ಕಡಲಿಗೆ ಕಣ್ಣೆರಡು ಇದ್ದಿದ್ದರೆ
ಕಂಬನಿ ಪ್ರವಾಹವೇ ಉಕ್ಕುತ್ತಿತ್ತೆ?
ಮಳೆಮಾರುತ, ಬಿರುಗಾಳಿ
ಕಡಲೆದೆ ಸೀಳುವ ಹಡಗು
ಒಂದೇ ಅಡುಗೆ ಒಲೆಯಲಿ
ಬಹುಬಗೆಯ ಕೆಂಡವಾಗಿ
ಕಾಯಿಸುತ್ತಿದೆ ಕಡಲ
ಬೆಂದು ಉಕ್ಕಬಹುದಿತ್ತೆ
ಕಡಲು ವ್ಯಗ್ರವಾಗಿ!
ಅಲ್ಲೆಲ್ಲೊ ದಟ್ಟಡವಿ ಮೈಕೊಡಲು
ಜುಮುರು ಮಳೆಗೆ
ಚಾಮರ ಬೀಸಿದೆ ಬಿರುಗಾಳಿ
ಕೆಸರು ಕಡ್ಡಿ ಚಂಪೆ
ಬೆಂಕಿ ಪೊಟ್ಟಣ ಖಾಲಿ ಸೀಸೆ
ತೊರೆಯಲಿ ತೇಲಿ ಬಂದ
ನಾಯಿ ಬೆಕ್ಕುಗಳ ಪೀಚಲು ದೇಹ
ಊದಿಕೊಂಡಿದೆ ಕಡಲೊಡಲು
ಬಿರಿಯಬಹುದಿನ್ನೇನು
ಎಲ್ಲಾ ಬಾಚಿಕೊಳ್ಳುವ
ತೆರೆಯಡಿಗಿನ ಮರೆಗೆ
ಗಾಯಗೊಂಡಿದೆ ಕಡಲು
ತುಂಬಿ ತುರುಕಿಸಿ
ಉಬ್ಬರಿಸಿದ ಉದರದಲಿ
ಅಬ್ಬರಿಸುವ ತೆರೆ ತೀರದಲಿ
ಹೀಚು ಹೀಚು ಕೈಕುಲುಕಿ
ಪ್ರಣಯಗೀತೆ ಒಮ್ಮೆ
ಶೋಕಗೀತೆ ಇನ್ನೊಮ್ಮೆ
ಸಮಚಿತ್ತದ ಕಡಲ
ಕೆಣಕದಿರಬಹುದಿತ್ತೇ?
ಕಡಲೆದೆಯ ಬಗೆಯುವ
ಹುನ್ನಾರ ಕೈ ಬಿಡಬೇಕಿತ್ತೇ?
ಯಾರದ್ದೋ ಬಲಪೆಟ್ಟಿಗೆ
ಯಾವುದೋ ಬೆಂಕಿಯ ಸುಟ್ಟಗಾಯಗಳಿಗೆ
ಕುದಿಯುತ್ತಿದೆ ಕಡಲು
ನಿನ್ನೆಗಿಂತ ಇಂದು ಹೆಚ್ಚಿಗೆ
-ಮಂಜುನಾಥ ನಾಯ್ಕ ಯಲ್ವಡಿಕವೂರ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿ ಕವುರಿನ ಮಂಜುನಾಥ ನಾಯ್ಕ ವೃತ್ತಿಯಲ್ಲಿ ಆರಕ್ಷಕರು .ಪ್ರವೃತ್ತಿಯಲ್ಲಿ ಸಾಹಿತ್ಯೋಪಾಸಕರು. ಅವರ ಕವಿತೆಗಳು ಹೊಸತನದ ಹಂಬಲದಿಂದ ತಂಬಿಕೊಂಡು,ಭಾವ ಸೂಕ್ಷ್ಮಗಳಿಂದ,ಲಯ ಲಾಲಿತ್ಯದಿಂದ ಓದುಗರ ಮನವನ್ನು ಮುಟ್ಟುವಲ್ಲಿ ಸಫಲವಾಗುತ್ವವೆ.ಮಂಜುನಾಥ ಅವರ ಕವಿತೆಗಳಿಗೆ ಹಲವು ಅರ್ಥಸಾಧ್ಯತೆಗಳ ಕವುರುಗಳಿವೆ.ಕವಿ,ಕತೆಗಾರ,ಮಾನವ್ಯದ ಪ್ರೀತಿಯ ಹರಿಕಾರ ಮಂಜುನಾಥ ನಮ್ಮ ನಡುವಿನ ಭರವಸೆಯ ಕವಿ
ತಮ್ಮ ಮೌಲಿಕ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್
ಸಮಚಿತ್ತವನ್ನು ಕೆಣಕುವ ಪ್ರಯತ್ನ ಸುತ್ತಮುತ್ತ ನಡೆವ ಪರಿಯನ್ನು ಆಪ್ತ ನುಡಿಗಟ್ಟಿನಲ್ಲಿ ಕಟ್ಡಿ ನಿಲ್ಲಿಸುವ ನಿಮ್ಮ ಕವನ ತುಂಬಾ ಸುಂದರ ವಾಗಿದೆ. ಸಮಚಿತ್ತವನ್ನು ಕಡಲಿಗೆ ಮೇಳೈಸಿ ಅದರ ಗಾಯವನ್ನು ಚಿತ್ರರೂಪದಲ್ಲಿ ಕಣ್ಣಿಕಟ್ಟಿಕೊಡುವ ರೀತಿ ಕವಿತೆಗೆ ಹೊಸ ಆಯಾಮ ನೀಡಿದೆ. ಒಟ್ಟಾರೆ ಒಳ್ಳೆಯ ಕವಿತೆ. ಅಭಿನಂದನೆಗಳು.