top of page

ಕಾವ್ಯ ಜ್ಯೋತಿ : ನಿಜದ ನವರಾತ್ರಿ

ಅಸುರರನು ಮೆಟ್ಟಿ ನಿಂತಳು

ಜಗನ್ಮಾತೆ ದುರ್ಗೆ

ನವರಾತ್ರಿಯೆಂಬುದು ಹೊಸ ಅರಿವು ನೀಡುವುದು ನಮಗೆ


ನಮ್ಮೊಳಗಿನ ರಕ್ಕಸರನು ಗೆದ್ದಾಗಲೇ

ನಮ್ಮ ಉದ್ದಾರ

ಅದೇ ನಿಜದ ನವರಾತ್ರಿಯುತ್ಸವದ

ಆಚರಣೆ ಶ್ರೀಧರ


ಈಗಾಗಲೇ ನವರಾತ್ರಿ ಉತ್ಸವವನ್ನು ನಾಡಿನಾದ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದ್ದೇವೆ.ಹಲವರು ಹಲವಾರು ಧಾರ್ಮಿಕ ವಿಧಿವಿಧಾನಗಳ ಮೂಲಕ ಜಗನ್ಮಾತೆಯ ಕೃಪೆಗಾಗಿ ಧ್ಯಾನಿಸಿದ್ದಾರೆ.

ಈ ಒಂಭತ್ತು ರಾತ್ರಿಗಳಲ್ಲಿ ತಾಯಿ ದುರ್ಗೆಯು ಶೈಲಪುತ್ರಿ, ಬ್ರಹ್ಮಚಾರಿಣಿ,ಚಂದ್ರಘಂಟಾ,

ಕೂಷ್ಮಾಂಡಾ,ಸ್ಕಂದಮಾತಾ, ಕಾತ್ಯಾಯನಿ,ಕಾಳರಾತ್ರಿ,ಮಹಾಗೌರಿ, ಸಿದ್ಧಿಧಾತ್ರಿಯರ ರೂಪಗಳಲ್ಲಿ ಬಂದು ರಕ್ಕಸರನ್ನು ಸಂಹಾರ ಮಾಡಿದ್ದಳು ಎಂಬುದು ಪ್ರತೀತಿ.ಆ ದುಷ್ಟರನ್ನು ನಾಶ ಮಾಡಿ ಶಿಷ್ಟರನ್ನು ರಕ್ಷಣೆ ಮಾಡಿದ ಕಥೆ ಎಲ್ಲರಿಗೂ ತಿಳಿದಿರುವ ವಿಚಾರವೇ.ಆದರೆ ಕೇವಲ ಹೊರಗಿರುವವರು ಮಾತ್ರ ರಾಕ್ಷಸರೆ ?

ನಮ್ಮೊಳಗು ನಮ್ಮ ಪ್ರಗತಿಗೆ ಅಡ್ಡ ಬರುವ ರಕ್ಕಸರಿಲ್ಲವೆ? ಆ ವೈರಿಗಳನ್ನು ನಾಶ ಮಾಡುವವರು ಯಾರು?

ಕಾಮ,ಕ್ರೋಧ,ಲೋಭ,ಮೋಹ, ಮದ, ಮಾತ್ಸರ್ಯ,ಆಲಸ್ಯ, ಅಜ್ಞಾನ,ಅಶ್ರದ್ಧೆ, ಅನಾಸಕ್ತಿ....ಹೌದು,ಒಂಭತ್ತನ್ನು ಮೀರಿ ನಮ್ಮೊಳಗಿರುವ ರಾಕ್ಷಸ ಸಂತಾನ ಬೆಳೆಯುತ್ತಲೇ ಹೋಗುತ್ತದೆ.ಅತಿಯಾದ ಆಸೆ,ಹತೋಟಿ ಮೀರಿದ ದೌರ್ಬಲ್ಯ,

ತತ್ ಕ್ಷಣ ಏರುವ ಸಿಟ್ಟು, ಅಹಂಕಾರದ ಅಮಲು,ಪರರ ಪ್ರಗತಿ ನೋಡಿ

ಹುಟ್ಟುವ ಅಸೂಯೆ,ಮಾಡುವ ಕೆಲಸ ಬೆಟ್ಟದಷ್ಟಿದ್ದರೂ ಆಕ್ರಮಿಸಿಕೊಳ್ಳುವ ಸೋಮಾರಿತನ,

ಆರಂಭದಲ್ಲಿರುವ ಶ್ರದ್ಧೆ ಮತ್ತು ಆಸಕ್ತಿಗೆ ಅಂಟಿಕೊಳ್ಳುವ ವ್ಯಾಧಿ ಇವರೆಲ್ಲ ನಮ್ಮೊಳಗಿನ ರಕ್ಕಸರೇ ಅಲ್ಲವೆ?

ಇವರ ಆಟಾಟೋಪ ಹೆಚ್ಚಾದಂತೆಲ್ಲಾ ನಮ್ಮ ವಿಕಾಸದ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ.ಅಭಿವೃದ್ಧಿಯ ಹೆದ್ದಾರಿಯಲ್ಲಿನ ನಮ್ಮ ಪಯಣ ನಿಧಾನವಾಗುತ್ತದೆ.ಸಾಧಕನ ಸಾಧನೆಯ ಬೆನ್ನ ಹಿಂದೆಯೇ ಅವನ ಮೇಲೇರಗಲು ಕಾಯುತ್ತಿರುತ್ತವೆ ಈ ಅಸುರ ಶಕ್ತಿಗಳು.ಹೀಗಾಗಿ ನಮ್ಮೊಳಗೇ ನಮ್ಮವಿನಾಶಕ್ಕಾಗಿ ಹಾತೊರೆಯುತ್ತಿರುವ ಈ ರಾಕ್ಷಸರನ್ನು ನಾವು ಮೆಟ್ಟಿ ನಿಲ್ಲಲೇಬೇಕು.ಅದುವೇ ನಿಜವಾದ ನವರಾತ್ರಿ.ಆ ರಕ್ಕಸರ ಮೇಲಿನ ನಮ್ಮ ವಿಜಯವೇ ನಿಜವಾದ ವಿಜಯದಶಮಿ.

ಈ ಅಸುರರನ್ನು ಗೆಲ್ಲಲು ನಾವೇ ನಮ್ಮ ವಿವೇಕ, ಜ್ಞಾನ,ಚಿಂತನೆಗಳೆಂಬ ಆಯುಧಗಳನ್ನು ಹುರಿಗೊಳಿಸಿ ಕಾದಬೇಕು.ನಿಜವಾಗಿ ನೋಡಿದರೆ

ಒಳಗಿನ ವೈರಿಗಳನ್ನು ಗೆದ್ದಾಗಲೇ ಹೊರಗಿನ ಶತ್ರುಗಳನ್ನು ಜಯಿಸಲು ಸಾಧ್ಯ.ಪ್ರತಿಯೊಂದು ಹಬ್ಬವನ್ನು ಸೂಕ್ಷ್ಮ ವಾಗಿ ಅವಲೋಕನ ಮಾಡಿದಾಗ ಅದರೊಳಗೆ ಹುದುಗಿರುವ ಅರ್ಥವನ್ನು ನಾವು ಅರಿಯಬಹುದು.

ಎಲ್ಲ ಹಬ್ಬಗಳ ಹಿಂದೆಯೂ ನಮ್ಮ ಬದುಕು ಬೆಳಗುವ ಚಿಂತನೆಯಿದೆ... ಚೈತನ್ಯವಿದೆ.


- ಶ್ರೀಧರ ಶೇಟ್ ಶಿರಾಲಿ

23 views0 comments

Comentarios


bottom of page