ಕಾವ್ಯ ಕನ್ನಿಕೆ
- ಆಲೋಚನೆ
- Feb 16, 2022
- 1 min read
ಇಂದುವದನೆಯೆ ಚಂದವತಿಯೆ
ನೀನೆ ಕಾವ್ಯೋನ್ಮಾದಿನಿ
ಅಂದದಾ ಪದಬಂಧಕೆ
ಸುಳುಹು ನಿನ್ನಂದದ ಖನಿ
ಹಂಸ ನಡಿಗೆಯ ಪದತಲದಲಿ
ಮಣ್ಣು ತಾ ಮರುಗುಡುತಿದೆ
ಬಿಟ್ಟು ಹೋಗದಿರೆನುತ
ಹೆಜ್ಜೆಯ ಸಾವಕಾಶಿಸಿ ಸೋತಿದೆ
ನೀಳ ಮೂಗಿಗೆ ನತ್ತು ನಾಚಿದೆ
ತನ್ನ ಸ್ಥಾನದ ಮೇಲ್ಮೆಗೆ
ಚೆಂಗುಳಿಯ ಕಪೋಲ ಕರೆದಿದೆ
ಮನ ಸೆಳೆದು ತನ್ನಲ್ಲಿಗೆ
ಕೆಂಗುಲಾಬಿಯ ಮೊಗವದು
ಮಗಮಗಿಸುತಿದೆ ನಗು ಹೊಮ್ಮಿಸಿ
ದಂತ ಪಂಕ್ತಿಯ ಹೊಳಹಿನಲ್ಲಿ
ಮಿಕ್ಕೆಲ್ಲ ಚಂದವ ಮೀರಿಸಿ
ಸಂಪಿಗೆಯ ಮೊಗಕೆ ಹಣೆಬೊಟ್ಟ ಚಿಟ್ಟೆ
ಮುಖಪುಷ್ಪ ಮುದ್ದಿಸಿ ನಗುತಿದೆ
ಮುಗ್ಧತೆಯ ಕಣ್ಣೋಟವದು
ಕನಿಕರಿಸಿ ಬರಸೆಳೆವಂತಿದೆ
ಬಳುಕೊ ಮೈಯದು ನವಿರು ಲತೆ
ಕೈ ಬೆರಳು ಚಿಗುರಿನ ಕುಡಿಗಳು
ಕುಂಭ ಮಾಟ ನಿತಂಬಗಳು
ಎದೆಯುಬ್ಬು ಹದವರಿತಂತಿದೆ
ಪಾರಿಜಾತದ ಪುಷ್ಪದಂತೆಯೆ
ಸುಕೋಮಲ ನಿನ್ನ ಮೈಸಿರಿ
ಗಂಧ ವರ್ಣದ ನಿನ್ನಂಗವೆ
ಸುಗಂಧ ತಾ ಸೂಸುತ್ತಿದೆ
ನಿನ್ನಂದ ಬಣ್ಣಿಸಿ ತೃಪ್ತನಾಗದೆ
ಕವಿ ಮನವು ತಾ ಕೊರಗಿದೆ
ದೈವ ಸೃಷ್ಟಿಯ ಅದ್ಭುತವು ನೀ-
-ನೆಂದು ಸಾಂತ್ವನಗೊಂಡಿದೆ
# ಸಂತೋಷಕುಮಾರ ಅತ್ತಿವೇರಿ
Comments