ಹೊರಗಿಂದ ಬಂದ್ರ ಕೈ ತೊಳೀರೀ ಹಾರ್ಕೊಂಡ ಬಂದ್ರ ಹೊರಗsss ಇರ್ರಿ ಮಕ್ಕಳನ್ನಂತೂ ತರಲಬ್ಯಾಡ್ರೀ ತಂದ್ರೂ ನಮ್ಯಾಲ ಹರ್ಲಿ ಬ್ಯಾಡ್ರಿ ತೊಳದೂ ತೊಳದೂ ಕೈ ಬೆಳ್ಳಗಾತು ಹಸ್ತದ ರೇಖೆ ತೊಳ್ಕೊಂಡು ಹೋತು ಖಾಲೀ ಹಸ್ತಾ ತೋರ್ಸೋದ್ ಹ್ಯಾಂಗ? ಹುಸಿ ಭವಿಷ್ಯಾ ಕೇಳೋದ್ ಹ್ಯಾಂಗ ಪಾನಿ-ಪೂರಿ-ಫಿಜ್ಜಾ- ಬರ್ಗರ್ ಡಿಮ್ ಲೈಟ್ ಪಾರ್ಟಿಗೆ ಬಿತ್ತೂ ಚಕ್ಕರ್ ಬಾರಿನ ಕಡೀಗೇ ಸಾಗೂದಿಲ್ಲಾ ಕಾರನ್ನಂತೂ ಏರೋದಿಲ್ಲ ಎಮಕಿಗೊಂದು ಗುಮಕೀ ಬಿತ್ತು ಸೊಕ್ಕಿನ ಮೂತಿಗೆ ಬಂತಾಪತ್ತು ಕುತ್ತಿಗೀ ಕೊಯ್ಯೋ ಗತ್ತಿನ್ಯಾಗ ತುಂಡು ಎಣ್ಣೀ ತುಂಬೋದ್ರಾಗ ಕಟ್ಟಿದ್ದೆಲ್ಲಾ ಹುಡಿಗುಟ್ಟಿ ಹೋತು ಕೂಡಿಟ್ಟದ್ದೂ ಪುಡಿಪುಡಿಯಾತು ನೆತ್ತೀ ಮ್ಯಾಲss ಕಣ್ಣಿಟ್ಟಕೊಂಡೂ ಹೊಸ್ತಿಲಾ ಎಡವೀ ಬಿದ್ದದ್ದಾತೂ ಮುಖಾ ತೋರಿಸಿದ್ರ ಮಣ್ಣ ಪಾಲು ಮುಚ್ಕೊಂಡ ಇದ್ರೂ ತೇಲೂ-ಮೇಲು ಒಳಗ ಕೂತರ ಹಸಿವೀ ಭೂತ ಹೊರಗ ಬಂದ್ರ ಕೊರೋನಾ ಘಾತ ದಂಡೀಗಂತೂ ಹೆದರಿರಲಿಲ್ಲಾ ದಾಳಿಗಂತೂ ಬೆದರಿರಲಿಲ್ಲಾ ಆಳೋ ಅರಸರ ಅಂಕೀ ಇಲ್ದೇ ಬೀಳ್ಸೋ ದೆವ್ವದ್ ಹೆದ್ರೀಕೆ ಇಲ್ದೆ ತುಂಡು ತುಣುಕೂ ಸಿಗಲssವಲ್ದು ಒಳಗೇನದನೋ ತಿಳೀಲವಲ್ದು ಮೈತುಂಬೆಲ್ಲಾ ಮುಳ್ಳ ಕೆಚ್ಚು ರೋಗಕ್ಕಿಂತಾ ಮಾಟಾ- ಹೆಚ್ಚು ಜ್ವರಾ ಬಂದ್ರ ಸೂತಕ ಖಾತ್ರಿ ಸೀನು ಬಂದ್ರ ಪಾತಕ ಪಾತ್ರಿ ಪ್ಲಾಸ್ಟಿಕ್ ಪೆಟಿಗ್ಯಾಗ ತುಂಬಿದ್ಹಾಂಗ ಜೀವಂತ ಹೆಣದ ಹಾಸಿಗೀ ಹಾಂಗ ಮೂಗಿಗೆ ನಾಳಾ ಹೊಟ್ಟಿಗೆ ನಾಳಾ ಕಿಸೆsಕ್ಕಂತೂ ಪೂರಾ ಗಾಳಾ ಕಣ್ಣು ಮುಚ್ಚಿದ್ರ ಯಮನ ಪಾಶಾ ಉಳಕೋಬೇಕೂ ಅನ್ನೋ ಆಶಾ ದೀಪಾ ಇಲ್ಲಾ ಧೂಪಾ ಇಲ್ಲಾ ದೇವ್ರ ಪಾದಾ ಕಾಣಂಗಿಲ್ಲ ನೈವೇದ್ಯಕ್ಕ ನೀರ ಬಿಟ್ಟು ಪ್ರಸಾದಕ್ಕ ಸ್ವರ್ಗಾ ಕೊಟ್ಟು ಸುಖಾ ಹುಡ್ಕೋಂಡ ಹೋಗಿದ್ಯಾರೋ ಮುಖಾ ಮುಚ್ಕೋಂಡು ಬರೋರ್ಯಾರೋ? ಮಾನಾ ಹುಡುಕಿ ವಿಮಾನ ಏರಿ ಎಮಕಿಲೆ ಬಿದ್ದು ಸುಮ್ಮನ ಜಾರಿ ನೀ ಕಲ್ಲು ಅನ್ನೋದು ಈಗ ಗೊತ್ತಾತು ನಾ ದಡ್ಡಾ ಅನ್ನೋದು ಗೊತ್ತss ಇತ್ತು ಪೂಜಾ-ಆಜಾನ-ಪಶ್ಚಾತ್ತಾಪ? ದೇವ್ರ ಸಂಗಡಾ ಮನಸ್ತಾಪ!! -ಪುಟ್ಟು ಕುಲಕರ್ಣಿ ============================ ಹರ್ಲಿ; ಹರಲಿ/ಅಪವಾದ ಗುಮಕಿ ; ಗುದ್ದು ಎಮಕಿ ; ಸೊಕ್ಕು/ ಹುಸಿಪ್ರತಿಷ್ಠೆ

ಕುಮಟಾದಲ್ಲಿ ನೆಲೆನಿಂತಿರುವ ಕವಿ ,ಚಿಂತಕ,ವಿಮರ್ಶಕ,ಪುಟ್ಟು ಕುಲಕರ್ಣಿಯವರು ಮೂಲತಹ ರಾಣೆಬೆನ್ನೂರಿನವರು.ಕುಸುಮ ಸೊರಬ ಅವರ ಪರಿಚಯದಿಂದ ಹೊನ್ನಾವರ ಕಾಸರಕೋಡಿನ ಸ್ನೇಹಕುಂಜದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಅವರು ಈಗ ಬರವಣಿಗೆಯಲ್ಲಿ ಪ್ರವೃತ್ತರು.ಹದಿನಾಲ್ಕು ಕವನ ಸಂಕಲನ ಪ್ರಕಟಿಸಿರುವ ಅವರು ಪಾಂಡಿಚೇರಿಯ ಅರವಿಂದಾಶ್ರಮ ಹೊರಡಿಸುವ ಕನ್ನಡ ಭಾಷೆಯ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅವರ ಕವನ ನಿಮ್ಮ ಓದಿಗಾಗಿ. ಸಂಪಾದಕ.