top of page

ಗರ್ಭಗುಡಿಯ ಬೆಳಕಿನಲ್ಲಿ ನಿತ್ಯೋತ್ಸವ - ಪ್ರೊ. ಮಟ್ಟಿಹಾಳರ ನಾಲ್ಕು ಕವನಗಳು

ಗರ್ಭಗುಡಿಯ ಬೆಳಕು


ಒಳಗೊಳಗೆ ಸೊಕ್ಕಿ

ತೆಕ್ಕಿ ಮುಕ್ಕಿ ಬಿದ್ದು ಉಕ್ಕುಕ್ಕಿ ಹರಿದ

ಎರಡು ಜೀವಗಳ

ಆಸೆ ಕನಸುಗಳ ಮೈಗೊಂಡ ಭ್ರೂಣವೇ

ನನ್ನ ಗರ್ಭದ ಫಲವತ್ತತೆಗೆ ಸಾಕ್ಷಿಯಾಗಿ

ಬೆಳೆಯುತ್ತ ಆಕಾರ ತಳೆಯುತ್ತ

ಸಾಗುವ ನಿನ್ನಾಟವೇ ಚೆಂದ!


ಕಣ್ಣಿಗೆ ಕಾಣದ ಕಣ ಕಣಗಳ ಕೂಟವೇ

ಕ್ಷಣ ಕ್ಷಣವೂ ನನ್ನ ಜೀವರಸ ಹೀರಿ

ಚಿಗುರಿ ಪಿಂಡವಾಗಿ ಅಂಗಾಂಗವಾಡಿಸುವ ಪರಿ

ಭೋರ್ಗರೆವ ಸಾಗರವೇ

ಮೈಯೊಳಗೆ ಹರಿವಷ್ಟು ಆನಂದ ಲಹರಿ

ಕಂದ ನಿನ್ನಿಂದ


ನನ್ನೊಡಲ ಸಾಗರದಲ್ಲಿ

ಈಜುವ ಮೀನು ನೀನು!

ಹೊರಬರುವ ತವಕದಲ್ಲಿ

ಮೀಟುವ ಮಿಡಿಯುವ ನಿನ್ನ ತಿವಿತ

ಕಚಗುಳಿಯನಿಡುವಾಗ

ಆಕಾಶ ಹಿಡಿಸದ ಹಾಗೆ ಹಿಗ್ಗುವೆ ನಾನು

ನಿನ್ನನೆದುರುಗೊಳ್ಳುವ ಕಾತರಕೆ

ಹಾರುವೆ ಹಾಡುವೆ ನಿನ್ನ ರಾಗಾನುರಾಗಗಳ

ಅಲೆ ಅಲೆಯಲಿ ಅಲೆದಾಡುವೆ

ನಿನ್ನದೇ ತಾಳಮೇಳಗಳ ತುಂಬಿಕೊಂಡು

ತೊನೆದಾಡುವೆ ಜೋಲಿ ಹೊಡೆಯುತ್ತ

ತೇಲಿ ತೇಲಿ ಸಾಗುವೆ

ನೆಲಕಂಟಿಯೂ ಅಂಟದ ಹಾಗೆ


ಒಳಗಿದ್ದರೂ

ನೀನಾಡುವ ಆಟ ಒಂದಲ್ಲ ಎರಡಲ್ಲ

ನಿನ್ನ ತುಂಟಾಟಕಿಲ್ಲ ಕೊನೆ!

ಏನೇನೋ ಬೇಡುವೆ ಕಾಡುವೆ

ನನ್ನೊಳಗೆ ಗೊತ್ತಿರದ ಬಯಕೆಗಳ

ಅರಳಿಸಿ ಕೆರಳಿಸಿ ಮೋಜು ನೋಡುವೆ

ನಿನ್ನ ಹಸಿವುಗಳನೆಲ್ಲ

ನನ್ನೊಳಗೆ ಮೂಡಿಸಿ ಪಡೆದುಕೊಳ್ಳುವ

ಸೋಜಿಗದ ಪರಿಯೇ ಬೇರೆ!


ನನ್ನ ಇರುವು ಅರಿವುಗಳ ಕರುಳ ಕುಡಿಯೇ

ಗರ್ಭಗುಡಿಯಲಿ ಕುಳಿತು

ಅನಂತಕೆ ಜೋಡಿಸುವ ದೈವದ ಕಿಡಿಯೇ

ಕಾಯುತ್ತಿರುವೆ ನಿನಗಾಗಿ ತುದಿಗಾಲಲ್ಲಿ

ಬೆಳಕಾಗಿ ಹೊರಚೆಲ್ಲುವ

ಪೂರ್ಣಾವತಾರಕ್ಕಾಗಿ

ಬಾ ಮಗುವೇ ಬಾ ನಗುವೇ

ಒಲವಿನ ಪರಿಪಾಕವಾಗಿ!


ಮಗಳ ಹುಟ್ಟು ಹಬ್ಬ


ಮಗಳೇ,

ನಿನ್ನ ಹುಟ್ಟು

ಹಬ್ಬವಾಯಿತು ನನಗೆ

ವರ್ಷಕ್ಕೊಂದು ಸಲವಲ್ಲ

ದಿನ ದಿನವು, ಪ್ರತಿ ಕ್ಷಣವೂ.

ನನ್ನ ಜೀವಕ್ಕೆ ಮರು ಹುಟ್ಟು ನೀನು!

ನೀನು ಬೆಳೆದಂತೆ ನಾನು ಹಿಗ್ಗುತ್ತಿರುವೆ

ಒಳಗೆ ಹೊರಗೆ

ಕೊನೆ ಇರದ ಹಾಗೆ.

ನಿನ್ನ ನಗೆಯೊಳಗೆ ಮಿಂದು

ತೇಲುತ್ತಿರುವೆ ಭಾರಗಳನ್ನೆಲ್ಲ

ಕಳೆದುಕೊಂಡು

ಹಗೂರಾಗಿ ಹೂವಾಗಿ.

ಕಣ್ಣು ತುಂಬುವ ನಿನ್ನ ಮುಗ್ದರೂಪ

ನನ್ನಾಳದ ಮೊಲೆಮೊಲೆಯ

ಕತ್ತಲೆಯ ಚದುರಿಸುವ ದೀಪ!

ನಿನ್ನ ಒಡನಾಟ

ಲೋಕದ ಹೊಗೆ ಧಗೆಗಳನ್ನೆಲ್ಲ

ಹೇಳ ಹೆಸರಿಲ್ಲದ ಹಾಗೆ

ಮಟಾಮಾಯಗೊಳಿಸುತ್ತದೆ.

ಹರ್ಷದ ಉತ್ಕರ್ಷದ ಹೊಳೆ ನೀನು

ಹರಿಯುತ್ತಲಿರು ನಿರಂತರ

ಮಣ್ಣೊಳಗೆ ಮಕರಂದವಾಗಿ ಉಕ್ಕುತ್ತ

ಬಣ್ಣಗಳಾಗಿ ಕಣ್ಣ ಕುಕ್ಕುತ್ತ

ಬೆಳೆ ನೀನು ಫಲಭರಿತ ವೃಕ್ಷಗಳ

ಜೀವ ಸೆಲೆಯಾಗಿ

ನಲಿವುಗಳ ತಣ್ಣಗಿನ ನೆಲೆಯಾಗಿ


ನಿತ್ಯ ಬೆಳಕಿನ ಉತ್ಸವ

ನೀನು ಹುಟ್ಟಿದ ಗಳಿಗೆ ಬೆಳಕು ಹೊಮ್ಮಿತು ಭುವಿಗೆ

ನಿನ್ನ ಜೀವದ ಕಾಂತಿ ಮನೆ ತುಂಬಿತು

ಮನದ ಕತ್ತಲೆ ತೊಲಗಿ ಬೆಳಕು ಮೂಡಿತು

ಜ್ಯೋತಿ ಎನ್ನುವ ಹೆಸರು ಎದೆ ತುಂಬಿತು


ಉಸಿರು ಉಸಿರಲಿ ನಿನ್ನ ಹೆಸರೆ ಹರಿದಾಡುವುದು

ಮೈಯ ಕಣ ಕಣದಲ್ಲಿ ಕೋಟಿ ದೀಪೋತ್ಸವ

ನಿನ್ನ ನಡೆಯಲಿ ಬೆಳಕು ನಿನ್ನ ನುಡಿಯಲಿ ಬೆಳಕು

ಹೆಜ್ಜೆ ಹೆಜ್ಜೆಗೂ ನಿತ್ಯ ಬೆಳಕಿನ ಉತ್ಸವ


ನಿನ್ನ ನಗೆ ಬೆಳಕು ಬಗೆ ಬಗೆಯ ಬಣ್ಣಗಳ

ಕಾಮನ ಬಿಲ್ಲಾಗಿ ಮೂಡುತ್ತಿದೆ

ನಮ್ಮ ಕನಸಿಗೆ ರೆಕ್ಕೆ ಹಚ್ಚಿ ಬಯಲಿಗೆ ಬಿಟ್ಟು

ಒಲವಿನ ಜೋಗುಳ ಹಾಡುತ್ತಿದೆ


ಮೈಮನದ ಗೋಡೆಗಳ ಸೀಳಿ ಹೊಮ್ಮುವ ಬೆಳಕೆ

ಸ್ವಯಂ ದೀಪಕ ವಜ್ರ ತೇಜ ನೀನು

ನೋವು ಸಂಕಟಗಳ ಬಂಡೆ ಬೆಟ್ಟಗಳನ್ನು

ಒಡೆದು ನುಗ್ಗುವ ದಾರಿ ದೀಪ ನೀನು


ಕಠಿಣ ವಜ್ರದ ಹಾಗೆ ಕಣ್ಣು ಕುಕ್ಕಿದರೂನು

ಹೂವಿನಂತಃಕರಣ ಬೆಳದಿಂಗಳಾಗಿ

ಹಿತವಾಗಿ ಜೊತೆಗೂಡಿ ಆತ್ಮಗಳ ತೂಗುವುದು

ಹೃದಯದ ಬಯಲೊಳಗೆ ತೊಟ್ಟಿಲಾಗಿ


ನನ್ನ ಅಸ್ತಿತ್ವದ ಅರಳು


ಮಗಳೇ

ನನ್ನ ಬಾಳಿನ ಹಾಡ ಹಗಲೇ

ಕನಸುಗಳ ಮುಗಿಯದ ಮುಗಿಲೇ

ನನ್ನೆದೆಯ ದಟ್ಟ ಕತ್ತಲೆಯಲ್ಲಿ

ಬೆಳಕಿನ ಗರಿಬಿಚ್ಚಿ ಆಡುವ

ನೂರು ಕಣ್ಣಿನ ನವಿಲೇ


ನನ್ನ ಜನ್ಮದಾಕಾಶದಲ್ಲಿ ಕವಿದ

ಕರಿಮೋಡಗಳ ಸೀಳಿ ಸಿಡಿವ ಸಿಡಿಲೇ

ಒಳ ಹೊರಗೆ ತೆರಪಿಲ್ಲದೆ ಸಂಚರಿಸುವ

ಕಣ್ಣ ಕೋರೈಸುವ

ಪ್ರತೀಕ್ಷಣದ ಮಿಂಚು ಬಳ್ಳಿಯೇ


ಬಿರುಕು ಬಿಟ್ಟ ಬರಗಾಲದ ಭೂಮಿಗೆ

ಸುರಿಸುರಿದು ಉಕ್ಕೇರಿ ಹರಿವ

ಅಕ್ಕರದ ಮಳೆಯೇ


ನೆನೆದ ನೆಲದೆದಿಯಿಂದ ಪುಟಿದೇಳುವ

ತರತರದ ಬಣ್ಣಗಳಲ್ಲಿ ಹೂಬಿಡುವ

ಕಣ್ಣ ಸೆಳೆವ ಕಾರಂಜಿಯೇ

ಬರಲಿರುವ ಜೀವ ವೃಕ್ಷದಿ

ಫಲವಾಗಿ ಸಲುವ ಪವಾಡವೇ


ನನ್ನ ಉಸಿರ ಹಾದಿಗುಂಟ

ಅಡಿಯಿಡುವ ಕವನವೇ

ಏಕಾಂತದ ಮೌನದೊಳಗೆ

ಕರುಳ ಲಯಲಹರಿಗಳ ಎಳೆ ಹಿಡಿದು

ಕುಣಿವ ಜೀವ ನರ್ತನವೇ


ನೀ ನನ್ನ ಮಗಳಲ್ಲ

ಅಸ್ತಿತ್ವದ ಅರಳು

ನನ್ನ ಬದುಕ ಬೆಳಗುತ್ತಿರುವ ಹರಳು

ಕತ್ತಲಾಗಿ ಕವಿಯದ ತಂಪು ನೆರಳು


ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ

ಕರ್ನಾಟಕ ವಿಶ್ವವಿದ್ಯಾಲಯ

ಧಾರವಾಡ


86 views1 comment

1 comentario


shreepadns
shreepadns
23 sept 2020

ಗರ್ಭ ಗುಡಿಯ ಬೆಳಕಿನಲ್ಲಿ ನಿತ್ಯೋತ್ಸವ ಪ್ರೊ.ನಿಜಲಿಂಗ ಮಟ್ಟಿಹಾಳ ಅವರ ಜೀವದಾಯಿಯಾದ ಕವಿತೆ.ಶಬ್ದ,ಪಾಕ,ಶಯ್ಯೆ ಮತ್ತು ಶೈಲಿಯ ಮೂಲಕ ಈ ಕವಿತೆ ಉಂಟು ಮಾಡುವ ಸಂಚಲನ ಮತ್ತು ಸ್ಪಂದನ ಚೇತೋಹಾರಿ.ಕವಿ ಮಟ್ಟಿಹಾಳ ಅವರಿಗೆ ಮನದಾಳದ ಅಭಿನಂದನೆಗಳು. ಡಾ.ಶ್ರೀಪಾದ ಶೆಟ್ಟಿ.

Me gusta
bottom of page