top of page

ಕಾವ್ಯಜ್ಯೋತಿ

ಗೆಲುವಿನ ಹಾದಿ


ಗೆದ್ದೆನೆಂದು ನೆತ್ತಿಗೆ ಅಂಟಿಕೊಳ್ಳದಿರಲಿ

ಅಹಂಕಾರದ ಕಿರೀಟ

ಸದ್ದಿಲ್ಲದೆ ಬಗ್ಗಿ ಫಲ ನೀಡುವ

ತರುಲತೆಗಳಿಂದ ಕಲಿಪಾಠ


ಕಷ್ಟಪಟ್ಟಿಟ್ಟ ಹೆಜ್ಜೆ ಮರೆಯದಿರೆಂದೂ

ಇರಲಿ ನಡೆನುಡಿಗಳಲಿ ಸಂಸ್ಕಾರ

ಎಷ್ಟು ಏರಿದರೇನು ಗೆಲುವಿನ ಹಾದಿ

ನಿರಂತರ ಪಯಣ ಶ್ರೀಧರ


ಗೆದ್ದೆನೆಂದೋ,ಸಾಧಿಸಿಬಿಟ್ಟೆನೆಂದೋ ಕೆಲವೊಮ್ಮೆ ಅಹಂಕಾರ ನಮ್ಮ ನೆತ್ತಿಯನ್ನು ಏರಿ ಕುಳಿತುಬಿಡುತ್ತದೆ. ಯಾವುದೋ ಒಂದು ಕೆಲಸದಲ್ಲಿ ದೊರೆಯುವ ಯಶಸ್ಸಿನ ಬೆನ್ನ ಹಿಂದೆ ಅಹಂಕಾರ ಮುಸುಕು ಹಾಕಿಕೊಂಡು ಬೆನ್ನತ್ತಿಕೊಂಡು ಬರುತ್ತದೆ. ಕ್ರೀಡೆ, ರಾಜಕೀಯ, ಸಿನಿಮಾ, ಸಾಹಿತ್ಯ ಅಥವಾ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಇದು ಸಾಮಾನ್ಯವಾಗಿ ಕಾಣಸಿಗುವ ದೃಶ್ಯ. ಕಾಲಾನಂತರ ಅಹಂಕಾರವೇ ಪ್ರಧಾನವಾಗಿ ಸಾಧನೆ ಶೂನ್ಯವಾಗಿ ಬಿಡುತ್ತದೆ. ಹಾಗಾದಾಗ ಆ ಸಾಧಕ ನೇಪತ್ಯಕ್ಕೆ ಸರಿದು ಬಿಡುತ್ತಾನೆ. ಪುರಾಣ- ಇತಿಹಾಸಗಳಲ್ಲಿ ಇದಕ್ಕೆ ಸಾವಿರಾರು ಉದಾಹರಣೆಗಳು ಬೊಗಸೆ ಬೊಗಸೆಯಾಗಿ ಸಿಗುತ್ತವೆ.

ಗೆದ್ದ ಮನುಷ್ಯ ತಗ್ಗಿ-ಬಗ್ಗಿ ನಡೆಯಬೇಕೆಂಬುದನ್ನು ನಮಗೆ ನಿಸರ್ಗ ಅತ್ಯಂತ ಅಚ್ಚುಕಟ್ಟಾಗಿ ಬೋಧಿಸುತ್ತದೆ. ಯಾವುದೇ ಆಡಂಬರವಿಲ್ಲದೆ, ಸದ್ದುಗದ್ದಲವಿಲ್ಲದೆ ಸುತ್ತಲಿನ ಪರಿಸರ ನಮಗೆ ನೂರಾರು ಪಾಠಗಳನ್ನು ನಿರಂತರವಾಗಿ ಕಲಿಸುತ್ತಲೇ ಬಂದಿದೆ. ಹಣ್ಣುಗಳಿಂದ ತುಂಬಿದ ಮಾಮರ ಯಾವಾಗಲೂ ತಗ್ಗಿ-ಬಗ್ಗಿಯೇ ಇರುತ್ತದೆ. ಫಲ ನೀಡುವ ಯಾವುದೇ ಮರವಿರಲಿ ಅದು ಭೂಮಿಯ ಕಡೆಗೆ ತಗ್ಗಿ-ಬಗ್ಗಿ ಬಾಗುತ್ತಲೇ ಇರುತ್ತದೆ. ಹಣ್ಣು ನೀಡದ ಮರ ನೇರವಾಗಿ ಗರ್ವದಿಂದ ಬೆಳೆಯುತ್ತದೆ. ಅಹಂಕಾರ ಮರೆತು ಸಾಮಾನ್ಯನಂತೆ ಬಾಳುವುದು ಸಾಧಕರ ಲಕ್ಷಣ. ಎಷ್ಟು ಮಹಾನ್ ಸಾಧಕ ಮಹಾತ್ಮರ ಬಾಳುವೆ ನಮಗೆ ನಿದರ್ಶನವಾಗಿದೆ.

ಸಾಧನೆಯ ಹಿಂದೆ ಆ ಸಾಧಕನ ಅವಿಶ್ರಾಂತ ಪರಿಶ್ರಮ ಇರುತ್ತದೆ. ನಿದ್ರೆಯಿಲ್ಲದ ರಾತ್ರಿಗಳು ಇರುತ್ತವೆ. ನಿರಂತರ ಸವಾಲುಗಳನ್ನು ಎದುರಿಸುತ್ತಾ ಸಾಧಕ ಸಾಧನೆಯ ಹೊಸ ಮಜಲುಗಳನ್ನು ತಲುಪಿರುತ್ತಾನೆ. ಸಾಧಕ ಅದನ್ನು ಮರೆಯುವಂತಿಲ್ಲ. ಕಷ್ಟಪಟ್ಟು ತಾನಿಟ್ಟ ಹೆಜ್ಜೆಗಳನ್ನು ಅವಲೋಕನ ಮಾಡುತ್ತಲೇ ಇರಬೇಕು. ನಡೆನುಡಿಗಳಲ್ಲಿ ಸೌಜನ್ಯ ಸದಾಕಾಲ ಸಂಕಲನ ಕೊಂಡಿರಬೇಕು. 'ಎನಗಿಂತ ಕಿರಿಯನಿಲ್ಲ' ಎಂಬ ದಾಸರ ವಾಣಿಯಂತೆ ಸಾಧಕನ ಸಂಸ್ಕಾರವಿರಬೇಕು.

ಸಾಧಕ ಎಷ್ಟೇ ಸಾಧನೆಗಳನ್ನು ಮಾಡಿರಲಿ ಅದು ಕ್ಷಣಿಕ. ಇನ್ನೊಂದು ಕ್ಷಣದಲ್ಲಿ ಆ ಸಾಧನೆ ಇನ್ನಾರದೋ ಆಗಿಬಿಡುತ್ತದೆ. ಸಾಧನೆ ಅಥವಾ ಯಶಸ್ಸು ಎನ್ನುವುದು ಅದು ನಿರಂತರ ಪಯಣ. ತಾನು ಸಾಧಿಸಿಬಿಟ್ಟಿದ್ದೇನೆ ಎಂಬ ಅಹಂಕಾರ ಸಾಧಕನ ಅಧೋಗತಿಗೆ ಕಾರಣವಾಗುತ್ತದೆ. ಕವಿ ಡಿವಿಜಿಯವರು ಹೇಳಿದಂತೆ 'ಎಲ್ಲರೊಳಗೊಂದಾಗಿ ಬದುಕಿ'ದಾಗಲೇ ಸಾಧಕನ ಸಾಧನೆಗೆ ಒಂದು ಅರ್ಥ... ಅವರ ಬದುಕೇ ಅನ್ವರ್ಥ...


-ಶ್ರೀಧರ ಶೇಟ್ ಶಿರಾಲಿ.

4 views0 comments

Comments


bottom of page