ಕೊಲ್ಲಿ ರಾಷ್ಟ್ರಗಳ ಇಂದಿನ ದುರವಸ್ಥೆಗೆ ರಕ್ತಸಿಕ್ತ ಇತಿಹಾಸ ಮರೆಯದ ಕ್ರೂರ ಮನಸ್ಥಿಯ ಮೂರ್ಖ ಜನ ಕಾರಣ. ಶಿಯಾ (ಬಿಳಿ ಜನ ಅರ್ಥಾತ್ ಆರ್ಯ ಜನಾಂಗ, ಅಥವಾ ದೇವತೆಗಳು ಅಂದುಕೊಂಡವರು ) ಸುನ್ನಿ (ಕರಿಯ ಜನ, ಅರ್ಥಾತ್ ದ್ರಾವಿಡ ಜನ, ರಾಕ್ಷಸರು ಅನ್ನಿಸಿಕೊಂಡವರು)
30ಸಾವಿರ ವರ್ಷ ಗಳ ಹಿಂದೆ ಆಹಾರ ಹುಡುಕಿಕೊಂಡು ಮಾನವನ ಮಹಾ ವಲಸೆ ಆರಂಭವಾದಾಗ ಆಫ್ರಿಕಾ ದಿಂದ ಬಂದ ಕರಿ ಜನ ಮತ್ತು ಯುರೋಪ್ ನಿಂದ ಬಂದ ಬಿಳಿ ಜನ ಮೊದಲು ಮುಖಾಮುಖಿ ಆದ ಸ್ಥಳ ಮಧ್ಯ ಏಶಿಯಾ.
ಪ್ರಸ್ತುತ ಏಷ್ಯಾ ಖಂಡದಲ್ಲಾಗಲಿ, ಯೂರೋಪ್ ಖಂಡದಲ್ಲಾಗಲಿ, ಭಾರತ ಸಹಿತ ಯಾವ ದೇಶದಲ್ಲೂ ಮೂಲ ವಂಶವಾಹಿನಿ ಉಳಿದಿಲ್ಲ. ಮನುಷ್ಯನ ಮಸ್ತಿಷ್ಕಕ್ಕೆ ದೇವರು ಧರ್ಮದ ಕಲ್ಪನೆ ಹುಟ್ಟುವ ಮುನ್ನವೇ ಎಲ್ಲಾ ಮಿಶ್ರಣ ಆಗಿ ಹೋಗಿದೆ. ಈಗಿರುವ ಮನುಷ್ಯರೆಲ್ಲರೂ ಮಿಶ್ರ ತಳಿಗಳೇ.
ಈ ಜನಾಂಗೀಯ ಕದನ ಮನುಷ್ಯ ಭೂಮಿಗೆ ಬಂದಾಗಿನಿಂದ ಇದೆ. ಮನುಷ್ಯ ಸಹ ಒಂದು ಪ್ರಾಣಿ ಪ್ರಭೇದವಾಗಿರುವುದರಿಂದ ಮೃಗೀಯ ಸ್ವಭಾವ ಸಹಜವಾಗಿ ಬಂದಿದೆ. ಮಾನವನ ಮೃಗೀಯತೆ ಅಳಿಸಲು ಹುಟ್ಟಿಕೊಂಡ ಧರ್ಮಗಳು ಅವನನ್ನು ಮತ್ತಷ್ಟು ಕ್ರೂರ ಮೃಗವಾಗಿಸಿದ್ದು ಮಾನವರ ದುರಂತ. 10 ಸಾವಿರ ವರ್ಷದಿಂದೀಚೆಗೆ ಮಧ್ಯ ಏಷ್ಯಾದಲ್ಲಿ ಮಾನವರ ರಕ್ತ ಹರಿದಷ್ಟು ಬೇರಾವ ಭೂಭಾಗದಲ್ಲೂ ಹರಿದಿಲ್ಲ. ಆದರೆ ಇಂತಹ ವರ್ಣ ಸಂಘರ್ಷಗಳು ಅಫಘಾನಿಸ್ತಾನ ಒಳಗೊಂಡ ದಕ್ಷಿಣ ಏಷ್ಯಾದಲ್ಲಿ ನಿಯಂತ್ರಣಕ್ಕೆ ಬಂದಿತ್ತು. ಇದಕ್ಕೆ ಕಾರಣ ಬೌದ್ಧ -ಜೈನ-ಚಾರ್ವಾಕ(ದೇವರು ಇಲ್ಲ ಎನ್ನುವ ನಾಸ್ತಿಕವಾದದ ಧರ್ಮ) ಎಂಬ ಅಹಿಂಸಾ ಧರ್ಮಗಳು ಮನುಷ್ಯರನ್ನು ಮಾನವತೆಯ ತತ್ವದಲ್ಲಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದವು. ಆದರೆ ಇಂತಹ ಅಹಿಂಸಾ ವಾದವೇ ಭಾರತದ ನೆಲದಲ್ಲಿ ಶತ್ರುಗಳ ಪ್ರತಿರೋಧ ಎದುರಿಸುವ ಯುದ್ಧ ಕೌಶಲ್ಯ ಕಳೆದುಕೊಂಡು ಅನ್ಯಾಕ್ರಮಣಕ್ಕೆ ಸುಲಭ ತುತ್ತಾಯಿತು.
ಹೀಗಾಗಿ 2ಸಾವಿರ ವರ್ಷಗಳ ಹಿಂದೆ ಯಹೂದಿಗಳ ದಾಳಿಯಿಂದ ದಕ್ಷಿಣ ಏಷ್ಯಾ ಕಡೆ ಬಂದ ವೈದಿಕರು ಸುಲಭವಾಗಿ ಆಕ್ರಮಿಸಿಕೊಂಡು, ಸಮಾಜದಲ್ಲಿ ಅಮಾನವೀಯ ಕಠೋರ ಜಾತಿ ವ್ಯವಸ್ಥೆ ಜಾರಿಗೆ ತಂದು ಭಾರತದ ಭವ್ಯ ಸಮಾಜವನ್ನು ಕುಲಗೆಡಿಸಿದರು.ಅದರಲ್ಲೂ 3ನೇ ಶತಮಾನದ ಗುಪ್ತರ ಕಾಲದಲ್ಲಿ ವೈದಿಕ ಧರ್ಮ ಗಟ್ಟಿಯಾಗಿ ತಳ ಊರಿ ಜಾತಿ ವ್ಯವಸ್ಥೆ ಪರಾಕಾಷ್ಠೆ ಮುಟ್ಟಿತು. ಇದರಿಂದ ಅಸಮಾನತೆ ಸಮಾಜದಲ್ಲಿ ಹೆಚ್ಚಾಗಿ, ಅಜ್ಞಾನ ಕವಿಯಿತು. ಅಲ್ಲಿವರೆಗೂ ಭಾರತ ಉಪಖಂಡ ಬೌದ್ಧಿಕವಾಗಿ ಆರ್ಥಿಕವಾಗಿ ವಿಶ್ವದಲ್ಲೇ ಉಚ್ಛ್ರಾಯ ಸ್ಥಿತಿಯಲ್ಲಿತ್ತು.
ವೈದಿಕರು ಭಾರತಕ್ಕೆ ಬಂದ ಸಾವಿರ ವರ್ಷಗಳ ನಂತರ ಬಂದ ಇಸ್ಲಾಂ ದಾಳಿ ಭಾರತ ಉಪಖಂಡವನ್ನು ಧರ್ಮ ಸಂಘರ್ಷದಲ್ಲಿ ನೆನೆಯುವಂತೆ ಮಾಡಿತು. ನಮಗೆ ಅಗತ್ಯವಿಲ್ಲದ ಹಿಂದೂ-ಇಸ್ಲಾಂ ಧರ್ಮಗಳ ಜಂಜಾಟದಲ್ಲಿಯೇ ಭಾರತೀಯರು ಈಗಲು ಹೈರಾಣಾಗುತ್ತಿರುವುದು ಸುಳ್ಳಲ್ಲ.
ಇದೇನೇ ಇರಲಿ.,
5ಸಾವಿರ ವರ್ಷಗಳಿಂದ ದೇವರು-ಧರ್ಮದ ರೂಪ ಕೊಟ್ಟ ನಂತರ ಮಧ್ಯ ಏಷ್ಯಾ ದಲ್ಲಿ ಜನಾಂಗೀಯ ಸಂಘರ್ಷ ಇಲ್ಲಿವರೆಗೂ ನಿಂತಿಲ್ಲ.
ಕಳೆದ ಶತಮಾನದ ಅಂತ್ಯದಿಂದ ಆರಂಭಗೊಂಡ ಶಿಯಾ -ಸುನ್ನಿ ಸಂಘರ್ಷದ ಮೂಲ ಕರ್ತೃ ಸೌದೀ ಅರೇಬಿಯಾ ದೊರೆ ಫಹಾದ್. ತನ್ನ ಸಮೀಪ ದೇಶವಾದ ಶಿಯಾ ಬಹುಸಂಖ್ಯಾತ ಇರಾಕ್ ನಲ್ಲಿ ಸುನ್ನಿ ಮುಸ್ಲಿಂ ಸದ್ದಾಂ ಹುಸೇನ್ ನೇತೃತ್ವದ ಸೇನಾಡಳಿತ ಅಧಿಕಾರಕ್ಕೆ ತರಲು ಹಣ ಮತ್ತು ಶಸ್ತ್ರ ಗಳನ್ನು ನೀಡಿದ ಸೌದೀ ರಾಜ., ನೆರೆಯ ಶಿಯಾ ಪಾರಮ್ಯದ ಇರಾನ್ ಮೇಲೆ 1978-83ರವರೆಗೆ ಯುದ್ಧ ಮಾಡಿ ನಲುಗುವಂತೆ ಮಾಡಿದರು.
ಇರಾನ್ ಯುದ್ಧದ ನಂತರ ಇಸ್ರೇಲ್ -ಅಮೇರಿಕಾ ವಿರುದ್ದ ಮುಸ್ಲಿಂ ದೇಶಗಳ ಸಂಘಟನೆ ಮತ್ತು ತೈಲ ಉತ್ಪನ್ನ ದೇಶಗಳ ಒಕ್ಕೂಟವಾದ ಒಪೆಕ್ ನಲ್ಲಿ ತೈಲ ದರ ನಿಯಂತ್ರಿಸುತ್ತಿದ್ದ ಅಮೇರಿಕಾ ನಡವಳಿಕೆ ವಿರುದ್ಧ ಅಸಮಾಧಾನಗೊಂಡ ಸದ್ದಾಂ ಹುಸೇನ್, ತೈಲ ವನ್ನು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮಾತಿಗೆ ಬೆಲೆ ಕೊಡದೆ ಕಡಿಮೆ ಬೆಲೆಗೆ ಮಾರುತಿದ್ದ ಕುವೈತ್ ದೊರೆ ಮೇಲೆ ಕುಪಿತನಾಗಿ 1990ರಲ್ಲಿ ಕುವೈತ್ ಆಕ್ರಮಿಸಿದ. ಇದರಿಂದ ಬೆಚ್ಚಿ ಬಿದ್ದ ಸೌದಿ ದೊರೆ, ಮುಂದೆ ಸೌದಿ ಅರೇಬಿಯಾವನ್ನು ಸದ್ದಾಂ ಆಕ್ರಮಿಸುತ್ತಾನೆಂದು ಇರಾಕ್ ಮೇಲೆ ಯುದ್ಧ ಮಾಡಿಸಿದ. ಕುವೈತ್ ವಿಮೋಚನೆಗಾಗಿ ಅಮೇರಿಕಾದೊಂದಿಗೆ ಕುವೈತ್ ಸುಲ್ತಾನ್ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದು ಸಹ ಸೌದಿ ದೊರೆಯೇ,1991ರಲ್ಲಿ ಪೇಟ್ರಿಯಾಟಿಕ್ ಕ್ಷಿಪಣಿ ಮೂಲಕವೇ ಇರಾಕನ್ನು ಮಣಿಸಿದ ಅಮೇರಿಕಾ ಅಪಾರ ಹಣ ಪಡೆದು ಕುವೈತ್ ರಾಜನನ್ನು ಪಟ್ಟಾಭಿಷೇಕ ಮಾಡಿಸಿದರು.
ಇಷ್ಟಕ್ಕೆ ಇಸ್ಲಾಮಿಕ್ ದೇಶಗಳ ಸಂಘರ್ಷ ಕೊನೆಗೊಳ್ಳ ಬೇಕಿತ್ತು. ಆದರೆ ಸೌದಿ ದೊರೆಯ ಭಯ ಮಾತ್ರ ಹೋಗಲಿಲ್ಲ. ತನ್ನ ಅಧಿಕಾರವನ್ನು ಬಾಹ್ಯ ದೇಶಗಳ ಒಳ ಸಂಚಿನಿಂದ ಕಿತ್ತುಕೊಳ್ಳಬಹುದೆಂದು ಅಮೇರಿಕಾ ರಕ್ಷಣೆ ಯಾಚಿಸಿದ. ಇದಕ್ಕಾಗಿ ಕಾದುಕುಳಿತಿದ್ದ ಅಮೇರಿಕಾದ ಬಂಡವಾಳಿಗರು ತೈಲ ಬಾವಿಗಳನ್ನು ಧಾರಾಳವಾಗಿ ಖರೀದಿಸತೊಡಗಿದರು. ಅಮೇರಿಕಾ ಉದ್ಯಮಿಗಳಿಗೆ ತೈಲ ಬಾವಿ ಮತ್ತು ರಿಫೈನರಿ ಫ್ಯಾಕ್ಟರಿಗಳಿಗೆ ಅವಕಾಶ ಕೊಡದ ದೇಶಗಳನ್ನು ಶತ್ರು ದೇಶಗಳಾಗಿ ವಿಂಗಡಿಸಿದ ಅಮೇರಿಕಾ ಗುಪ್ತಚರ ಸಂಸ್ಥೆ C. I. A. ಬಂಡವಾಳಶಾಹಿ ವಿರೋಧಿ ರಷ್ಯಾ ಪರ ನಿಲ್ಲುವ ದೇಶಗಳನ್ನು ಹಣಿಯುವ ವ್ಯವಸ್ಥಿತ ಸಂಚು ರೂಪಿಸಿತು.
ಹಿಂದಿನ ಸೋವಿಯೆತ್ ರಷ್ಯಾ ಗಡಿ 1991ರ ಪೂರ್ವ ಚೀನಾ, ಅಫಘಾನಿಸ್ತಾನ ಗಡಿವರೆಗೂ ವ್ಯಾಪಿಸಿತ್ತು. ರಷ್ಯಾ ಬೆಂಬಲಿತ ನಜೀಬುಲ್ಲಾ ಸರ್ಕಾರ ಕೊನೆಗೊಳಿಸಲು ಅರಬ್ ಮೂಲದ ಬುಡಕಟ್ಟು ಜನಾಂಗದವರ ಕೈಗೆ ಗನ್ ಕೊಟ್ಟು ಜೇಹಾದಿ ಗೆರಿಲ್ಲಾ ಯುದ್ಧ ಆರಂಭಿಸಿದರು. ಇದಕ್ಕೆ ನಾಯಕನಾಗಿ ಬಂದವನೇ ಒಸಾಮ ಬಿನ್ ಲಾಡೆನ್. ಇಂಥ ಹಲವು ಮಂದಿಗೆ ಖಟ್ಟರ್ ಇಸ್ಲಾಮಿಕ್ ಬೋಧನೆ ಮಾಡಿ ಲಿಬಿಯಾ, ಲೆಬನಾನ್, ನೈಜೀರಿಯಾ ಮತ್ತಿತರ ಮುಸ್ಲಿಮರಿರುವ ಆಫ್ರಿಕಾ ದೇಶಗಳಲ್ಲಿ ಕ್ರಿಶ್ಚಿಯನ್ ದೇಶಗಳಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದುದೇ ಸೌದೀ ದೊರೆ. ಇದನ್ನೇ ನೆಪ ಮಾಡಿಕೊಂಡು ಹುಟ್ಟಿದ ಹಲವು ಭಯೋತ್ಪಾದಕ ಸಂಘಟನೆಗೆ ನೆರವು ನೀಡುತ್ತಿದ್ದುದೇ ತೈಲ ಬಾವಿ ಮಾಲೀಕರು. ತೈಲ ಬಾವಿ ಮಾಲೀಕರಿಂದ ಹಫ್ತಾ ವಸೂಲಿಗೆ ದಿಕ್ಕಿಗೊಂದು ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಂಡವು. ಇವುಗಳ ಹಣಕಾಸು ವ್ಯವಹಾರಕ್ಕೆ ಅಮೇರಿಕಾ ಅಂತರರಾಷ್ಟ್ರೀಯ ಬ್ಯಾಂಕ್ ವಹಿವಾಟು ಮೇಲೆ ನಿಗಾ ಇಡಲು ಅಮೇರಿಕಾ ಪ್ರತ್ಯೇಕ ಘಟಕ ವನ್ನೇ ಸ್ಥಾಪಿಸಿತು.
ಸೌದಿ ಪ್ರಾಯೋಜಿತ ಭಯೋತ್ಪಾದಕ ರು ಶಿಯಾಗಳ ಮೇಲೆ ದಾಳಿ ಮಾಡಿ ಕೊಲ್ಲುವುದರ ವಿರುದ್ಧ ಇರಾನ್ -ಸಿರಿಯಾ -ಖತಾರ್ ದೇಶಗಳು ಹಿಜಬುಲ್ಲಾ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗಳಿಗೆ ಹಣ ನೀಡಿ, ಭಯೋತ್ಪಾದನೇ ಆರಂಭಿಸಿದ್ದರೂ, ಎರಡು ಭಯೋತ್ಪಾದನೇ ಗುಂಪುಗಳ ಗುರಿ ಇಸ್ರೇಲ್ ಅಮೇರಿಕಾ ಆಗಿದ್ದರಿಂದ ಅಮೇರಿಕಾ ರಾಯಭಾರ ಕಚೇರಿಗಳ ಮೇಲೆ ದಾಳಿಯಾಗುವುದು ಮಾಮೂಲಿಯಾಗಿತ್ತು. ಅಫ್ಘಾನಿಸ್ತಾನದಲ್ಲಿ ರಷ್ಯಾ ಪಡೆ ಕಾಲ್ತೆಗೆಯುತ್ತಿದ್ದಂತೆ ನಜೀಬುಲ್ಲಾ ಮಾಸ್ಕೋಗೆ ಪಲಾಯನ ಮಾಡಿದ. ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪಾಕಿಸ್ತಾನದ I. S. I. ಗುಪ್ತಚರ ಸಂಸ್ಥೆ ಅಲ್ಲಿದ್ದ ಒಸಾಮಾ ಬಿನ್ ಲಾಡೆನ್ ನೇತೃತ್ವದ ಭಯೋತ್ಪಾದಕರು ತಾಲಿಬಾನ್ ಆಡಳಿತದಲ್ಲಿ ಮತ್ತಷ್ಟು ಚಿಗುರಲು ಅವಕಾಶ ಮಾಡಿಕೊಟ್ಟಿತು. ಏಕೆಂದರೆ ಕಾಶ್ಮೀರದಲ್ಲಿ ಭಯೋತ್ಪಾದನೇ ಮೂಲಕ ವಶಪಡಿಸಿಕೊಳ್ಳುವುದಕ್ಕಿಂತ, ಭಯೋತ್ಪಾದಕರ ಹೆಸರಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಹಫ್ತಾ ವಸೂಲಿ ಮಾಡಬಹುದು ಅನ್ನೋದು I. S. I. ದುರಾಲೋಚನೆ. ಇದಕ್ಕೆ ಸಮ್ಮತಿಸದ ಪಾಕ್ ಅಧ್ಯಕ್ಷ ಜಿಯಾ ಉಲ್ ಹಕ್ ರನ್ನು ಕೊಲ್ಲಲಾಯಿತು. ನೆಪ ಮಾತ್ರಕ್ಕೆ ಬೆನಜೀರ್ ಭುಟ್ಟೋ ನೇತೃತ್ವದ ಪ್ರಜಾ ಸರ್ಕಾರಕ್ಕೆ ಅನುವು ಮಾಡಿಕೊಟ್ಟಿತು.
ಹೀಗೆ ಮುಂದುವರೆದಿದ್ದರೆ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹಿಡಿತ ಸಾಧಿಸುತಿತ್ತು. ಅಫ್ಘಾನಿಸ್ತಾನದಲ್ಲಿದ್ದ ರಷ್ಯಾ ಸೈನಿಕರ ವಿರುದ್ಧ ಹೋರಾಡುತ್ತಿದ್ದ ಭಯೋತ್ಪಾದಕರಿಗೆ ನೆರವು ನೀಡುವ ನೆಪದಲ್ಲಿ ಅಮೇರಿಕಾ ಮಿತೃತ್ವ ಸಂಪಾದಿಸಿದ್ದ ಪಾಕ್ ಅಣು ಬಾಂಬ್ ತಯಾರಿಸುವ ತಂತ್ರಜ್ಞಾನವನ್ನು ಅಮೇರಿಕಾ ದಲ್ಲಿದ್ದ ಅಣು ವಿಜ್ಞಾನಿ ಅಬ್ದುಲ್ ಖಾದಿರ್ ಮೂಲಕ ಅಕ್ರಮವಾಗಿ ಪಡೆಯುವಂತೆ ಮಾಡಿದ ಅಮೇರಿಕಾ, ರಷ್ಯಾ ಬೆಂಬಲಿಸುತ್ತಿದ್ದ ಭಾರತಕ್ಕೆ ಟಾಂಗ್ ಕೊಟ್ಟಿತ್ತು. ಅಣ್ವಸ್ತ್ರ ಇದ್ದರೂ ಮುಸ್ಲಿಂ ರಾಷ್ಟ್ರಗಳು ತನಗೆ ಗೌರವ ಕೊಡದೆ ಕೀಳಾಗಿ ನೋಡುವ ಅರಬ್ ದೇಶಗಳಿಗೆ ಬುದ್ದಿ ಕಲಿಸಲು ಪಾಕ್, ತನ್ನ ಮುಷ್ಠಿಯಲ್ಲಿದ್ದ ಭಯೋತ್ಪಾದಕರನ್ನೇ ಬಳಸಿಕೊಳ್ಳುತಿತ್ತು. ಅಮೇರಿಕಾ ಅಂತೂ, ಭಯೋತ್ಪಾದಕರ ದಾಳಿ ತನ್ನ ಮೇಲೆರಗದಂತೆ ಮಾಡಲು ಪಾಕನ್ನೇ ನಂಬಿಕೊಂಡಿತ್ತು.
ಹೀಗೆ ಜಾಗತಿಕವಾಗಿ ವರ್ಚಸ್ಸು ಬೆಳೆಸಿಕೊಳ್ಳುತ್ತಿದ್ದ ಪಾಕ್ ಗೆ ಮುಷರಫ್ ಅಧಿಕಾರಕ್ಕೆ ಬಂದಾಗ ಭಯೋತ್ಪಾದಕರ ಕಾರ್ಯ ಮತ್ತಷ್ಟು ವಿಸ್ತರಿಸಿತು. ಆದರೆ ಲಾಡೆನ್ ಪಾಕ್ ಆಲೋಚನೆ ಬದಲಾಯಿಸಿದ, 2001ರ ಸೆಪ್ಟೆಂಬರ್ 11ರಂದು ಅಮೇರಿಕಾ ಮೇಲೆ ವೈಮಾನಿಕ ದಾಳಿ ಮಾಡಿ ಪಾಕ್ ಲೆಕ್ಕಾಚಾರ ತಲೆಕೆಳಗು ಮಾಡಿದ.
ಶತ್ರುಗಳ ನಾಶಕ್ಕಿಳಿದ ಅಮೇರಿಕ ಆಫ್ಘಾನಿಸ್ತಾನ ಇರಾಕ್ ಮೇಲೆ ದಾಳಿ ಮಾಡಿ ಭಯೋತ್ಪಾದನೆ ಭಾಗಶಃ ನಾಶ ಮಾಡಿದರು. ಲಾಡೆನ್ ಅಮೇರಿಕಾ ಸೀಲ್ ಪಡೆಗೆ ಸಿಕ್ಕಿ ಹತನಾದ, ಸೆರೆ ಸಿಕ್ಕ ಸದ್ದಾಂ ನನ್ನು ಸಾರ್ವಜನಿಕವಾಗಿ ನೇಣಿಗೇರಿಸಿದರು. ಸದ್ದಾಂ ಸತ್ತಿದ್ದನ್ನು ಇರಾಕ್ ನ ಬಹುಸಂಖ್ಯಾತ ಶಿಯಾ ಮುಸ್ಲಿಮರು ಬೆಂಬಲಿಸಿದರು. ಭಾರೀ ಶಸ್ತ್ರ ಹಾಗು ಹಣ ಪಡೆಯುತ್ತಿದ್ದ ಪಾಕನ್ನು ಅಮೇರಿಕ ದೂರವಿಟ್ಟರು, ಭಾರತವನ್ನು ಹತ್ತಿರಕ್ಕೆ ಬಿಟ್ಟು ಕೊಂಡರು. ಅತ್ತ ಸೌದಿ ಅರೇಬಿಯಾದಲ್ಲಿ ಅಮೇರಿಕಾ ಬೆಂಬಲಿಸಿ, ಪ್ಯಾಲೆಸ್ಟೈನ್ ಸ್ವಾತಂತ್ರ್ಯ ಬಲಿ ಕೊಡುತ್ತಿದ್ದಾರೆಂದು 2008ರಲ್ಲಿ ಸೌದೀ ಅರೇಬಿಯಾದಲ್ಲಿ ಜನ "ಸ್ಪ್ರಿಂಗ್ ಅರಬ್ "ಹೆಸರಲ್ಲಿ ದೊರೆ ವಿರುದ್ಧ ಪ್ರತಿಭಟನೆಗಿಳಿದರು. ಇದನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ ಸೌದಿ ದೊರೆ, ಸಾವಿರಾರು ಮಂದಿಯನ್ನು ಬಂಧಿಸಿತು. ಹಲವರನ್ನು ರಾಜದ್ರೋಹದಡಿ ಶಿರಛೇದನ ಮತ್ತು ಗಡಿಪಾರು, ಆಸ್ತಿ ಮುಟ್ಟುಗೋಲು ಹಮ್ಮಿಕೊಳ್ಳಲಾಯಿತು. 2011ರಲ್ಲಿ ಪರಾಕಾಷ್ಠೆ ಮುಟ್ಟಿದ ಸ್ಪ್ರಿಂಗ್ ಅರಬ್ ಚಳವಳಿಯನ್ನು ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸದ್ ಬೆಂಬಲಿಸುತ್ತಿದ್ದಾರೆಂದು ಕುಪಿತರಾದ ಸೌದೀ ಆಡಳಿತ, ರಾಜಕುಮಾರ ಬಂದರ್ ಬಿನ್ ಸುಲ್ತಾನ್ ಮೂಲಕ ಸಾಮರಸ್ಯದಿಂದ ನೆಮ್ಮದಿಯಾಗಿದ್ದ ಸಿರಿಯಾ ದೇಶದ ಅಲ್ಪ ಸಂಖ್ಯಾತ ಸುನ್ನಿ ಮುಸ್ಲಿಮರ ಕೈಗೆ ಬಂದೂಕು ಕೊಟ್ಟು ಶಿಯಾ ಮುಸ್ಲಿಂ ನಗರಗಳ ಮೇಲೆ ದಾಳಿ ಮಾಡಿಸಿದರು. ಇದನ್ನು ತಡೆಯಲು ಬಂದ ಸಿರಿಯಾ ಸೇನೆ ಅಲ್ಪ ಸಂಖ್ಯಾತ ಸುನ್ನಿ ಜನರ ಮೇಲೆ ರಾಸಾಯನಿಕ ಅಸ್ತ್ರ ಬಳಸಿ ಸಾವಿರಾರು ಜನರನ್ನು ಕೊಂದಿದೆ ಎಂದು ಅದರ ಮೇಲೂ ಅಮೇರಿಕಾ ದಾಳಿ ಮಾಡಿಸಿ, ಅದನ್ನೀಗ ಸುಡುಗಾಡು ಮಾಡಲಾಗಿದೆ. ಇಷ್ಟರಲ್ಲಾಗಲೇ ಇರಾಕ್ ಯುದ್ಧದಂತೆ ಗೆದ್ದು, ಸದ್ದಾಂ ಹುಸೇನ್ ಕೊನೆಗಾಣಿಸಿದಂತೆ ಸಿರಿಯಾ ಅಧ್ಯಕ್ಷ ಅಲ್ ಬಷರ್ ಅವರನ್ನು ಅಮೇರಿಕಾ ಕೊನೆಗಾಣಿಸುತಿತ್ತು. ಇದಕ್ಕಾಗಿ ಇರಾಕ್ ಮೇಲೆ ಅಮೇರಿಕಾ ಯುದ್ಧ ಮಾಡುವಾಗ ರಷ್ಯಾ ತಟಸ್ಥವಾಗಿರುವಂತೆ ಮಾಡಲು 2012ರಲ್ಲಿ ಸೌದೀ ರಾಜಕುಮಾರ ಹಾಗು ಸೌದೀ ರಕ್ಷಣಾ ಸಚಿವ ಬಂದರ್ ಬಿನ್ ಸುಲ್ತಾನ್ ರಷ್ಯಾ ಪ್ರವಾಸ ಮಾಡಿದ್ದರು. ಆದರೆ ವ್ಲಾಡಿ ಮಿರ್ ಪುಟಿನ್ ಒಪ್ಪಿಕೊಳ್ಳುವ ಮುನ್ನವೇ ಸಿರಿಯಾ ಅಧ್ಯಕ್ಷ ಬಷರ್ ಅಪಾರ ಹಣ ನೀಡಿ ರಷ್ಯಾ ಸಹಾಯ ಪಡೆದುಕೊಂಡರು. ಹೀಗಾಗಿ ಉಳಿದು ಕೊಂಡರು. ಆದರೆ ದೇಶ ಮತ್ತು ಜನ ಎಕ್ಕುಟ್ಟಿ ಹೋಯಿತು. ಇದರ ಮಧ್ಯಯೇ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಮುಂದುವರೆಸಿದ್ದ ಸೌದೀ ರಾಜರನ್ನು ಹಣಿಯಲು ಇರಾನ್ ಸೇನಾಧಿಕಾರಿ ಹಾಗು ಮೊನ್ನೆ ಅಮೇರಿಕಾ ದಾಳಿಯಲ್ಲಿ ಹತನಾದ ಸುಲೈಮಾನ್ ಬಡತನ ಇದ್ದರೂ ನೆಮ್ಮದಿಯಾಗಿದ್ದ ಯೆಮೆನ್ ನ ಶಿಯಾ ಹೌದಿ ಭಯೋತ್ಪಾದಕರನ್ನು ಸೌದಿ ಅರೇಬಿಯಾ ವಿರುದ್ಧ ಯುದ್ಧಕ್ಕಿಳಿಸಿದ್ದರು.
ಸೌದೀ ರಾಜರು ತಮ್ಮ ಅಧಿಕಾರ ಉಳಿವಿಗಾಗಿ ಇಡೀ ಕೊಲ್ಲಿ ದೇಶಗಳನ್ನು ಶಿಯಾ -ಸುನ್ನಿ ಹೆಸರಿನಲ್ಲಿ ಸುಡುಗಾಡು ಮಾಡಿದ್ದನ್ನು ಆದ್ಯಂತವಾಗಿ ಟೀಕಿಸುತ್ತಿದ್ದ ಸೌದೀ ಮೂಲದ ಪತ್ರಕರ್ತ ಜಮಾಲ್ ಖಶೋಗಿಯನ್ನು ಕಳೆದ ವರ್ಷ ಅಕ್ಟೊಬರ್ 2.ರಂದು ಭೀಕರವಾಗಿ ಹತ್ಯೆ ಮಾಡಲಾಯಿತು. ಟರ್ಕಿಯಲ್ಲಿದ್ದ ಸೌದಿ ಅರೇಬಿಯಾ ರಾಯಭಾರ ಕಚೇರಿ ಒಳಗೆ ಹೋದ ಖಶೋಗಿ ಮತ್ತೆ ಹೊರ ಬರಲೇ ಇಲ್ಲ. ರಾಯಭಾರ ಕಚೇರಿಯಲ್ಲೇ ಅವರನ್ನು ಚಿತ್ರ ಹಿಂಸೆ ನೀಡಿ ಕೊಲ್ಲಲಾಗಿತ್ತು. ಇತ್ತೀಚೆಗೇ ಇರಾಕ್ ನಲ್ಲಿ ಇರಾನ್ ಸೇನಾಧಿಕಾರಿ ಹತ್ಯೆ ಹಿಂದಿನ ಕುಮ್ಮಕ್ಕು ಸಹ ಸೌದೀ ರಾಜರಿಂದಲೇ ಅಮೇರಿಕಾಗೆ ಬಂದಿರುತ್ತೆ. ಇರಾಕ್ ನಿಂದ ಅಮೇರಿಕಾ ಸೇನೆ ಕಾಲ್ತೆಗೆಯುವಂತೆ ಮಾಡಲು ಸುಲೈಮಾನ್ ಯೋಜನೆ ರೂಪಿಸಿದ್ದರು. ಇದು ಅಮೇರಿಕಾ ಗಿಂತ ಹೆಚ್ಚು ತೊಂದರೆ ಆಗುವುದು ಸೌದೀ ದೊರೆಗಳಿಗೆ ಎಂಬುದು ನಿಚ್ಚಳವಾಗಿತ್ತು. ಅಮೇರಿಕಾ ಅಧ್ಯಕ್ಷ ಟ್ರಂಪ್ ಹೇಳಿದಂತೆ ಷಿಯಾ ಭಯೋತ್ಪಾದಕರಿಗೆ ನೆರವು ನೀಡಿ, ಕೊಲ್ಲಿ ದೇಶಗಳ ಜನಾಂಗಿಯ ರಕ್ತದೋಕುಳಿಯಲ್ಲಿ ಸುಲೈಮಾನ್ ಕೈವಾಡ ಇತ್ತು. ಬಹುತೇಕ ಸೌದೀ ದೊರೆಗಳ ಎಲ್ಲಾ ಸಂಚನ್ನು ಮುಳುಗಿಸುವ ನಿಟ್ಟಿನಲ್ಲಿ ಸುಲೈಮಾನ್ ಮುಂದುವರೆದಿದ್ದರು. ಇವರ ಹತ್ಯೆಯಿಂದ ಯುದ್ಧ ಆರಂಭವಾಗೋಲ್ಲ, ಅಂತ್ಯವಾಗುತ್ತೆ ಅಂದಿದ್ದಾರೆ ಟ್ರಂಪ್, ಆ ಮಾತು ನಿಜವಾಗಲಿ, ಕೊಲ್ಲಿ ದೇಶಗಲ್ಲಿ ಕೊಳ್ಳಿ ಇಡುತ್ತಿರುವ ಸುನ್ನಿ -ಶಿಯಾ ದ್ವೇಷ ಕೊನೆಗೊಳ್ಳಲಿ. ಅಲ್ಲಿ ಜನ ಕದಡಿ ಹೋಗಿರುವ ಹೃದಯಗಳನ್ನು ಭ್ರಾತೃತ್ವ ಪ್ರೇಮದಿಂದ ಬೆಸೆದು ಕೊಂಡು, ಮತ್ತೆ ನೆಮ್ಮದಿಯ ಬದುಕು ಕಟ್ಟಿ ಕೊಳ್ಳುವಂತಾಗಲಿ. ಅಂದ ಹಾಗೆ, ಷಿಯಾ ಭಯದ ಸಿಂಡ್ರೋಮ್ ಅನಾದಿ ಕಾಲದಿಂದ ಸೌದೀ ಅರೇಬಿಯಾದಲ್ಲಿದೆ. ಈಗಿನ ರಾಜಕುಮಾರರ ತಾತನಿಗೂ ಇದ್ದಿದ್ದರಿಂದ 1930ರಲ್ಲೇ ಮಕ್ಕಾ- ಮದೀನಾ ನಗರಗಳಲ್ಲಿದ್ದ ಮೊಹಮದ್ ಪೈಗಂಬರ್ ಗೆ ಸಂಬಂಧಿಸಿದ ಗೋರಿ ಹೊರತು ಬೇರೆ ಗೋರಿ ಗಳು ದೈವ ವಿರೋಧಿ ಅಂತ ಸಾವಿರಾರು ಮುಸ್ಲಿಂ ಸಂತರ ಗೋರಿಗಳನ್ನು ನಾಶ ಮಾಡಲಾಗಿತ್ತು. ಕಾರಣ, ಬಹುತೇಕ ಗೋರಿಗಳು ಷಿಯಾ ಸಂತರ ಗೋರಿಗಳಿದ್ದವು. ಇವುಗಳ ಪೂಜೆ ನೆಪದಲ್ಲಿ ಷಿಯಾ ಜನ ಸೌದಿಯಲ್ಲಿ ಬೀಡು ಬಿಡಬಹುದು. ಇದರಿಂದ ತಮ್ಮ ಅಧಿಕಾರಕ್ಕೆ ತೊಂದರೆ ಆಗಬಹುದೆಂದು ಸಾವಿರ ವರ್ಷಗಳಿಗೂ ಹಳೆಯದಾದ ಮುಸ್ಲಿಂ ಸಂತರ ಗೋರಿಗಳು ನಾಶ ಪಡಿಸಿದ್ದರು.
14-15ನೇ ಶತಮಾನದಲ್ಲಿ ಈಗಿನ ಉತ್ತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ಮಧ್ಯೆ ಹಬ್ಬಿರುವ ಪರಿಯಾತ್ರ ಪರ್ವತದ ಸುತ್ತಾ ಇದ್ದ ಹಿಂದೂ ಬೌದ್ಧ ಜನರನ್ನು ಹಿಂಸೆ ನೀಡಿ ಇಸ್ಲಾಂಗೆ ಮತಾಂತರ ಮಾಡಲಾಯಿತು. ಮತಾಂತರವಾಗಲು ಇಚ್ಛಿಸದವರನ್ನು ಪರಿಯಾತ್ರ ಪರ್ವತದಿಂದ ತಳ್ಳಿ ಸಾಯಿಸಲಾಗುತಿತ್ತು. ಇದಕ್ಕಾಗಿ ಪರಿಯಾತ್ರ ಪರ್ವತವನ್ನು "ಹಿಂದೂ ಖುಷ್ "(ಹಿಂದೂ ಹತ್ಯೆ )ಪರ್ವತ ಎಂದೇ ಇಂದಿಗೂ ಕುಖ್ಯಾತವಾಗಿದೆ.
ಇಸ್ಲಾಮಿಕ್ ಉಗ್ರರಿಂದ ಪಾರಾಗಿ ಭಾರತಕ್ಕೆ ಓಡಿ ಬಂದ ಜನರೇ ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ನೆಲೆಸಿರುವ ಮರಾಠಿ, ಕೊಂಕಣಿ, ಗುಜರಾತಿ, ರಾಜಸ್ತಾನಿ, ಪಂಜಾಬ್, ಕಶ್ಮೀರಿ ಜನ. ಹಾಗಂತ ಇಲ್ಲಿರುವವರೆಲ್ಲ ನೂರಕ್ಕೆ ನೂರು ಜನ ಅಫ್ಘಾನಿಸ್ತಾನದಿಂದ ಬಂದವರಲ್ಲ. ಕೇವಲ ಶೇ. 25ರಷ್ಟು ಮಂದಿ ಮಾತ್ರ. ಉಳಿದ ಶೇ. 75ರಷ್ಟು ಜನ ಸ್ಥಳೀಯ ದ್ರಾವಿಡ ಕರಿ ಜನ. ಇವರಲ್ಲಿ ಬಹುತೇಕ ಜನ ದಲಿತರಾಗಿದ್ದರೆ, ಒಂದಿಷ್ಟು ಜನ ರೈತರಾಗಿದ್ದಾರೆ. ಮತ್ತೊಂದಿಷ್ಟು ಜನ ಕೆಳ ಜಾತಿಯವರಾಗಿದ್ದಾರೆ. ಕುಲ ಕಸುಬಿನಂತೆ ಜಾತಿ ವರ್ಗದಲ್ಲಿ ಮುಂದುವರೆದಿದ್ದಾರೆ. ವಲಸಿತ ಜನರ ಸಂಘಟಿತ ಆಕ್ರಮಣಕ್ಕೆ ಅವರ ಬಳಿಯೇ ಗುಲಾಮರಾದ ಮೂಲ ನಿವಾಸಿಗಳು, ವಲಸಿತರು ಮಾತಾಡುತ್ತಿದ್ದ ಹಿಂದೂ ಸ್ಥಾನಿ ಭಾಷೆಗೆ ಒಗ್ಗಿಕೊಂಡು ದ್ರಾವಿಡ ಮಾದರಿಯ ತಮ್ಮ ಮಾತೃ ಭಾಷೆಯನ್ನೇ ಮರೆತು ಬಿಟ್ಟಿದ್ದಾರೆ. ಅಥವಾ ಆ ಪರಿ ಮಾತೃ ಭಾಷೆ ಮಾತಾಡುವವರನ್ನು ಹೆದರಿಸಿ -ಹಿಂಸಿಸಿ ಮರೆಸಿದ್ದಾರೆ. ಹೀಗಾಗಿ ಕನ್ನಡ ಭಾಷೆ ಮಗದ ಸಾಮ್ರಾಜ್ಯವಿದ್ದ ಕ್ರಿ. ಪೂ. 500ವರ್ಷದಲ್ಲಿ ಉತ್ತರ ಭಾರತದಾದ್ಯಂತ ವ್ಯಾಪಿಸಿತ್ತು. 400 ವರ್ಷಗಳ ಹಿಂದಿನವರೆಗೂ ಈಗಿನ ಮರಾಠಿ -ಗುಜರಾತಿ ಜನರ ಆಡು ಭಾಷೆ ಮೂಲತಃ ಕನ್ನಡವಾಗಿತ್ತು.
ಮೊಹಮದ್ ಬಿನ್ ತುಘಲಕ್ ದೆಹಲಿಯಿಂದ ದೇವಗಿರಿಗೆ ರಾಜಧಾನಿ ಮಾಡುವ ಮುನ್ನ ಅಲ್ಲಿ ಅಳುತಿದ್ದ ಮಹಾರಾಜ ಸೇಹುನ ಕನ್ನಡದ ದೊರೆ. ಈತನ ಮಗಳನ್ನು ಹೊಯ್ಸಳ ಬಲ್ಲಾಳನಿಗೆ ಮದುವೆ ಮಾಡಿಕೊಡಲಾಗಿತ್ತು. ಹೀಗಾಗಿ ಮರಾಠಿ -ಗುಜರಾತಿಗಳ ಶೇ. 80ರಷ್ಟು ಜನ ಮೂಲತಃ ಕನ್ನಡಿಗರು. ಹಿಂದಿ, ಉರ್ದು, ಮರಾಠಿ, ಗುಜರಾತಿ, ರಾಜಸ್ತಾನಿ, ಪಂಜಾಬಿ, ಸಿಂಧಿ, ಕಶ್ಮೀರಿ ಭಾಷೆಗಳು ಭಾರತೀಯ ಭಾಷೆಗಳಲ್ಲ. ಇವು ಆಫ್ಘಾನಿಸ್ಥಾನದಿಂದ ವಲಸೆ ಬಂದ ಹಿಂದೂಸ್ತಾನಿ ಜನರ ಭಾಷೆ.
ಈ ಸತ್ಯವನ್ನೇ ಸಂಶೋಧಿಸಿ ಪ್ರಕಟಿಸಿದ ಮಹಾರಾಷ್ಟ್ರ ರಾಜ್ಯದ ಸಂಶೋಧಕರಾದ ಗೋವಿಂದ್ ಪನ್ಸಾರಿ, ನರೇಂದ್ರ ದಾಬೋಲ್ಕರ್ ಅವರನ್ನು ಹಿಂದೂ ಸನಾತನಿ ಉಗ್ರವಾದಿಗಳು ಗುಂಡಿಟ್ಟು ಕೊಂದರು. ಇತ್ತ ಕರ್ನಾಟಕದಲ್ಲಿ ಬಸವಣ್ಣ ಬ್ರಾಹ್ಮಣನಲ್ಲಾ, ಆತ ಶೂದ್ರಾತಿಶೂದ್ರ ಅನ್ನೋ ಸತ್ಯ ಬರೆಯುತ್ತೇನೆ ಎನ್ನುತ್ತಿದ್ದ m.m.ಕಲ್ಬುರ್ಗಿ ಅವರನ್ನೂ ಅಮಾನುಷವಾಗಿ ಕೊಲ್ಲಲಾಯಿತು.
ಈ ಜಗತ್ತಿನಲ್ಲಿ ಸತ್ಯ ಯಾರಿಗೂ ಬೇಡ. ಸುಳ್ಳಿನ ಭ್ರಮೆ ಹೊದ್ದು ಮಲಗುವುದನ್ನು ಜನ ತಲತಲಾಂತರ ವರ್ಷಗಳಿಂದ ರಕ್ತಗತ ಮಾಡಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ನಾವು ಈಗಿರುವುದೇ ಸತ್ಯ, ನಾವು ನಂಬಿಕೊಂಡು ಬಂದಿರುವ ವಿಚಾರವೇ ಪರಮ ಸತ್ಯ ಅಂದುಕೊಳ್ಳುತ್ತಾರೆ. ಸತ್ಯ ಹೇಳುವ ಬಾಯಿ ಮುಚ್ಚಿಸಲು ಕ್ರೂರವಾಗಿ ವರ್ತಿಸಲು ನಿರ್ದಯಿಗಳಾಗಿರುತ್ತಾರೆ. ಹೀಗಾಗಿಯೇ, ಮನುಷ್ಯನ ಸತ್ಯಾನ್ವೇಷಣೆ ಕಾಲದಿಂದ ಕಾಲದ ಸಂಘರ್ಷದಲ್ಲಿ ಹಿಂದುಳಿಯುತ್ತ ಬಂದಿದೆ. ಆಧುನಿಕ ಕಾಲವೆಂದು ಕೊಳ್ಳುವ ನಮ್ಮ ವರ್ತಮಾನ ಕಾಲದಲ್ಲೂ ಸತ್ಯಕ್ಕೆ ಅಡ್ಡಿ ಆತಂಕ ತಪ್ಪಿದ್ದಲ್ಲ.
ಮನುಷ್ಯನ ಕ್ರೌರ್ಯಕ್ಕೆ ಮಾನಸಿಕ ವಿಕಲ್ಪತೆಯು ಕಾರಣ ಎಂದು ಅಪರಾಧ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ದೀರ್ಘ ಕಾಲದ ಹಗೆತನ -ಖಿನ್ನತೆ ಮನುಷ್ಯ ನಲ್ಲಿನ ಮನೋ ನಿಗ್ರಹತೆ ಕಡಿಮೆಯಾಗಲು ಕಾರಣವಾಗಿ ಮಾನಸಿಕವಾಗಿ ದುರ್ಬಲನಾಗುತ್ತಾನೆ. ವಿವೇಚನಾ ಶಕ್ತಿ ಕಳೆದುಕೊಂಡ ಮನುಷ್ಯ ತನ್ನ ಎದುರಾಳಿಯನ್ನು ಕೊಲ್ಲುವ ಹೇಡಿತನಕ್ಕೂ ಹೇಸದೆ ಅಮಾನುಷವಾಗಿ ಯೋಚಿಸುತ್ತಾನೆ ಮತ್ತು ವರ್ತಿಸುತ್ತಾನೆ. ಕೊಲೆಯಂಥ ಕುಕೃತ್ಯಗಳನ್ನು ಮಾಡುವಾಗ, ಧರ್ಮದ ಹೆಸರಲ್ಲಿ ಜನರನ್ನು ಕೊಲ್ಲುವಾಗ ಅವನ ಮನ ಸಾಕ್ಷಿಗೆ ದೇವರು ತನ್ನ ಕೃತ್ಯಕ್ಕೆ ಬೆಂಬಲವಾಗಿರುತ್ತಾನೆ ಅಂತ ಭ್ರಮಿಸಿದರೆ, ಅಂಥ ಹುಚ್ಚರು ಮನುಷ್ಯರ ರಕ್ತದೋಕುಳಿಗೆ ರಾಕ್ಷಸರಂತೆ ನಿಂತು ಬಿಡುತ್ತಾರೆ. ಅದಕ್ಕಾಗಿ ನಿತ್ಯಾ ದೇವರ ಪ್ರಾರ್ಥನೆ ಮಾಡಬೇಕು. ಪರರಿಗೆ ಒಳಿತಾಗಿ, ಅವರ ಒಳಿತಿನಲ್ಲಿ ಹಲವರ ಬದುಕು ಬೆಳಗಲಿ ಅಂತ. ಇವತ್ತಿದ್ದು ನಾಳೆ ಹೋಗುವ ನಾವು, ಇದ್ದಷ್ಟು ದಿನ ಒಳ್ಳೆಯದನ್ನು ಬಯಸಿ, ಹೋಗಬೇಕು. ಯಥಾ ಕಥಿತ ನಮ್ಮ ದುರ್ಭಾವನೆಗಳನ್ನು ಸಮಾಜದಲ್ಲಿ ಹೇರಿ, ಜನ ಕಾಲದಿಂದ ಕಾಲಕ್ಕೆ ನೆಮ್ಮದಿ ಕಳೆದುಕೊಂಡು ಕಾದಾಡುವಂತಾಗಬಾರದು. ಇತಿಹಾಸ ನಮಗೆ ಪಾಠವಾಗ ಬೇಕು, ಆ ಪಾಠದಿಂದ ಉತ್ತಮ ಬದುಕು ಕಟ್ಟಿ ಕೊಳ್ಳುವುದನ್ನು ಕಲಿಯ ಬೇಕು. ಕುವೆಂಪು ಸೇರಿದಂತೆ ಎಲ್ಲಾ ದಾರ್ಶನಿಕರು ಹೇಳಿದಂತೆ "ಜಾತಿ -ಧರ್ಮಗಳನ್ನು ತೂರಿ ಎಸೆದು, ಎಲ್ಲಾ ಒಂದೇ ಅನ್ನುವ ನಾಮ ಬಲ ಮನುಷ್ಯನ ಹೃದಯದಲ್ಲಿ ಶಾಶ್ವತವಾಗಿ ತುಂಬುವ ಕೆಲಸ ಮಾಡ ಬೇಕು.
--ಎಸ್. ಪ್ರಕಾಶ್ ಬಾಬು
ಪತ್ರಕರ್ತ -ಗ್ರಂಥಕರ್ತ
ಮೈಸೂರ್
Comments