top of page

ಕ್ಷಮಿಸಿ, ನಿಮ್ಮ ಲೇಖನವನ್ನು .............. [ಪ್ರಬಂಧ ]

Updated: Sep 10, 2020

ಅಂಚೆಯ ಅಣ್ಣಾ, ಬಂದಿಹೆ ಚಿಣ್ಣಾ, ಅಂಚೆಯ ಹಂಚಲು ಮನೆ ಮನೆಗೆ - ಎಂಬ ಪ್ರಾಥಮಿಕ ಶಾಲೆಯ ಅಂದಿನ ಪಠ್ಯದಲ್ಲಿದ್ದ ಹಾಡು, ಚಿಕ್ಕವನಿದ್ದಾಗ ನನಗೆ ಅತ್ಯಂತ ಆಪ್ಯಾಯಮಾನವಾಗಿತ್ತು. ಅಂಚೆಯ ಅಣ್ಣನ ಕರ್ತವ್ಯನಿಷ್ಠೆ ಬದುಕು, ಸುಖ-ದುಃಖಗಳೆರಡನ್ನೂ ಸಮಾನವಾಗಿ ಹಂಚುವ ಅಂಚೆಯ ಅಣ್ಣನ ಸಮಭಾವ - ಹೀಗೆ ಅಂಚೆಯ ಅಣ್ಣನ ವ್ಯಕ್ತಿತ್ವವನ್ನು ಅತ್ಯಂತ ಸುಂದರವಾಗಿ ಅನಾವರಣಗೊಳಿಸುವ ಈ ಹಾಡು ನನ್ನ ಹೃದಯದಲ್ಲಿ ಆತನ ಕುರಿತು ಅಪರಿಮಿತ ಅಭಿಮಾನವನ್ನು ಸೃಷ್ಟಿಸಿತ್ತು. ಅಂಚೆಯ ಅಣ್ಣ ರಸ್ತೆಯ ಮೇಲೆ ಹಾದು ಹೋಗುತ್ತಿದ್ದರೆ ಸಾಕು - ಆತ ನಮ್ಮ ಮನೆಗೆ ಬಂದೇ ಬರುತ್ತಾನೆಂಬ ನಿರೀಕ್ಷಣಾಭಾವದಿಂದ ನನ್ನ ಮನಸ್ಸು ಕುಣಿದಾಡುತ್ತಿತ್ತು. ರಸ್ತೆಯಲ್ಲಿ ಆತ ತದೇಕ ಚಿತ್ತದಿಂದ ಪತ್ರಗಳ ಕಂತೆಯನ್ನು ತಿರುವುತ್ತಾ ಹೋಗುವಾಗ ಆತನ ಬಾಯಿಯಿಂದ ‘ಪೋಸ್ಟ’ ಎಂಬ ಶಬ್ದ ಹೊರಬಂದೀತೆಂದು ಚಾತಕ ಪಕ್ಷಿಯಂತೆ ನಾನು ಕಾಯುತ್ತಿದ್ದುದು ಸಾಮಾನ್ಯವಾಗಿತ್ತು.


ಆದರೆ ಕಾಲಗತಿಸಿದಂತೆ ಪರಿಸ್ಥಿತಿ ಬದಲಾಗಿದೆ. ನನಗರಿವಿಲ್ಲದಂತೆ ನನ್ನ ಮನೋಭೂಮಿಕೆಯಲ್ಲಿ ಆತನ ಕುರಿತು ತದ್ವಿರುದ್ಧ ಭಾವ ಅವತರಿಸುತ್ತಿದೆ. ಬಾಲ್ಯದಲ್ಲಿ ನನ್ನ ಹೃದಯ ಸಿಂಹಾಸನವೇರಿ ಕುಳಿತು ರಾರಾಜಿಸುತ್ತಿದ್ದ ಅಂದಿನ ನನ್ನ ಮೆಚ್ಚಿನ ‘ಅಂಚೆಯಅಣ್ಣ’ ನೆಂದರೆ ಇಂದು ಅನಿರ್ವಚನೀಯ ಭಯ. ಆತನ ಬಾಯಿಯಿಂದ ಹೊರಡುವ ‘ಪೋಸ್ಟ’ ಎಂಬ ಆ ಆಪ್ಯಾಯಮಾನ ಶಬ್ದ ಇಂದೆನೆಗೆ ಅಪ್ರಿಯವಾಗಿದೆ. ನಮ್ಮ ಮನೆಯ ಸುತ್ತ ಅಂಚೆಯ ಅಣ್ಣನ ನೆರಳು ಬೀಳದಿರಲೆಂದು ದೇವರಲ್ಲಿ ಪ್ರಾರ್ಥಿಸುವ ವಿಚಿತ್ರ ಪರಿಸ್ಥಿತಿಗೆ ನಾನು ಇಂದು ಬಂದು ತಲುಪಿದ್ದೇನೆ.


ಈ ಅಸಾಮಾನ್ಯ ಪರಿಸ್ಥಿತಿಗೆ ನನ್ನ ಬರವಣಿಗೆಯ ಹುಚ್ಚು ಕಾರಣವೆಂದರೆ ನಿಮಗೆ ಅಚ್ಚರಿಯಾಗದೇ ಇರದು. ಆದರೆ ಇದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಅದನ್ನು ಹೇಳಬೇಕೆಂತಲೇ ನಾನು ಉದ್ಯುಕ್ತನಾಗಿದ್ದೇನೆ.


ಸಿಕ್ಕ, ಸಿಕ್ಕ ಪತ್ರಿಕೆ ಹಾಗೂ ಮ್ಯಾಗಜಿನ್‍ಗಳನ್ನು ಓದುವ ಹವ್ಯಾಸವಿರುವ ನನಗೆ ಒಂದು ಬಾರಿ ಅನಿಸಿತು - ನಾನೇಕೆ ಬರೆಯಬಾರದು? ಬರೆದುದನ್ನು ಪತ್ರಿಕೆಗಳಿಗೆ ಏಕೆ ಕಳಿಸಬಾರದು.? ತುಂಬಾ ತಲೆ ಕೆಡಿಸಿಕೊಂಡೆ. ಒಂದು ದಿನ ಬೆಳಿಗ್ಗೆ ಎದ್ದವನೇ ಮುಖ ತೊಳೆದು ದೇವರಿಗೆ ಕೈಮುಗಿದು ಬರೆಯಲು ಕುಳಿತೆ. ಆದರೆ ಪೆನ್ನು ಮಾತ್ರ ಹೆಜ್ಜೆ ಮುಂದಿಡಲಿಲ್ಲ. ಬಹಳ ಹೊತ್ತು ಬರೆಯಲು ಪ್ರಯತ್ನಿಸಿದೆ. ಬರೆದದ್ದು ಸರಿಯಾಗಿಲ್ಲವೆಂಬ ಭಾವ ಅದರ ಬೆನ್ನಲ್ಲೇ ಮೂಡಿತು. ಬರೆದುದನ್ನು ಹರಿದು ಹಾಕಿ ಪೆನ್ನನ್ನು ಮೇಜಿನ ಮೇಲೆ ಇಟ್ಟು ಉಸ್ಸೆಂದು ಕುಳಿತೆ. ಆಗಲೇ ಗೊತ್ತಾಗಿದ್ದು. ಸಾಹಿತ್ಯ ಸೃಷ್ಟಿಯ ಕ್ರಿಯೆ ಎಷ್ಟು ಕಷ್ಟ ಎಂಬುದು. ಯಾರೋ ಹೇಳಿದ್ದು ನೆನಪಾಯಿತು, ಕವಿಯಾದವನಿಗೆ ಕಾವ್ಯ ಬರೆಯುವದೆಂದರೆ ಹೆಣ್ಣಿಗೆ ಪ್ರಸವ ವೇದನೆಯನ್ನು ಅನುಭವಿಸಿದಂತೆ. ನಿಜವಾಗಿಯೂ ಆ ಮಾತಿನ ಅರ್ಥ ಗಂಡಸಾಗಿ ನನಗೆ ಆಗ ಅನುಭವವೇದ್ಯವಾಯಿತು. ನನ್ನ ಮೊದಲ ಸಾಹಿತ್ಯ ಸೃಷ್ಟಿಯ ಕಾಯಕ ಪ್ರಥಮ ಚುಂಬನೆ ದಂತಭಗ್ನೆ- ಅನ್ನುವಂತಾಯಿತು.!


ಮುಂದೆ ಕೆಲವು ದಿವಸ ಬರೆಯುವ ಗೊಡವೆಗೆ ಹೋಗದೆ, ಕೇವಲ ಓದುವದರಲ್ಲಿಯೇ ಮಗ್ನನಾದೆ. ಇದಕ್ಕೆ ಶಾಲೆಯಲ್ಲಿ ಒದುತ್ತಿದ್ದಾಗ ನನ್ನ ಕನ್ನಡ ವಿಷಯದ ಮಾಸ್ತರರು ಹೇಳಿದ ಕಿವಿಮಾತು - ಹೆಚ್ಚು ಓದು; ಹೆಚ್ಚು ಜ್ಞಾನ ಗಳಿಸು; ಅದರಿಂದ ನಿನಗೆ ಬರೆಯುವ ಶೈಲಿ ಕರಗತವಾಗುತ್ತದೆ – ಎಂಬುದು ಪ್ರೇರಕ ಮಂತ್ರವಾಯಿತು. ಪುಸ್ತಕದ ಅಂಗಡಿಗೆ ಹೋಗಿ ಕುವೆಂಪು, ಬೇಂದ್ರೆ, ಅಡಿಗ, ಕಾರ್ನಾಡ, ಅನಂತಮೂರ್ತಿ ಮುಂತಾದ ಹಿರಿಯ ಲೇಖಕರ ಪುಸ್ತಕಗಳನ್ನೆಲ್ಲ ಖರಿದಿಸಿ ತಂದು ಮನೆಯಲ್ಲಿದ್ದ ಮರದ ಕಪಾಟಿನಲ್ಲಿ ಪೇರಿಸಿಟ್ಟೆ. ಸಮಯ ಸಿಕ್ಕಾಗಲೆಲ್ಲ ತೆಗೆ ತೆಗೆದು ಓದುತ್ತಾ ಹೋದೆ. ಓದುತ್ತಾ ಹೋದಂತೆ ನನ್ನೊಳಗೆ ಗೊಂದಲದ ಗೂಡೇ ಕಟ್ಟಿಕೊಂಡಿತು. ಒಬ್ಬೊಬ್ಬರ ಲೇಖಕರ ಬರವಣಿಗೆ ಒಂದೊಂದು ಶೈಲಿಯಲ್ಲಿದ್ದುದರಿಂದ ಯಾವ ಮಾರ್ಗವನ್ನು ನಾನು ತುಳಿಯಲಿ? ಆ ಲೇಖಕರ ಹಾಗೆ ಬರೆಯಲು ನನ್ನಿಂದ ಸಾಧ್ಯವೇ – ಎಂಬ ಕೀಳರಿಮೆ ಮನಸ್ಸಿನ ಮೂಲೆಯಲ್ಲಿ ಹುಟ್ಟಿಕೊಂಡಿತು.


ಆದರೆ ನನ್ನೊಳಗೆ ಬರೆಯಲೇ ಬೇಕೆಂಬ ಹಠದ ದೆವ್ವವೊಂದು ಧುತ್ತೆಂದು ಎದ್ದು ಕುಳಿತಿತು. ಯಾರ್ಯಾರೋ ಪತ್ರಿಕೆಲಿ ಬರೀತಾರೆ, ನೀನ್ಯಾಕೆ ಬರಿಬಾರದು - ಎಂದು ಅದು ನನ್ನನ್ನು ಪುಸಲಾಯಿಸಿತು. ಆದರೆ ನನ್ನ ಅಂತರಾತ್ಮ ಹೇಳಿತು - ಬೇರೆಯವರು ಬರೆಯುತ್ತಾರೆಂದ ಮಾತ್ರಕ್ಕೆ ನಿನ್ನಿಂದ ಸಾಧ್ಯವೇ?. ಆದರೆ ನನ್ನೊಳಗೆ ಹೊಕ್ಕ ದೆವ್ವ ಬಿಡಲಿಲ್ಲ. ನೀನು ನಿನ್ನ ಸಾಮರ್ಥ್ಯದ ಬಗ್ಗೆ ಅನುಮಾನ ಹೊಂದಿದರೆ ಹೇಗೆ ? ಯಾರೂ ಸಾಹಿತಿಯಾಗಿಯೇ ಹುಟ್ಟುವದಿಲ್ಲ. ಬರೆ ಬರೆಯುತ್ತಾ ಸಾಹಿತಿಗಳಾಗಿ ರೂಪಗೊಳ್ಳುತ್ತಾರೆ. ನೀನು ಧೈರ್ಯದಿಂದ ಬರೆ; ಇಂದಲ್ಲಾ ನಾಳೆ ನಿನ್ನ ಬರೆಹಗಳು ಪ್ರಕಾಶಗೊಳ್ಳುತ್ತವೆ. ಮುಂದೊಂದು ದಿನ ನೀನು ಜನಪ್ರಿಯ ಸಾಹಿತಿ ಆಗಿಯೇ ಆಗುತ್ತೀಯಾ. ಮುನ್ನುಗ್ಗಿ ನಡೆ. ನಿನಗೆ ಯಶಸ್ಸು ಖಂಡಿತ.


ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿಯಂತೆ ತನ್ನ ವಾದ ಮಂಡಿಸಿದ ನನ್ನೊಳಗಿನ ದೆವ್ವದ ಮಾತಿಗೆ ಮನಸ್ಸು ಸಹಜವಾಗಿಯೇ ಶರಣಾಯಿತು. ನಾನು ಪುನಃ ಪೆನ್ನು ಹಾಳೆ ಹಿಡಿದು ಕುಳಿತು ಬರೆಯ ತೊಡಗಿದೆ. ಅಂತೂ ಇಂತೂ ಕಾಟು-ಗೀಟುಗಳನ್ನೆಲ್ಲ ಮೀರಿ ಕವನವೊಂದು ಮೂಡಿಬಂತು. ಅದನ್ನು ಮರುದಿವಸ ಮಿತ್ರರೊಬ್ಬರಿಗೆ ತೋರಿಸಿದೆ. ಅಲ್ಲಿ ಇಲ್ಲಿ ಸ್ವಲ್ಪ ತಿದ್ದುಪಡಿಯೊಂದಿಗೆ ಅವರು “ಕವನ ಚೆನ್ನಾಗಿದೆ; ಪತ್ರಿಕೆಗೆ ಕಳಿಸು; ಪ್ರಕಟವಾಗುತ್ತದೆ’ ಎಂದು ನುಡಿದಾಗ ನನಗೆ ಕವನ ಪ್ರಕಟಿಸಿದಷ್ಟು ಸಂತೋಷವಾಯಿತು. ಮರುದಿನವೇ ನಾನು ನನ್ನ ಪ್ರಥಮ ಕವನದ ಶುದ್ಧ ಹಸ್ತಪ್ರತಿಯನ್ನು ಸಿದ್ಧಪಡಿಸಿ ಪ್ರಸಿದ್ಧ ಪತ್ರಿಕೆಯೊಂದಕ್ಕೆ ಕಳಿಸಿದೆ. ಅಸ್ವೀಕೃತಿಯಾದ ಪಕ್ಷದಲ್ಲಿ ಹಿಂತಿರುಗಿಸುವದಕ್ಕೆಂದು ಸ್ವವಿಳಾಸದ ಬೇರೆ ಲಕೊಟೆಗೆ ಅಂಚೆ ಚೀಟಿ ಅಂಟಿಸಿ ಅದರೊಳಗಿಟ್ಟು ಕಳಿಸಿದೆ. ನನ್ನ ಮೊದಲ ಕವನ ಕಳಿಸಿ ಹದಿನೈದು ದಿನವೂ ಸಂದಿರಲಿಲ್ಲ. ಒಂದು ದಿನ ಅಂಚೆಅಣ್ಣ ನಮ್ಮ ಮನೆಯ ಬಾಗಿಲು ಬಡಿದು ‘ಪೋಸ್ಟ’ ಎನ್ನುತ್ತ ಒಂದು ಲಕೋಟೆಯನ್ನು ನನಗೆ ನೀಡಿದ. ತಿರುಗಿಸಿ ನೋಡಿದೆ. ಅದರ ಮೇಲಿನ ಅಕ್ಷರ ನನ್ನದಾಗಿತ್ತು. ಹೌದು! ಅದು ಕವನ ಅಸ್ವೀಕೃತವಾದಲ್ಲಿ ಹಿಂತಿರುಗಿಸಲೆಂದು ನಾನು ಕಳಿಸಿದ ಅಂಚೆ ಚೀಟಿ ಹಚ್ಚಿದ್ದ ಸ್ವವಿಳಾಸದ ಪತ್ರವೇ ಆಗಿತ್ತು. ಒಡೆದು ನೋಡಿದಾಗ ಅಲ್ಲಿ ಗಂಡನ ಮನೆಯಿಂದ ಅಟ್ಟಲ್ಪಟ್ಟು ತವರು ಮನೆಗೆ ಮರಳಿದ ಹೆಣ್ಣಿನಂತೆ ನನ್ನ ಕವನ ಅದರಲ್ಲಿ ತಲೆತಗ್ಗಿಸಿ ಕುಳಿತಿತ್ತು. ಅದರ ಜೊತೆ ಒಂದು ಸಣ್ಣ ಚೀಟಿ ಬೇರೆ ಇತ್ತು. ಅದರಲ್ಲಿ ಒಂದೇ ವಾಕ್ಯದ ಓಕ್ಕಣೆ ಇತ್ತು - ಕ್ಷಮಿಸಿ, ನಿಮ್ಮ ಕವನವು ಸ್ವೀಕೃತವಾಗದಿರುವದರಿಂದ ಹಿಂತಿರುಗಿಸುತ್ತಿದ್ದೇವೆ. ನನ್ನ ಆಸೆಯ ಬಲೂನಿಗೆ ಅ ಒಂದು ವಾಕ್ಯದ ಸೂಜಿ ಚುಚ್ಚಿದಂತಾಗಿ ಅದು ನಿರಾಸೆಯಿಂದ ಕುಗ್ಗಿ ಸಣ್ಣದಾಯಿತು. ಆದರೆ ದೆವ್ವ ಬಿಡಲಿಲ್ಲ. ಮರಳಿಯತ್ನವ ಮಾಡು ಎಂದು ಒತ್ತಾಯಿಸಿತು. ಅದಕ್ಕೆ ಪೂರವಾಗಿ ಮತ್ತಿಷ್ಟು ಕವನಗಳನ್ನು ರಚಿಸಿ ಬೇರೆ ಬೇರೆ ಪತ್ರಿಕೆಗಳಿಗೆ ಕಳಿಸಿದೆ. ಅವುಗಳ ಗತಿಯೂ ಮೊದಲ ಕವನದಂತೆ ಆಯಿತು. ದೆವ್ವದ ಮಾತಿಗೆ ಸೊಪ್ಪು ಹಾಕದೇ ಇನ್ನುಮುಂದೆ ಕವನ ಬರೆಯಬಾರದೆಂದು ನಿರ್ಧರಿಸಿದೆ.


ಕೆಲವು ದಿನಗಳು ಕಳೆದವು. ಸಾಹಿತ್ಯ ಸೃಷ್ಟಿಯ ಕೈಂಕರ್ಯಕ್ಕೆ ರಜೆ ಹಾಕಿದ್ದೆ. ಒಂದು ದಿನ ಯಾವುದೋ ಮ್ಯಾಗಜಿನ್‍ನಲ್ಲಿ ಬಂದ ಒಂದು ಕತೆ ಓದಿದೆ. ಓದುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರೇರಣೆ ಹುಟ್ಟಿತು. ಒಂದು ಸಣ್ಣ ಕತೆ ಇದ್ದಕ್ಕಿದ್ದಂತೆ ನನ್ನ ಮನಃಪಟಲದಲ್ಲಿ ಕಣ್ಣು, ಬಾಯಿ, ಕಿವಿ, ಕೈ-ಕಾಲುಗಳಿಂದ ಜೀವ ತುಂಬಿ ಬೆಳೆದು ನಿಂತಿತು. ಅದರ ಒತ್ತಡದಿಂದ ಹೊರಬರಲು ನನಗೆ ಸಾಧ್ಯವೇ ಆಗಲಿಲ್ಲ. ತಕ್ಷಣ ನನಗರಿವಿಲ್ಲದಂತೆ ಪೆನ್ನು ಪೇಪರು ಹಿಡಿದು ಕುಳಿತೆ, ಪುಂಖಾನುಪುಂಖವಾಗಿ ಕತೆ ಮೂಡಿಬಂತು. ಕತೆಯನ್ನು ಓದಿದೆ. ಪುನಃ ಓದಿದೆ. ಕತೆ ಸುಂದರವಾಗಿ ಮೂಡಿ ಬಂದಿತೆಂದನಿಸಿತು. ನನ್ನ ಮಿತ್ರರ ಎದುರು ಓದಿ ಹೇಳಿದೆ. ಅವರೆಲ್ಲ ಕತೆ ತುಂಬಾ ಚೆನ್ನಾಗಿದೆ. ಇದನ್ನು ಯಾವುದಾದರೂ ಪ್ರಸಿದ್ಧ ವಾರಪತ್ರಿಕೆಗೆ ಕಳಿಸೆಂದು ಸಲಹೆ ಮಾಡಿದರು. ಮಿತ್ರರ ಸಲಹೆಗೆ ಮತ್ತೊಮ್ಮೆ ಸಿಲುಕಿ ಕತೆಯ ಹಸ್ತಪ್ರತಿ ಸಿದ್ಧಮಾಡಿ ಪ್ರಸಿದ್ಧ ವಾರಪತ್ರಿಕೆಯೊಂದಕ್ಕೆ ಕಳಿಸಿದೆ. ಜೊತೆಗೆ ಸ್ವವಿಳಾಸ ಹೊಂದಿದ ಅಂಚೆ ಚೀಟಿ ಹಚ್ಚಿದ ಲಕೋಟೆಯನ್ನು ಮರೆಯದೇ ಇಟ್ಟು ಕಳಿಸಿದೆ. ಕಳಿಸಿ ಒಂದು ತಿಂಗಳು ಸಂದರೂ ಕತೆ ವಾಪಾಸಾಗದನ್ನು ನೋಡಿ ಒಳಗೆಲ್ಲೋ ಹುದಗಿದ್ದ ಆಸೆಯ ಬೀಜ ಚಿಗುರಿತು, ಈ ಬಾರಿ ನನ್ನ ಕತೆ ಪ್ರಕಟವಾಗುತ್ತದೆಂಬ ಅಕಾರಣ ನಂಬುಗೆ ಬಲವಾಯಿತು. ನಾನು ಒಬ್ಬ ಸಾಹಿತಿಯಾಗುವ ಕಾಲ ಸನ್ನಿಹಿತವಾಯಿತೆಂದು ಸಂತೋಷದಿಂದ ಇದ್ದೆ.


ಆದರೆ ಮುಂದೆ ಕೆಲವು ದಿನಗಳಲ್ಲಿ ನನ್ನ ಈ ಕನಸು ಹುಸಿಯಾಯಿತು. ಒಂದು ದಿನ ಬೆಳಗ್ಗೆ ಅಂಚೆಯ ಅಣ್ಣ ಒಂದು ಲಕೋಟೆಯನ್ನು ತಂದು ನನ್ನ ಕೈಯಲ್ಲಿಟ್ಟ. ಮುಂದಿನದೆಲ್ಲಾ ಹಿಂದಿನದೇ ಕತೆ. ಅದು ನಾನು ಕಳಿಸಿದ್ದ ಲಕೋಟೆ; ಅದಕ್ಕೆ ಅಂಟಿಸಿದ ಅಂಚೆ ಚೀಟಿಯೂ ನನ್ನದೇ. ಅದರ ಮೇಲೆ ಬರೆದ ಅಕ್ಷರವಂತೂ ನನ್ನದೆ. ಒಡೆದು ನೋಡುವ ಮೊದಲೇ ಅದರೊಳಗೆ ಹುದುಗಿಪ್ಪ ಸತ್ಯದ ಸುಳಿವು ನನಗೆ ಸಿಕ್ಕಿತ್ತು. ಆದರೂ ಒಡೆದು ನೋಡಿದೆ. ಪತ್ರದ ವಕ್ಕಣೆ - ಕ್ಷಮಿಸಿ. ನಿಮ್ಮ ಕತೆಯು ಪ್ರಕಟಣೆಗೆ ಸ್ವೀಕೃತಿಯಾಗದೇ ಇರುವದರಿಂದ ಹಿಂತಿರುಗಿಸುತ್ತಿದ್ದೇವೆ. ಮತ್ತದೇ ವಾಕ್ಯ; ಅದೇ ಕಾರಣ; ಅದೇ ಹಿಂತಿರುಗಿಸುವಿಕೆ. ಕವಿ ನಿಸ್ಸಾರ ಅಹಮ್ಮದರ ‘ಮತ್ತದೇ ಬೇಸರ; ಅದೇ ಸಂಜೆ, ಅದೇ ಏಕಾಂತ…” ಎಂಬ ಹಾಡಿನ ಸಾಲು ನೆನಪಾಯಿತು.


ಎನಾದರೂ ನನ್ನ ಮನಸ್ಸು ಮಾತ್ರ ಸೋಲೊಪ್ಪಲು ಈ ಬಾರಿ ಸಿದ್ಧವಿರಲಿಲ್ಲ. ನನ್ನ ಮಿತ್ರರೂ ಮರಳಿ ಪ್ರಯತ್ನಕ್ಕೆ ಒತ್ತಾಯಿಸಿದ್ದರಿಂದ ಉತ್ಸಾಹದಿಂದ ಮತ್ತೆರಡು ಕತೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಬರೆದು ಪತ್ರಿಕೆಗಳಿಗೆ ಕಳಿಸಿದೆ. ಆದರೆ ಫಲಿತಾಂಶದಲ್ಲಿ ಮಾತ್ರ ಏನೂ ಬದಲಾವಣೆ ಕಾಣದಿದ್ದಾಗ ನನ್ನ ಮಿತ್ರನೊಬ್ಬ, “ ನೋಡು ಕತೆ, ಕವನ ಅಥವಾ ಲೇಖನ ಯಾವುದನ್ನೆ ಬರೆ. ಆದರೆ ಅದನ್ನು ಬರೆಯುವಾಗ ರಾಹುಕಾಲ, ಗುಳಿಕಾಲ - ಅವುಗಳನ್ನೆಲ್ಲವನ್ನು ನೋಡಿ ಒಳ್ಳೆ ಮುಹೂರ್ತದಲ್ಲಿ ಸ್ನಾನ ಮಾಡಿ, ಶುದ್ಧನಾಗಿ ದೇವರ ಎದುರು ಕುಳಿತು ಬರೆ. ಜೊತೆಗೆ ಅದಕ್ಕೆ ಅಂಚೆ ಚೀಟಿ ಹಚ್ಚಿ ಕೆಂಪು ಡಬ್ಬಿಗೆ ಹಾಕುವಾಗಲೂ ಸಹ ರಾಹುಕಾಲ ತಪ್ಪಿಸಿ ಹಾಕು.” ಎಂದು ಸಲಹೆ ನೀಡಿದ. ಆದರೆ ಪಂಚಾಂಗ ನೋಡಿ ಕತೆ, ಕವನ ಬರೆಯಲು ಸಾಧ್ಯವೇ? ಅದಕ್ಕೆ ಪ್ರೇರಣೆ ಬೇಡವೇ ? ಹಿಂದೆ ಒದ್ದೆ ಬಟ್ಟೆಯನ್ನು ತೊಟ್ಟು ಅದು ಒಣಗುವ ವರೆಗೂ ತನ್ನ ಅಧಿದೇವತೆಯಾದ ಗದುಗಿನ ವೀರನಾರಾಯಣನ ಎದುರು ಮಡಿಯಲ್ಲಿಯೇ ಕುಳಿತು ಕುಮಾರವ್ಯಾಸ ಭಾರತ ಕಥಾ ಮಂಜರಿ ಎಂಬ ಮಹಾಕಾವ್ಯ ಬರೆದನೆಂದು ನಾನು ಕೇಳಿದ್ದೇನೆ. ಆದರೆ ಅದೆಲ್ಲ ನನ್ನಂತಹವನಿಗೆ ಸಾಧ್ಯವೇ? ನನ್ನ ಆ ಮಿತ್ರನ ಸಲಹೆ ಅವಾಸ್ತವಿಕವೆಂದನಿಸಿತು. ಇನ್ನೊಬ್ಬ ಮಿತ್ರನ ಸಲಹೆ ಬೇರೆ ಇತ್ತು. ಆತ ಸಂಖ್ಯಾಶಾಸ್ತ್ರ ಜ್ಯೋತಿಷಿ. ಅವನ ಪ್ರಕಾರ ನಾನು ನನ್ನ ಹೆಸರಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಂತೆ. ನನ್ನ ಹೆಸರಿನಲ್ಲಿ ಇಷ್ಟಿಷ್ಟು ಅಕ್ಷರ ಇದ್ದರೆ ನನಗೆ ಯಶಸ್ಸು ಬರುತ್ತದಂತೆ. ಹೆಸರು ಬದಲಾಯಿಸದಿದ್ದರೂ ಅಷ್ಟು ಅಕ್ಷರಗಳಗನ್ನು ಒಳಗೊಂಡ ಕಾವ್ಯನಾಮದೊಂದಿಗೆ ನಾನು ಇನ್ನುಮುಂದೆ ಕಾವ್ಯ ರಚಿಸಬೇಕೆಂಬುದು ಅವನ ಬಲವಾದ ಸಲಹೆಯಾಗಿತ್ತು. ಆದರೆ ಕಾವ್ಯನಾಮದ ಸಂಸ್ಕೃತಿ ತುಂಬ ಹಳೆಯ ಕಾಲದ್ದು. ಅದೆಲ್ಲಾ ಓಲ್ಡ ಫ್ಯಾಷನ್, ಇಂದಿನ ಕಾಲದಲ್ಲೇನಿದ್ದರೂ ಹೆಸರಿನಿಂದ ಬರೆಯುವದೇ ಸರಿ. ಹೀಗಾಗಿ ಆತನ ಸಲಹೆ ಇಂಪ್ರಾಕ್ಟಿಕಲ್ ಎಂದು ನಾನು ಅದನ್ನು ಕೈ ಬಿಟ್ಟೆ.


ಈ ಮಧ್ಯೆ ಮತ್ತೊಬ್ಬ ಮಿತ್ರನ ಸಲಹೆ ವಿಭಿನ್ನವಾಗಿತ್ತು. ನನಗಿರುವ ಕಷ್ಟ - ಸಾಹಿತ್ಯ ರಚನೆಯಲ್ಲಿ ಅಲ್ಲ. ಆದರೆ ನಾನು ಬರೆದ ಕತೆ-ಕವನಗಳನ್ನು ಹಿಂತಿರುಗಿಸುವ ಸಂಪಾದಕರ ಸಂವೇದನಾರಹಿತ ವಾಕ್ಯಗಳಗನ್ನು ಓದುವದೇ ನನಗೆ ಎದುರಾಗುವ ಆಘಾತವಾಗಿತ್ತು. ಆತನ ಪ್ರಕಾರ ಇಂತಹ ನೋವಿನ ಪರಿಸ್ಥಿತಿಯಿಂದ ಮುಕ್ತನಾಗಲು ಇರುವ ಮಾರ್ಗ ಒಂದೇ. ಅದು ಬರಹವನ್ನು ವಾಪಾಸು ಕಳಿಸುವದಕ್ಕೆ ಅಂಚೆ ಚೀಟಿಯನ್ನು ಹಚ್ಚದೇ ಕಳಿಸುವದು. ಈ ಸಲಹೆ ಹೆಚ್ಚು ಪ್ರಾಕ್ಟಿಕಲ್ ಜೊತೆಗೆ ಚಾಣಾಕ್ಷತನದ್ದು ಎಂದು ಅನಿಸಿತು. ಅದನ್ನು ಅನುಸರಿಸಿ ಕೆಲವು ಬರೆಹಗಳನ್ನು ಪತ್ರಿಕೆಗಳಿಗೆ ಕಳಿಸಿದೆ. ಇದು ಸ್ವಲ್ಪ ಕೆಲಸ ಮಾಡಿತು. ಆದರೆ ಯಾವುದೋ ಒಬ್ಬ ಸಂಪಾದಕ ಮಾತ್ರ ಬಿಡಲಿಲ್ಲ. ಒಂದು ಪೋಸ್ಟ ಕಾರ್ಡನಲ್ಲಿ ತಮ್ಮ ಮಾಮೂಲು ವಾಕ್ಯದಲ್ಲಿ ಪತ್ರ ಬರೆದು ನನ್ನ ಲೇಖನದ ಅಸ್ವೀಕೃತಿಯನ್ನು ಜಗಜ್ಜಾಹಿರವಾಗುವಂತೆ ಆತ ಮಾಡಿಬಿಟ್ಟಿದ್ದ. ಜೊತೆಗೆ ಒಂದು ಎಚ್ಚರಿಕೆಯನ್ನೂ ಸಹ ನೀಡಿದ್ದ – ಇನ್ನು ಮುಂದೆ ಅಂಚೆ ಚೀಟಿ ಹಚ್ಚಿದರೆ ಮಾತ್ರ ಅಸ್ವೀಕೃತ ಬರೆಹವನ್ನು ಹಿಂತಿರುಗಿಸಲಾಗುದೆಂದು ಬೇರೆ ತಿಳಿಸಿದ್ದ. ಆದರೆ ಪಾಪ ಅವನಿಗೇನು ಗೊತ್ತು - ಅಸ್ವೀಕೃತಿಯ ದುರಂತವಾರ್ತೆಯನ್ನು ಸಹಿಸಲಾಗದಕ್ಕೆ ನಾನು ಅಂಚೆ ಚೀಟಿಯನ್ನು ಅಂಟಿಸಿಲ್ಲವೆಂಬ ಸತ್ಯ!


00000000000


ಇವೆಲ್ಲ ಕೆಲವು ವರುಷಗಳ ಹಿಂದಿನ ಮಾತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ನನ್ನ ಕತೆ, ಕವನ, ಲೇಖನ ವಗೈರೆ ಪತ್ರಿಕೆಗಳಲ್ಲಿ ಅಲ್ಲಲ್ಲಿ ಬೆಳಕು ಕಂಡಿವೆ. ಆದರೆ ವಾಸ್ತವಿಕತೆಯೆಂದರೆ ನಾನು ಇಂದಿನ ತನಕ ಸಂಪಾದಕರ ಅಸ್ವೀಕೃತಿಯ ಸಂದೇಶದ ಕೂರಂಬಿನ ಫೋಬಿಯಾದಿಂದ ಹೊರಬಂದಿಲ್ಲ. ನಿಜವಾಗಿ ಹೇಳುವದಾದರೆ ಈಗಲೂ ನನಗೆ ಆಗೀಗ ರಾತ್ರಿಯಲ್ಲಿ ಕನಸುಗಳು ಬೀಳುತ್ತಿರುತ್ತವೆ. ಅದರಲ್ಲಿ ಅಂಚೆಯ ಅಣ್ಣ ನಮ್ಮ ಮನೆಯ ಗೇಟಿನ ಹತ್ತಿರ ಬಂದಂತೆ; ಆತ ‘ಪೋಸ್ಟ’ ಎಂದು ಕೂಗಿದಂತೆ; ಆತ ನನ್ನ ಹತ್ತಿರ ಸಂಪಾದಕರಿಂದ ಬಂದ ಪತ್ರವನ್ನು ನೀಡಿದಂತೆ; ಅದರಲ್ಲಿ ಯಥಾ ಪ್ರಕಾರ ‘ ಕ್ಷಮಿಸಿ, ನಿಮ್ಮ ಬರೆಹವು ಸ್ವೀಕೃತಿಯಾಗದಿರುವದರಿಂದ ...............' ಇದ್ದಂತೆ.!


ಹಾಸಿಗೆಯಿಂದೆದ್ದು ಕುಳಿತು ಕಣ್ಣು ಉಜ್ಜಿಕೊಳ್ಳುತ್ತೇನೆ. ತಕ್ಷಣ ನನಗೆ ವಾಸ್ತವಿಕತೆಯ ಅನುಭವವಾಗಿ ಸಮಾಧಾನಗೊಳ್ಳುತ್ತೇನೆ.


- ಶ್ರೀಪಾದ ಹೆಗಡೆ. ಸಾಲಕೊಡ



94 views1 comment

1 Comment


shreepadns
shreepadns
Sep 11, 2020

ಬಹಳ ಚೆನ್ನಾಗಿದೆ ಬರಹ.ಕೆಲವರು ಹೆಣ್ಣು ಮಕ್ಕಳ ಹೆಸರಿನಲ್ಲಿ ಬರಹ ಜಳಿಸಿದರೆ ಸ್ವೀಕರಿಸುವ ರೋಗ ಹೊಂದಿದ್ದರಂತೆ.ಅದಕ್ಕೊ ಅಥವಾ ಯಾಕೊ ಲಂಕೇಶ ನೀಲು ಎಂದು ತೇಜಸ್ವಿ ನಳಿನಿ ದೇಶಪಾಂಡೆ ಎಂದು ಬರೆಯುತ್ತಿದ್ದರಂತೆ. ನಾನು ಪ್ರಜಾವಾಣಿಯ ಎರಡೆ ವಿಷಾದ ಪತ್ರ ನೋಡಿ ಎಲ್ಲ ಪತ್ರಿಕೆಗೆ ಲೇಖನ ಕಳಿಸುವ ಹಿಂಸೆಗೆ ಗುಡ್ ಬೈ ಹೇಳಿದೆ. ಈಗ ನಾವೆ ಸಂಪಾದಕರು ಶಕ್ತ,ಸಮರ್ಥ ಬರಹಗಾರರ ಬಳಗ ಬೆಳೆಯಲು ನೆರವಾಗೋಣ ಶ್ರೀಪಾದ.ಗುಣಮಟ್ಟದಲ್ಲಿ ರಾಜಿಯಾಗೋದು ಬೇಡ. ಡಾ.ಶ್ರೀಪಾದ ಶೆಟ್ಟಿ.

Like
bottom of page