬರ ದಾಂಪತ್ಯಜೀವನ ಮುರಿದುಬಿತ್ತು. ಆಗ ಮುಪಾಸ್ಸಾಂಟ್ನಿಗೆ ಹನ್ನೊಂದು ವರ್ಷ. ತಮ್ಮನಿಗೆ ಆಗ 5 ವರ್ಷಗಳಾಗಿತ್ತು. ತಾಯಿಯೇ ಮಕ್ಕಳಲ್ಲಿ ಸಾಹಿತ್ಯಪ್ರೇಮವನ್ನು ಬೆಳೆಸಿದಳು. ಹದಿಮೂರು ವರ್ಷಗಳತನಕ ಬಾಲಕ ತಾಯಿಯೊಟ್ಟಿಗೆ ‘ಎಟ್ರೇಟ್ಯಾಟ್” ಎನ್ನುವಲ್ಲಿ ಸುಖವಾಗಿಯೇ ಬೆಳೆದ. ಈ ಊರು ಸಮುದ್ರ ಮತ್ತು ಹಸುರಿನ ಗಿಡಗಳಮದ್ಯೆ ಇತ್ತು. ಬಾಲಕನಿಗೆ ಮೀನುಹಿಡಿಯುವ ಹವ್ಯಾಸವಿತ್ತು. ಮಜವಾಗಿಯೇ ಕಾಲಕಳೆಯುತ್ತಿದ್ದ. ಈ ಇಬ್ಬರು ಮಕ್ಕಳನ್ನೂ ಲಾರಾ ಸ್ಥಳೀಯ ಚರ್ಚಿನ ಶಾಲೆಯೊಂದಕ್ಕೆ ಸೇರಿಸಿದಳು. ಸ್ವತಂತ್ರ ವಾತಾವರಣದಲ್ಲಿ ಬೆಳೆದ ಬಾಲಕನಿಗೆ ಈ ಧಾರ್ಮಿಕ ಶಾಲೆ ಹಿಡಿಸಲಿಲ್ಲ. ಎಲ್ಲದನ್ನೂ ಪ್ರಶ್ನಿಸುವ ಮನೋಭಾವವನ್ನು ಹೊಂದಿದ್ದ ಈತನಿಂದ ಶಾಲೆಯ ಅಧ್ಯಾಪಕರಿಗೂ ಕಿರಿಕಿರಿಯಾಗತೊಡಗಿತು ಹಾಗಾಗಿ ಶಾಲೆಯಿಂದ ಹೊರಹಾಕಲ್ಪಟ್ಟ. ಆ ಕಾಲದ ಯುರೋಪ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಹೊರಳು ದಾರಿಯಲ್ಲಿತ್ತು. ಔದ್ಯಮಿಕ ಕ್ರಾಂತಿಯಪರಿಣಾಮವಾಗಿ ಜನರಲ್ಲಿ ಎಲ್ಲದಕ್ಕೂ ಪ್ರಶ್ನಿಸುವ ಮತ್ತು ಹೊಸದರ ಕುರಿತಾದ ತುಡಿತ ಸಾಮಾನ್ಯವಾಗಿತ್ತು.

ಅಲ್ಲಿಂದ ‘ಲೇ ಹಾರ್ವೆ’ ಎನ್ನುವಲ್ಲಿ ತನ್ನ ಹಾಯ್ಸ್ಕೂಲ್ ಶಿಕ್ಷಣವನ್ನು ಮತ್ತು ಡಿಪ್ಲೋಮಾವನ್ನು ಮುಗಿಸಿ 1869ರಲ್ಲಿ ಕಾನೂನು ಓದಲಿಕ್ಕೆಂದು ಪ್ಯಾರಿಸ್ಸಿಗೆ ಬಂದ. ಆ ಕಾಲದ ಪ್ರಸಿದ್ಧ ಫ಼್ರೆಂಚ್ ಸಾಹಿತಿ ‘ಗುಸ್ತೇವ್ ಫ಼್ಲೇಬರ್ಟ್ಟ್’ ತಾಯಿ ಲಾರಾಳ ನಿಕಟ ಸ್ನೇಹಿತನಾಗಿದ್ದ. ಬಾಲಕ ಮುಪಾಸ್ಸಾಂಟನನ್ನು ಈ ಕಾದಂಬರಿಕಾರನೊಟ್ಟಿಗೆ ಬಿಟ್ಟಳು. ಆತ ಮುಪಾಸ್ಸಾಂಟನಲ್ಲಿಯೂ ಕೂಡಾ ಸಾಹಿತ್ಯಾಸಕ್ತಿಯನ್ನು ಬೆಳೆಸಿದ. ಸಾಹಿತ್ಯದ ಭಾಷೆ, ಬಂಧ, ಕತೆಯ ಹದನಗಳನ್ನೆಲ್ಲಾ ಫ಼್ಲೇಬರ್ಟ್ ಈ ಹುಡುಗನಿಗೆ ತಿಳಿಸಿಕೊಡತೊಡಗಿದ. ಆ ಕಾಲದ ಪ್ರಸಿದ್ಧ ಸಾಹಿತಿಗಳಾದ ಎಮಿಲ್ ಜೋಲಾ ರಷ್ಯನ್ ಸಾಹಿತಿ ಇವಾನ್ ತರ್ಗೆನೇವ್, ಎಡ್ಮಂಡ್ ಗೋಂಕೋರ್ಟ್ ಮತ್ತು ಹೆನ್ರಿ ಜೇಮ್ಸ್ ಮೊದಲಾದವರನ್ನು ಪರಿಚಯಿಸಿದ. ಆ ಸಾಹಿತಿಗಳೆಲ್ಲ ಆಧುನಿಕ ಮನೋಭಾವದವರಾಗಿದ್ದರು. ಸ್ವತಂತ್ರವಿಚಾರಧಾರೆಯಿಂದ ಎಲ್ಲವನ್ನೂ ವಿಮರ್ಶೆ ಮಾಡುತ್ತಿದ್ದರು. “ಈತ ನನ್ನ ಶಿಷ್ಯ, ಇವನನ್ನು ನಾನು ಮಗನಂತೆ ಹಚ್ಚಿಕೊಂಡಿದ್ದೇನೆ” ಎಂದು ಫ಼್ಲೇಬರ್ಟ್ ಮುಪಾಸ್ಸಾಂಟನ ಕುರಿತು ಅವರಿಗೆಲ್ಲಾ ವಿವರಿಸಿದ. ತಂದೆಯಿಂದ ವಂಚಿತನಾದವನಿಗೆ ತಂದೆಯ ಜಾಗದಲ್ಲಿ ನಿಂತು ಅಕ್ಕುಲತೆಯಿಂದ ನೋಡಿ ಬೆಳೆಸಿದವ ಗುಸ್ತೇವ್ ಫ಼್ಲೇಬರ್ಟ್.


ಇದೇ ಸಂದರ್ಭದಲ್ಲಿ ಫ಼್ರಾಂಕೋ ಜರ್ಮನ್ ಯುದ್ಧ ಪ್ರಾರಂಭವಾಯಿತು. ಈ ಕಾರಣದಿಂದಾಗಿ ಕಾಲೇಜುಗಳೆಲ್ಲಾ ಮುಚ್ಚಲ್ಪಟ್ಟವು. ಹಾಗಾಗಿ ಕಾನೂನು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. ಮುಪಾಸ್ಸಾಂಟ್ ಸೈನ್ಯದಲ್ಲಿ ಸ್ವಯಂಸೇವಕನಾಗಿ ಸೇರಿಕೊಂಡು ಯುದ್ಧಭೂಮಿಗೆ ತೆರಳಿದ. ಬಳಿಕ ಯುದ್ಧ ಮುಗಿದಹೊತ್ತಿನಲ್ಲಿ ಆತನಿಗೆ 21ರ ಪ್ರಾಯ. ಪ್ಯಾರಿಸ್ಸಿಗೆ ಮರಳಿದವನೇ ನೌಕಾ ಸೇನೆಯಲ್ಲಿ ಗುಮಾಸ್ತನಾಗಿ ಸೇರಿಕೊಂಡ. ಇಲ್ಲಿಂದ 1878ರವರೆಗೆ ಈತನ ಬದುಕಿನಲ್ಲಿ ವಿಶೇಷ ಘಟನೆಯೇನೂ ನಡೆಯಲಿಲ್ಲ. ರಜಾದಿನಗಳಲ್ಲಿ ಸಿಯೆನ್ನಾ ನದಿಯಲ್ಲಿ ದೋಣಿಸವಾರಿ ಮಾಡುತ್ತಾ ಆರಾಮವಾಗಿ ದಿನಕಳೆಯುತ್ತಿದ್ದ. ಮತ್ತೋರ್ವ ಪ್ರೆಂಚ್ ಸಾಹಿತಿ Emile Zola ಎನ್ನುವವ ಫ಼್ರೆಂಚ್ ಕಾದಂಬರಿಕಾರ ಮೌಪಾಸ್ಸಾಂಟ್ನ ದೋಣಿಸವಾರಿ ಕುರಿತು “ಈತನೋರ್ವ ಅಪ್ರತಿಮ ಹಾಯಿಗಾರ, ತನ್ನ ವಿನೋದಕ್ಕಾಗಿ ಸಿಯೆುನ್ನಾ ನದಿಯಲ್ಲಿ ಒಂದು ದಿನಕ್ಕೆ ಐವತ್ತು ಮೈಲಿಗಳಷ್ಟು ದೋಣಿಯಲ್ಲಿಹುಟ್ಟುಹಾಕಿ ಸಾಗಬಲ್ಲ ಸಾಹಸಿ” ಎಂದೇ ವರ್ಣಿಸಿದ್ದಾನೆ. ಮುಪಾಸ್ಸಾಂಟ್ ನಿಪುಣ ಈಜುಗಾರನಾಗಿದ್ದ. 1868ರಲ್ಲಿ ಪ್ರಾನ್ಸಿನ ಪ್ರಸಿದ್ಧ ಕವಿ ‘ಅಲ್ಗೋರ್ನಾನ್ ಸ್ವಿನ್ಬರ್ನ್’ ‘ಎಟ್ರೇಟ್ಯಾಟ್’ನ ಸಮುದ್ರದಲ್ಲಿ ಮುಳುಗುತ್ತಿರುವಾಗ ಅವನನ್ನು ರಕ್ಷಿಸಿದ್ದ.


ಈತನ ತಂದೆ ತಾಯಿಯ ದಾಂಪತ್ಯ ಮುರಿದು ಬಿದ್ದಿದ್ದರೂ ಮಕ್ಕಳೊಟ್ಟಿಗೆ ಅಪ್ಪನ ಸಂಬಂಧ ಚನ್ನಾಗಿಯೇ ಇತ್ತು. ಹಾಗೇ ಹೀಗೆ ಹೊತ್ತುಕಳೆಯುತ್ತಿದ್ದವನನ್ನು ಅಪ್ಪ ಗುಸ್ತೇವ್ ದ್ ಮುಪಾಸ್ಸಾಂಟ್ ನೇ ತನ್ನ ಪ್ರಭಾವವನ್ನು ಬಳಸಿ ನೌಕಾಸೇನೆಯಲ್ಲಿ ಗುಮಾಸ್ತ ಹುದ್ದೆ ಸಿಗುವಂತೆ ನೋಡಿಕೊಂಡಿದ್ದ. ಅದೂ ಅಲ್ಲದೇ ಅರ್ಧಕ್ಕೆ ನಿಂತಿದ್ದ ಕಾನೂನು ಶಿಕ್ಷಣ ಪೂರ್ತಿಗೊಳ್ಳುವಂತೆ ನೋಡಿಕೊಂಡ. ಕೆಲಸದಲ್ಲಿ ಉಢಾಪೆ ಸ್ವಭಾವವಾಗಿತ್ತು. ನೌಕರಶಾಹಿಯ ಮನೋಭಾವ ಈತನಿಗೆ ಹಿಡಿಸುತ್ತಿರಲಿಲ್ಲ. ಉದ್ಯೋಗದಲ್ಲಿ ಬಡ್ತಿ ಸಿಕ್ಕರೂ ಆ ಕುರಿತು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮತ್ತೆ ಈತನ ತಂದೆ ತನ್ನ ಮನೆತನದ ಪ್ರಭಾವ ಬಳಸಿ ಈತನನ್ನು 1879ರಲ್ಲಿ ಸಾರ್ವಜನಿಕ ಮಾಹಿತಿ ಸಚಿವಾಲಯಕ್ಕೆ ವರ್ಗವಾಗುವಂತೆ ನೋಡಿಕೊಂಡ. ಅಲ್ಲಿ ಈತನಿಗೆ ಫ಼್ರಾನ್ಸಿನ ಪ್ರಸಿದ್ಧ ಪತ್ರಿಕೆಗಳಾದ ‘ಲೇ ಫಿಗ್ಯಾರೊ’ ‘ಗಿಲ್ ಬ್ಲಾಸ್’, ‘ಲೇ ಗೇಲೊಯಿಸ್’ ಮುಂತಾದ ಪತ್ರಿಕೆಗಳಿಗೆ ಪೂರಕ ಸಂಪಾದಕನಾಗಿ ಲೇಖನವನ್ನು ಒದಗಿಸುವ ಅವಕಾಶ ದೊರೆಯಿತು.


ಇದು ಮುಪಾಸ್ಸಾಂಟ್ನ ಬದುಕಿಗೆ ದೊರೆತ ಮುಖ್ಯ ತಿರುವು. ಅಲ್ಲಿಯವರೆಗೆ ಸಾಹಿತ್ಯದಲ್ಲಿ ಆಸಕ್ತಿಯಿದ್ದರೂ ವಿಲಾಸಿ ಜೀವನ ನಡೆಸುತ್ತಿದ್ದವ ಸಾಮಾಜಿಕ ಜವಾಬ್ದಾರಿಯಿಂದ ಬರಹಗಳನ್ನು ಬರೆಯಬೇಕಾದುದನ್ನು ರೂಢಿಸಿಕೊಳ್ಳಬೇಕಾಯಿತು. ‘ಗುಸ್ತೇವ್ ಫ಼್ಲೇಬರ್ಟ್’ನ ಒಡನಾಟದಿಂದ ಬರಹಗಳ ಒಳಹೊರಗನ್ನು ಅರಿತುಕೊಂಡಿದ್ದು ಈಗ ಬರಹರೂಪದಲ್ಲಿ ಹೊರಬಂತು. ಫ಼್ರಾಂಕೋ ಪ್ರಷ್ಯನ್ ಯುದ್ಧದಲ್ಲಿ ಪಾಲ್ಗೊಂಡಿದ್ದರಿಂದ ಯುದ್ಧವೆನ್ನುವದು ಸಾಮಾಜಿಕವಾಗಿ ತರುವ ಬವಣೆಗಳನ್ನು ಅರಿತಿದ್ದ. ಈ ಅನುಭವದ ನೆಲೆಯಲ್ಲಿ “Ball of Fat” (ಫ಼್ರೆಂಚ್ ಭಾಷೆಯಲ್ಲಿ Boule de Suif) ಕೃತಿಯನ್ನು ರಚಿಸಿದ. ಇದನ್ನು ಮುಪಾಸ್ಸಾಂಟನ ಶ್ರೇಷ್ಠ ಕೃತಿ ಎಂದು ಇವತ್ತಿಗೂ ಗುರುತಿಸುತ್ತಾರೆ. ಈ ಕೃತಿ ತುಂಬಾ ಜನಪ್ರಿಯವಾಯಿತು. ಪ್ರಷ್ಯನ್ ಸೇನೆ ಆಕ್ರಮಿಸಿಕೊಂಡ ರೋನ್ ನಿಂದ ಪಾರಾಗಲು ಬಯಸಿ ಒಂದು ಕೋಚಿನಲ್ಲಿ ಪ್ರಯಾಣಿಸುವ ಹತ್ತು ಜನರ ವ್ಯಕ್ತಿತ್ವದ ವಿಡಂಬನೆ ಈ ಕತೆಯಲ್ಲಿದೆ. ಆ ಕಾಲದ ಫ಼್ರೆಂಚ್ ಜನಸಮುದಾಯವನ್ನು ಪ್ರ್ರಾತಿನಿಧಿಕವಾಗಿ ಪ್ರತಿನಿಧಿಸುವ ಧಾರ್ಮಿಕ, ಔದ್ಯಮಿಕ, ಅಂಗಡಿಕಾರ ಹೀಗೆ ಹತ್ತುಜನರ ನಡುವೆ ಓರ್ವ ಸೂಳೆ ಎಲಿಜಾಬೆತ್ ಎನ್ನುವವಳು ಇರುತ್ತಾಳೆ. ಈಕೆಯನ್ನು ಮೊದಮೊದಲು ಎಲ್ಲರೂ ದೂರವಿಡಲು ಬಯಸುತ್ತಾರೆ. ಆದರೆ ಹಸಿವಿನಿಂದ ಕಂಗೆಟ್ಟ ಅವರಿಗೆ ಈಕೆ ಅದು ಹೇಗೋ ಆಹಾರಧಾನ್ಯವನ್ನು ಹುಡುಕಿ ರುಚಿರುಚಿಯಾದ ಅಡುಗೆ ಮಾಡಿ ಬಡಿಸಿದಳೋ, ಅಗ ಈಕೆಯನ್ನು ಓಲೈಸತೊಡಗುತ್ತಾರೆ. ಅವರು ಹೋಗುತ್ತಿದ್ದ ಸಾರೋಟು ಪ್ರಷ್ಯನ್ ಸೇನೆಯವರಿಗೆ ಸಿಕ್ಕುಬಿದ್ದು ಒತ್ತೆಯಾಳುಗಳಾಗುತ್ತಾರೆ. ಸೇನೆಯ ಅಧಿಕಾರಿಗೆ ಸುಂದರಿಯಾದ ಎಲಿಜಾಬೆತಳ ಮೇಲೆ ಕಣ್ಣು ಬೀಳುತ್ತದೆ. ಅವರನ್ನೆಲ್ಲ ಸೆರೆಯಿಂದ ಬಿಡಲು ಈಕೆ ತನ್ನೊಂದಿಗೆ ಮಲಗಬೇಕೆಂಬ ಕರಾರು ಹಾಕುತ್ತಾನೆ. ಈಕೆ ಒಪ್ಪುವದಿಲ್ಲ. ಆದರೆ ಅದುವರೆಗೂ ನೈತಿಕವಾಗಿ ಬದುಕಿನ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದವರೆಲ್ಲಾ ಎಲಿಜಾಬೆತಳಿಗೆ ಆತನೊಟ್ಟಿಗೆ ಮಲಗುವಂತೆ ಒತ್ತಾಯಿಸುತ್ತಾರೆ. ಕ್ಯಾಪ್ಟನ್ ಎಷ್ಟೇ ಒತ್ತಾಯಿಸಿದರೂ ಈಕೆ ತಿರಸ್ಕರಿಸುತ್ತಾಳೆ. ಮೊದಲು ಈಕೆಯ ಈ ನಿರ್ಧಾರದ ಕುರಿತು ಅಭಿಮಾನ ತಾಳಿದ ಪ್ರಯಾಣಿಕರು ದಿನಕಳೆದಂತೆ ತಮ್ಮ ಬಿಡುಗಡೆಗಾಗಿ ಈಕೆಯನ್ನು ಆತನೊಂದಿಗೆ ಮಲಗಲು ಮತ್ತೆ ಮತ್ತೆ ಒತ್ತಾಯಿಸುತ್ತಾರೆ. ಅದಕ್ಕೆ ತಮ್ಮದೇ ಆದ ಅನೇಕ ಧಾರ್ಮಿಕ, ಸಾಮಾಜಿಕ ನೆವಗಳನ್ನು ಹೇಳಿ ಆಕೆಯನ್ನು ಒಪ್ಪಿಸಿ ಕ್ಯಾಪ್ಟನ್ನನ್ನು ತೃಪ್ತಿಪಡಿಸಲು ಬಲವಂತ ಮಾಡುತ್ತಾರೆ. ಕೊನೆಗೆ ಒಪ್ಪಿ ಆತನೊಟ್ಟಿಗೆ ಮಲಗಿ ಮಾರನೆಯ ದಿನ ‘ಲೇ ಹಾರ್ವೆ’ಯತ್ತ ಎಲ್ಲರನ್ನು ಬಿಡಿಸಿಕೊಂಡು ಬರುತ್ತಾಳೆ. ಯಾವಾಗ ಅವರೆಲ್ಲ ತಾವು ಸುರಕ್ಷತವಾಗಿರುವ ತಾಣವನ್ನು ಸೇರಿದರೋ ಮತ್ತೊಮ್ಮೆ ಅವರಲ್ಲಿನ ನೈತಿಕ ಪ್ರಜ್ಞೆ ಜಾಗ್ರತವಾಗುತ್ತದೆ. ಎಲಿಜಾಬೆತಳೊಟ್ಟಿಗೆ ಊಟಮಾಡಲೂ ನಿರಾಕರಿಸುತ್ತಾರೆ. ನಡು ರಾತ್ರಿಯಲ್ಲಿ ಈಕೆಯನ್ನು ಇಳಿಸಿ ಕಂಡಕ್ಟರ್ ಸೀಟಿ ಊದಿ ಮುಂದೆಸಾಗುವಾಗ ವಿಷಣ್ಣವಾಗಿ ಎಲ್ಲರನ್ನು ನೋಡಿ ಎಲ್ಲರಿಗಾಗಿ ಎಲ್ಲವನ್ನು ಕಳಕೊಂಡ ತನ್ನ ಕುರಿತು ಮೌನವಾಗಿ ರೋಧ್ಸುತ್ತಾ ಕ್ರೋಧದಿಂದ ಆ ಸಾರೋಟನ್ನು ನೋಡುವಲ್ಲಿಗೆ ಕತೆ ಮುಕ್ತಾಯವಾಗುತ್ತದೆ. ಮುಪಾಸ್ಸಾ ಇಲ್ಲಿ ಈ ಎಲ್ಲ ಪಾತ್ರಗಳ ಮೂಲಕ ಆ ಕಾಲದ ಪ್ರೆಂಚ್ ಸಮುದಾಯವನ್ನು ಕಟುವಾಗಿ ಟೀಕಿಸಿತ್ತಾನೆ. ಸಮಾಜವೆನ್ನುವದು ಸ್ವಾರ್ಥದ ಮುದ್ದೆ ಎನ್ನುವದು ಈತನ ಕತೆಗಳಲ್ಲಿ ಕಾಣಬಹುದು. ಈ ಮೊದಲನೆಯ ದೀರ್ಘ ಕತೆಯಿಂದಾಗಿ ಆತ ಇಡೀ ಯುರೋಪಿನಲ್ಲೇ ಪ್ರಸಿದ್ಧನಾಗಿಬಿಡುತ್ತಾನೆ.

ಯಾವಾಗ “Ball of Fat” ಈತನಿಗೆ ಹೆಸರು ತಂದುಕೊಟ್ಟಿತೋ ಪತ್ರಿಕೆಗಳು ಈತನ ಬೆನ್ನು ಹತ್ತತೊಡಗುತ್ತವೆ. ತನ್ನ ಉದ್ಯೋಗವನ್ನು ಬಿಟ್ಟು ‘ಗಿಲ್ ಬ್ಲಾಸ್’ ಮತ್ತು ‘ಲೇ ಗೇಲೊಯಿಸ್’ ಪತ್ರಿಕೆಗಳಿಗೆ ಲೇಖನವನ್ನು ಬರೆಯಲು ಒಪ್ಪಿಕೊಳ್ಳುತ್ತಾನೆ 1880 ರಿಂದ 1890 ಮುಪಾಸಾಂನ ಜೀವನದಲ್ಲಿ ಮಹತ್ವದ ದಿನಗಳು. ಈ ಅವಧಿಯಲ್ಲಿ ಆತ ಮುನ್ನೂರಕ್ಕೂ ಹೆಚ್ಚು ಸಣ್ಣ ಕತೆಗಳು, ಆರು ಕಾದಂಬರಿ ಮೂರು ಪ್ರವಾಸ ಕಥನಗಳನ್ನು ಬರೆಯುತ್ತಾನೆ. ಈತನ ಬರಹಗಳಲ್ಲಿ ಸ್ತ್ರೀ ಪಾತ್ರಗಳು ಗಮನ ಸೆಳೆಯುತ್ತವೆ. ‘ದ ನೆಕ್ಲೆಸ್’ ಇರಬಹುದು, ‘piece of string’ ಇರಬಹುದು ಇಲ್ಲೆಲ್ಲಾ ಯುದ್ಧ ಮತ್ತು ಔದ್ಯಮಿಕ ಕ್ರಾಂತಿಯ ಪರಿಣಾಮ ಯುರೋಪು ಸಹಿತವಾದ ಪ್ರೆಂಚ ಸಮಾಜದಲ್ಲಿನ ಮಹಿಳೆಯರ ಶೋಷಣೆಯನ್ನು ಮಹಿಳಾ ಪಾತ್ರಗಳ ಮೂಲಕವೇ ಕಟುವಿಮರ್ಶೆಗೆ ಒಳಪಡಿಸುತ್ತಾನೆ. “Useless beauty” ಯಲ್ಲಂತೂ ಪುರುಷರ ಲೈಂಗಿಕ ದಬ್ಬಾಳಿಕೆಯ ವಿರುದ್ಧ ಗ್ಯಾಬ್ರಿಯಲ್ ಆಯ್ದುಕೊಂಡ ಮಾರ್ಗ ವಿಶಿಷ್ಠವಾದದ್ದು. ಇಲ್ಲೆಲ್ಲಾ ಮುಪಾಸ್ಸಾಂಟನ ತಾಯಿ ಅವಳ ಬದುಕಿನಲ್ಲಿ ಅನುಭವಿಸಿರಬಹುದಾದ ಅನುಭವವನ್ನು ಸೂಕ್ಷ್ಮವಾಗಿ ಕಾಣಬಹುದು. ಹಾಗಂತ ಕೇವಲ ವಿಡಂಬನೆಯೊಂದೇ ಅವನ ಕಥೆಗಳ ವಸ್ತುವಲ್ಲ. ದಾಂಪತ್ಯದ ನಿಷ್ಕಾಮ ಪ್ರೀತಿಯಕುರಿತೂ ಆತ ಬರೆದಿದ್ದಾನೆ. ಸಾಮಾಜಿಕ ಕಳಕಳಿ ಈತನಲ್ಲಿ ತುಂಬಾ ಇತ್ತು. ಆ ಕಾಲದ ಚಿಂತಕರೊಂದಿಗೆ ಸೇರಿ ಪ್ರಸಿದ್ಧ ಐಫ಼ೆಲ್ ಗೋಪುರದ ನಿರ್ಮಾಣವನ್ನು ವಿರೋಧಿಸಿ ಸರಕಾರಕ್ಕೆ ಪತ್ರಬರೆದು ಪ್ರತಿಭಟಿಸಿದ್ದ.

ಕೇವಲ ಹತ್ತು ಹನ್ನೆರಡು ವರುಷಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದ ಈತನ ಖಾಸಗಿ ಬದುಕಿನ ಕುರಿತು ವಿವರ ಅಷ್ಟಾಗಿ ಸಿಗುವದಿಲ್ಲ. ಅದು ಹೇಳುವಂತಹ ಸುಖಕರವೂ ಆಗಿರಲಿಲ್ಲ. 1880 ರಿಂದ 1886 ತನಕ ಈತನಿಗೆ ‘ಗಿಸೆಲ್ ಎಸ್ತೋಕ್’ ಎನ್ನುವ ಮಹಿಳೆಯೊಂದಿಗೆ ಸಂಬಂಧವಿತ್ತು. ಇನ್ನೊರ್ವ ಮಹಿಳೆ ‘ಜೊಸೆಫಿನ್ ಲಿಜ್ಮೆನ್ ಎನ್ನುವವಳ ಜೊತೆಗೂ ಈತ ಸಲುಗೆಯಿಂದ ಇದ್ದ. ಈತನಿಗೆ ಮೂವರು ಮಕ್ಕಳಿದ್ದರು. ಈತನ ಸ್ವಚ್ಚಂದ ಬದುಕಿನ ಪರಿಣಾಮದಿಂದಾಗಿ ಈತನಿಗೆ ಇಪ್ಪತ್ತನೆಯ ವಯಸ್ಸಿನಲ್ಲಿಯೇ ‘ಸಿಫಿಲಿಸ್’ರೋಗ ಅಂಟಿಕೊಂಡಿತ್ತು. ಸಮಾಜದಲ್ಲಿ ಈತ ಪ್ರಸಿದ್ಧನಾಗುತ್ತಿದ್ದರೆ ಇನ್ನೊಂದುಕಡೆ ಬದುಕಿನಲ್ಲಿ ನಿರಾಸೆ ಅನುಭವಿಸುತ್ತಾ ಹೋದ. ಮಾನಸಿಕ ಖಿನ್ನತೆಗೂ ಓಳಗಾಗಿದ್ದ. 1888 ರಲ್ಲಿ ಈತನ ಬುದ್ಧಿಮಾಂದ್ಯ ತಮ್ಮ ‘ಹಾರ್ವೆ’ಯ ಮರಣಾನಂತರ ಮಾನಸಿಕ ಖಿನ್ನತೆಗೆ ಒಳಗಾದ. ಕೊನೆಗೊಮ್ಮೆ 1892ರಲ್ಲಿ ಈತ ತನ್ನ ಗಂಟಲನ್ನು ತಾನೇ ಸೀಳಿಕೊಂಡು ಆತ್ಮಹತ್ಯೆಗೂ ಪ್ರಯತ್ನಿಸಿದ. ಆಗ ಈತನ ತಾಯಿ ‘ಲಾರಾ’ ಈತನನ್ನು ಪ್ಯಾರಿಸ್ಸಿನ ಆಸ್ಪತ್ರೆಗೆ ಸೇರಿಸಿ ಬದುಕಿಸಿಕೊಂಡಳು. ಆದರೂ ಇದಾದ ಮಾರನೇ ವರುಷ ಅಂದರೆ 1893 ಜೂನ್ 6 ರಂದು ತೀರಿಕೊಂಡ.

ಅತನ ಕೊನೆಕೊನೆಯ ಕತೆಗಳೆಲ್ಲೆಲ್ಲಾ ಬದುಕಿನಲ್ಲಿನ ನಿರಾಸೆ, ಹುಚ್ಚುತನ, ಬಡವರ ಬವಣೆ, ಸಿರಿವಂತರ ಬೂಜ್ರ್ವಾ ಪ್ರವರ್ತಿಗಳಕಡೆ ಇತ್ತು. ಇವೆಲ್ಲಾ ಆತನ ಮಾನಸಿಕ ಖಿನ್ನತೆಯ ಪರಿಣಾಮಗಳು ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಖ್ಯಾತ ಫ್ರೆಂಚ್ ವಿಮರ್ಶಕ ‘ಪಾಲ್ ಲಿಯೊಟೌಡ್’ನ ಪ್ರಕಾರ ಈತ ಸಂಪೂರ್ಣ ಸ್ವ ಸಮ್ಮೋಹಿತ ಗೀಳಿಗೆ ಒಳಗಾಗಿದ್ದ. ಪ್ರಸಿದ್ಧ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಾಣಬರುವ ಈ ಗೀಳು ಮುಂದುವರಿದು ಖಿನ್ನತೆಯನ್ನು ಆವರಿಸಿಕೊಳ್ಳುತ್ತದೆ.

ಯಾವಾಗ ಮುಪಾಸ್ಸಾಂನ ಕೃತಿಗಳು ಇಂಗ್ಲೀಷ ಭಾಷೆಗೆ ತರ್ಜುಮೆಗೊಂಡು ಪ್ರಕಟವಾದವೋ ಆಗ ಈತನ ಕೃತಿಗಳಿಗೆ ಮಹತ್ವ ಇನ್ನೂ ಹೆಚ್ಚಾಯಿತು. 1994ರಲ್ಲಿ ಲಿಯೋ ಟಾಲ್ಸ್ಟಾಯ್ ಈತನ ಮೇಲೆ ಬರೆದ “The works of Guy de Maupassant” ನಿಂದ ವಿಮರ್ಶಕ ವಲಯವೂ ಇವನನ್ನು ಗಂಭೀರವಾಗಿ ನೋಡತೊಡಗಿದರು.

ಕತೆಗಳಲ್ಲಿ ತನ್ನದೇ ಆದ ನವಿರಿನ, ಬೌದ್ಧಿಕ ಚಿಂತನೆಯ, ಮಹಿಳೆಯರ ಸ್ವಾತ್ರಂತ್ರದ ಪ್ರತಿಪಾದಕನಾದ ಮುಪಾಸ್ಸಾಂಟ್ ಸಾಹಿತ್ಯಾಸಕ್ತರೆಲ್ಲರಿಗೂ ಆಪ್ತ ಲೇಖಕ.


ನಾರಾಯಣ ಯಾಜಿ ಸಾಲೆಬೈಲು


ನಾರಾಯಣ ಯಾಜಿ: ಸಾಲೆ ಮತ್ತು ಬಯಲು ನೆಲ ಮತ್ತು ಮುಗಿಲು ಕಲಿಕೆ ಮತ್ತು ಅನುಸಂಧಾನ ನಾರಾಯಣ ಯಾಜಿ ಸಾಲೆಬೈಲು ಎಂಬ ಅಪಾರ ಜೀವನ ಪ್ರೀತಿಯ ಮಾನವತಾವಾದಿ,ತಾಳ ಮದ್ದಲೆಯ ಹೆಸರಾಂತ ಅರ್ಥಧಾರಿ,ವಾಗ್ಮಿ,ನಿರಂತರ ಓದು ಮತ್ತು ಸತತಾಭ್ಯಾಸ ಅವರ ಗುಣ. ಹೊನ್ನಾವರ ತಾಲೂಕಿನ ಗುಣವಂತೆಯ ಸಾಲೆಬೈಲಿನ ನಾರಾಯಣ ಯಾಜಿ ವೃತ್ತಿಯಲ್ಲಿ ಕೆವಿಜಿ ಬ್ಯಾಂಕಿನ ಜನರಲ್ ಮೆನೇಜರರು. ಪೃವೃತ್ತಿಯಲ್ಲಿ ಸೂರ್ಯನ ಕೆಳಗೆ ಕಂಡ ಸತ್ಯವನ್ನು ತಮ್ಮದೆ ಆದ ಭಾಷಿಕ ಬಗೆಯಲ್ಲಿ ಅಟ್ಟು ಬಡಿಸಬಲ್ಲ ನಿಷ್ಣಾತ ಲೇಖಕರು.ಪ್ರೆಂಚ ಬರಹಗಾರ ಮೊಪಾಸಾನ ಬಗ್ಗೆ ಅವರ ಬರಹ ನಮ್ಮ ಆಲೋಚನೆ.ಕಾಂ ಓದುಗರ ಪ್ರತಿಕ್ರಿಯೆ ಮತ್ತು ಅರಿವಿನ ವಿಸ್ತಾರಕ್ಕೆ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ.
8 views0 comments
bottom of page