ಗಾಂಧಿ ಮಹಾತ್ಮನ ನೆನಪು
- ಆಲೋಚನೆ
- Oct 2, 2020
- 1 min read
ದಳ್ಳುರಿಯ ಬಾಧೆಯಲಿ
'ಶಾಂತಿ ಯಜ್ಞ'ವ ಮಾಡಿ
ಕ್ಷೀರಾನ್ನವನುಂಡ ಓ.. ದಿವ್ಯಪುರುಷ..!
ನರರೂಪಿ ಪಕೀರ
ಗಗನದೆತ್ತರ ಬೆಳೆದ,
ನಿನ್ನ ನಾಮದ ನೆನಹೆ ಮನಕೆ ಹರುಷ..
'ಸಾಕ್ರೆಟಿಸ್' ನೀನಾಗಿ
ಸತ್ಯದರ್ಶನ ಕಂಡೆ...
ಮಿಥ್ಯೆಯಾ ಪರದೆಯನು ಸರಿಸಿ ನಡೆದೆ..
ಆಫ್ರಿಕಾ ' ಕತ್ತಲೆ'ಗೆ
ಬೆಳಕ ಬೀರಿದೆ ನೀನು
'ಸತ್ಯಾಗ್ರಹ'ವೆಂಬ ಅಸ್ತ್ದ ಹಿಡಿದೆ..
ಭರತ ಬುವಿಯಲಿ
ನಿನ್ನ ದಿವ್ಯ ರೂಪವ ತೋರೆ..
'ಪರದೇಶಿ' ರಕ್ಕಸರು ಭ್ರಾಂತರಾಗಿ..
ನಿನ್ನ ಸತ್ಯಾಗ್ರಹಕೆ
ಚಳುವಳಿಗೆ ಕರಮುಗಿದು,
ನಿಂತು ಬಿಟ್ಟರು ಪೂರ್ಣ ಸ್ತಬ್ಧರಾಗಿ!
ದೇಶದುದ್ದಗಲಕ್ಕೂ
ನಿಂತೆ ಆಲದ ತೆರದಿ
ನಿನ್ನ ಛಾಯೆಯ ಹಿಡಿದ ಭರತ ಜನತೆ
ಸಾಗಿ ಮುಂದಕೆ ದೂರ
ದೇಶ ಪ್ರೇಮವನುಂಡು,
'ತ್ಯಾಗ' ಯಜ್ಞಕೆ ಬಂತು ಪೂರ್ಣ ಘನತೆ
ಸಮಾನತೆಯೆಂಬ
'ಓಲಂಪಿಕ್' ದೀಪವನು
ಹಿಡಿದು ಓಡಿದೆ ನೀನು ದೂರ...ದೂರ..
ರಾಮ-ರಹೀಮ, ಏಸು
ಎಲ್ಲ ಒಂದೇ ಎಂಬ,
ನಿನ್ನ ಮನದಲಿ ಇತ್ತು ಐಕ್ಯತೆಯ ಸಾರ
'ಕ್ವಿಟ್ ಇಂಡಿಯಾ' ಎಂಬ
ಯುದ್ಧ ಬುವಿಯಲಿ ನಿಂತು
ಊದಿಬಿಟ್ಟೆ ..ನೀನು ಪಾಂಚಜನ್ಯ
ಶಾಂತಿ-ಕ್ರಾಂತಿಯನುಂಡು
ಹಲವು ಮನಗಳು ಬೆಂದು,
ಪೂರ್ಣವಾಯಿತು ಸ್ವಾತಂತ್ರ್ಯ ಯಜ್ಞ
'ಧರ್ಮ ಸಂಸ್ಥಾಪನೆ'ಗೆ ಹೊರಟ
ಮುರಾರಿಯು ಕೂಡ
ಅನುಭವಿಸಿದ ಕೊನೆಗೆ ನಿನ್ನ ಸೋಲು
ತಮದ ಅರಿ ರಕ್ಕಸರು
ನಿನ್ನ ಸಾವನು ಉಂಡು,
'ಮಾನವತೆ' ಕೊಂದಿಹರು ಅಂದು- ಇಂದು
-ವಿಷ್ಣು ಆರ್. ನಾಯ್ಕ
ಕನ್ನಡ ಭಾಷಾ ಶಿಕ್ಷಕ
ಸ.ಪ್ರೌ. ಶಾಲೆ ಜಿಡ್ಡಿ, ಸಿದ್ದಾಪುರ.
Super sir, very nice...👌👌👍👍