ಸತತ ಓದು, ಬರವಣಿಗೆ,ಪರಾಮರ್ಶನ ಮತ್ತು ಚಿಂತನೆಗಳು ಶಿಕ್ಷಣದ ಅವಿಭಾಜ್ಯ ಅಂಗಗಳು. ಶಿಕ್ಷಣ ಅನ್ನುವುದು ಒಂದು ಸಾಪೇಕ್ಷ ಪರಿಕಲ್ಪನೆ. ಶಿಕ್ಷಣದ ಪ್ರಕ್ರಿಯೆ ಅವ್ಯಾಹತವಾದದ್ದು ಮತ್ತು ಅಂತ್ಯವಿಲ್ಲದ್ದು. ಉನ್ನತ ಶಿಕ್ಷಣ ವಲಯದಲ್ಲಿ ದುಡಿಯುತ್ತಿರುವ ಎಲ್ಲ ಪ್ರಾಧ್ಯಾಪಕರೂ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮತ್ತು ತಮ್ಮ ವಿದ್ಯಾರ್ಥಿಗಳಲ್ಲೂ ಈ ಅರಿವನ್ನು ಮೂಡಿಸುತ್ತಿರಬೇಕು..ಉನ್ನತ ಶಿಕ್ಷಣ ವಲಯದೊಳಗೆ ಇಂತಹ ಒಂದು ಬೌದ್ಧಿಕ ವಾತಾವರಣ ಸದಾ ನೆಲೆಸಿರಬೇಕು.
ಕಾಲೇಜು ಪ್ರಾಧ್ಯಾಪಕರು ಇಂಥ ಸಂಶೋಧನಾ ಸಂಸ್ಕೃತಿಗೆ ತಮ್ಮನ್ನು ಮುಕ್ತವಾಗಿ ತೆರೆದುಕೊಳ್ಳುವುದರ ಉದ್ದೇಶವೇನು ಮತ್ತು ಅದರಿಂದ ಪ್ರಯೋಜನವೇನು ಎಂಬುದು ನಮ್ಮಲ್ಲಿ ಹಲವರ ಜಿಜ್ಞಾಸೆಗೆ ಕಾರಣವಾದ ಪ್ರಶ್ನೆಗಳು. ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳಿಗೆ ಬೋಧನಾ ಕಾರ್ಯ ನಡೆಸುತ್ತಿರುವ ಶಿಕ್ಷಕರು ತಾವು ಕಲಿಸುವ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದಷ್ಟೂ ಅದು ಅವರ ಬೋಧನಾಕಾರ್ಯದ ಮೇಲೆ ಬೀರುವ ಪರಿಣಾಮ ಬಹಳ ದೊಡ್ಡದು. ಮತ್ತು ಆ ಪರಿಣಾಮ ಅವರಿಗೆ ಅರಿವಿಲ್ಲದೆಯೇ ಆಗುವಂಥದ್ದು. ಸಂಶೋಧನೆ ನಡೆಸಲು ಉದಾಸೀನ ತೋರಿಸುವ ಸೋಮಾರಿ ಸ್ವಭಾವದ ಪ್ರಾಧ್ಯಾಪಕರು ತಮ್ಮ ಸ್ನಾತಕೋತ್ತರ ಪದವಿಯ ಆಧಾರದ ಮೇಲೆ ಪ್ರಾಧ್ಯಾಪಕ ಹುದ್ದೆ ಸಿಗುತ್ತಲೇ ಇನ್ನು ಓದುವ ಅಗತ್ಯವಿಲ್ಲ ಅಂದುಕೊಳ್ಳುತ್ತಾರೆ. ತರಗತಿ ನಡೆಸಲು ಎಷ್ಟು ಬೇಕೋ ಅಷ್ಟು ಮಾತ್ರ ಓದಿಕೊಂಡು ಇಂಟರ್ ನೆಟ್ ನಲ್ಲಿ ಸಿದ್ಧ ಪಡಿಸೊಟ್ಟ ನೋಟ್ಸುಗಳ ಸಹಾಯದಿಂದ ತಮ್ಮ ಮತ್ತು ನಿರ್ವಹಿಸುತ್ತಾರೆ.'ಸಂಶೋಧನೆಯೆ? ಅದರ ಅಗತ್ಯ ವೇನಿದೆ, ನಾವು ಸ್ವತಃ ನಮ್ಮಷ್ಟಕ್ಕೆ ಓದಿಕೊಂಡರೆ ಸಾಲದೆ? ಆ ಜಂಜಾಟ ಯಾರಿಗೆ ಬೇಕು?'' ಎನ್ನುತ್ತಾರೆ. ನಿಜ, ಸಂಶೋಧನೆಗೆ ಸಂಬಂಧಿಸಿದ ಔಪಚಾರಿಕ ನಡೆಗಳ ತೊಡಕುಗಳು ತುಂಬಾ ಇವೆ. ಆದರೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದರಿಂದ ಆಗುವ ಲಾಭವು ಈ ಎಲ್ಲ ತೊಡಕುಗಳನ್ನು ಮೀರಿ ಇರುತ್ತದೆ.
ಸಂಶೋಧನೆ ಮಾಡುವಾಗ ನಾವು ಕೈಗೊಳ್ಳುವ ವ್ಯವಸ್ಥಿತ ಹಾಗೂ ಶಿಸ್ತು ಬದ್ಧ ಅಧ್ಯಯನವು ನಮಗೆ ನೀಡುವ ಅನುಭವ ಬೇರೆಯೇ ತೆರನಾದದ್ದು. ರಿಸರ್ಚ್( ಪುನರ್ ಪರಿಶೋಧನೆ) ಅನ್ನುವ ಪದವೇ ವಿಶಿಷ್ಟ ಅರ್ಥವನ್ನು ಕೊಡುವಂಥದ್ದು. ನಾವು ಕಲಿತಿರುವ ಅಥವಾ ಕಲಿಸುತ್ತಿರುವ ವಿಷಯಗಳ ಬಗ್ಗೆ ನಮಗಿಂತ ಮೊದಲು ಸಾವಿರಾರು ಮಂದಿ ತಮ್ಮ ಚಿಂತನೆಗಳ ಮೂಲಕ ಹಲವಾರು ಹೊಸ ವಿಚಾರಗಳನ್ನು ಹೇಳಿರುತ್ತಾರೆ. ಮತ್ತು ಅವುಗಳನ್ನು ಗ್ರಂಥಗಳಲ್ಲಿ ದಾಖಲಿಸಿರುತ್ತಾರೆ.ನಾವು ಸಂಶೋಧನೆ ಮಾಡಲು ಹೊರಟಾಗ ಇತರರು ಆ ಬಗ್ಗೆ ಹೇಳಿರುವುದೆಲ್ಲವನ್ನೂ ಓದಿ ತಿಳಿದುಕೊಂಡು, ಆ ಕುರಿತು ಇನ್ನಷ್ಟು ಚಿಂತಿಸಿ ಅವರು ಹೇಳದೇ ಉಳಿಸಿದ ವಿಚಾರಗಳನ್ನು ನಮ್ಮ ಬರವಣಿಗೆಯಲ್ಲಿ ದಾಖಲಿಸುತ್ತೇವೆ. ನಮ್ಮ ಕೆಲಸವು ಈ ಎಲ್ಲ ಹಂತಗಳನ್ನು ದಾಟಿದಾಗ ನಮಗೆ ಸಿಗುವ ಅನುಭವ ಅತ್ಯಂತ ವಿಶಿಷ್ಟವಾದದ್ದಾಗಿರುತ್ತದೆ. ಮತ್ತು ಅದು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಇದುವೇ ನಮ್ಮ ಸಂಶೋಧನಾ ಪ್ರಕ್ರಿಯೆಯಿಂದ ನಮಗಾಗುವ ಲಾಭ. ಒಟ್ಟಿನಲ್ಲಿ ಪರಿಶ್ರಮ ಪಡುವ ಅಭ್ಯಾಸವನ್ನು ನಾವು ರೂಢಿಸಿಕೊಂಡರೆ ನಾವು ಮಾಡುವ ವೃತ್ತಿಗೆ ನ್ಯಾಯ ಸಲ್ಲಿಸಲು ನಮ್ಮಿಂದ ಸಾಧ್ಯ.
ಡಾ.ಪಾರ್ವತಿ ಜಿ.ಐತಾಳ್
Comments