ದೃಶ್ಯ--೧
ಚಿರತೆ ಸಿಂಹ ಹುಲಿ ಕರಡಿ
ಗಳು ರಸ್ತೆವರೆಗೂ ಬಂದವು
ಹಾಯಾಗಿ ಮಲಗಿದವು
ಮಯ್ಯನ್ನು ಹರಡಿ
ನವಿಲು ನರ್ತಿಸಿತು ಮೊಲ
ಜಿಂಕೆಗಳು ವಿಹರಿಸಿದವು
ಕಾಡು ಗೂಡು ಬಿಲಗಳ ತೊರೆದು
ಪ್ರಾಣಿ ಪಕ್ಷಿಗಳು ಭಯ ಮುಕ್ತವಾದವು
ಹಾಯ್ ಕರೆದರೂ ಬಾರದಿದ್ದ
ಕಾಗೆಗಳೂ ಗುಂಪುಗುಂಪಾಗಿ
ಅಂಗಳಕ್ಕೇ ಬಂದು ಗದ್ದಲ ಎಬ್ಬಿಸಿದವು
........
ಎಲ್ಲ ಬಂದವು,
ಗುಬ್ಬಿ ಮಾತ್ರ ಬರಲೇ ಇಲ್ಲ.....
ಅಂಗಡಿಯೆದುರು
ಚೀನೀ ಕಡಿಯ ರಾಶಿ
+. +. +.
ದೃಶ್ಯ-೨
ಮನೆಯ ಮೂಲೆಯಲ್ಲೊಂದು ಗೂಡು
ಪುಟ್ಟ ಸಂಸಾರ
ಕಾಳುಕಡಿಯೇ ಆಹಾರ
ದಿನವೆಲ್ಲ ಓಡಾಟ ಹಾರಾಟ
ಹೊರಗೊಳಗೆ
ಬಿಡುವಿಲ್ಲದ ದುಡಿಮೆ
ಈ ಜಂಗಮರಿಗೆ
ಚುಮುಚುಮು ಬೆಳಗು ಹರಿದಾಗ
ಚಿಂವ್ ಚಿಂವ್ ಕರೆಗಂಟೆ
ಬೇಗನೆ ಏಳಲು
ಅಲಾರಾಂ ಬೇಕಿರಲಿಲ್ಲ ನಮಗೆ
ಮನೆಯ ಸದಸ್ಯರಂತೆ
ಈ ಜೋಡಿ ಗುಬ್ಬಿಗಳು
ಇದ ತೋರಿಸಿಯೇ ಅಮ್ಮ
ನಮಗೆ ಉಣಿಸಿದ್ದು
ಕಾಕಕ್ಕ ಗುಬ್ಬಕ್ಕ ಕತೆ ಹೇಳಿದ್ದು
ಯಾರೂ ಶಪಿಸಲಿಲ್ಲ
ಅದರ ಗದ್ದಲವಾಣಿಗೆ
ನೆಲದ ಮೇಲುದುರಿಸುವ ಹಿಕ್ಕೆಗೆ
ಪ್ರಯೋಜನವೇನೂ ಇರಲಿಲ್ಲ
ಕುಟುಂಬಕ್ಕೆ
ಆದರೂ ಅವು ಇದ್ದವು
ಮನೆಯ ಮಕ್ಕಳಂತೆ
ಗುಬ್ಬಿ ಪುರ್ರೆಂದು ಹಾರುವುದು
ಹುಲ್ಲು ಕಡ್ಡಿ ತರುವುದು
ಅವರೊಳಗೇ ಆಟ ಆಡುವುದು
ಬಾಯಲ್ಲೆ ಬ್ರಹ್ಮಾಂಡ
ಕಾಣಿಸುವ ಮರಿಗಳಿಗೆ
ಆಹಾರ ತಿನಿಸುವುದು...
ಒಮ್ಮೊಮ್ಮೆ ಮರಿ ಗೂಡಿಂದ
ಮುನ್ಮುಂದೆ ಬಂದು
ಕೆಳಗೆ ಬಿದ್ದಾಗ
ನಾವೇ ಬಿದ್ದಷ್ಟು ನೋವಾಗಿ
ಜೋಪಾನವಾಗಿ ಗೂಡು
ಸೇರಿಸುವುದು....
ಅವುಗಳ ಆಟ ನೋಡುತ್ತ...
ಒಂದುದಿನ ಗೂಡಿಗೆ ಅವು
ಬಾರದಿದ್ದರೂ ನೊಂದುಕೊಳ್ಳುತ್ತ
ನಮ್ಮ ಬಾಲ್ಯ- ಹರಯಗಳು
ಉರುಳಿದವು ಕಾಲಚಕ್ರದಂತೆ
ವಿದ್ಯೆ- ಉದ್ಯೋಗವೆಂದು
'ಅಲೆ'ಅಲೆದು ಮರಳಿದೆವು
ಇದ್ದಕ್ಕಿದ್ದಂತೆ
ಗೂಡಿಂದ ಹೊರಹೋದ
ಗುಬ್ಬಿ ಮಾತ್ರ ಮರಳಲೇ ಇಲ್ಲ
+ + +
ದೃಶ್ಯ--೩
ಕಾಳು ಕಡಿಗಳನೆಲ್ಲ
ಬಿಕ್ಕಿ ಬೀರಿ
ಒಂದಕ್ಕೊಂದುವರೆ ಮಾಡುವ ಈ
ಜಂಗಮ ಪೋರನಿಂದು
ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ
ಒಂದೇ ಸಮನೆ
ಅಜ್ಜ- ಅಜ್ಜಿ ಇಲ್ಲ ಆಡಿಸಲು
ಕಾಕಕ್ಕ ಗುಬ್ಬಕ್ಕ ಕತೆ ಹೇಳಲು
ಕೆಲಸದಲ್ಲಿ ನಿರತ ತಾಯಿ
ಗೆ ಮಗು ಅಳು
ನಿಲ್ಲಿಸಿದರೆ ಸಾಕಾಗಿದೆ
ಪೇಟೆಯಿಂದ ತಂದ ಆಟಿಕೆ
ಸಾಮಾನುಗಳು ಬೇಕಾದಷ್ಟಿವೆ
ಮಗುವಿನ ಹಸಿವು ತಣಿಸಲು
ಆದರೂ ಮಗುವಿಗವೆಲ್ಲ ಹಳಸಲು
" ಓನೆ ಗುಬ್ಬಿ, ಓನೆ ಗುಬ್ಬಿ "
ಸಂತೈಸುತ್ತ ಬಂದ ತಾಯಿ
ಗೂಡಿಂದ ತೆಗೆದಿಟ್ಟ
ಅಂಗೈಯಗಲದ ಅಸ್ತ್ರವನು
ಕಂಡೊಡನೆಯೇ
ಸ್ವರ ನಿಂತಿತು
ಮಗುವಿನ ಬಾಯಿಂದ
ಹನಿ ಬತ್ತಿ, ಹೊಸ ಮಿಂಚು
ಹೊಮ್ಮಿತು ಕಣ್ಣಿಂದ
ಕೈಕಾಲು ಬಡಿಬಡಿದು
ಹರೆಯುತ್ತಲೇ ಬಂದು
ಗಬಕ್ಕನೆ ಹಿಡಿದು ಕುಳಿತಿತು
ಗುಬ್ಬಿ, ಬ್ರಹ್ಮಾಂಡವೆಂದು
ಪ್ರತಿಫಲಿಸಿತು ಎಲ್ಲೆಡೆ
ಗುಬ್ಬಿ ತಬ್ಬಿ ಹಿಡಿದ ದೃಶ್ಯ
ಗುಬ್ಬಿ ಮತ್ತೆ ಬರಲೇ ಇಲ್ಲ
🔯 ಡಾ. ಜಿ ಎಸ್.ಹೆಗಡೆ , ಹಡಿನಬಾಳ
ಡಾ. ಜಿ. ಎಸ್. ಹೆಗಡೆ ಇವರು ಯಕ್ಷಗಾನ ಕಲಾವಿದ ಹಡಿನಬಾಳ ಸತ್ಯ ಹೆಗಡೆಯವರ ಮಗ. ಅಳ್ಳಂಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿರುವ ಇವರು ವಾಸ್ತವ ಕಥಾ ಸಂಕಲನ; ಅವಧೂತ ಶ್ರೀ ರಾಮಾನಂದರು, ಜೀವನ ದೃಷ್ಟಾರ ಎಸ್.ಜಿ.ಕೃಷ್ಣ ಎಂಬೆರಡು ಜೀವನ ಚರಿತ್ರೆ; ಉ.ಕ. ಜಿಲ್ಲೆಯ ಹವ್ಯಕ ಜನಪದ ಸಂಸ್ಕೃತಿ ಎಂಬ ಸಂಶೋಧನಾ ಕೃತಿ ಗಳನ್ನು ಹೊರತಂದಿದ್ದಾರೆ.
ಕದಂಬ ಕನ್ನಡ ಸಂಘದ ಮೂಲಕ ನಾಡು ನುಡಿ ಸಂಬಂಧಿ ಚಟುವಟಿಕೆಗಳನ್ನು ಪ್ರೀತಿಯಿಂದ ಸಂಘಟಿಸುತ್ತ ಬಂದಿರುವ ಇವರು ಹಡಿನಬಾಳದಲ್ಲಿ ಹೊನ್ನಾವರ ತಾಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನ ಸಂಘಟಿಸಿದವರು."ಸತ್ಯಲೋಕ" ಕೃತಿ ಬಿಡುಗಡೆಯ ಸಮಾರಂಭವನ್ನು ಹಡಿನಬಾಳದಲ್ಲಿ ಅಭೂತಪೂರ್ವ ಎನ್ನುವ ಹಾಗೆ ಯಶಸ್ವಿಯಾಗಿಸಿದ ಇವರು ಸಹ್ಯಾದ್ರಿ ಪತ್ರಿಕೆಯ ಸಂಪಾದಕ ಪ್ರಕಾಶಕರಾಗಿ ಸಹಜಾತ ಸುಬ್ರಹ್ಮಣ್ಯ ಅವರೊಂದಿಗೆ ತೊಡಗಿಕೊಂಡಿರುವ ಸರಳ ಸಜ್ಜನ,ಸ್ನೇಹಜೀವಿ.ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.
コメント