top of page

ಗಂಗಾವಳಿ ನದಿಯ ಒಡಲಲ್ಲಿ

ಆ ಮುದುಕಿಯೊಬ್ಬಳು ಗಂಗಾವಳಿ ನದಿಯ ದಂಡೆಯ ಮೇಲೆ ದುಃಖಿತಳಾಗಿ ನದಿಯನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅವಳನ್ನು ನೋಡಿದಾಗ ನನಗೆ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದವು. ಹೌದು ಆ ದಿನಗಳಲ್ಲಿ ಅವಳದೊಂದು ಸುಂದರವಾದ ಸಂಸಾರವಾಗಿತ್ತು .ಆಕೆಯ ಗಂಡ ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡಲು ಹೋಗುತ್ತಿದ್ದನು. ಅವಳು ಕೂಡ ಗಂಗಾವಳಿ ನದಿಯು ಉಬ್ಬರವಿಳಿತದ ಸಂದರ್ಭದಲ್ಲಿ ಊರಿನ ಜನರ ಮನೆಯಿಂದ ತೆಂಗಿನ ಮರದ ಗರಿ (ಹೆಡಲು ,ಸೋಗೆ ) ಹಾಗೂ ತೆಂಗಿನ ಮರದ ಸಿಪ್ಪೆಯನ್ನು ತಂದು ಅದನ್ನು ನದಿಯಲ್ಲಿ ನೆನೆಸಿ ಮಾರನೆಯ ದಿನ ಪುನಃ ನದಿ ಇಳಿತದ ಸಂದರ್ಭದಲ್ಲಿ ಅದನ್ನು ಹೊರತೆಗೆದು ನಂತರ ಆ ತೆಂಗಿನ ಸೋಗೆಯನ್ನು ಹೆಣೆಯುತ್ತಿದ್ದಳು. ಹಿಗ್ಗಿದ ತೆಂಗಿನ ಸಿಪ್ಪೆಯನ್ನು ಒಂದು ದೊಡ್ಡ ಕಲ್ಲಿನ ಮೇಲೆ ಬಡಿಗೆಯಿಂದ ಬಡಿದು ನಂತರ ಅದರಿಂದ ಹಗ್ಗವನ್ನು ತಯಾರಿಸುತ್ತಿದ್ದಳು. ಅದನ್ನು ತಯಾರಿಸಿ ಜನರಿಂದ ಅಲ್ಪ ಸ್ವಲ್ಪ ಹಣವನ್ನು ಪಡೆದು ತನ್ನ ಅವಶ್ಯಕತೆಗೆ ಬೇಕಾಗುವ ಖರ್ಚನ್ನು ತಾನೇ ಮಾಡಿಕೊಳ್ಳುತ್ತಿದ್ದಳು. ನದಿಯು ಇಳಿತವಾದ ಸಂದರ್ಭದಲ್ಲಿ ನದಿಯಲ್ಲಿ ಬಿಳುತ್ತಿದ್ದ ಚಿಪ್ಪೆ ಕಲ್ಲು ,ಕಲ್ಗ (ಕಲ್ವಾ ) ವನ್ನು ಆರಿಸಿ ತಂದು ಮನೆ ಮಂದಿಗೆಲ್ಲಾ ಊಣ ಬಡಿಸುತ್ತಿದ್ದಳು .ಇದು ಆಕೆಯ ದಿನಚರಿ ಅಂತಾನೇ ಹೇಳಬಹುದು . ಆಕೆಗೆ ಒಟ್ಟು 5 ಜನ ಗಂಡು ಮಕ್ಕಳಿದ್ದರು. ಹೀಗೆ ಸುಖಮಯ ಸಂಸಾರ ಅವಳದಾಗಿತ್ತು. ವರ್ಷಗಳು ಕಳೆದಂತೆ ಪತಿಯು ಅನಾರೋಗ್ಯದ ಕಾರಣ ಮರಣ ಹೊಂದಿದನು. ದುರಾದೃಷ್ಟವೆಂಬಂತೆ ಕೆಲ ವರ್ಷದ ನಂತರ ಅವಳ ಐದು ಮಕ್ಕಳಲ್ಲಿ ನಾಲ್ಕು ಮಕ್ಕಳು ದುಶ್ಚಟಗಳ ದಾಸರಾಗಿ ಅನಾರೋಗ್ಯದಿಂದ ಮರಣ ಹೊಂದಿದ್ದರು. ಇದ್ದ ಒಬ್ಬ ಮಗನು ಮದುವೆಯಾಗಿ ತಾಯಿಯಿಂದ ದೂರವಾಗಿ ಬೇರೆ ಕಡೆ ಸಂಸಾರ ನಡೆಸುತ್ತಿದ್ದನು. ಹೀಗೆ ಅವಳು ಒಬ್ಬಂಟಿಯಾಗಿದ್ದಳು. ಈಗ ಅವಳ ಮೂಖದಲ್ಲಿ ಆಗಿನ ಸಂತಸವಿರಲಿಲ್ಲಾ ಬರಿ ಅವಳ ಕಣ್ಣಿನಲ್ಲಿ ದುಃಖದ ಛಾಯೆ ಮಾತ್ರ ಎದ್ದು ಕಾಣುತಲಿತ್ತು. ಬಹುಶಃ ಅವಳು ಆ ನದಿಯನ್ನು ದಿಟ್ಟಿಸಿ ನೋಡುತ್ತಿರುವುದನ್ನು ಗಮನಿಸಿದಾಗ ನನಗೆ ಆ ನದಿಯೇ ಅವಳ ಮನಸ್ಸಿನ ದುಃಖವನ್ನು ಮರೆಸುತ್ತಿತ್ತೇನೋ ಎಂಬ ಭಾವನೆ ನನ್ನ ಮನಸ್ಸಲ್ಲಿ ಮೂಡುತ್ತಿತ್ತು. ಮಾರನೆಯ ದಿನ ನಾನು ನನ್ನ ರಜೆಯನ್ನು ಮುಗಿಸಿ ಕರ್ತವ್ಯಕ್ಕೆ ಮರಳಲು ನಮ್ಮೂರಿನ ಬಸ್ ಸ್ಟಾಪ್‍ವರೆಗೂ ನಡೆದುಕೊಂಡು ಹೋಗುತ್ತಿದ್ದೆ . ಆ ಸಮಯದಲ್ಲಿ ಗಂಗಾವಳಿ ನದಿಯ ನೀರು ಸಂಪೂರ್ಣವಾಗಿ ಇಳಿತವಾಗಿತ್ತು. ಆವಾಗ ಅಲ್ಲಿ ನನ್ನ ಕಣ್ಣಿಗೆ ಕಂಡಿದ್ದು ಅದೇ ಮಹಿಳೆ ನದಿಯಲ್ಲಿ ನೆನೆಹಾಕಿದ್ದ ತೆಂಗಿನ ಮರದ ಸೋಗೆಯನ್ನು ನದಿಯಿಂದ ಹೊರ ತೆಗೆದು ರಸ್ತೆಯ ಮೇಲೆ ತಂದು ಹಾಕುತ್ತಿದ್ದಳು. ಹಾಗೇಯೇ ಅವಳು ತನ್ನ ಹತ್ತಿರವಿದ್ದ ಕೈಚೀಲದಲ್ಲಿ ಕಲ್ವಾ ,ಚಿಪ್ಪೆಕಲ್ಲನ್ನು ತನ್ನ ಆ ದಿನದ ಊಟಕ್ಕೆ ಅಣಿ ಮಾಡಿಕೊಂಡಿದ್ದಳು. ಹೀಗೆ ಅವಳು ತನ್ನ ಆ ದಿನದ ನೋವ ಮರೆಯತ್ತಾ ತನ್ನ ಕಾರ್ಯದಲ್ಲಿ ಮಗ್ನಳಾಗಿದ್ದಳು. ಅದರಂತೆ ಅವಳು ತನ್ನ ಭವಿಷ್ಯದ ದಿನಗಳನ್ನು ಮುಂದೂಡುತ್ತಿದ್ದಳು. ಅತ್ತ ಅವಳ ದುಃಖದ ನೋವ ಮರೆಸುವ ಗಂಗಾವಳಿ ನದಿಯು ಮಾತ್ರ ತನ್ನಷ್ಟಕ್ಕೆ ತಾನು ಸಮುದ್ರ ಸಂಗಮದ ಸಂತಸದಲ್ಲಿ ತಲ್ಲಿನಳಾಗಿ ಹರಿಯುತ್ತಿದ್ದಳು . . . . . . . . . . . . . . . .…… ರತೀಶ್ ಮಂಜುಗುಣಿ




199 views1 comment

1 Comment


Ravi Naik
Ravi Naik
Nov 23, 2020

ಎಲ್ಲವನ್ನೂ ಕಳೆದುಕೊಂಡ ಹೆಣ್ಣೊಬ್ಬಳ ಬದುಕಿಗಾಗಿನ ಹೋರಾಟದ ಕಥೆ ಚೆನ್ನಾಗಿದೆ ರತೀಶ

Like
bottom of page