ಗಾಂಧಿ ಮೆಚ್ಚಲಿಲ್ಲ ದುಡ್ಡು
ದುಡ್ಡಿನಲ್ಲಿ ಗಾಂಧಿ ಅಚ್ಚು!
ಗಾಂಧಿ ಬಯಸಲಿಲ್ಲ ಗಾದಿ
ಭಕ್ತರಿಗೆ ಗಾದಿ ವ್ಯಾಧಿ!
ಹೆಸರಾಯ್ತು ಗಾಂಧಿ ಟೋಪಿ
ಗಾಂಧಿ ತಲೆಯು ಅದಕೆ ಮಾಫಿ!
ಸುಳಿಯ ಒಳಗೆ ಸಿಕ್ಕು ತತ್ವ
ಕಳೆದುಕೊಂಡು ಎಲ್ಲ ಸತ್ವ!
ಸ್ವಾರ್ಥಿಗಳ ಸುತ್ತಮುತ್ತ
ಬಂಧಿಯಾಗಿ ಚಡಪಡಿಸುತ್ತ,
ಗಾಂಧಿ ಎಂಬ ಪುಣ್ಯ ಪುರುಷ
ನಾಡಿಗಿಂದು ನಾಮಮಾತ್ರ!
ಬೇಡವೆಂದು ಹೋದರೇನು?
ಬಿಡುತಲಿಲ್ಲ ಅವನ ನಾವು!
ಕುರ್ಚಿ ಮೋಹವಿರುವ ತನಕ
ಗಾಂಧಿ ಅಳಿಯಲಾರನು.
ಉಡದ ಹಿಡಿತದೊಳಗೆ ಸಿಲುಕಿ
ದಿನವು ಸಾಯುತ್ತಿರುವನು!
ಸೇವೆ ಸತ್ಯ ಶಾಂತಿದೂತ
ಸತ್ತು ಬದುಕುತ್ತಿರುವನು!
✍ಹೊನ್ನಮ್ಮ ನಾಯಕ, ಅಂಕೋಲಾ.
Commentaires