top of page

ಗಾಂಧೀಪಥವೆನ್ನುವದೊಂದು ದಧೀಚಿಮಾರ್ಗ

I have nothing new to teach the world. Truth and non-violence are as old as the hills – Mohandas Karamchand Gandhi.

ಮಹಾತ್ಮಾ ಗಾಂಧೀಜಿಯವರ ಕುರಿತು ಬರೆಯುವಾಗ ಸತ್ಯ ಮತ್ತು ಅಹಿಂಸೆಯನ್ನು ಬಿಟ್ಟು ಸಾಗುವುದೇ ಇಲ್ಲ. ಗಾಂಧೀಜಿಯವರಿಗೆ ಸ್ವಾತಂತ್ರ್ಯ ಮುಖ್ಯವಾಗಿತ್ತು. ಅದು ಅವರ ಗುರಿಯೂ ಆಗಿತ್ತು. ಆದರೆ ಅದನ್ನು ಸಾಧಿಸಲು ಸತ್ಯ ಮತ್ತು ಅಹಿಂಸೆಯ ಹೊರತಾಗಿ ಬೇರೆ ಯಾವ ವಿಧಾನಗಳಿಂದ ಪಡೆಯುಬಹುದಾದ್ದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಈ ಕಾರಣಗಳಿಂದಾಗಿ ಅನೇಕ ಬಾರಿ ಅವರು ಟೀಕಾಕಾರರಿಗೆ ಆಹಾರವಾಗಿದ್ದಾರೆ. ಅವರ ಕೆಲ ನಿರ್ಧಾರಗಳು ವಿವಾದಾತ್ಮಕವಾಗಿರುವದೂ ಹೌದು. ಉದಾಹರಣೆಗೆ ಮೋಪ್ಲಾ ದಂಗೆಯಲ್ಲಿ ಮತ್ತು ಭಗತ್ ಸಿಂಗರನ್ನು ಗಲ್ಲಿಗೇರಿಸುವ ಸಂಧರ್ಭದಲ್ಲಿನ ಅವರ ಮೌನ, ಚೌರೀ ಚೌರಾ ಹಿಂಸಾಚಾರದ ನಂತರ ಏಕಾಏಕಿ ಹೋರಾಟವನ್ನು ಹಿಂದೆತೆಗೆದುಕೊಂಡಿರುವದು, ದೇಶ ವಿಭಜನೆ ಮತ್ತು ಪಾಕಿಸ್ಥಾನಕ್ಕೆ ನೆರವು ನೀಡುವಕುರಿತು ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಗೇ ಇನ್ನೂ ಅನೇಕ ವಿಷಯಗಳಿವೆ. ಇವು ಸತ್ಯವೂ ಕೂಡ. ಆದರೆ ಗಾಂಧೀಯೆನ್ನುವ ವ್ಯಕ್ತಿತ್ವ ದೇಶ ಕಾಲವನ್ನು ಮೀರಿ ವ್ಯಾಪಿಸಿರುವ ಒಂದು ದೊಡ್ಡ ಸಂದೇಶ. ಅವರ ಬದುಕೇ ಅನೇಕ ವಿಸ್ಮಯ, ಗೂಢ ಮತ್ತು ಪ್ರಭಾವಳಿಗಳಿಂದ ತುಂಬಿಹೋಗಿದೆ ಎನ್ನುವದೂ ಸಹ ಅಷ್ಟೇ ಸತ್ಯವೂ ಹೌದು.


ಮೋಹನದಾಸ ಗಾಂಧಿ ಎನ್ನುವ ಬ್ಯಾರಿಷ್ಟರ್ ಇಂಗ್ಲೆಂಡಿನಿಂದ ಬಂದು ಮುಂಬೈ, ರಾಜಕೋಟ್ ಹೀಗೆ ಹಲ ಕಡೆ ತನ್ನ ವೃತ್ತಿಯನ್ನು ನಡೆಸಲು ಯತ್ನಿಸಿದರೂ ಅದರಲ್ಲಿ ಸಾಧ್ಯವಾಗದೇ ವಿಫಲನಾಗಿದ್ದ. ತಾನೋರ್ವ ಬ್ಯಾರಿಷ್ಟರ್, ತನ್ನ ಹೆಂಡತಿ ಅನಕ್ಷರಸ್ಥಳು ಎನ್ನುವ ಮನಸ್ಥಿತಿ ಅವರಲ್ಲಿತ್ತು. ಆಕೆ ಅಧುನಿಕಳಾಗಬೇಕು ಎಂದು ಕಸ್ತೂರಬಾ ಅವರಿಗೆ ಕಲಿಸಲು ಹೋಗಿ ಸಾಧ್ಯವಾಗದೇ ಆಕೆಯನ್ನು ತವರುಮನೆಗೆ ಕಳುಹಿಸಿದ್ದರು. ಆಕೆ ಅತ್ತು ರಂಪಮಾಡಿ ಮತ್ತೆ ಗಂಡನಮನೆಗೆ ಬರುವಂತಾಯಿತು. ಬೇರೆ ವಕೀಲರು ತಿಂಗಳಿಗೆ ಮೂರು ನಾಲ್ಕು ಸಾವಿರ ಗಳಿಸುವಾಗ ಇವರು ತಿಂಗಳಿಗೆ ಮುನ್ನೂರು ರೂಪಾಯಿ ಗಳಿಸಲೂ ಸಹ ಒದ್ದಾಡುತಿದ್ದರು. ಅಷ್ಟನ್ನು ಗಳಿಸಲು ಇಂಗ್ಲೆಂಡಿಗೆ ಹೋಗಿ ಕಲಿಯಬೇಕಿತ್ತೇ ಎನ್ನುವ ಪ್ರಶ್ನೆಯನ್ನು ಅವರೇ ಅವರಿಗೆ ಹಾಕಿಕೊಳ್ಳುತ್ತಿದ್ದರು. ಮೋಹನದಾಸನ ಒಳಗಡೆ ಓರ್ವ ಹೋರಾಟಗಾರ ಸ್ವಾಭಿಮಾನಿಯಿದ್ದ. ಆದರೆ ಆತನಿಗೆ ಹೊರಬರುವ ಹಾದಿಯ ಅರಿವಿರಲಿಲ್ಲ. ಅದು ಬ್ಯಾರಿಷ್ಟರ್ ಗಾಂಧಿಯನ್ನು ಕೀಳರಿಮೆಯ ರೂಪದಲ್ಲಿ ಕಾಡುತ್ತಲೇ ಇತ್ತು. ಇಂತಹ ನಿರಾಸೆಯ ಹೊತ್ತಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸೇಠ್ ಅಬ್ದುಲ್ಲಾ ಅವರ ಕೇಸಿಗೆಸಂಬಂಧಿಸಿದ ವಿವರಗಳನ್ನು ಅಲ್ಲಿನ ಬ್ಯಾರಿಷ್ಟರ್‍ಗಳಿಗೆ ವಿವರಿಸುವದಕ್ಕಾಗಿ ಓರ್ವ ಸಹಾಯಕನಾಗಿ. ಸಿಕ್ಕ ಅವಕಾಶವನ್ನು ಅನಿವಾರ್ಯವಾಗಿ ಒಪ್ಪಿಕೊಂಡರು. ಗಾಂಧೀಜಿಯವರೊಳಗಿರುವ ಅಂತರ್ಮುಖಿತನ, ತನ್ನೊಳಗೇ ತುಂಬಿಟ್ಟುಕೊಂಡ ಅಸಹನೆ, ಅಸಾಯಕತೆ, ಸಮಾಜದ ಆಕ್ರಮಣಕಾರಿ ಸ್ವರೂಪವನ್ನು ಎದುರಿಸುವ ಧೈರ್ಯ ಇವೆಲ್ಲ ಹೊರಬರಲು ಒಂದು ಬೆಳಕಿಂಡಿಯಾದವರು ಇದೇ ಸೇಠ್ ಅಬ್ದುಲ್ಲಾ.

ಡರ್ಬಾನಿಗೆ ಬಂದ ಎರಡೂಮೂರು ದಿನಗಳೊಳಗೆ ಸೇಠ್ ಗಾಂಧೀಜಿಯನ್ನು ಅಲ್ಲಿನ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ ಅವರ ವಕೀಲರಿಗೆ ಪರಿಚಯಮಾಡಿಸಿ ಅವರ ಪಕ್ಕದಲ್ಲಿ ಕುಳ್ಳಿರಿಸಿದರು. ಮ್ಯಾಜಿಸ್ಟ್ರೇಟ್ ಕೊರ್ಟಿಗೆ ಬಂದವರೇ ಗಾಂಧೀಜಿಯನ್ನು ದುರುಗುಟ್ಟಿ ನೋಡಿ ತಲೆಯಮೇಲೆ ಧರಿಸಿದ್ದ ರುಮಾಲನ್ನು ತೆಗೆಯಲು ಸೂಚಿಸಿದರು. ಗಾಂಧೀ ಸುತ್ತಮುತ್ತ ನೊಡಿದರೆ ಅಬ್ದುಲ್ಲಾನ ಸಹಿತ ಅಲ್ಲಿರುವ ಕೆಲ ಭಾರತೀಯರ ತಲೆಯಮೇಲೆ ರುಮಾಲು ಇತ್ತು. ಅವರ್ಯಾರಿಗೂ ಆ ನ್ಯಾಯಾಧೀಶ ರುಮಾಲನ್ನು ತೆಗೆಯಲು ಸೂಚಿಸದೇ ಗಾಂಧೀಜಿಯವರಿಗೆ ಮಾತ್ರ ಆದೇಶಿಸಿದ. ಗಾಂಧೀಜಿ ಸ್ವಾಭಿಮಾನದೊಟ್ಟಿಗೆ ಯಾವತ್ತೂ ರಾಜಿಯಾದವರಲ್ಲ. ಆದೆಶವನ್ನು ತಿರಸ್ಕರಿಸಿ ಕೋರ್ಟಿನಿಂದಲೇ ಹೊರಬರುತ್ತಾರೆ. ಆಗ ಅವರಿಗೆ ತಿಳಿದುಬಂದ ಸಂಗತಿಯೆಂದರೆ ಅಲ್ಲಿ ಮುಸಲ್ಮಾನರು ತಮ್ಮನ್ನು ತಾವು ಅರಬ್ಬರೆಂದು ಕರೆದುಕೊಳ್ಳುತ್ತಿದ್ದರು. ಪಾರಸಿಗಳು ತಮ್ಮನ್ನು ತಾವು ಪರ್ಶಿಯನ್ನರಾಗಿ ಗುರುತಿಸಿಕೊಳ್ಳುತ್ತಿದ್ದರು. ಅಲ್ಲಿನ ಹಿಂದುಗಳು ಹೆಚ್ಚಿನದಾಗಿ ಕೂಲಿಗಾಗಿ ಐದು ವರ್ಷದ ಕರಾರಿನಲ್ಲಿ ಹೋದವರಾಗಿದ್ದರು. ಹಾಗಾಗಿ ಮುಸಲ್ಮಾನ ಮತ್ತು ಪಾರಸಿಗಳನ್ನು ಬಿಟ್ಟು ಇನ್ನುಳಿದವರನ್ನು ಅವರು ಬ್ಯಾರಿಸ್ಟರ್ ಆಗಿರಲಿ, ಏನೇ ಆಗಿರಲಿ ಅಂತವರನ್ನು ಕೂಲಿ ಎಂತಲೇ ಕರೆಯುತ್ತಿದ್ದರು. ಹಿಂದುಗಳು ಅಲ್ಲಿ ದ್ವಿತೀಯ ದರ್ಜೆಯವರಾಗಿದ್ದರು. ಭಾರತೀಯರಿಗೆ ತಲೆಯಮೇಲೆ ರುಮಾಲಿಲ್ಲದಿದ್ದರೆ ಅವಮಾನ. ಗಾಂಧೀಜಿ ಅದಕ್ಕಾಗಿ ಇಂಗ್ಲೀಷರ ಹ್ಯಾಟನ್ನು ರುಮಾಲಿಗೆ ಪರ್ಯಾಯವಾಗಿ ಬಳಸಲು ಆಲೋಚಿಸಿದರು. ಆದರೆ ಅಬ್ದುಲ್ಲಾ ಸೇಠ್ ಮಾತ್ರ ಗಾಂಧೀಜಿಯವರ ಈ ವಿಚಾರಗಳನ್ನು ವಿರೋಧಿಸುತ್ತಾರೆ. ಅನರಕ್ಷರಸ್ಥನಾಗಿದ್ದರೂ ಸೇಠರಲ್ಲಿ ಭಾರತೀಯತೆಯ ಕುರಿತು ಅಭಿಮಾನಗಳಿದ್ದವು. ಅದುತನಕ ಅಲ್ಲಿರುವ ಯಾವ ಭಾರತೀಯರೂ ರುಮಾಲಿನ ಕಾರಣಕ್ಕಾಗಿ ಕೋರ್ಟನ್ನು ಬಹಿಷ್ಕರಿಸಿರಲಿಲ್ಲ. ಗಾಂಧೀಜಿಯ ಈ ನಡೆ ಇನ್ನುಳಿದ ಭಾರತೀಯ ಬ್ಯಾರಿಷ್ಟರುಗಳಿಗೆ ಸ್ಪೂರ್ತಿತುಂಬಬಹುದೆಂದು ಅವರು ನಂಬಿರುತ್ತಾರೆ. ಗಾಂಧೀಜಿ ಹ್ಯಾಟ್ ಧರಿಸುವದನ್ನು ಅವರು ಬಲವಾಗಿ ವಿರೋಧಿಸುತ್ತಾರೆ. ಹ್ಯಾಟು ಗುಲಾಮಗಿರಿಯ ಸಂಕೇತವೆಂದು ಅವರು ಗಾಂಧೀಜಿಯವರಿಗೆ ಹೇಳುತ್ತಾರೆ. ಅನೇಕ ಭಾರತೀಯರು ಅಲ್ಲಿ ಕ್ರೈಸ್ತಮತವನ್ನು ಅಪ್ಪಿ ಇಂಗ್ಲೀಷರಂತೆ ವೇಷಭೂಷಣ ಧರಿಸುತ್ತಿದ್ದರೂ ಅವರ ಸಾಮಾಜಿಕ ಸ್ಥಿತಿ ಏನೂ ಬದಲಾಗಿರಲಿಲ್ಲ. ಗೀತೆಯಲ್ಲಿನ ಕ್ಷುದ್ರಂ ಹೃದಯ ದೌರ್ಬಲ್ಯಂ ಎನ್ನುವ ಮಾತು ಇಲ್ಲಿ ನೆನಪಿಗೆ ಬರುತ್ತದೆ. ಯಾವ ಗಾಂಧೀ ತನ್ನ ಪುಕ್ಕಲುತನದಿಂದ ಅದುತನಕ ಏನನ್ನೂ ಸಾಧಿಸಲು ಸಾಧ್ಯವಾಗದೇ ಒದ್ದಾಡುತ್ತಿದ್ದರೋ ಅದೇ ಗಾಂಧೀಜಿಯವರ ಎದೆಯಲ್ಲಿ ಅಡಗಿದ್ದ ಸ್ವಾಭಿಮಾನವನ್ನು ಸೇಠ್ ಬಡಿದೆಬ್ಬಿಸುತ್ತಾರೆ. ಗಾಂಧೀಯೊಳಗಿರುವ ಹೊಂದಾಣಿಕೆಯ ಮನೋಭಾವವೆನ್ನುವದು ಅಬ್ಧುಲ್ಲಾ ಸೇಠರಿಂದಾಗಿ ಹೊಸತಿರುವು ಪಡೆಯುತ್ತದೆ. ಈ ಬೇಧದ ನಡತೆಯನ್ನು ಪ್ರತಿಭಟಿಸಿ ಅನೇಕ ಪತ್ರಿಕೆಗಳಿಗೆ ಪತ್ರಬರೆದು ಕೋರ್ಟಿನಲ್ಲಿ ರುಮಾಲನ್ನು ಧರಿಸುವಸ್ವಾಂತ್ರಂತ್ಯದ ಕುರಿತು ಪ್ರತಿಪಾದಿಸುತ್ತಾರೆ. ಅಲ್ಲಿನ ಪತ್ರಿಕೆಗಳಲ್ಲಿ ಇದು ದೊಡ್ಡಮಟ್ಟದ ಪರ-ವಿರೋಧದ ಚರ್ಚೆಯಾಗುತ್ತದೆ. ಕೆಲ ಪತ್ರಿಕೆಗಳಂತೂ ಇವರನ್ನು Unwanted Guest ಎಂದು ಟೀಕಿಸುತ್ತವೆ. ಇವೆಲ್ಲದರಿಂದ ಗಾಂಧೀಜಿಗೆ ವ್ಯಾಪಕ ಪ್ರಚಾರಸಿಗುತ್ತದೆ. ಮೋಹನದಾಸ ಎನ್ನುವ ಬ್ಯಾರಿಷ್ಟರರ ರಾಜಿ ಪ್ರವೃತ್ತಿಗೆ ಅಬ್ದುಲಾಸೇಠ್ ಸಮ್ಮತಿ ಸೂಚಿಸುತ್ತಿದ್ದರೆ ಮಹಾತ್ಮಾಗಾಂಧೀ ಹೊರಬರುತ್ತಿರಲಿಲ್ಲ. ವರ್ಣಬೇಧದ ನಡುವಿನ ಗಾಂಧೀಜಿಯ ಹೋರಾಟ ಆರಂಭವಾಗುವದು ಇಲ್ಲಿಂದ. ಮುಂದೆ ರೈಲಿನಲ್ಲಿ ಮೊದಲದರ್ಜೆಯ ಭೋಗಿಯಿಂದ ಮೆರಿಟ್ಸ್ ಬರ್ಗ್ ಸ್ಟೇಷನ್ನಿನಲ್ಲಿ ಇವರನ್ನು ಬಲವಂತವಾಗಿ ಹೊರಹಾಕಿದಾಗ ಪ್ರತಿಭಟಿಸಿ ಕೊನೆಗೂ ಮುಂದಿನ ರೈಲಿನಲ್ಲಿ ಹಟಹಿಡಿದು ಮೊದಲದರ್ಜೆಯಲ್ಲಿಯೇ ಪ್ರಯಾಣಿಸಿದರು. ವರ್ಣಬೇಧನೀತಿಯಿಂದ ಹೆಜ್ಜೆಹೆಜ್ಜೆಗೂ ಅವಮಾನ ಅನುಭವಿಸಿದ ಗಾಂಧೀ ಗಟ್ಟಿಯಾಗುತ್ತಾ ನಡೆದರು. ಆದರೆ ಈ ಯಾವ ಸಂಧರ್ಭದಲ್ಲಿಯೂ ಗಾಂಧೀ ಹಿಂಸಾಮಾರ್ಗವನ್ನು ಅನುಸರಿಸಲಿಲ್ಲ ಎನ್ನುವದು ತುಂಬಾ ಮುಖ್ಯ. ತಮ್ಮೊಳಗೇ ಅವರು ಮಂಥನ ನಡೆಸಿದರು. ಅಲ್ಲಿನ ಅವಮಾನವನ್ನು ಸಹಿಸಿಕೊಳ್ಳುತ್ತಾ ಇರುವದಕ್ಕಿಂತ ಭಾರತಕ್ಕೆ ತಿರಿಗಿ ಹೋಗುವದೇ ವಾಸಿ ಎಂದು ಒಮ್ಮೆ ಯೋಚಿಸಿದ್ದರು. ತನ್ನಮೇಲಿನ ವರ್ಣಬೇಧನೀತಿಗೆ ಬ್ರಿಟಿಷರವಿರುದ್ದ ಮೊಕದಮೆ ಹೂಡಬೇಕೆಂದು ಅನೇಕಸಲ ಯೋಚಿಸಿದ್ದುಂಟು. ಆಗ ಅವರಿಗೆ ಅನಿಸಿರುವದು ಕಾನೂನಿನ ಪ್ರಕಾರ ತನಗಾದ ವರ್ಣಬೇಧನೀತಿಯ ವಿರುದ್ಧ ಹೋರಾಡಬಹುದು, ಪರಿಹಾರವನ್ನೂ ಪಡೆಯಲೂ ಬಹುದು; ಆದರೆ ಇದು ಬಾಹ್ಯದಲ್ಲಿ ಆಗಿರುವ ಹುಣ್ಣು. ಅಲ್ಲಿನ ಬಿಳಿಯಜನಾಂಗದಲ್ಲಿ ಆಳವಾಗಿ ಬೇರೂರಿರುವ ವರ್ಣದ್ವೇಷವೆನ್ನುವದು ಈ ಅಮಾನವೀಯ ನಡತೆಗೆ ಕಾರಣ. ಇದನ್ನು ಬುಡಸಹಿತ ಕಿತ್ತೊಗೆಯಬೇಕಾಗಿದೆ. ಆ ಪ್ರಯತ್ನದಲ್ಲಿ ಒದಗುವ ಕಷ್ಟಗಳನ್ನೆಲ್ಲ ಸಹಿಸಿ ಈ ವರ್ಣದ್ವೇಷವನ್ನು ಹೋಗಲಾಡಿಸಲು ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟರಮಟ್ಟಿಗೆ ಪರಿಹಾರಕಂಡುಕೊಳ್ಳಲು ಪ್ರಯತ್ನಿಸಬೇಕೆಂದು ಅಲ್ಲಿಯೇ ಇದ್ದು ಹೋರಾಟಮಾಡುವ ದೃಢಸಂಕಲ್ಪ ಕೈಗೊಂಡರು. ಗಮನಿಸಬೇಕಾದ ವಿಚಾರವೆಂದರೆ ಯಾವತ್ತೂ ತಾನು ಈ ದಿಸೆಯಲ್ಲಿ ಸಂಪೂರ್ಣಯಶಸ್ಸನ್ನು ಪಡಯಲೇಬೇಕೆನ್ನುವ ಮೊಂಡುತನ ಅವರಲ್ಲಿಲ್ಲವಾಗಿತ್ತು. ಅವರಿಗೆ ಗೆಲವು ಎನ್ನುವದು ವಿರೋಧಿಗಳ ಹೃದಯಪರಿವರ್ತನೆಮಾಡುವದಾಗಿತ್ತು. ಗಾಂಧೀಜಿ ಸಂಕೀರ್ಣವಾಗುವದು ಇಲ್ಲಿಯೇ. ಅವರ ಈ ನಿಲುವು ಅರ್ಥವಾದರೆ ಅವರನ್ನು ಸುಖಾಸುಮ್ಮನೇ ಟೀಕಿಸಲು ಯಾರೂ ಹೋಗುವದಿಲ್ಲ.


ಇದೇ ನಿಲುವನ್ನು ಬೋಯರ್ ಯುದ್ಧದಲ್ಲಿ ಗಮನಿಸಬಹುದು. ವಾಸ್ತವವಾಗಿ ಬೋಯರ್ ಯುದ್ಧವೆನ್ನುವದು ಎರಡು ಬಿಳಿಯಜನಾಂಗಗಳ ನಡುವಿನ ಹೋರಾಟ. ಅದು ಮೊದಲು ದೋಚಲು ಬಂದವರ ಮತ್ತು ನಂತರ ಬಂದವರ ನಡುವೆ ನಡೆದಯುದ್ಧವಾಗಿತ್ತು. ಬೋಯರ್‍ಗಳೆಂದರೆ ದಕ್ಷಿಣಾಫ್ರಿಕಾಕ್ಕೆ ಬ್ರಿಟಿಷರಿಗಿಂತಲೂ ಮೊದಲು ಬಂದ ಡಚ್ಚರು, ಫ್ರಾನ್ಸ್, ಮತ್ತು ಜರ್ಮನಿಯವರು. ದಕ್ಷಿಣಭಾಗ ಬೋಯರುಗಳ ಅಧೀನದಲ್ಲಿತ್ತು. 1899ರಿಂದ 1902ರವರೆಗೆ ನಡೆದ ಈ ಯುದ್ಧದಲ್ಲಿ ಮೊದಲು ಬೋಯರ್‍ಗಳ ಕೈಮೇಲಾಯಿತು. ಈ ಸಂಕ್ರಮಣದಲ್ಲಿ ಗಾಂಧೀಜಿ ಭಾರತೀಯರನ್ನು ಬ್ರಿಟಿಷ ಸೈನ್ಯಕ್ಕೆ ಸೇರುವಂತೆ ಪ್ರೋತ್ಸಾಹಿಸಿದರು. ಅಷ್ಟೂ ಅಲ್ಲದೇ ಯುದ್ಧದಲ್ಲಿ ಗಾಯಗೊಂಡ ಸೈನಿಕರ ಸೇವೆಗಾಗಿ ಸುಮಾರು 1200ಕ್ಕೂ ಹೆಚ್ಚು ಭಾರತೀಯ ಸ್ವಯಂಸೇವಕರ ತಂಡವನ್ನು ಕಟ್ಟಿ ಗಾಯಾಳುಗಳ ಶುಶ್ರೂಶೆ ಮಾಡಿದರು. ಇದು ಬ್ರಿಟಿಷರಿಗೆ ಗಾಂಧೀಜಿಯವರ ಕುರಿತು ವಿಶ್ವಾಸ ಹುಟ್ಟಲು ಕಾರಣವಾಯಿತು. ರಾಜಕೀಯವಾಗಿ ತಾವೆಲ್ಲಾ ಬ್ರಿಟಿಷ ಪ್ರಜೆಗಳು ಎನ್ನುವದನ್ನು ಗಾಂಧೀಜಿ ಯಾವತ್ತೂ ನಿರಾಕರಿಸಿರಲಿಲ್ಲ. ಅವರ ಹೋರಾಟವೆ ಆಳುವ ಬ್ರಿಟೀಷರ ಮನಸ್ಥಿತಿಯನ್ನು ಬದಲಾಯಿಸುವ ಸಲುವಾಗಿತ್ತು. ತಾವೆಲ್ಲಾ ಬ್ರಿಟಿಷ ಪ್ರಜೆಯಾಗಿರುವದರಿಂದಲೇ ಅವರಲ್ಲಿ ತಮ್ಮ ಹಕ್ಕುಗಳನ್ನು ಕೇಳುತ್ತಿದ್ದೇನೆ ಎನ್ನುವದು ಅವರನಿಲುವು. ಅರಸೊತ್ತಿಗೆಗೆ ಸಂಕಟ ಎದುರಾದಾಗ ಅರಸೊತ್ತಿಗೆಯಪರ ನಿಲ್ಲುವದು ತನ್ನ ಕರ್ತವ್ಯವೆಂದು ಅವರು ಬಗೆದಿದ್ದರು. ಈ ಕಾರಣಕ್ಕಾಗಿಯೇ ಕ್ರಾಂತಿಕಾರಿಗಳು ಬ್ರಿಟಿಷರ ವಿರುದ್ಧಹೋರಾಡುವಾಗ ಅವರಮೇಲೆ ರಾಜದ್ರೋಹದ ಆಪಾದನೆಯಮೇಲೆ ಗಲ್ಲಿನ ಶಿಕ್ಷೆವಿಧಿಸಿದಾಗ ಗಾಂಧೀಜಿ ಮೌನವಾಗಿದ್ದಿದ್ದು. ಭಾರತ ಅಭಿವೃದ್ಧಿಸಾಧಿಸಬೇಕಾದರೆ ಬ್ರಿಟಿಷರ ಮೂಲಕವೇ ಸಾಧ್ಯ, ಹಾಗಾಗಿ ಗಾಂಧೀಜಿಗೆ ಭಾರತಕ್ಕೆ ಪೂರ್ಣಸ್ವರಾಜ್ಯಕ್ಕಿಂತ ಅವಲಂಬಿತ ರಾಜ್ಯವಾಗಿ ಇದ್ದರೆ ಉನ್ನತಿ ಸಾಧಿಸಲು ಸುಲಭವೆಂದು ದೃಢವಾಗಿ ನಂಬಿದ್ದರು. ಹಿಂಸೆಯೆನ್ನುವದು ಮಾನವತೆಯ ಮೊದಲ ಶತ್ರು; ಮೊದಲು ಇದನ್ನು ಗೆಲ್ಲು; ಅದುವೇ ಪೂರ್ಣಸ್ವಾತಂತ್ರ್ಯವೆನ್ನುವ ನಿಲುವು ಅವರದಾಗಿತ್ತು.

ಸತ್ಯ ಮತ್ತು ಅಹಿಂಸೆಯನ್ನು ಅರ್ಥಮಾಡಿಕೊಂಡವರಿಗೆ ಗಾಂಧಿ ಸಂಕೀರ್ಣರಲ್ಲ


ನಾರಾಯಣ ಯಾಜಿ

11 views0 comments
bottom of page