ಹೆಚ್ಚುವ ವರೆಗೆ ಗೊತ್ತಾಗುವುದಿಲ್ಲ
ಗುಜ್ಜೆಯ ಒಳಸ್ವರೂಪ
ಚುನಾವಣೆಯ ಫಲಿತಾಂಶದ ಹಾಗೆ
ಹೆಚ್ಚು ಬೆಳೆದಿದ್ದರೆ
ದೊಡ್ಡ ಹೋಳುಗಳಾಗಿ ಕತ್ತರಿಸಿ
ಬೇಯಿಸಿ
ಹದವಾಗಿ ಜಜ್ಜಬೇಕು
ಕಡಿಮೆಯಾಗಿದ್ದರೆ ಹೆಚ್ಚಬೇಕು ಸಣ್ಣಗೆ
ಉಪ್ಪು ಖಾರ ಸೇರಿ ಸರಿಹೊಂದಲು
ಚೆನ್ನಾಗಿ ಬೇಯಲು
ಬೆಳೆದಿದ್ದರೆ ಬೀಜ
ಕತ್ತರಿಸಿ ತೆಗೆಯಬೇಕು ಕಾಸೆ
ಬೇರ್ಪಡಿಸಬೇಕು ರಚ್ಚೆ
ಹೊರ ತೆಗೆಯಬೇಕು
ಒಳ್ಳೊಳ್ಳೆಯ ತೊಳೆ
ಊಹಿಸಬಹುದು ಕೆಲವೊಮ್ಮೆ
ಹೊರನೋಟಕ್ಕೆ
ಬೆಳವಣಿಗೆಯ ಸ್ವರೂಪ
ಮುಳ್ಳು ಅಡ್ಡಡ್ಡ ಬೆಳೆದು ಹರಡಿಕೊಂಡಂತಿದ್ದರೆ
ಗುಜ್ಜೆಯ ಗಾತ್ರ ತುಸು ದೊಡ್ಡದಾಗಿದ್ದರೆ
ಎಷ್ಟೆಂದರೂ ಅದು ಬಿಟ್ಟುಕೊಡುವುದಿಲ್ಲ ಗುಟ್ಟು
ಹೆಚ್ಚುವ ತನಕ
ಹೆಚ್ಚಿಸುತ್ತದೆ ಅಂತರಂಗದ ಕದನ
ಹೆಚ್ಚುವವನ ಕೈಗೆ ಅಂಟುಮೇಣ
ಅಡುವವನಿಗೆ ಬೆವರು
ಪ್ರಜೆಗಳಿಗೆ ಆಯುವ ಕೆಲಸ
ರುಚಿಯಾದ ಪಲ್ಯ ಮಾಡುವ ತವಕ!
*- ಡಾ. ವಸಂತಕುಮಾರ ಪೆರ್ಲ*
Comentarios