top of page

ಖಾಲಿ-ಖಾಲಿ

ಕನ್ನಡದ ಪ್ರಸಿದ್ಧ ನಾಟಕಕಾರರಾಗಿದ್ದ ಟಿ.ಪಿ.ಕೈಲಾಸಂರವರ ಜೀವನದಲ್ಲಿನ ಹಾಸ್ಯವೊಂದು ನೆನಪಾಗುತ್ತಿದೆ. ಒಮ್ಮೆ ವ್ಯಾಯಾಮ ಮಾಡುತ್ತಿದ್ದಾಗ ಕೈಲಾಸಂರ ಪಕ್ಕದ ಕೋಣೆಯಲ್ಲಿದ್ದವನೊಬ್ಬ ತನಗೆ ಶೀರ್ಷಾಸನ ಸಾಧ್ಯವಿಲ್ಲ ; ರಕ್ತವೆಲ್ಲ ತಲೆಗೆ ಬಂದಂತಾಗುತ್ತದೆ ಎಂದನಂತೆ. ಆಗ ಕೈಲಾಸಂ ' ಓಹೋ ಹಾಗೋ ! Nature abhors vacuum.’ ಎಂದುಬಿಟ್ಟರು. ಅಂದರೆ - ಪೃಕೃತಿ ಖಾಲಿತನವನ್ನು ಇಷ್ಟಪಡುವದಿಲ್ಲ. (ಅವನ ತಲೆಯಲ್ಲಿ ಏನೂ ಇಲ್ಲ, ಖಾಲಿ ಖಾಲಿ ಎಂದರ್ಥ ! ) ಎಲ್ಲರೂ ಗೊಳ್ಳೆಂದು ನಕ್ಕರು. ಕೇಳಿದವನ ಮುಖ ಪೆಚ್ಚಾಗಿ ಹೋಯಿತು.

ಈ ಖಾಲಿತನದ ಬಗ್ಗೆ ಎಲ್ಲರಿಗೂ ಅನುಭವವಾಗಿರಲು ಸಾಕು. ಆಗಿಯೇ ಇರುತ್ತದೆ. ಹೋಟೆಲ್ಲಿಗೆ ಹೋದಾಗ ಖಾಲಿ-ದೋಸೆ ಸವಿಯುವಷ್ಟರವರೆಗೆ 'ಖಾಲಿ' ನಮಗೆ ಅರ್ಥವಾಗಿಬಿಟ್ಟಿದೆ ಎನ್ನುತ್ತೀರಾ ?

ಚಿಕ್ಕವರಿದ್ದಾಗ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮೊದಲನೆಯ ಪ್ರಶ್ನೆ - 'ಈ ಕೆಳಗಿನ ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ' . ಆ ಖಾಲಿ ಜಾಗೆಗಳು ಎಷ್ಟೋ ಸಲ ಅಪರಿಚಿತ ಪ್ರದೇಶಗಳಾಗಿಯೇ ಉಳಿದುದುಂಟು ! ಮುಂದಿನ ಪ್ರಶ್ನೆಗಳನ್ನು ಉತ್ತರಿಸಲು ಹೋದಂತೆ, ತಲೆ ಖಾಲಿ ಖಾಲಿ ಅನಿಸಿದ ಅನುಭವ ಎಷ್ಟು ಜನರಿಗಾಗಿಲ್ಲ ?

ದೈನಂದಿನ ಜೀವನದಲ್ಲಿ ತುಂಬಿದ ಜೇಬು ನೂರು ಆಟ ಆಡಿಸಿದರೆ, ಖಾಲಿ ಜೇಬು ನೂರು ಪಾಠ ಕಲಿಸುತ್ತದೆ. ಖಾಲಿ ಕೈನಲ್ಲಿ ಜೀವನ ಕಷ್ಟ ಎನ್ನುತ್ತೇವೆ. ಹೊಟ್ಟೆ ಖಾಲಿಯೆನಿಸಿದಾಗ ಆಗುವ ಚಡಪಡಿಕೆ ? ಹೇಳಲಸದಳ.

ಹೊರಬಂದು ಮೇಲೆ ಖಾಲಿ ಆಕಾಶ ಕಂಡರೆ ಶುಭ್ರತೆಯ ಅರಿವಾಗುತ್ತದೆ. ಅದೇ ಪತ್ತೇದಾರಿ ಕಾದಂಬರಿಯಲ್ಲಿ ಬರುವ 'ಖಾಲಿ' ಕಾಗದ ಬೇರೆಯದೇ ಸುಳಿವನ್ನು ಹುಟ್ಟುಹಾಕಿಬಿಡುತ್ತದೆ. ಪಾನಪ್ರಿಯರಿಗೆ ಖಾಲಿ ಬಾಟಲು ಕಂಡರೆ ಅಣಕಿಸಿದಂತಾಗುತ್ತದೆ. ಕೆಲವೊಮ್ಮೆ ಅತೀ ಮುಖ್ಯವಾದ ವ್ಯವಹಾರದ ವಿಷಯ ಮಾತಾಡುತ್ತಿರುವಾಗಲೇ ಮೊಬೈಲ್ ಬ್ಯಾಟರಿ ಖಾಲಿಯಾಗಿಬಿಟ್ಟಿರುತ್ತದೆ. ಇನ್ನು ಕೆಲವರಿಗೆ ಹೆಂಡತಿಯೊಡನೆ ಮಾತನಾಡುವಾಗ ಹೀಗಾದರೆ ಸಂತೋಷವೇ ಆಗುವದುಂಟು!

ಇಂಟರ್ವ್ಯೂ ಹೋಗುತ್ತಿರುವ ಇವನ ಕಥೆ ಕೇಳಿ. ರೂಂ ಪ್ರವೇಶಿಸುತ್ತಿರುವಂತೆ ಖಾಲಿ ಖಾಲಿ ಎಂದೆನಿಸುತ್ತಿದೆ. ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿರುವಾಗ ತಲೆ ಖಾಲಿ ಖಾಲಿ. ಅಂತೂ ಏನೋ ಉತ್ತರಿಸಿಬಂದಿದ್ದಾನೆ !

ಉದ್ಯೋಗಿಯೊಬ್ಬ ಡ್ಯೂಟಿ ಮುಗಿಸಿ ಮನೆಗೆ ಬಂದಿದ್ದಾನೆ. ಸಂಸಾರವೆಲ್ಲ ಊರಿಗೆ ಹೋಗಿದ್ದು ಮರೆತೇ ಹೋಗಿದೆ. ಮಕ್ಕಳಿಲ್ಲ, ಗಲಾಟೆಯಿಲ್ಲ ; ಮನೆ ಖಾಲಿ ಖಾಲಿ ಎನಿಸುತ್ತಿದೆ. ಓಹೋ ಏನೋ ಸದ್ದು , ಏನದು ..? ಅಡುಗೆ ಮನೆಯಲ್ಲಿ .... ಇಲಿಯೊಂದು ಇರಬೇಕು. ಅದೇ ಅದೇ .... ಇಟ್ಟ ಆಹಾರ, ಹಣ್ಣು ತರಕಾರಿಗಳನ್ನೆಲ್ಲ ತಿಂದು ಹಾಳು ಮಾಡುತ್ತಿತ್ತು. ಇಂದು ತಿನ್ನಲು ಏನೂ ಸಿಗುತ್ತಿಲ್ಲ. ಅದಕೂ 'ಖಾಲಿ'ಯ ಅನುಭವವಾಗಿರಬೇಕು.

ಕೆಲ ತಿಂಗಳುಗಳಿಂದ ಟೀವಿ ಆನ್ ಮಾಡಿದರೆ ಅದೇ ಸುದ್ದಿ, ಬೆಳಿಗ್ಗೆ ಎದ್ದು ಪೇಪರ್ ತೆಗೆದು ನೋಡಿದರೆ ಅದೇ ಸುದ್ದಿ. ಏನದು ? ಕೋರೋನ....ಕೋರೋನ... ರಸ್ತೆಗಳೆಲ್ಲ ಖಾಲಿ ಖಾಲಿ. ಬಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಖಾಲಿ ಖಾಲಿ. ಬಿಕೋ ಎನ್ನುತ್ತಿವೆ.

ಇಂದು ಭಾನುವಾರ. ಸ್ವಲ್ಪ ಖಾಲಿ ಸಮಯ ಸಿಕ್ಕಿತಲ್ಲ. ಮನೆಯಲ್ಲಿನ ಉಪಯೋಗಿಸದೆ ಕುಳಿತಿರುವ ಸಾಮಾನುಗಳನ್ನೆಲ್ಲ OLX ನಲ್ಲಿ ಮಾರಿದ್ದಾಯಿತು. ಇನ್ನು ವರ್ಗವಾದಮೇಲೆ ಬೇರೆ ಊರಿಗೆ ವಲಸೆ ಹೋಗಬೇಕಲ್ಲವೇ ? ಮನೆ ಖಾಲಿ ಖಾಲಿ ಕಾಣುತ್ತಿದೆ. ನನ್ನ ಧ್ವನಿಯೇ ಒಂದೊಂದು ಕೋಣೆಯಲ್ಲಿ ಪ್ರತಿಧ್ವನಿಗೊಳ್ಳುತ್ತಿದೆ. ನನ್ನ ಪುಟ್ಟ ಮಗ ಹೇಳಿದ - ಈಗ ಕೋಣೆ ಖಾಲಿಯಾಗಿರುವದರಿಂದ ಫ್ರೀಯಾಗಿ ವ್ಯಾಯಾಮ ಮಾಡಬಹುದು.

ತತ್ವಜ್ನ್ಯಾನಿಗಳು ಹೇಳುತ್ತಾರೆ - “ಖಾಲಿಯಾಗಿಬಿಡಿ. ಆಗ ನಿಮ್ಮ ಮುಂದಿನ ಜೀವನವೇ ಬದಲಾಗಿಬಿಡುತ್ತದೆ ನೋಡಿ”. ಹೇಳಿದಷ್ಟು ಸುಲಭವೇ ಇದು, ನಮ್ಮಂಥಹ ಹುಲುಮಾನವನರಿಗೆ ? ಧ್ಯಾನ ಮಾಡುವಾಗ - ವಿಚಾರಗಳಿಂದ 'ಖಾಲಿಯಾಗಿಬಿಡಿರಿ' ಎಂದು ಹೇಳುತ್ತಾರೆ. ಆದರೆ ಇದಕ್ಕಾಗಿ ಪಡುವ ಕಷ್ಟ, ಧ್ಯಾನಮಾಡುವವನೇ ಬಲ್ಲ.

ಅಗೋ, ಅಲ್ಲಿ ಬೆಟ್ಟದ ಮೇಲೆ ಗುಡಿಯೊಂದು ಇದೆ. ಜನರಿಲ್ಲ, ಪೂಜಾರಿಯಿಲ್ಲ. ಅಲ್ಲಿ ಎಲ್ಲವೂ ಖಾಲಿ ಎನಿಸಿದರೂ, ದೇವನೊಬ್ಬನಿದ್ದಾನೆ. ಗುಡಿಯಲ್ಲಿ ಮೂರ್ತರೂಪವಾಗಿ ಕುಳಿತು ಸುತ್ತಲಿನ ಪರಿಸರದಲ್ಲಿ ತನ್ನ ಇರುವಿಕೆಯನ್ನು ಸಾರುತ್ತಿದ್ದಾನೆ, ಸುಮ್ಮನೆ ಕುಳಿತರೆ... ಆಹಾ... ಎಂತಹ ಪ್ರಶಾಂತ ವಾತಾವರಣ ! ಹಕ್ಕಿಗಳ ಚಿಲಿಪಿಲಿ. ಹರಿಯುತ್ತಿರುವ ನೀರಿನ ನಿನಾದ. ನೀರಿನಲ್ಲಿ ಆಟವಾಡುತ್ತ ಗುಳುಂ ಗುಳುಂ ಎಂದು ಶಬ್ದ ಹೊರಡಿಸುತ್ತಿರುವ ಪುಟ್ಟ ಮೀನುಗಳು.

ಇದೇನಿದು? ಎಲ್ಲವೂ ಖಾಲಿ ಖಾಲಿ ಎನಿಸುತ್ತಿದೆ ! ಒಳಮನಸ್ಸೊಂದು ಜಾಗೃತವಾಗಿ ನುಡಿಯುತ್ತಿದೆ - “ಹೇ ಮನುಷ್ಯನೇ, ಖಾಲಿಯಿರುವದರಲ್ಲಿಯೇ ಜೀವನದ ಸೆಲೆಯಿದೆ , ನೆಲೆಯಿದೆ. ನೀನು ಒಳಗಿನಿಂದ ಯಾವಾಗ ಖಾಲಿಯಾಗುತ್ತಿಯೋ ಆವಾಗ ನಿನ್ನನ್ನು ಅಂತರಾತ್ಮದ ಎತ್ತರಕ್ಕೆ ಕರೆದೊಯ್ಯುವ ವೇದಿಕೆಯೊಂದು ಸಿದ್ಧವಾಗುತ್ತದೆ. ಬ್ರಹ್ಮತ್ವವನ್ನು ಅನುಭವಿಸುತ್ತೀಯಾ. ಖಾಲಿಯಾಗುವದೇ ನಿನ್ನ ಪಯಣದ ಗುರಿಯಾಗಲಿ. ಎಚ್ಚರ... ಎಚ್ಚರ.. ಖಾಲಿಯಾಗು.”

ನನಗೆ ಎಚ್ಚರವಾಯಿತು. ಹಾಸಿಗೆಯಿಂದೆದ್ದು ಕುಳಿತುಕೊಂಡೆ. ಆದರೆ 'ಖಾಲಿತನ' ಎಲ್ಲಿಹೋಯಿತು !?

- ಚಂದ್ರಶೇಖರ ಶೆಟ್ಟಿ


ಶ್ರೀಯುತ ಚಂದ್ರಶೇಖರ ಶೆಟ್ಟಿಯವರು ಕನ್ನಡದ ಹವ್ಯಾಸಿ ಬರಹಗಾರರು. ಕನ್ನಡ ನಾಡು, ನುಡಿಗಳ ಬಗ್ಗೆ ಅಪಾರ ಹೆಮ್ಮೆಯನ್ನು ಹೊಂದಿದ್ದಾರೆ. ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ಼್ ಇಂಡಿಯಾದಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಬ್ಯಾಂಕಿನಲ್ಲಿ ರಾಜ್ಯೋತ್ಸವ ನಿಮಿತ್ತ ಆಯೋಜಿಸಲ್ಫಡುವ ಸ್ಪರ್ಧೆಗಳಲ್ಲಿ ಅನೇಕ ಪಾರಿತೋಷಕಗಳನ್ನು ಸಹ ಪಡೆದಿದ್ದಾರೆ. ಕನ್ನಡದ ಸಾಹಿತ್ಯ, ಕಲೆ, ಸಂಸ್ಕ್ರತಿಗಳ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ಅವರ ಈ ಲೇಖನ, ಎಲ್ಲರನ್ನು ಕಾಡುವ "ಖಾಲಿತನ"ದ ಕುರಿತು ತಾತ್ವಿಕ ಚಿಂತನೆಯನ್ನು ಹಾಸ್ಯ ಮಿಶ್ರಿತ ಶೈಲಿಯಲ್ಲಿ ತೆರೆದಿಡುತ್ತದೆ.

228 views8 comments
bottom of page