ಖಾಲಿ ಕುಳಿತಾಗಿನ
ಕತೆ, ಕವಿತೆಗಳೆಂದರೆ...
ಕೇವಲ ಹೆಸರಿಗಾಗಿ
ಮಾಡುವ 'ಕುಸುರಿ'ಅಷ್ಟೆ.
ಪ್ರಸಿದ್ಧಿಗಾಗಿ ಮಾಡುವ
ವ್ಯವಧಾನವಿಲ್ಲದ
ವ್ಯಾಯಾಮ.
ಈಗಿನ ದಿನಗಳಲ್ಲಿ
ಅಪರೂಪದಲ್ಲಿ
ಅಪರೂಪ ಇಂಥ
ಸರ್ಕಸ್ಸು.
ಮನೆಗೆ ಬೆಂಕಿಬಿದ್ದಾಗಲೇ
ಬೀಡಿ ಹಚ್ಚುವ
ಖಯಾಲಿ.
ಉಸಿರು ನಿಲ್ಲುವ ಸಮಯ
ಸುಂದರ ಕನಸ
ಕನವರಿಕೆ.
ಬಂಜೆತನ ಕಳೆಯಲಷ್ಟೇ
ಬಸಿರ ಬಯಕೆ.
ಹಸಿರುಡುಗಿದ ರಣ-
ರಣ ಬಿಸಿಲ ಬಯಲಲ್ಲಿ
ಹಾಡ ಹಗಲೇ
ಯಕ಼ಗಾನ-
ಬಯಲಾಟ.
ವರ್ಣರಂಜಿತ ಮೇರು-
ಕಲಾವಿದ ಕೋವಿದರ
ಒಕ್ಕೂಟ.
ಹೆಜ್ಜೆ,ಗೆಜ್ಜೆ,ತಾಳ,
ಲಯಗಳ ಲಾಸ್ಯ-
ಮೇಲಾಟ,ಈ ಕೂಟ
ಒಂದೇ ಒಂದು ಆಟ-
ದಗ್ಧ ಮನದ
ಮುಗ್ಧರೆದುರು.
ಹಸಿದು ಬೆನ್ನಿಗಂಟಿದ
ಹೊಟ್ಟೆ,'ಬಟ್ಟೆ'ಗಳಲ್ಲಿ
ಮ್ರಷ್ಟಾನ್ನದ ಕನಸ
ಬಿತ್ತುವ ಕೆಲಸ-
ಉರಿವ ಬೆಂಕಿಯ
ಮೇಲೊಂದು
ಕಾವಲಿ.
ಮೇಲೆ ನೇತಾಡುವ
ಬಾವಲಿ-
ಖಾಲಿ ಕುಳಿತ-
ವರೆದುರು ಖಾಲಿ-
ಯಾಗುವ ಕ(ವಿ)ತೆ-
ಗಳ ಕತೆ.
--ಅಬ್ಳಿ,ಹೆಗಡೆ.
ಸುಬ್ರಹ್ಮಣ್ಯ ಹೆಗಡೆ ಇವರು ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಅಬ್ಳಿಮನೆಯವರು.ಕೃಷಿಕರಾಗಿರುವ ಶ್ರೀಯುತರು ಬಾಲ್ಯದಿಂದಲೂ ಓದುಮತ್ತು ಬರವಣಿಗೆಯಲ್ಲಿಅಪಾರ ಆಸಕ್ತರು.ಮುಖಪುಸ್ತಕ ಮತ್ತು ವಾಟ್ಸಪ್ನಲ್ಲಿ ಅವರ ಬಹಳಷ್ಟು ಕವಿತೆ, ಕತೆ, ಬರಹ ಮತ್ತು ಪ್ರತಿಕ್ರಿಯೆಗಳು ದಿನಂಪ್ರತಿ ಕಾಣಸಿಗುತ್ತವೆ.ಅವರು ಬರೆದ ಎರಡು ಕಾಂಬರಿಗಳು ಪ್ರಕಟಣೆಗೆ ಸಿದ್ಧವಾಗಿವೆ.ಸಾಹಿತ್ಯ ಕೃಷಿಯಲ್ಲೂ ಪರಿಣತರಾಗಿರುವ ಗುಣಪಕ್ಷಪಾತಿ ಸುಬ್ರಹ್ಮಣ್ಯ ಹೆಗಡೆಯವರು ಅಬ್ಳಿಹೆಗ್ಡೆ ಎಂಬ ಹೆಸರಿನಿಂದ ಓದುಗರವಲಯದಲ್ಲಿ ಪರಿಚಿತರು. -ಸಂಪಾದಕ.
ಬರೆಯುವದೆಂದರೆ ಕೇವಲ ಹೆಸರಿಗಾಗಿ ಮಾಡುವ ಕುಸುರಿ, ಮತ್ತದು ಬಂಜೆಯೆನಿಸಿಕೊಳ್ಳಬಾರದೆAದಷ್ಟೇ ಬಸಿರು ಪಡೆದಂತೆ.. ಅರ್ಥಪೂರ್ಣ ಉಪಮೆ ಇಷ್ಟವಾಯಿತು ಸರ್.
ಖಾಲಿ ಕುಳಿತವರ ಕತೆ ಕವಿತೆಯಲ್ಲಿ ಶಬ್ದಗಳ ಶಯ್ಯೆಯಲ್ಲಿ ಬಂದುರವಾದ ಬಂಧದಲ್ಲಿ ಒಡಮೂಡಿದೆ. ಅಭಿನಂದನೆಗಳು ಸುಬ್ರಹ್ಮಣ್ಯ. ಡಾ.ಶ್ರೀಪಾದ ಶೆಟ್ಟಿ.