top of page

ಕೋವಿಡ್ -19 : ಸಾಹಿತ್ಯಿಕ ಜಗತ್ತು

ಒಂದಿಷ್ಟು ದಿನ ಜಗತ್ತನ್ನೇ ಸ್ಥಬ್ಧಮಾಡಿ, ಎಲ್ಲವೂ ಹಣದಿಂದಲೇ ಸಾಧ್ಯವೆಂಬ ಅಘೋಷಿತ ಸಿದ್ಧಾಂತವನ್ನು ಒಡೆದು ಹಾಗೂ ತಾಂತ್ರಿಕ ಮಹಾನಗರಗಳಿಗಿಂತ ನಮ್ಮ ಊರು-ಕೇರಿ-ಓಣಿ- ಹಳ್ಳಿಗಳೇ ಸದಾ ಸುರಕ್ಷಿತವೆಂಬ ಅರಿವು ಬರಲು ಕೊರೋನ್-19 ಬರುವರಗೆ ನಾವು ಕಾಯಬೇಕಿತ್ತೆ ಎಂಬ ಪ್ರಶ್ನೆಯಿಂದಲೇ ಈ ವಿಷಯವನ್ನು ಚರ್ಚಿಸಬೇಕು. ಅನೇಕರದು ಸಹ ಇದೇ ಪ್ರಶ್ನೆಯಾಗಿರಬಹುದು!. ಜೊತೆಗೆ ಮೂಲದ ನೆಲ-ನೆಲೆಯನ್ನು ಬಿಟ್ಟು ಸಂಬಂಧವನ್ನು ಕಳಚಿಕೊಂಡು ನಾನಾ ಊರುಗಳಿಗೆ ಹಾರಿದ ಸಾವಿರಾರು ‘ಅಕ್ಷರದ ಹಕ್ಕಿಗಳು’ ತಮ್ಮ ಸಾವಿನ ಭಯದ ನೆರಳಿಂದ ಈ ಹಿಂದೆ ಮುರಿದ ಕೊಂಡಿಗಳನ್ನು ಮತ್ತೆ ಬೆಸೆದುಕೊಂಡು ತುರ್ತಾಗಿ ಗೂಡು ಸೇರಿವೆ. ಇದು ಕಾಲ ಮತ್ತು ಪ್ರಕೃತಿಯ ಪಾಠವಾಗಿದೆ.

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪರ ‘ಎಲ್ಲೊ ಹುಡುಕಿದ ಇಲ್ಲದ ದೇವರ,,,,,’ ಕವಿತೆಯಲ್ಲಿ ಬರುವ “ ಹತ್ತಿರ ವಿದ್ದು ದೂರ ನಿಲ್ಲುವ,,,” ಈ ಸಾಲು ಕೋವಿಡ್ ಗಾಗಿಯೇ ಬರೆದಂತಿದೆ. ಯಾಕೆಂದರೆ, ಈ ಸಾಲು, ದೈಹಿಕವಾಗಿ ಇಷ್ಟು ಹತ್ತಿರವಿದ್ದರೂ ನಮ್ಮ ನಡುವಿನ ಗೋಡೆ, ಕಂದರ, ಹಮ್ಮಿನ ಕೋಟೆಗಳಿಂದ ನಾವೆಲ್ಲ ಮಾನಸಿಕವಾಗಿ ದೂರವಿದ್ದೇವೆ. ಅದರೆ ಕೋವಿಡ್-19 ದೂರವಿದ್ದು (ಸಾಮಾಜಿಕ ದೂರ) ಹತ್ತಿರವಾಗುವ ಅನಿವಾರ್ಯತೆಯನ್ನು ನಿರ್ಮಾಣ ಮಾಡಿದೆ. ಸುರಕ್ಷತೆಗೆ ದೈಹಿಕವಾದ ಅಂತರ ಅನಿವಾರ್ಯವಾಗಿದೆ. ಅದರೆ, ಮಾನಸಿಕವಾಗಿ ಎಲ್ಲರೂ ಆಪ್ತವಾಗಬೇಕು. ಹೀಗಾಗಿ ಇಂತಹ ತಂತ್ರಜ್ಞಾನದ ಮುಖೇನ ಕೊಂಚಕಾಲ ಹತ್ತಿರವಾಗುತ್ತಿದ್ದೇವೆ.

ಕೋವಿಡ್-19 ನಿಂದ ಸಾಹಿತ್ಯಿಕ ವಾತಾವರಣದ ಚಹರೆ ಬದಲಾಗುತ್ತಿರುವುದು ಸಹಜವಾಗಿ ಗೋಚರಿಸುತ್ತಿದೆ. ಹಾಗಾದರೆ ಇದರ ನಂತರವೇನು ಎಂಬ ಪ್ರಶ್ನೆ ಸಹಜ. ಈ ಕುರಿತು, ಈ ಮಾಹಾ ಪ್ರವಾಹ ಮುಗಿದ ಮೇಲೆ ಅದು ಉಳಿಸಿದ ಗುರುತುಗಳ ಮೂಲಕ ಉತ್ತರವನ್ನು ಕಂಡುಕೊಳ್ಳಬೇಕು. ಇದು ಕಷ್ಟ. ಯಾಕೆಂದರೆ, ಈಗ ಪ್ರಾರಂಭ ಮಾತ್ರ ಕಾಲಸರಿದ ಮೇಲೆ ಸಮಯವೇ ನಮಗೆ ಉತ್ತರ ನೀಡಬಹುದು/ನಮ್ಮ ಅನುಭವಕ್ಕೆ ಗೋಚರಿಸಹುದು.

ಪ್ರಸ್ತುತ ವಿಷಯವನ್ನು ನಾನು ಮೂರು ಭಾಗಗಳಲ್ಲಿ ವಿಂಗಡಿಸಿಕೊಂಡು ಚಿಂತನೆಗೊಳಪಡಿಸಲು ಪ್ರಯತ್ನಿಸುತ್ತೇನೆ. ಇದೇ ಅಂತಿಮವಲ್ಲವೆನ್ನುವ ಪ್ರಜ್ಞೆಯೊಂದಿಗೆ,

1. ಸಾಹಿತ್ಯಿಕ ವಾತಾವರಣದ ಚಹರೆ ಬದಲಾಗುತ್ತಿರುವುದು.

2. ಸಾಹಿತ್ಯದ ಬೋಧನೆಯಲ್ಲಾದ ಪಲ್ಲಟ.

3. ಸಾಹಿತ್ಯದ ಪ್ರಸಾರ/ತಲುಪಿಸುವ ವಿಧಾನದ ವಿಸ್ತರಣೆ.

ಇದಕ್ಕೆ ಪೂರಕವಾಗಿ ಪುಸ್ತಕ ‘ರಿವ್ಯೂಗಳು’ ಸಾಹಿತ್ಯ ವಿಮರ್ಶೆ’ ಎಂದು ಪರಿಭಾವಿಸಿ ಪ್ರಕಟಿಸುವ ಕ್ರಮ.

ಚಿಕ್ಕದೊಂದು ಸ್ಪಷ್ಟಿಕರಣದ ಮೂಲಕ ನನ್ನ ಮಾತನ್ನು ಮುಂದುವರಿಸುತ್ತೇನೆ. ಅದೇನೆಂದರೆÀ, ಕೋವಿಡ್-19 ಬಂದ ಕಾರಣದಿಂದಲೇ ಈ ಚಹರೆಗಳೆಲ್ಲಾ ಬದಲಾಗಿವೆ ಎಂಬ ಭ್ರಮೆಯನ್ನು ಬದಿಗಿಟ್ಟು ಆಲೋಚಿಸಬೇಕಾಗಿದೆ. ಈ ಚಹರೆ ಆರಂಭದಿಂದಲೂ ಇದ್ದು ಅದರ ರೂಪ ಕಾಲಕ್ಕೆ ತಕ್ಕಂತೆ ಪ್ರಕ್ರಿಯಾತ್ಮಕವಾಗಿ ಮುಂದುವರಿದಿದೆ. ಉದಾಹರಣೆಗೆ, ಎಷ್ಟೋ ವರ್ಷಗಳ ಮೊದಲೇ ನಾವುಗಳು ಆನ್‍ಲೈನ್ ತರಗÀತಿಗಳನ್ನು, ಆನ್‍ಲೈನ್ ಸೆಮಿನಾರ್‍ಗಳನ್ನು ಇಂದಿನ ಆನ್‍ಲೈನ್ ಶಾಪಿಂಗ್ ಮಾದರಿಯಲ್ಲಿ ‘ತರಬೇತಿ’ ಪಡೆದು ಅನುಭವಿಸಿದ್ದೇವೆ. ಅರಂಭದಲ್ಲಿ ಇದು ವಿಜ್ಞಾನ, ತಂತ್ರಜ್ಞಾನ ಮತು ಸಮಾಜ ವಿಜ್ಞಾನದಿಂದ ಮುಂದುವರಿದು ನಾವು ಅದನ್ನು ಸಾಹಿತ್ಯಕ್ಕೆ ಸಹಜವಾಗಿ ಒಗ್ಗಿಸಿಕೊಂಡಿದ್ದೇವೆ. ಯಾಕೆಂದರೆ, ಸಮಯ ಮತ್ತು ಸಂದರ್ಭಗಳು ಕಲಿಸುವ ಅನುಭವಗಳು ಅಧಿಕವಾಗಿದೆ. ಕೋವಿಡ್-19ರಿಂದ ಭಾಷೆ ಮತ್ತು ಸಾಹಿತ್ಯ ತಾಂತ್ರಿಕ ಜಗತ್ತಿನ ಮೂಲಕ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಿದೆ. ನಾವು ಇದಕ್ಕೆ ಪೂರಕವಾಗಿಯೇ ಅದನ್ನು ರೂಪಿಸುತ್ತಿದ್ದೇವೆ. ಭಾಷೆ ಮತ್ತು ಸಾಹಿತ್ಯದ ಸಂದರ್ಭದಲ್ಲಿ ಮುದ್ರಣ ಯಂತ್ರದ ಆವಿಷ್ಕಾರ ದೊಡ್ಡದೊಂದು ಮೈಲಿಗಲ್ಲಾದರೆ, ಇಂದು ಸೋಶಿಯಲ್ ಮಿಡಿಯಾಗಳು ಸಹಜವಾಗಿ ನಮ್ಮನ್ನು ಪಲ್ಲಟವಾಗಲು ಸಜ್ಜುಗೊಳಿಸುತ್ತಿವೆ ಎಂದರೆ ತಪ್ಪಾಗಲಾರದು. ಹೀಗಾಗಿಯೇ ನಮ್ಮ ಯುವ ಮನಸ್ಸುಗಳು ಡಿಪಿ, ಸ್ಟೇಟಸ್, ಲೈಕ್ ಮತ್ತು ರಿಪ್ಲೇಗಳ ಚತುರ್ಭಜಕ್ಕೆ ಜೋತು ಬಿದ್ದವೆ.

ಜಗದ ನೂರಾರು ದೇಶಗಳಿಗಿಂತ ಭಿನ್ನವಾದ ಮತ್ತು ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತ ‘ಲಾಕ್ ಡೌನ್’ (ಸ್ತಬ್ಧ) ಆಗಿರುವ ಸಂದರ್ಭದಲ್ಲಿ ನಾವುಗಳು ಭೌದ್ಧಿಕವಾಗಿ ಅಲೋಚಿಸಿದ್ದಕ್ಕಿಂತ ತಂತ್ರಜ್ಞಾನದಿಂದ ತೆರೆದುಕೊಳ್ಳುವ ಮೂಲಕ ಜಗತ್ತನ್ನು, ನಮ್ಮನ್ನೊಳಗೊಂಡ ಸಮಾಜವನ್ನು ಕಾಣಲು ಪ್ರಯತ್ನಿಸಿದ್ದೇ ಹೆಚ್ಚು. ನಮ್ಮ ಸುತ್ತಲಿನ ಸಮಾಜವನ್ನು ಇಂದ್ರಿಯಗಳಿಂದ ಸ್ವತಃ ಮುಕ್ತವಾಗಿ ಕಾಣಲು ‘ಸರ್ಕಾರದ ನಿರ್ಬಂಧ’ ವಿದ್ದಾಗ ಸಹಜವಾಗಿ ಸೋಶಿಯಲ್ ಮಿಡಿಯಾಗಳ ಮೂಲಕ ಮತ್ತು ಸುದ್ದಿವಾಹಿನಿಗಳ ಕ್ಯಾಮರಾ ಕಣ್ಣಿಗೆ ಸಿಕ್ಕ ಅರ್ಧ ವಿಷಯವನ್ನೆ ಪೂರ್ಣವೆಂದು ಕಾಣುವ ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ಪ್ರಯತ್ನದ ಪ್ರಮಾಣವನ್ನು ಈ ಕೋವಿಡ್-19 ಹೆಚ್ಚಿಸಿತೆನಿಸುತ್ತಿದೆ.

ಒಂದೆಡೆ ಮಾಸ್ತಿಯವರು ಸಾಹಿತ್ಯದ ಕುರಿತು ವಿವೇಚಿಸುತ್ತಾ “ಸಾಹಿತ್ಯವು ಸಮಾಜ ಹೇಗಿದೆ ಮತ್ತು ಹೇಗಿರಬೇಕು ಎಂಬುದನ್ನು ಹೇಳುತ್ತದೆ” ಎನ್ನುತ್ತಾರೆ. ಇದರಂತೆ ನಾವು ಹೇಗಿದ್ದೇವೆ ಎನ್ನುವುದರಿಂದ ಬದಲಾದ ಸಂದರ್ಭದಲ್ಲಿ ಹೇಗಿರಬೇಕೆಂಬುದರ ಅರಿವು ಮೂಡಿಸುತ್ತದೆ. ಹಾಗೆಯೇ ಕೋವಿಡ್-19 ರಿಂದ ನಮ್ಮ ಸಾಹಿತ್ಯದ ವಾತಾವರಣದ ಚಹರೆ ಸಹಜವಾಗಿ ಬದಲಾಗುವಂತಾಯಿತು. ಒಂದೆಡೆ ಸೇರುವ, ಚರ್ಚಿಸುವ, ವಾಗ್ವಾದ ಮಾಡುವ ಬದಲು, ವಾಟ್ಸಾಪ್ ಗ್ರೂಫ್ ಮತ್ತು ಫೇಸ್‍ಬುಕ್ ಇತ್ಯಾದಿ ಸೋಶಿಯಲ್ ಮಿಡಿಯಾಗಳಲ್ಲಿ ‘ಬಯಲಾಗುವಂತಾಯಿತು. ಒಂದೆಡೆ ಸೇರಿ ಸೆಮಿನಾರ್ ಅಥವಾ ಕಮ್ಮಟ ಮಾಡುವ ನಾವುಗಳು ದೂರವಿದ್ದು ತಂತ್ರಜ್ಞಾನಗಳ ಮೂಲಕ ಒಂದೆಡೆಗೆ ಸೇರಲು ಸಜ್ಜಾಗಿದ್ದೇವೆ. ಈ ಎಲ್ಲಾತರದ ಸಾಹಿತ್ಯದ ವಾತಾವರಣದ ಚಹರೆಯ ಬದಲಾವಣೆಯ ತೀವ್ರತೆಗೆ ಕೋವಿಡ್-19 ನೇರವಾಗಿ ಕಾರಣವಾಗಿದೆ.

ನಾವೆಲ್ಲಾ ಗಮನಿಸಿದ್ದೇವೆ, ‘ಲಾಕ್‍ಡೌನ್’ ಆದಾಗ ಫೇಸ್ ಬುಕ್‍ನಲ್ಲಿ ಅನೇಕರು ‘ನನ್ನ ಮೊದಲ ಪ್ರಯತ್ನ’, ‘ಪ್ರತಿಕ್ರಿಯಿಸಿ’, ಅವರು ನನಗೆ ಕವಿತೆ ವಾಚಿಸಲು ಅಹ್ವಾನಿಸಿದಕ್ಕೆ ಧನ್ಯವಾದ’, ನಾ ಇವರಿಗೆ ಕೋ ಕೊಡುವೆ’. ಎಂಬೆಲ್ಲಾ ಪೂರ್ವಪೀಠಿಕೆಯಿಂದ ಸ್ವ-ರಚಿತ ಕವಿತೆಗಳನ್ನು ವಾಚಿಸದರು. ಯಾರು ತಪ್ಪು ತಿಳಿಯ ಬಾರದು, ಆರಂಭದಲ್ಲಿ ಕೋವಿಡ್-19ರಂತೆ ಸಾಂಕ್ರಾಮಿಕವಾದ ಈ ಚಹರೆ ಸಹಜವಾಗಿ ಕಡಿಮೆಯಾಗುತ್ತಿದೆ. ಇಂತವುಗಳು ಯಾವಾಗಲೂ ತತ್ಕಾಲೀನವಾಗಿರುತ್ತದೆ. ಭಾರತೀಯ ಜಗತ್ತು ವಸಾಹತು ಸಂದರ್ಭದ ನಂತರ ಪಾರಂಪರಿಕ ತೋಂಡಿ/ ಬಾಯ್ಮಾತಿಗೆ ಬೆಲೆ ಕೊಡದೆ, ದಾಖಲೆಯನ್ನು, ಸಾಕ್ಷಿಯನ್ನು ಸಹಜವಾಗಿ ನಂಬುವ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಇದರಿಂದಾಗಿಯೇ ಎಷ್ಟೇ ಸಾಪ್ಟ್ ಕಾಪಿಗಳನ್ನು ಕೇಳಿದರೂ ಅದರ ಹಾರ್ಡ್‍ಕಾಪಿಯನ್ನು ಸ್ಟೋರ್ ಮಾಡುತ್ತೇವೆ. ಸಪ್ಟ್ ಕಾಪಿಗಳು ಡ್ಯಾಮೇಜ್ ಅಥವಾ ಮಾಯವಾಗಬಹುದು . ಹೀಗಾಗಿ ಪ್ರಕಟಿತ ಪುಸ್ತಕದ ಸ್ವರೂಪವನ್ನು ‘ ಶಕ್ತಿ’ಯನ್ನು ಕಂಪ್ಯೂಟರ್‍ನ ಮೋನಿಟರ್ ಮೇಲೆ ಇಲ್ಲವೇ ಮೊಬೈಲ್ ಸ್ಕ್ರೀನ್ ಮೇಲೆ ಕೆತ್ತಿದ ಅಕ್ಷರ ಹೊಂದಲ್ಲ, ಹಾಗೇ ಸಭೆಗಳಲ್ಲಿ ವಾಚಿಸಿದ ಕವಿತೆ ತುಂಬುವ ಅರಿವನ್ನು ಫೇಸ್‍ಬುಕ್‍ನ ಗುಂಪಿನ ಕೆಲವರ ನಡುವೆ ಕಳೆದು ಹೋಗುವ ಕವಿತೆಗಿಲ್ಲ. ಅದ್ದರಿಂದಲೇ ನಾನು ಆರಂಭದಲ್ಲಿ ಸಾಹಿತ್ಯಿಕ ವಾತಾವರಣದ ಚಹರೆಯನ್ನು ಕೋವಿಡ್-19 ಬದಲಿಸಿದೆ ಎಂದಿದ್ದು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈ ತತ್ಕಾಲೀನ ಪಲ್ಲಟಗಳು ಪ್ರವಾದಂತೆ ದುತ್ತೆಂದು ಬಂದು ಅಲೋಚಿಸುತ್ತಿರುವಾಗಲೇ ತಕ್ಷಣ ಇಳಿದು ಮರೆಯಾಗುತ್ತದೆ. ಕೋವಿಡ್-19ರ ಸಾಂಕ್ರಾಮಿಕ ಹರಡುವಿಕೆಯ ಸ್ವರೂಪ ವಿಭಿನ್ನವಾಗಿರುವುದರಿಂದ ಅಂತಿಮವಾಗಿ ಒಂದಿಷ್ಟು ಉಳಿದಿಕೊಳ್ಳಬಹುದು.

ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದ ಸಾಂಸ್ಕ್ರತಿಕ ಚರಿತ್ರೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಹತ್ತು-ಹನ್ನೊಂದನೇ ಶತಮಾನದಿಂದ ನವೋದಯ ಮತ್ತು ಬಂಡಾಯದ ನಂತರದ ಕೆಲವು ದಶಕಗಳಲ್ಲಿ ಲೇಖಕ ‘ಸಮುದಾಯದ’ ಅಂತರ ‘ಸಾಹಿತ್ಯ ಸಮುದಾಯದ ಪ್ರತಿನಿಧೀಕರಣ’ದ ಬರೆಹಗಾರರಾಗಿದ್ದು, ಆ ಜವಾಬ್ದಾರಿ ಮತ್ತು ಅರಿವಿನಲ್ಲಿಯೇ ಸಾಹಿತ್ಯವನ್ನು ರಚಿಸುತ್ತಿದ್ದರು. ಆದರೆ ಇಂದು ‘ಸಮುದಾಯದ ಪ್ರಜ್ಞೆ’ ಮತ್ತು ‘ಸಮುದಾಯದ ಲೇಖಕರ’ ಪ್ರಮಾಣ ತುಂಬಾ ಕಡಿಮೆಯಾಗಿದೆ. ಇಲ್ಲವೇ ಇಲ್ಲ ಎಂದೆನಿಸುತ್ತದೆ. ಬೇಕಾದರೆ ಈ ಕುರಿತಾದ ಅಧ್ಯಯನಗಳನ್ನು ಗಮನಿಸಬಹುದು. ಇಪ್ಪತ್ತನೇ ಶತಮಾನದ ಕೊನೆಯ ದಶಕ ಹಾಗೂ ಇಪ್ಪತೊಂದನೇ ಶತಮಾನದ ಈ ಎರಡು ದಶಕಗಳಲ್ಲಿ ಸಾಮುದಾಯಿಕ ಪ್ರಜ್ಞೆ ಛಿದ್ರಗೊಂಡು ಸಾಹಿತ್ಯದಲ್ಲಿ ತತ್ಕಾಲೀನ ಅಜೆಂಡಾ ಅಥವಾ ಇನ್ನಾವುದೋ ನೆರಳಲ್ಲಿ ಚಿಕ್ಕ-ಚಿಕ್ಕ ಸರ್ಕಲ್/ ಗುಂಪುಗಳು ಹೊಟ್ಟುಕೊಂಡಿವೆ (ಇದರ ಪರಿಣಾಮದ ಕುರಿತು ನಾವುಗಳು ಆಲೋಚಿಸಬೇಕಾದ ತುರ್ತಿದೆ). ಇಲ್ಲಿ ಪ್ರತಿ ಗುಂಪಿನವರನ್ನೇ ಹೊಗಳುವ, ಅವರವರ ಬರಹಕ್ಕೆ ಪ್ರೋತ್ಸಾಹ ಕೊಡುವ ಸಾಹಿತ್ಯಕ ಚರ್ಚೆಯಲ್ಲಿ ಆ ಗುಂಪಿವನರನ್ನೇ ಆಯ್ದುಕೊಳ್ಳುವ ನಿರ್ಧಾರಗಳೊಂದಗೆ ಇತರ ಗುಂಪುಗಳನ್ನು ಕಿಚಾಯಿಸುವ ಚಟುವಟಿಕೆಗಳು ನಡೆಯುತ್ತಿವೆ. ಇದು ಆತಂಕಕಾರಿ ಸಂಗತಿ. ಜೊತೆಗೆ ಕೆಲವು ಪ್ರಕಾಶಕರೂ ಸಹ ಇದಕ್ಕೆ ಕೈಜೋಡಿಸಿರುವದು ಅಸಹಜವೆನಿಸುತ್ತದೆ.

ಮುಂದುವರಿದು, ಸಾಹಿತ್ಯದ ಬೊಧನೆಯಲ್ಲಾದ ಪಲ್ಲಟವನ್ನು ಗಮನಿಸುವುದಾದರೆ, ಒಂದು ಕಾಲದಲ್ಲಿ ತರಗತಿಗಳು ಸಾಹಿತ್ಯದ ತತ್ವ-ಚಿಂತನೆ, ವಾಗ್ವಾದ, ಚರ್ಚೆಗಳಿಗೆ ದಾರಿಮಾಡುವ : ಅನೇಕ ಶಿಷ್ಯ ಪರಂಪರೆಯನ್ನು ರೂಪಿಸುತ್ತಿದ್ದ ನಮ್ಮ ಬೋಧನಾ ಪರಂಪರೆ ಎಲ್ಲೋ ಒಂದು ಕಡೆ ತಂತ್ರಜ್ಞಾನದ ‘ತಾಂತ್ರಿಕತೆ’ಗೆ ಸಿಕ್ಕು ನಲುಗಿ ಶರಣಾಗಿದೆ ಎನಿಸುತ್ತಿದೆ. ಅಂದು ನಾವುಗಳು ಪಾಠಗಳನ್ನು ಕೇಳುತ್ತಿದ್ದ ಸಮಯದಲ್ಲಿ ಮತ್ತು ಇಂದು ಸ್ವತಹ ನಾವೇ ಬೋಧನೆ ಮಾಡುವ ಸಂದರ್ಭದಲ್ಲಿ ತರಗತಿಗಳು ಚೈತನ್ಯವನ್ನು ತುಂಬಿ ಹೊಸ ಆಲೋಚನೆಗಳಿಗೆ ಮುಖಮಾಡುವ, ಸಾಹಿತ್ಯದ ಕೆಲವು ತೀರ್ಮಾನಗಳನ್ನು ಪ್ರಶ್ಮೆಮಾಡುತ್ತಾ, ಬದುಕಿನ ಪಾಠ ಹೇಳುತ್ತಾ ಇದು ಸಾಧ್ಯವೇ ಎನ್ನುತ್ತ ಪರಿಹಾರದ ಕಡೆಗೆ ಸಾಗುತ್ತಿದ್ದವು. ಆದರೆ ಈ ಕೋವಿಡ್-19 ಸಂದರ್ಭದಲ್ಲಿ ರೂಪುಗೊಳ್ಳುತ್ತಿರುವ ಹಿಂದಿನ ತರಗತಿಗಳಲ್ಲಿರುವಷ್ಟು ‘ಸ್ವಾತಂತ್ರ್ಯ’ವಿಲ್ಲದೆ, ನಾನು ಬೋಧಿಸುತ್ತೇನೆ ಎಂಬ ಅರಿವಿಗಿಂತ, ನನ್ನ ಬೋಧನೆ ರೇಕಾರ್ಡ ಆಗುತ್ತದೆ ಎಂಬ ಪ್ರಜ್ಞೆ ಮುನ್ನೆಲೆಗೆ ಬಂದು ತರಗತಿಗಳು ಜೀವಂತಿಕೆಯನ್ನು ಕಳೆದುಕೊಂಡು ಜಡವಾಗುತ್ತಿವೆ.


ಚರಿತ್ರೆಯನ್ನು ಗನಮಿಸಿದರೆ, ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿನ ಸಾಮಾಜಿಕ, ರಾಜಕೀಯ/ಸಾಂಸ್ಕ್ರತಿಕ ಪಲ್ಲಟಗಳಿಗೆ ತರಗತಿಯಲ್ಲಿನ ಗುರ-ಶಿಷ್ಯ ವೃಂದದ ಚರ್ಚೆಗಳೇ ಕಾರಣವಾಗಿದ್ದವು. ಜೊತೆಗೆ ಬೋಧನೆ ಹೊಸ ಮಾದರಿಯೊಂದರ ಸೃಜನಶೀಲ ಪ್ರಕ್ರಿಯೆಯಾಗಿತ್ತು. ಆದರೆ ಕೋವಿಡ್-19ರ ಪರಿಣಾಮ ಆರಂಭಿಕ ಹಂತದಲ್ಲಿ ಬೋಧನೆ ಒಂದು ರೀತಿಯಿಂದ ಇವೆಲ್ಲವುಳಿಂದ ದೂರಾಗಿ ಕೇವಲ ‘ಶುದ್ಧ ಸಾಹಿತ್ಯದ ಬೋಧನೆ’ಗೆ ಮಾತ್ರ ಸೀಮಿತವಾದಂತಿದೆ. ಇದರ ಪರಿಣಾಮ ಮುಂದೇನು ಎಂಬುದನ್ನು ಕಾದು ನೋಡಬೇಕು.

ಇದರೊಂದಿಗೆ ವ್ಯಾಪ್ತಿ ಮತ್ತು ಹರವು ಮುಕ್ತವಾಗಿಲ್ಲದ ಕಾರಣ ಬೋಧಕ ತನ್ನ ಬೊಧನೆಯಲ್ಲಿ ಸಹಜವಾಗಿ ‘ಸೋಸ’ಬೇಕಾದ ಅನಿವಾರ್ಯತೆಯ ಅಂಚಿಗೆ ಬಂದು ನಿಂತಿದ್ದು, ಸಾಹಿತ್ಯದ ಮುಕ್ತ ಬೋಧನೆಯಲ್ಲಿ ತನಗೆ ತಾನೇ ‘ಸೆನ್ಸಾರ್’ ಮಾಡಿಕೊಳ್ಳ ಬೇಕಾದ ಇಕ್ಕಟ್ಟಿನ ನಡುವೆ ಸಮಕಾಲೀನ ಬೋಧಕರು ಅಧೀರರಾಗಿದ್ದಾರೆ ಎಂದೆನಿಸುತ್ತದೆ. ವೈಯಕ್ತಿಕವಾಗಿ ನಾನು ಗಮನಿಸಿದಂತೆ, ಇತ್ತೀಚಿಗೆ ಸುಮಾರು ಎರಡು ಮೂರು ತಿಂಗಳಲ್ಲಿ ಅನೇಕ ಪ್ರಾಧ್ಯಾಪಕರು ತಾವು ಬೋಧನೆ ಮಾಡಿದ ವಿಡಿಯೋಗಳನ್ನು ಮತ್ತು ಅದರ ಲಿಂಕ್‍ಗಳನ್ನು ಸೋಶಿಯಲ್ ಮಿಡಿಯಾಗಳಲ್ಲಿ (ವಿಶೇಷವಾಗಿ ಫೇಸ್ ಬುಕ್‍ಗೆ ಮಾತ್ರ) ಅಫ್‍ಲೋಡ್ ಮಾಡಿರುವುದನ್ನು ಗಮನಿಸಿದರೆ, ಎಷ್ಟೋ ಜನ ಅಧ್ಯಾಪಕರುಗಳು ಈ ಬೋಧನೆಗಾಗಿ ವಿವರವನ್ನು ಸರಿಯಾಗಿ ಬರೆದುಕೊಂಡು ಮಾತನಾಡುವ ಮಾದರಿಯಲ್ಲಿ ಓದುತ್ತಾ ಬೋಧನೆ ಮಾಡಿದ್ದಾರೆ/ ಮಾಡುತ್ತಿದ್ದಾರೆ. ಇದು ನಮ್ಮ ಸಾಹಿತ್ಯ ಬೋಧನೆಯ ಸ್ವರೂಪದಲ್ಲಿನ ದೊಡ್ಡ ಪಲ್ಲಟದ ಸೂಚನೆ ಅಥವಾ ತಂತ್ರಜ್ಞಾನಕ್ಕೆ ಪೂರಕವಾಗಿ ‘ಪರಿವರ್ತಿತ’ವಾಗುವ ದಾರಿಯೆಡೆಗೆ ಸಾಹಿತ್ಯ ಬೋಧನೆ ಸಾಗುತ್ತಿರುವ ಕೈಸನ್ನೆಯಾಗಿದೆ. ಇದರ ಅಂತಿಮ ಫಲಶ್ರುತಿ ಏನೆಂಬುದಕ್ಕೆ ದಿನಗಳುರುಳಿದಂತೆ ಕಾಲವೇ ಉತ್ತರಿಸಬೇಕು. ಆದರೂ ನಾವುಗಳು ಈ ಕುರಿತು ಅಥವಾ ಈ ತೊಡಕಿನಿಂದ ಸಾಹಿತ್ಯ ಬೋಧನೆಯನ್ನು ಪಾರುಮಾಡಲು ಗಂಭೀರವಾದ ಚರ್ಚೆಗಳಿಗೆ ಅಣಿಗೊಳ್ಳಬೇಕಾಗಿದೆ.

ಮೂರನೆಯ ಸಂಗತಿಯಾದ ಸಾಹಿತ್ಯದ ಪ್ರಸರಣ / ಇತರರಿಗೆ ತಲುಪಿಸುವ ವಿಧಾನವನ್ನು ಗಮನಿಸುವುದಾದರೆ, ಹಸ್ತಪ್ರತಿ, ತಾಡೋಲೆ, ಕೋರಿ ಕಾಗದಗಳ ನಂತರದಲ್ಲಿ ಮುದ್ರಣ ಯಂತ್ರ ಪ್ರವೇಶವಾದಾಗ ಸಾಹಿತ್ಯದ ಪ್ರಸರಣ ತೀವ್ರವಾಗುವ ಮೂಲಕ ವಿಸ್ತರಿಸಿಕೊಂಡು ಅದೊಂದು ಉದ್ಯಮವಾಗಿ ರೂಪುಗೊಂಡ ಚರಿತ್ರೆ ರೋಚಕವೇ ಆದರೂ, ಆಧುನಿಕ ಜಗತ್ತಿನಲ್ಲಿ ಮುದ್ರಿತ ಸಾಪ್ಟ್ ಕಾಫಿಗಳು ಕ್ಷಣಾರ್ಧದಲ್ಲಿ ಗಾಳಿಯಲ್ಲಿ ತೇಲಿಕೊಂಡು ದೇಶ-ವಿದೇಶಗಳಿಗೆ ಹಾರುವುದು ಧಿಗ್ಭ್ರಮೆಯನ್ನುಂಟುಮಾಡಿದೆ. ಅಲ್ಲದೇ ಸಾವಿರಾರು ಪುಟಗಳ/ಲಕ್ಷಗಟ್ಟಲೇ ಪುಟಗಳನ್ನು ಹೊಂದಿದ ಈ-ಬುಕ್ ಸಹ ತಂತ್ರಜ್ಞಾನದ ಕೊಡುಗೆ. ಆದರೆ, ಈ ಕೋವಿಡ್-19 ನಿಂದ ಸಾಹಿತ್ಯದ ಪ್ರಸರಣ ತನ್ನ ‘ಇಡಿತನ’ವನ್ನು ಕಳೆದುಕೊಂಡು, ಒಂದು ಅಧ್ಯಾಯ, ಒಂದು ಕಥೆ, ಒಂದು ಲೇಖನ ಅಥವಾ ಒಂದೊಂದೆ ಕವಿತೆಗಳು ಸೋಶಿಯಲ್ ಮಿಡಿಯಾಗಳಲ್ಲಿ ಪ್ರಸರಣವಾಗುತ್ತದೆ. ಇದು ಅತಿಯಾದ ವೇಗವನ್ನು ಹೊಂದಿರುವ ಜೊತೆಗೆ ಯಾರು ಇದನ್ನು ಗಮನಿಸಿದ್ದಾರೆ, ಯಾರೆಲ್ಲಾ ಲೈಕ್ ಹೇಳಿದ್ದಾರೆ ಮತ್ತು ಇತರರು ನೀಡಿ ಪ್ರತಿಕ್ರಿಯೆಗಳೆಲ್ಲವೂ ನಮಗೆ ಸರಿಯಾಗಿ ತಿಳಿಯುವಷ್ಟು ‘ಟೆಕ್ನೊಪ್ರೆಂಡ್ಲಿ’ಅಗಿ ಡೊಕ್ಯುಮೆಂಟೇಷನ್ ಆಗುತ್ತಿರುವುದು ಒಂದಿಷ್ಟು ಕುಷಿ ನೀಡಿದರೂ, ಸುಂದರ ಹೊತ್ತಿಗೆಯೊಂದು ಕೈಯಲ್ಲಿದ್ದು ಅಗತ್ಯಕ್ಕೆ ಅನುಗುಣವಾಗಿ ಅಧ್ಯಯನ ಮಾಡುವ ಅಥವಾ ಅನುಕೂಲಕರವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಈ ಪ್ರಸರಣ ವಿಧಾನ ಕಿತ್ತೆಸಿದಿದೆ ಎಂದೆನಿಸುತ್ತಿದೆ. ಆದರೆ ಈ ಮಾದರಿಯ ಸಾಹಿತ್ಯ ಪ್ರಸರಣ ಅಂತಿಮವಲ್ಲ. ಆದರೂ ಈ ತೀವ್ರತರ ಪಲ್ಲಟದ ಕುರಿತು ಅಲೋಚಿಸ ಬೇಕಾಗಿದೆ. ಹಾಗೆಯೇ ಮುದ್ರಣ ಮಾಧ್ಯಮದ ಮೇಲಾಗುತ್ತಿರುವ ಸಾಧಕ-ಬಾಧಕದ ಕಡೆಗೆ ಈ ಚರ್ಚೆಯನ್ನು ಕೊಂಡೊಯ್ಯುವುದು ಸೂಕ್ತವೆನಿಸುತ್ತದೆ.

ಈ ಚರ್ಚೆಗಳಿಗೆ ಪೂರಕವಾಗಿ ಸಾಹಿತ್ಯದ ಪಾಶ್ರ್ವಿಕ ವಿಮರ್ಶೆಯನ್ನು ಗಮನಿಸಬಹುದು. ಸಾಹಿತ್ಯ ವಿಮರ್ಶೆಯ ವಿಧಾನ ಮತ್ತು ಆಯಾಮ ಕೋವಿಡ್-19 ರ ಹಿನ್ನೆಲೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಹಾಗೆ ನೋಡಿದರೆ ಕನ್ನಡ ವಿಮರ್ಶೆ ಇತ್ತೀಚೆಗೆ ತನ್ನ ಮೊದಲಿನ ಪ್ರಖರತೆಯನ್ನು ಕಳೆದು ಕೊಂಡು ಅದರ ಸ್ಥಳಾವಕಾಶವನ್ನು ‘ಕನ್ನಡ ಸಂಶೋಧನೆ’ ಅತಿಕ್ರಮಿಸಿಕೊಂಡಿದೆ ಎನ್ನಬಹುದು. ಕೋವಿಡ್-19 ರ ಪರಿಣಾಮ ಫೇಸ್‍ಬುಕ್ ಇತರೆ ಸೋಶಿಯಲ್ ಮಿಡಿಯಾಗಳನ್ನು ಗಮನಿಸದರೆ ಅನೇಕ ಲೇಖಕರು ತಮ್ಮ ಬರೆಹಗಳಿಗೆ ಬಂದಿರುವ (ಬಹುತೇಕ ಕವಿತೆಗಳು) ರಿವ್ಯೂಗಳನ್ನು ಫೇಸ್‍ಬುಕ್ ಪುಟಗಳಲ್ಲಿ ಮುದ್ರಿಸಿ ಅದನ್ನು ವಿಮರ್ಶೆಯೆಂದೆ ಪರಭಾವಿಸಿ ಹರಿಬಿಡುತ್ತಿದ್ದಾರೆ. ಈ ಬಗೆಯಲ್ಲಿ ಪ್ರತಿಕ್ರಿಯಾತ್ಮಕವಾದ ಕೃತಿ ಪರಿಚಯಗಳು ವಿಮರ್ಶೆಯಾಗುವೆಡೆಗೆ ಸಾಗಲು ಕೋವಿಡ್-19 ಕಾರಣವಾಗಿದೆ ಎನ್ನುವುದಕ್ಕಿಂತ ನವೀನ ಮಾದರಿಯ ಸಾಧ್ಯತೆಯೊಂದು ರೂಪುಗೊಳ್ಳುತ್ತಿದೆ ಎನ್ನಬಹುದು.

ಹೀಗೆ ಒಟ್ಟಾರೆಯಾಗಿ ’ಕೋವಿಡ್-19 : ಸಾಹಿತ್ಯಿಕ ಜಗತ್ತು’ ಎಂಬ ವಿಷಯವನ್ನು ಚಿಂತನಕ್ಕೊಳಪಡಿಸಿದಾಗ ಬದಲಾದ ಸಾಹಿತ್ಯ ವಾತಾವರಣದ ಚಹರೆ, ಸಾಹಿತ್ಯ ಬೋಧನೆಯಾಲ್ಲಾದ ಪಲ್ಲಟ, ಸಾಹಿತ್ಯ ಪ್ರಸರಣದ ಆಯಾಮ ಮತ್ತು ಸಾಹಿತ್ಯ ವಿಮರ್ಶೆಯ ಬದಲಾವಣೆಯ ಗುರುತುಗಳು ಒಂದಿಷ್ಟು ನಮ್ಮ ಅನುಭವಕ್ಕೆ ಬರುತ್ತದೆ. ಆದರೆ ಇದೇ ಅಂತಿಮವಲ್ಲ. ರಾವ್‍ಬಹೂದ್ದುರರ ‘ಗ್ರಾಮಾಯಣ’ ಕಾದಂಬರಿಯಲ್ಲಿನ ಪ್ರವಾಹ ಮತ್ತು ಆ ನಂತರದ ಬದಲಾವಣೆಯನ್ನು ಈ ಕೋವಿಡ್-19 ರೊಂದಿಗೆ ಸಮೀಕರಿಸಬಹುದೆನಿಸುತ್ತದೆ. ಕೆಲ ಕಾಲ ಕೋವಿಡ್‍ನಿಂದ ದೂರ ಉಳಿದು ಬದುಕಲು ಪ್ರಯತ್ನಿಸಿ, ಆಗದೆ ಅದರ ಜೊತೆಗೆ ಸಾಮಾಜಿಕ ಅಂತರದಲ್ಲಿ ನಾವೆಲ್ಲ ಬದುಕಲು ಸಜ್ಜುಗೊಂಡು ಹೊರಟು ನಿಂತಿದ್ದೇವೆ. ಆದರೆ ಕೋವಿಡ್-19 ಸಂಪೂರ್ಣ ಸೋತಾಗ ಈ ಸಾಹಿತ್ಯದ ಚಹರೆಗಳು ಏನಾಗುತ್ತದೆ ಎಂಬುದನ್ನು ಆ ನಂತರದಲ್ಲಿ ನಾವು ಗಮನಿಸಿದಾಗ ಈ ಎಲ್ಲಾ ಚರ್ಚೆಗಳು ವಿಸ್ತರಿಸಿಕೊಳ್ಳ ಬಹುದು ಅಥವಾ ಬದಲಾಗಲೂ ಬಹುದು.


- ಡಾ, ಗಜಾನನ ನಾಯ್ಕ, ಬೆಳಗಾವಿ


ಡಾ.ಗಜಾನನ ನಾಯ್ಕ,ಇವರು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ಬೆಳಗಾವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಸೇವೆ ಸಲ್ಲಿಸುತ್ತಿದ್ದಾರೆ. ಹೊನ್ನಾವರದವರಾದ ಇವರು ತಮ್ಮ ಉನ್ನತ ವ್ಯಾಸಂಗವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಡಿದ್ದಾರೆ. ‘ ಇಂಗ್ಲೀಷ ಗೀತಗಳ ಪೂರ್ವದ ಭಾಷಾಂತರ ಪ್ರಕ್ರಿಯೆ’ ಎಂಬ ವಿಷಯದ ಮೇಲೆ ತಮ್ಮ ಪಿ.ಎಚ್.ಡಿ ಮುಗಿಸಿದ ಇವರು ಸುಮಾರು ಮೂವತ್ತಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಬೆಳಕಿನ ತುಂತುರು ನಾದ, ನೆನಪುಗಳ ದಾರಿಯಲ್ಲಿ, ಭಾಷಾಂತರದ ವಿವಿಧ ಮಾದರಿಗಳು, ಚಹರೆ, ಸ್ವಾಮಿ ವಿವೇಕಾನಂದ-150 ಇವು ಅವರ ಪ್ರಕಟಿತ ಕೃತಿಗಳು. ಆರು ಜನ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ.ಮಾರ್ಗದರ್ಶನ ನೀಡಿರುವ ಇವರು ಪ್ರಸಾರಾಂಗದ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರವಾಗಿದೆ. – ಸಂಪಾದಕ.

99 views1 comment

1 Comment


sunandakadame
sunandakadame
Jun 30, 2020

ಕೋವಿಡ್-೧೯ ರ ಇಂದಿನ ಬದಲಾದ ಜಗತ್ತಿನಲ್ಲಿ, ಸಾಹಿತ್ಯ ಲೋಕದ ಕುರಿತಾದ ತುಂಬ ಮೌಲಿಕವೂ ಅಧ್ಯಯನಶೀಲವೂ ಆದಂತಹ ಬರಹವಿದು. ಗ್ರಾಮವನ್ನು ತೊರೆದು ಪಟ್ಟಣಗಳಿಗೆ ಅನ್ನವನ್ನು ಅರಸಿಬಂದ ನಮ್ಮ ನಿಮ್ಮಂಥ ಶಿಕ್ಷಣವಂತರನ್ನು 'ಅಕ್ಷರದ ಹಕ್ಕಿಗಳು' ಅಂದಿದ್ದು ವಿಶೇಷವೆನಿಸಿತು.. ಹೌದು, ಉನ್ನತ ಶಿಕ್ಷಣ ಪಡೆದವರನ್ನು ಪಟ್ಟಣಗಳು ಕೈಬೀಸಿಕರೆಯುತ್ತವೆ, ಶಿಕ್ಷಣದಲ್ಲಿ ಹಿಂದಿದ್ದವನನ್ನು ಹಳ್ಳಿ ಅನಿವಾರ್ಯವಾಗಿ ತನ್ನ ಮಡಿಲಲ್ಲಿಟ್ಟುಕೊಳ್ಳುತ್ತದೆ.. ಆದರೆ ಕೋವಿಡ್ ಈ ಸಿದ್ಧಾಂತವನ್ನು ಬುಡಮೇಲು ಮಾಡಿದ್ದನ್ನು ಬಹಳ ತೀಕ್ಷö್ಮವಾಗಿ ಗುರುತಿಸಿದ್ದೀರಿ ಸರ್, ನೀವಂದAತೆ ಈ ಸಾಫ್ಟ್ ಅಂತರ್ಜಾಲ ಮಾಧ್ಯಮಗಳು ತನ್ನೆಲ್ಲ ಸಹಾಯಕ ಉಪಕರಣಗಳು ಸರಿಯಾಗಿರುವ ತನಕ ಸರಿ, ಉದಾ: ಈ 'ಆಲೋಚನೆ'ಯನ್ನೇ ಓದಲು ಲ್ಯಾಪ್‌ಟಾಪ್ ಅಥವಾ ಮೊಬೈಲ್ ನಂತಹ ಉಪಕರಣಗಳು ಬೇಕು, ಅದಕ್ಕೆ ಸಮಯಕ್ಕೆ ಸರಿಯಾಗಿ ರೀಚಾರ್ಜ ಮತ್ತು ಕರೆನ್ಸೀ ಒದಗಿಸಿರಬೇಕು ಮತ್ತು ನೆಟ್ವರ್ಕ ಸಂಪರ್ಕ ಸರೀಯಿರಬೇಕು, ಮುಖ್ಯವಾಗಿ ಇದರ ಬಳಕೆಯನ್ನು ಸೂಕ್ತವಾಗಿ ಕಲಿತಿರಬೇಕು.. ಈ ಮೊದಲು ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಯನ್ನು ಹಣಕೊಟ್ಟು ಕೊಂಡು ಓದುತ್ತಿದ್ದೆವು.. ಆ ಪತ್ರಿಕೆ ಟೇಬಲ್, ಸೋಫಾ, ಮಂಚ ಎಲ್ಲೆಂದರಲ್ಲಿ ಬಿದ್ದುಕೊಂಡು ಓದಿಸಿಕೊಳ್ಳುತ್ತಿತ್ತು.. ವ್ಯತ್ಯಾಸ ನಮ್ಮ ಅನುಭವದೊಳಕ್ಕೇ ಈಗ ಢಾಳಾಗಿ ಇಳಿಯುತ್ತಿದೆ, ನಿಮ್ಮ ಸೂಕ್ಷö್ಮ ಅವಲೋಕನೆ ಇಷ್ಟವಾಗುವಂಥದ್ದು..

Like
bottom of page