ಸಾಮಾನ್ಯವಾಗಿ ಅದು ಎಚ್ಚರಾಗದ ಹೊತ್ತು. ಆದರೂ ಎಚ್ಚರಾಯಿತು. ಬಾಗಿಲು ತೆರೆದು ಹೊರಬಂದೆ. ಆಗಿನ್ನೂ ಮೂರುವರೆ ಗಂಟೆ ನಡುರಾತ್ರಿ. ಕಾರ್ಗತ್ತಲಿತ್ತು. ಅದೂ ಬೆಳಕಿಗಾಗಿ ತವಕಿಸುತ್ತಿತ್ತು. ನಕ್ಷತ್ರಗಳು ಒಂದೇಸವನೇ ಹೊಳೆಯುತ್ತಿದ್ದವು. ತಂಗಾಳಿ ಹಿತವಾಗಿ ಸುಳಿದು ಮೈಮನಗಳ ದಡವುತ್ತಿತ್ತು. ಎಲ್ಲೆಲ್ಲೂ ನೀರವತೆ. ತನುವಿಗೇನೋ ಸುಖಾನುಭವ. ಮನಸ್ಸಿಗದೇನೊ ಕಳವಳ. ತಡೆಯದೇ ಒಳಬಂದು ಮತ್ತೆ ಹಾಸಿಗೆಗೆ ಒರಗಬೇಕೆನ್ನುವಷ್ಟರಲ್ಲಿ ಕಣ್ಣರೆಪ್ಪೆಗಳಲ್ಲಿ ಒಡಕುಮೂಡಿತ್ತು. ನಿದ್ದೆ ಹತ್ತಿರವೂ ಸುಳಿಯಲಿಲ್ಲ. ಮನದಲ್ಲಿ ಎಂಥದೊ ಭಯ, ದಿಗಿಲು. ಕಾರಣ, ಕೊರೊನಾ ಕೀಟ್ಸ್ ಮತ್ತು ಕಾವ್ಯ ಹೀಗೆ ಮೂರೂ ಸಂಗತಿಗಳು ಒಂದಕ್ಕೊಂದು ತಳಕುಹಾಕಿಕೊಂಡು ಕಾಡಲಾರಂಭಿಸಿದವು. ನನ್ನ ಸಂಗ್ರಹದ ಪುಸ್ತಕಗಳರಾಶಿಯಲ್ಲಿ ಕಣ್ಣಾಡಿಸಿದೆ. ಜಾನ್‍ಕೀಟ್ಸ್ ಬಗೆಗಿನ ಪುಸ್ತಕ ಕೈಗೆ ಸಿಕ್ಕಿತು. ಅಲ್ಲ, ಅದುವೇ ನನ್ನ ಕೈಯನ್ನು ತನ್ನತ್ತ ಸೆಳೆದುಕೊಂಡಿತು. ಪುಸ್ತಕದ ಪ್ರತಿ ಪುಟಗಳಲ್ಲೂ ಬದುಕು-ಸಾವು, ಭ್ರಮೆ-ವಾಸ್ತವ, ಕಾವ್ಯ-ಕನವರಿಕೆ ಎಲ್ಲವೂ ದರ್ಶನದಂತೆ ಹರವಿಕೊಂಡಿತ್ತು. ಓದುತ್ತ ಒದುತ್ತ ಕಣ್ಣಾದೆ, ಕಿವಿಯಾದೆ. ಅಲ್ಲಿ ಬಾಳಿನ ಮರ್ಮವೆಲ್ಲ ತಿಳಿಯಾಗಿ ಚೆಲ್ಲುವರಿದಿತ್ತು. ತನ್ನ ಬಾಳಿನುದ್ದಕ್ಕೂ ಕತ್ತಲನ್ನು ಮತ್ತು ಕಾವ್ಯವನ್ನೇ ಕುಡಿದ ಕೀಟ್ಸ್ ಭರವಸೆಯ ಬೆಳಕಾಗಿ ಕಂಡ. ಅದೇ ಬೆಳಕಿನಲ್ಲಿ ಬದುಕಿಗಾಗಿ ತೆರೆದುಕೊಂಡೆ...!
ಇದು ದುರಿತ ಕಾಲ. ಸದ್ಯದ ಕೊರೊನಾ ತಂದೊಡ್ಡಿದ ತಲ್ಲಣಗಳು, ಅದು ಉಂಟುಮಾಡಿದ ಭೀಕರತೆ, ಸೃಷ್ಟಿಸಿದ ಸವಾಲು ಸಂದಿಗ್ಧತೆ, ಈ ಅಪಾಯದಿಂದ ಪಾರಾಗುವ ಬಗೆ ಹೀಗೇ ಹಲವು ಯೋಚನೆಗಳು ಒಳಗೊಳಗೇ ಗುದ್ದಿಕೊಂಡು ಬಂದು ಮನಸ್ಸು ನೋಯಹತ್ತಿತು. ಬದುಕಿನ ಭಯಾನಕತೆಯನ್ನು ನೀಗಿಕೊಂಡು, ಭ್ರಮೆಯನ್ನು ಕಳಚಿಕೊಂಡು, ಭರವಸೆಯ ಆಶಾಕಿರಣವೊಂದು ಬಾಳ ನಭದಲ್ಲಿ ಮೂಡಬಹುದಾದ ನಿರೀಕ್ಷೆಯಲ್ಲಿರುವುದು ಮನುಷ್ಯಸಹಜ ಸ್ವಭಾವವೇ! ಇಡೀ ಮನುಕುಲವನ್ನೇ ವಕ್ಕರಿಸಿಕೊಂಡ, ಆಕ್ರಮಿಸಿಕೊಂಡ ಭೀಕರ ಕ್ರೂರಿ ಕೊರೊನಾ ಇಡೀ ಬದುಕಭಿತ್ತಿಯನ್ನು ಛಿದ್ರಛಿದ್ರಗೊಳಿಸುತ್ತಿದೆ. ಬಡವ-ಶ್ರೀಮಂತ, ಮೇಲು-ಕೀಳು, ಜಾತಿ, ಅಧಿಕಾರ-ಅಂತಸ್ತು, ಗಂಡು-ಹೆಣ್ಣು ಏನೊಂದನೂ ನೋಡದೇ ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಬಾಧಿಸುತ್ತಿದೆ, ಬಲಿ ಪಡೆಯುತ್ತಿದೆ. ಅರ್ಥ ವ್ಯವಸ್ಥೆಯಂತೂ ಸಂಪೂರ್ಣ ಮುಗ್ಗರಿಸಿದ ಪರಿಣಾಮ ಉದ್ಯೋಗ, ವ್ಯಾಪಾರ ಇಲ್ಲದೇ ಜನ ಕಂಗಾಲಾಗಿದ್ದಾರೆ. ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ನಿರುದ್ಯೋಗ ಸಮಸ್ಯೆ ಭೂತಾಕಾರ ತಾಳಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು-ಭವಿಷ್ಯ ಎರಡೂ ಮಂಕಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ, ಕ್ಷೌರಿಕರಿಗೆ, ಅಟೋ ರಿಕ್ಷಾ ಚಾಲಕರಿಗೆ, ಮಡಿವಾಳ, ನೇಕಾರರಿಗೆ ಹಾಗೂ ಸಮಾಜದ ಕೆಲ ವರ್ಗದವರಿಗೆ ಲಕ್ಷಕೋಟಿ ರೂಪಾಯಿಗಳ ಪರಿಹಾರ ಘೋಷಿಸಿದೆ. ಅದು ಎಷ್ಟು ಮಂದಿಗೆ ತಲುಪಿದೆಯೋ? ಲೆಕ್ಕ ಇಟ್ಟವರಾರು? ಲಕ್ಷಾಂತರ ಕೂಲಿ ಕಾರ್ಮಿಕರು, ಬಡವರು, ದಿನದ ದುಡಿಮೆಯನ್ನೇ ನಂಬಿದವರ ಮೇಲೆ ಕೊರೊನಾದ ಪರಿಣಾಮ ಘೋರವಾಗಿದೆ. ಇದ್ದವರು ಹೇಗಾದರೂ ಬದುಕಿಯಾರು! ಇಲ್ಲದವರು ತುತ್ತಿನ ಚೀಲ ತುಂಬಿಸಿಕೊಳ್ಳಲು ಹೊತ್ತುಹೊತ್ತಿಗೂ ಹೆಣಗಾಡುತ್ತಿದ್ದಾರೆ, ಆಗದಿದ್ದರೆ ಹೆಣವಾಗುತ್ತಲೂ ಇದ್ದಾರೆ. ಉಲ್ಬಣಗೊಳ್ಳುತ್ತಿರುವ ರೋಗ ನಿಯಂತ್ರಣಕ್ಕೆ ಸರ್ಕಾರ ಲಕ್ಷಲಕ್ಷ ಕೋಟಿಗಳಷ್ಟು ಖರ್ಚು ವ್ಯಯಿಸುತ್ತಿದ್ದರೂ ಕೊರೊನಾ ಮಾತ್ರ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಇದೆ. ಬಲಿಗಾಗಿ ಹೊಂಚುಹಾಕುತ್ತಲೇ ಇದೆ. ಈ ನಡುವೆ ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ಸಲಕರಣೆಗಳ ತಯಾರಿಕಾ ಕಂಪನಿಗಳು ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಿವೆ. ಪಿಪಿ ಕಿಟ್‍ಗಳ ಖರೀದಿಯಲ್ಲಿ ಸಾವಿರಾರೂ ಕೋಟಿ ರೂಪಾಯಿಗಳ ಕಮಿಷನ್ ದಂಧೆಯೂ ನಡೆದಿರುವ ಬಗ್ಗೆ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ದನಿ ಎತ್ತಿವೆ. ಖಾಸಗಿ ಆಸ್ಪತ್ರೆಗಳು ಕೊರೊನಾಪೀಡಿತ ರೋಗಿಗಳನ್ನು ವಿಪರೀತವಾಗಿ ಶೋಷಿಸುತ್ತಿವೆ. ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಬೀದಿ ಹೆಣವಾಗುತ್ತಿರುವುದು ವರದಿಯಾಗುತ್ತಿವೆ. ಇನ್ನು, ಮನುಷ್ಯನಲ್ಲಿನ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಜ್ಯೋತಿಷಿಗಳು, ಮಾಧ್ಯಮಗಳು ದುಡಿಯುವ ದಾರಿ ಕಂಡುಕೊಂಡಿವೆ. ಚೀನಾದಿಂದ ಆಮದಾದ ಕಣ್ಣಳತೆಗೆ ಸಿಗದ ಸಣ್ಣ ವೈರಾಣು ಇಡೀ ಮನುಕುಲವನ್ನೇ ಇನ್ನಿಲ್ಲದಂತೆ ಹೈರಾಣು ಮಾಡುತ್ತಿದೆ. ಶತಶತಮಾನಗಳಿಗೊಮ್ಮೆ ಕಾಣಿಸಿಕೊಳ್ಳುವ ಪ್ಲೇಗ್, ಕಾಲರಾ ಮತ್ತಿತರ ಭಯಂಕರ ರೋಗಗಳಿಗಿಂತ ಭಿನ್ನ ಮತ್ತು ಭಯಾನಕವಾಗಿರುವ ಕೊರೊನಾ ಮನುಷ್ಯನಲ್ಲಿನ ಭ್ರಮೆಯ ಪೊರೆಯನ್ನು ಕಳಚಿದೆ. ‘ಎಲ್ಲವೂ ನನ್ನ ಕೈಯಲ್ಲಿದೆ’ ಎಂದುಕೊಂಡ ಮನುಷ್ಯನ ಗರ್ವವೆಲ್ಲ ಕರಗಿ ನೀರಾಗಿ ಹೋಗಿದೆ. ಪ್ರಕೃತಿಯ ಮೇಲೆ ಮಾನವನ ಹಿಡಿತವೆಲ್ಲ ಸಡಿಲಾಗಿ ಮತ್ತೆ ಕೂಡುಬಾಳಿನ ಕಡೆಗೆ ಮುಖಮಾಡುವಂತಾಗಿದೆ. ತಾನು, ತನ್ನದು ಎಂಬ ಸಂಕುಚಿತ ಸೀಮೆಗಳಲ್ಲಿ ಬದುಕುವ ಮನುಷ್ಯನ ಸ್ವಾರ್ಥಪೂರಿತ ಬುದ್ದಿಗೆ ತಕ್ಕ ಪಾಠ ಕಲಿಸಿದೆ ಈ ಕೊರೊನಾ. ಈ ವಿದ್ಯಮಾನವನ್ನು ಕುರಿತು ‘ಇದೆಲ್ಲಾ ದೇವರುಕೊಟ್ಟ ಶಿಕ್ಷೆ’, ‘ಪಾಪ-ಪುಣ್ಯದ ಲೆಕ್ಕಾ ಚುಕ್ತಾ’, ‘ಇದು ಪ್ರಕೃತಿಯ ಸಮತೋಲನದ ಮಾರ್ಗ’, ವೈದ್ಯ ವಿಜ್ಞಾನಕ್ಕೆ ಸವಾಲು’ ‘ಮನುಕುಲಕ್ಕೆ ಬಡಿದುಕೊಂಡ ಭೂತ’, ‘ಕೊರೊನಾ ಮಾರಿ ಒಕ್ಕರಿಸಿಕೊಂಡಿದಾಳೆ’ ಇತ್ಯಾದಿಯಾಗಿ ವೈದ್ಯ ವಿಜ್ಞಾನಿಗಳು, ತತ್ವಜ್ಞಾನಿಗಳು, ಧರ್ಮಶಾಸ್ತ್ರಜ್ಞರು, ಚಿಂತಕರು ತಂತಮ್ಮ ತಿಳಿವಳಿಕೆಯ ಮಿತಿಯಲ್ಲಿ ಈ ವಿದ್ಯಮಾನವನ್ನು ಅರ್ಥೈಸುತ್ತಿದ್ದಾರೆ. ಏನೇ ಆದರೂ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸ್ವೀಕಾರ, ಸಾಮಾಜಿಕ ಅಂತರ ಮುಂತಾದ ಅರೋಗ್ಯ ಸೂತ್ರಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಸನಿಹವಿದ್ದೂ ಸಂದೇಹಿಸುವ, ಅಂತರವಿದ್ದೂ ಆಪ್ತವಾಗುವ ಸ್ಥಳೀಯವಾಗಿದ್ದೂ ವಿಶ್ವಾತ್ಮಕವಾಗುವ ಅಗತ್ಯತೆಯ ಪಾಠ ಬೋಧಿಸುತ್ತಿದೆ ಕೊರೊನಾ. ಅಷ್ಟೇಅಲ್ಲದೆ, ಪರಿಸರದೊಂದಿಗೆ ಸಾವಯವ ಸಂಬಂಧವನ್ನು ಇರಿಸಿಕೊಂಡು, ಮಾನವತೆಯ ಒರತೆ ಬತ್ತದಂತೆ ಬಾಳಬೇಕಾದ ಅನಿವಾರ್ಯತೆಯನ್ನೂ ಮನಗಾಣಿಸಿದೆ.
ಬದುಕು ಭವಿಷ್ಯದ ಬಗ್ಗೆ ಚಿಂತಿತಗೊಳ್ಳುವಂತೆ ಮಾಡಿದ ಈ ಕೊರೊನಾ ಮನುಷ್ಯನನ್ನು ಒಂಟಿಯಾಗಿಸಿದೆ. ಈ ಒಂಟಿತನವನ್ನು ನೀಗಿಕೊಳ್ಳಲು ಮತ್ತು ಅದನ್ನು ಏಕಾಂತವನ್ನಾಗಿ ಮಾರ್ಪಡಿಸಿಕೊಳ್ಳಲು ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಓದು ಬರೆಹ ಇತ್ಯಾದಿ ಕಲೆಗಳ ಮೊರೆಹೋಗಿದ್ದಾನೆ. ಈ ದುರಿತ ಕಾಲವೇ ಮನುಷ್ಯನನ್ನು ಆತ್ಮಾವಲೋಕನಕ್ಕೆ, ಆತ್ಮವಿಮರ್ಶೆಗೆ, ಆತ್ಮನಿರೀಕ್ಷೆಣೆಗೆ ಈಡುಮಾಡಿದೆ. ಸಾವಿನ ಕುರಿತು, ಸಮಸ್ಯೆಗಳ ಕುರಿತು, ಬದುಕಿನ ಕುರಿತು ಮನುಷ್ಯ ಹೆಚ್ಚು ಗಂಭೀರವಾಗಿ ಚಿಂತಿತನಾಗಿದ್ದಾನೆ. ಕೊರೊನಾ ಅಕ್ಷರಶಃ ಕಾಡಿದೆ, ಕಾಡುತ್ತಲೂ ಇದೆ. ಈ ಕಾಡುವಿಕೆಯೇ ಹೊಸಬಗೆಯ ಕಾವ್ಯಸೃಷ್ಟಿಗೆ ಸರಕಾಗಿದೆ. ಇಂಥ ವಿಷಣ್ಣ, ವಿಕ್ಷೋಭಿತ ಕಾಲದಲ್ಲಿಯೇ ಕಾವ್ಯ ವಿಭಿನ್ನವಾಗಿ ಮೂಡಲು ಸಾಧ್ಯ!. ಇಂಥ ಆತಂಕಿತ ದಿನಗಳಲ್ಲಿಯೇ ಸಾಹಿತ್ಯ ಹೊಸ ಭರವಸೆಯ ಬೆಳಕಾಗಿ ಬರಲು ತುಡಿಯುತ್ತದೆ. ಕವಿಯೂ ಕಾಲದ ಕೂಸು. ಕಾವ್ಯ ತಲ್ಲಣದ ಫಲ. ಕಾವ್ಯಕನ್ನಿಕೆಯ ಧ್ಯಾನ ಮನಸ್ಸಿಗೊಂದಿಷ್ಟು ಸಮಾಧಾನ. ಅದುವೇ ನೆಮ್ಮದಿಯ ನಿಲುಗಡೆಯ ತಾಣ. ಈ ಹಿನ್ನೆಲೆಯಲ್ಲಿ ಕೊರೊನಾದ ಸಂದಿಗ್ಧತೆ, ಕೀಟ್ಸ್ ಮತ್ತೆ ಕಾವ್ಯªವನ್ನು ಕುರಿತು ವಿವೇಚಿಸುವುದು ಮುಖ್ಯವೂ ಸಕಾಲಿಕವೂ ಆಗಿದೆ.
ಕೀಟ್ಸ್ ಮತ್ತೆಮತ್ತೆ ನೆನಪಾಗುತ್ತಾನೆ, ಕಾಡುತ್ತಾನೆ; ನಮ್ಮೊಳಗನ್ನು ಕೆದುಕುತ್ತಾನೆ. ಕಾಲ ಒಡ್ಡಿದ ರೂಕ್ಷತೆಯ ನಡುವೆಯೂ ಕೀಟ್ಟ್ ಜೀವನದ ವೈಭವ-ವೈರುಧ್ಯ, ಕನಸು-ಕನವರಿಕೆ, ನೋವು ನಿರಾಶೆ, ಹತಾಶೆ, ಪ್ರೀತಿ, ಮೃತ್ಯು, ಗೆಲುವು ಎಲ್ಲವುಗಳನ್ನೂ ಅನುಭವಿಸಿ ಎದುರಿಸಿದಾತ ಅವನು. ಬದುಕಿನ ಕುಲುಮೆಯಲ್ಲಿ ಬೆಂದು ಬಸವಳಿದರೂ ಕೀಟ್ಸ್ ಮತ್ತವನ ಕಾವ್ಯ-ಕನಸು ಎಲ್ಲವೂ ಕಣ್ಣಲ್ಲಿ ತೇವವಾಗಿ, ಹೃದಯದಲಿ ಭಾವವಾಗಿ, ಬುದ್ದಿಯಲಿ ಚಿಂತನೆಯಾಗಿ, ಮನಸಿನಲಿ ನೆನಪಾಗಿ, ಕನಸಾಗಿ ಕಾಡುತ್ತದೆ. ಹೌದು! ಕೀಟ್ಸ್‍ಗೆ ಕಾಡುವ ಗುಣವಿದೆ, ಥೇಟ್ ಕಾವ್ಯದಂತೆ. ಜಾನ್ ಕೀಟ್ಸ್ ತನ್ನ ಇಳಿವಯಸ್ಸಿನಲ್ಲಿಯೇ ಅನುಭವಿಸಬಾರದ್ದೆಲ್ಲವನ್ನೂ ಅನುಭವಿಸಿದವನು. ಬದುಕಿಗೆ ಎದೆತೆರೆದವನು. ಬದುಕೆಂಬ ಅಕ್ಷಯ ಪಾತ್ರೆಯಲ್ಲಿನ ಕಾವ್ಯವನ್ನು ಮೊಗೆಮೊಗೆದು ಕುಡಿದವನು, ಕಾವ್ಯವನ್ನೇ ಕಕ್ಕಿದವನು. ಅವನು ಸಂವಾದಿಸುವುದಾದರೆ ಅಲ್ಲೊಂದು ಕಾವ್ಯ ಹುಟ್ಟುಬೇಕು, ಪ್ರೀತಿ ಘಟಿಸಬೇಕು ಇಲ್ಲವೇ ಸಾವು ಸಂಭವಿಸಬೇಕು. ಹೀಗಾಗಿ “ಗಾಢ ಸ್ನೇಹ, ಹುಚ್ಚು ಪ್ರೀತಿ, ಅಕಾಲಿಕ ಮೃತ್ಯುಗಳ ಒಟ್ಟು ಮೊತ್ತವೇ ಕೀಟ್ಸ್‍ನ ಬದುಕು” ಎಂದು ಲೇಖಕ ರಾಗಂ ವ್ಯಾಖ್ಯಾನಿಸುವುದು ಗಮನರ್ಹಾ. ನಿಜಕ್ಕೂ ಕೀಟ್ಸ್ ಬದುಕಿದ್ದು ಕಾವ್ಯಕ್ಕಾಗಿ, ಪ್ರೀತಿಗಾಗಿ, ಸಾರ್ಥಕ ಸಾವಿಗಾಗಿ. 1795 ರ ಅಕ್ಟೋಬರ್ 29 ರಂದು ಇಂಗ್ಲೆಂಡಿನ ಲಂಡನ್‍ನಲ್ಲಿ ಹುಟ್ಟಿದ ಕೀಟ್ಸ್ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯ ಘಟ್ಟದ ಎರಡನೇ ತಲೆಮಾರಿನ ಮರೆಯಲಾರದ ಮಹಾಕವಿ. ಕೀಟ್ಸ್ ಕಣ್ಣುತೆರೆಯುವ ಮೊದಲೇ ಅಪ್ಪ ಜನ್ನಿಂಗ್ಸ್ ತೀರಿಹೋಗಿದ್ದ. ಹುಟ್ಟಿದ ಹದಿನೈದು ವರ್ಷಕ್ಕೆ ತನ್ನ ಪ್ರೀತಿಯ ತಾಯಿ ಫ್ರಾನ್ಸಸ್ ಜಿನ್ನಿಂಗ್‍ಳೂ ಕಣ್ಣುಮುಚ್ಚುತ್ತಾಳೆ. ಅಣ್ಣ ಜಾರ್ಜ್, ತಮ್ಮ ಥಾಮಸ್, ಮುದ್ದು ತಂಗಿ ಫ್ರಾನ್ಸಿಸ್ ಮೇರಿ(ಫ್ಯಾನಿ) ಒಂದಿಲ್ಲೊಂದು ರೋಗಗಳಿಗೆ ತುತ್ತಾಗಿ ಮರಣವನ್ನಪ್ಪುತ್ತಾರೆ. ಕುಟುಂಬದಲ್ಲಿ ಸಂಭವಿಸಿದ ಸರಣಿ ಸಾವುಗಳನ್ನು ಕಣ್ಣಾರೆ ಕಂಡಿದ್ದ ಕೀಟ್ಸ್ ಕೊನೆಗೆ ತನ್ನ ಪ್ರೇಯಸಿ ಫ್ಯಾನಿ ಬ್ರೌನ್‍ಳ ಒಲವಾಮೃತದ ಸವಿಯುಣ್ಣಬೇಕೆನ್ನುವಷ್ಟರಲ್ಲಿ ಟಿಬಿ ರೋಗ ಅಂಟಿಕೊಳ್ಳುತ್ತದೆ. ಅವಳ ಪರಿಶುದ್ಧ ಪ್ರೀತಿಯನ್ನೂ ಪಡೆಯದ ನತದೃಷ್ಟ ಕೀಟ್ಸ್ 15 ವರ್ಷದವನಿರುವಾಗಲೇ ಅಳಿದುಳಿದ ಸಂಬಂಧಿಕರನ್ನೂ ಕಳೆದುಕೊಳ್ಳುತ್ತಾನೆ. ತಾನು ಅನಾರೋಗ್ಯದಿಂದ ಬಳಲುತ್ತಿದ್ದು, ಒಳಗೊಳಗೇ ಕುದ್ದು, ಕೊರಗಿ, ಖಿನ್ನತೆಗೊಳಗಾಗಿ ಖಾಲಿಯಾಗಿ ಬಿಡುತ್ತಾನೆ. ಆದರೆ, ಸಂಪೂರ್ಣ ಕಳೆದುಹೋಗದಂತೆ ಕಾಪಾಡಿದ್ದು ಮಾತ್ರ ಸ್ನೇಹ, ಪ್ರೀತಿ ಮತ್ತು ಕಾವ್ಯ. ಅವನು ಬದುಕಿದ್ದು ಬರೀ 26 ವರ್ಷ. ಬರೆದದ್ದು ಕೇವಲ ಏಳೆಂಟು ವರ್ಷ. ಸಾಹಿತ್ಯರಾಶಿ ಅಪಾರ. ಇಂಗ್ಲಿಷ್ ಸಾಹಿತ್ಯದಲ್ಲಿ ಅವನು ಅಮರ. ವಯಸ್ಸು ಚಿಕ್ಕದಾದರೂ ಬೋದಿಸುವ ಬದುಕಿಗೆ ಕಿವಿಗೊಟ್ಟ ಸಂಯಮಿ ಕೀಟ್ಸ್ ತನ್ನ ಬದುಕಿನ ಉದ್ದಕ್ಕೂ ನೋವು, ಪ್ರೀತಿ, ಕಾವ್ಯವನ್ನೇ ಧ್ಯಾನಿಸಿದ. ‘ಮಾಗು’ವಿಕೆ ಮತ್ತು ‘ಆಗು’ವಿಕೆ ಪಾಂಡಿತ್ಯದಿಂದ ಸಾಧಿಸುವುದಿಲ್ಲ. ಅದು ಹೃದಯ ಹದಗೊಂಡವರಿಗೆ ಸಿಗುವ ಸೌಭಾಗ್ಯ. ಹೀಗೆ ಹದಗೊಂಡ ಹೃದಯವನ್ನು ಕೀಟ್ಸ್ ಸಾಧಿಸಿಕೊಂಡಿದ್ದ. ಹಾಗಂತಲೇ ಸಮೃದ್ಧ ಹೃದ್ಯ ಸಾಹಿತ್ಯಸೃಷ್ಟಿ ಅವನಿಂದ ಸಾಧ್ಯವಾಯಿತು.
ಕೊರೊನಾ ಕಾಲದಲ್ಲೂ ಜೀವ ಮತ್ತು ಜೀವನ ಮುಖ್ಯ ಎಂದು ಬದುಕಬೇಕಾದ ಅನಿವಾರ್ಯತೆಯಲ್ಲಿರುವಾಗ ಕೀಟ್ಸ್ ಪ್ರೇರಣೆಯಾಗುತ್ತಾನೆ. ಕೀಟ್ಸ್ ತನ್ನ ಜೀವನದಲ್ಲಿ ಬರೀ ನೋವು ನಿರಾಶೆ, ಹತಾಶೆ, ಖಿನ್ನತೆಗಳನ್ನು ಅನುಭವಿಸಿದ್ದ. ಅದಕ್ಕೆ ಅವನು ಬೈರನ್ ಕವಿ ಹೇಳಿದ ‘ಜ್ಞಾನವೆಂಬುದು ದುಃಖ’ ಎಂಬ ಮಾತನ್ನು ‘ದುಃಖವೇ ಜ್ಞಾನ’ ಎಂಬುದಾಗಿ ಬದಲಾಯಿಸಿಕೊಂಡು ಬದುಕನ್ನು ಎದುರುಗೊಂಡಿದ್ದ. ದುಃಖವೇ ಜ್ಞಾನದ ನಿಜವಾದ ಶೋಧಮಾರ್ಗ ಎಂದು ಬಲವಾಗಿ ನಂಬಿ ನಡೆದಿದ್ದ. ಅಲ್ಲದೇ, ಕೀಟ್ಸ್ ತನ್ನ ಕಾಲದ ತಲ್ಲಣಗಳಿಗೆ, ಕುಟುಂಬದ ವಿಘಟನೆಗಳಿಗೆ, ವಿಚ್ಛಿದ್ರತೆಗೆ ಒಳಗಾಗಿಯೂ ‘ಈ ಬದುಕಿನಲ್ಲಿ ಏನಾದರೂ ಸಾಧಿಸಲು ಸಮಯದ ಅಭಾವ ಇದೆ’ ಎಂದೇ ಭಾವಿಸಿ ಜೀವನವನ್ನು ಸಕಾರಾತ್ಮಕವಾಗಿ ಸ್ವೀಕರಿಸಿದವನು. ಹಾಸಿಗೆಯಲ್ಲಿ ಮಲಗಿಕೊಂಡೂ ಟಿಬಿ ರೂಪದಲ್ಲಿ ಸಾವಿನ ಸನಿಹದಲ್ಲಿದ್ದರೂ ವಿಲಿಯಂ ಶೇಕ್ಷಪಿಯರ್, ಎಡ್ಮಂಡ್ ಸ್ಪೆನ್ಸರ್, ಜಾನ್ ಮಿಲ್ಟನ್, ಗ್ರೀಕ್ ಮೈಥಾಲಜಿ ಆ ಕಾಲದ ಕ್ಲಾಸಿಕಲ್ ಸಾಹಿತ್ಯವನ್ನೆಲ್ಲ ಓದಿ ಅರಗಿಸಿಕೊಂಡ, ಜೀರ್ಣಿಸಿಕೊಂಡ. ಹೀಗೆ ಎಲ್ಲವನ್ನೂ ಓದಿದ ಎನ್ನುವ ಬದಲಿಗೆ ಸಾಹಿತ್ಯಸಾರವನ್ನೆಲ್ಲ ಹೀರಿ ಕುಡಿದ ಎಂದರೇ ಸರಿ!. ಕೊರೊನಾ ಕಾಲಿಟ್ಟಿರುವ ಈ ಘಳಿಗೆಯಲ್ಲಿ ಮನುಷ್ಯ ಮನುಷ್ಯನನ್ನು ಅನುಮಾನಿಸುವಂತಾಗಿದೆ. ಕೀಟ್ಸ್ ಮಾತ್ರ ‘ಮನುಷ್ಯ ಮನುಷ್ಯನನ್ನು ಸಹಿಸಿಕೊಳ್ಳುವುದನ್ನು ಕಲಿಯಬೇಕಿದೆ’ ಎನ್ನುತ್ತಾನೆ. ಮೂಲಭೂತವಾಗಿ ಮನುಷ್ಯನಲ್ಲಿ ಒಳಿತಿನ ಮಹಾಗಣಿಯೇ ಇದೆ. ಆದರೆ ತನ್ನ ತಪ್ಪುಗಳನ್ನು ಅರಿತುಕೊಳ್ಳಬೇಕು ಮತ್ತು ಅವುಗಳ ಬಗ್ಗೆ ನಿರ್ಮೋಹಿಯಾಗಿರಬೇಕು. ಇದು ನಿಜವಾಗಿಯೂ ಮನುಷ್ಯ ಮಾನವನಾಗುವ ದಾರಿ ಎಂಬುದನ್ನು ತಿಳಿದು ಬದುಕಿದ ಕೀಟ್ಸ್. ಸದಾ ಹಸಿರಿಗಾಗಿ ಹಂಬಲಿಸಿದ್ದ ಅವನು ಹಸಿರಿಗಾಗಿಯೇ ಸದಾ ಹಸಿದವನು. ಅವನ ಪ್ರಕಾರ ಹಸಿರು ಎಂದರೆ ಪ್ರೀತಿ, ಬದುಕು ಮತ್ತು ಕಾವ್ಯ. ಗೆಳೆಯ ರೆನಾಲ್ಡ್ಸ್ ಗೆ ಬರೆದ ಪತ್ರವೊಂದರಲ್ಲಿ ಕವಯತ್ರಿ ಮಿಸೆಸ್ ಫಿಲಿಪ್ಸ್‍ನ ಕವಿತೆಯನ್ನು ಉಲ್ಲೇಖಿಸುವ ಕೀಟ್ಸ್ ;
“ಹೃದಯಗಳ ಬೆರಕೆಗೆ ಬಾಂಡಲೆಯುಂಟೆ?
ಮೆತ್ತಿಕೊಂಡಿದ್ದೇವೆ ನೆತ್ತಿನೆತ್ತಿಗೆ ಉಸಿರಾಗಿ
ಬಾಚಿಕೊಂಡವರ ಬಿಡಿಸಬಹುದು
ಬೆರೆತವರ ಬಿಡಿಸುವುದು ಹೇಗೆ?
ನುಡಿದವರ ಮರೆಯಬಹುದು
ಆತ್ಮಕ್ಕೆ ಲಗ್ಗೆಯಿಟ್ಟು ನಡೆದವರ ನೆನೆಯದಿರಬಹುದೇ? ಎಂಬಂತೆ ತನ್ನ ಪರಿಶುದ್ಧ ಪ್ರೀತಿಯನ್ನೇ ಪರಿಪರಿಯಾಗಿ ಪ್ರಶ್ನಿಸಿದ. ಪ್ರತಿಯಾಗಿ ಅವನು ಮತ್ತೆ ;
“ನನ್ನ ಉಸಿರಾದ ನೀನು ಹಸಿರಾಗಿ ಎಲ್ಲಿಯೂ ಹಬ್ಬಿಕೊ
ನಿನ್ನೆದೆಗೆ ಬಿದ್ದ ಬೆಂಕಿಗೆ ನಾನು ನರಳುತ್ತೇನೆ
ನಿನ್ನ ಸಂತಸದ ಹಾಡಿಗೆ ನಾನು ಅರಳುತ್ತೇನೆ
ನೀನು ನೆ¯ ಹಿಡಿದರೆ, ನಿನ್ನ ಮೈಕೆಳಗಿನ ಮಣ್ಣು ನಾನೇ ಆಗಿರುತ್ತೇನೆ”. ಹೀಗೇ ತನ್ನ ಜೀವನದುದ್ದಕ್ಕೂ ಪ್ರೀತಿಗಾಗಿ ಹಂಬಲಿಸಿ, ಹವಣಿಸಿ ಅದಕ್ಕಾಗಿಯೇ ತಾನು ನಿತ್ಯ ಅತ್ತು ಆತ್ಮಸಂಗಾತ ಬಯಸುವ ಭಾವುಕ ಕವಿಯಾತ. ಕವಿತೆಯಿಲ್ಲದೇ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ ಎಂಬಂತಿದ್ದ ಕವಿ ಕೀಟ್ಸ್ ಸದಾ ಕವಿತೆಯನ್ನೇ ತನ್ನ ಉಳಿವಿಗಾಗಿ ಕುಡಿದವನು. ಅದನ್ನೇ ಮುದ್ದಾಮು ಮದ್ದಾಗಿ ಮಾಡಿಕೊಂಡವನು. ಕೋವಿಡ್ ಕಾಲದಲ್ಲಿ ಮನುಷ್ಯ ಶೂನ್ಯವನ್ನು ಅನುಭಸುತ್ತಿರುವಾಗಲೇ, ಬದುಕು ಒಡ್ಡಿದ ತಾಪತ್ರಯಗಳನ್ನು ತಡೆದುಕೊಳ್ಳಲಾರದಷ್ಟು ಸೋತುಹೋಗಿದ್ದ ಕೀಟ್ಸ್ ತನ್ನ ನೋವನ್ನು ಮರೆಯಲು ಕಂಡಕೊಂಡಿದ್ದ ಏಕೈಕ ದಾರಿಯೆಂದರೆ ಅದು ಜ್ಞಾನ ಸಂಪಾದನೆ. ಹೌದು! ಅವನು ‘ಲೋಕದ ಒಳಿತಿಗಾಗಿ ಪ್ರಕೃತಿಯ ಆಜ್ಞೆ ಹಾಗೂ ಅಣತಿಗಳೊಳಗೆ ಉಪಕರಿಸಿದ ಹಾಗೂ ಉಪಕರಿಸುತ್ತಿರುವವರ ಮಧ್ಯೆ ತನ್ನದೂ ಒಂದು ದಾರಿ ಇದೆ’ ಎಂದು ತಿಳಿದವನು. ತಪಸ್ಸಿನ ರೀತಿಯಲ್ಲಿ ಜ್ಞಾನಕ್ಕಾಗಿ ಜೀವನವನ್ನು ಯಜ್ಞದಂತೆ ನಡೆಯಿಸಿದವನು. ಕಾವ್ಯವೇ ಅವನ ಪರಮ ಗುರಿ-ಗಂತವ್ಯಗಳಾಗಿದ್ದರೂ ಸಮಕಾಲೀನ ಸಾಹಿತ್ಯ ಚಿಂತನೆಯನ್ನು ಮಾಡಿದವನು. ಹಾಗೇ ನೋಡಿದರೆ ಕಾವ್ಯವು ಸಂಕಟಗಳ ಮಡುವಿನಿಂದಲೇ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಅವನು ಸಂಕಟದಲ್ಲಿಯೂ ಕಾವ್ಯ ಹಾಡಿದ. ಬಾಳಿನ ದಾರಿಯಲ್ಲಿ ತುಂಬ ಅವಸರದಲ್ಲಿದ್ದ ಕೀಟ್ಸ್ ;
“ಬರಲೊಲ್ಲದ ನಿದ್ರೆ ಬರಲೆಳಿಸಿದಂತೆ
ಸಾವು ಸುಳಿದಾಡುತಿದೆ ಎದೆಯ ಮೇಲೆ
ಮನಸ ಮೈಗೆ ಮಹಾ ಆಯಾಸ
ಸಾಯಬೇಕಿತ್ತು ನಾನು, ಆದರೂ ಕುಳಿತಿದ್ದೇನೆ
ಆಕಾಶ ದಿಟ್ಟಿಸುತ...” ಬದುಕಿನಲ್ಲಿ ಆಶಾವಾದಿಯಾಗಿರಬೇಕೆಂದು ಪ್ರತಿಪಾದಿಸುತ್ತಾನೆ. ಕೀಟ್ಸ್ ವ್ಯಕ್ತಿನಿಷ್ಠ ಕವಿ ಎನಿಸಿದರೂ ಅದಕ್ಕೆ ಅಪವಾದವೆಂಬಂತೆ ಪ್ರೀತಿಯಿಲ್ಲದೇ ನನಗೆ ಒಂದರಗಳಿಗೆಯೂ ಬದುಕಿರಲು ಸಾಧ್ಯವಿಲ್ಲ. ಸಾರ್ವಜನಿಕ ಒಳಿತಿಗಾಗಿ ನಾನು ಪ್ರಾಣವನ್ನೇ ಕೊಡಲು ಸಿದ್ಧ’ ಎಂದು ಸಮಷ್ಟಿಹಿತಕ್ಕಾಗಿಯೂ ತುಡಿದ, ದುಡಿದ. ಯಾರೂ ಊಹಿಸಲಾಗದ ಸಾವು ಅವನದು. ಕೀಟ್ಸ್ ಕೊನೆಯುಸಿರೆಳೆದಾಗ ಅವನಿಗೆ ಬರೀ 26 ವಯಸ್ಸು. ಸಾವಿನ ಕಾರಣಕ್ಕಾಗಿ ಅವನು ಇತಿಹಾಸದಲ್ಲಿ ಉಳಿದವನಲ್ಲ, ಬದಲಾಗಿ ಕಾವ್ಯದ ಬೆಳಕನ್ನೇ ಇಡೀ ಮನುಕುಲದ ಅಂಗಳಕ್ಕೆ ಚೆಲ್ಲಿದನೆನ್ನುವ ಕಾರಣಕ್ಕೆ ಕೀಟ್ಸ್ ಇನ್ನೂ ನೆನಪಾಗಿ ಉಳಿದಿದ್ದಾನೆ.
ಕೊರೊನಾ ಸದ್ಯದ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ನೆಪದಲ್ಲಾದರೂ ಬದುಕಿನ ಅನಿಶ್ಚಿತತೆ, ಪ್ರಕೃತಿಯ ನಿಗೂಢತೆ, ಸಮಸ್ಯೆ-ಸಂದಿಗ್ಧತೆ ಇವೆಲ್ಲಕ್ಕೂ ಮನುಷ್ಯ ತನ್ನ ತಾನು ಅರಿಯಬೇಕಾಗಿದೆ. ಹೊರಗಣ ಬಯಲ ಹಸಿರಿಗೆ ಒಳಗಣ ಉಸಿರು ಬೆರೆಯಬೇಕು. ಕೊರೊನಾ ಬಿಕ್ಕಟ್ಟಿನಿಂದ ಪಾರಾಗಲು ನಮಗೆ ಅನೇಕ ದಾರಿಗಳಿವೆಯಾದರೂ ‘ಮನುಷ್ಯ ಹಸಿಯಬೇಕಾದ ಊಟಕ್ಕೆ, ಪವಿತ್ರನಾಗಬಹುದಾದ ನೋಟಕ್ಕೆ ಮತ್ತು ಮಿಡಿಯಬಹುದಾದ ಮಹತಿಗೆ’ ಶ್ರಮಿಸಬೇಕಾಗಿದೆ ಎಂಬುದಂತೂ ಸತ್ಯ.
ಗ್ರಂಥ ಋಣ :
ಡಾ. ರಾಜಶೇಖರ ಮಠಪತಿ(ರಾಗಂ) : ಜಾನ್ ಕೀಟ್ಸ್ ನೀರ ಮೇಲೆ ನೆನಪ ಬರೆದು...
ಪ್ರ: ಕಣ್ವ ಪ್ರಕಾಶನ, ಬೆಂಗಳೂರು, 2017
ಲೇಖನ : - ಡಾ. ಸಂಗಮೇಶ ಎಸ್. ಗಣಿ
ಕನ್ನಡ ಪ್ರಾಧ್ಯಾಪಕರು,
ಸೂಳೇಭಾವಿ-587 124
ತಾ: ಹುನಗುಂದ
ಜಿ: ಬಾಗಲಕೋಟೆ
ಡಾ. ಸಂಗಮೇಶ ಎಸ್. ಗಣಿ ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯವರು. ಕನ್ನಡ ಸಾಹಿತ್ಯ, ಜಾನಪದ, ರಂಗಭೂಮಿ, ಪತ್ರಿಕೋದ್ಯಮ, ಬುಡಕಟ್ಟು ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುವ ಇವರು ಕವಿತೆ, ಕಾವ್ಯ, ವಿಮರ್ಶಾ ಲೇಖನಗಳನ್ನು ಬರೆಯುವಲ್ಲಿ ನಿರತರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಯೋಜನಾ ಸಹಾಯಕರಾಗಿ ಸೇವೆ ಸಲ್ಲಿಸಿದ ಡಾ. ಸಂಗಮೇಶ ಅವರು 'ಶಿಶುವಿನಹಾಳ ಶರೀಫರು ವರ್ತಮಾನದ ಅನುಸಂಧಾನ' ವಿಷಯ ಕುರಿತ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ. ಪತ್ರಿಕೆ, ಟಿವಿ, ಆಕಾಶವಾಣಿ ಮಾಧ್ಯಮಗಳಲ್ಲೂ ವರದಿಗಾರರಾಗಿ, ಉದ್ಘೋಷಕರಾಗಿಯೂ ಕೆಲಸ ಮಾಡಿದ ಅನುಭವ ಇವರದು. ಸದ್ಯ ಖಾಸಗಿ ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು 'ಡಾ. ಪಿ.ಕೆ. ರಾಜಶೇಖರ', 'ಹೊರಳು ದಾರಿಯ ಧ್ಯಾನ' ಕೃತಿಗಳನ್ನು ಪ್ರಕಟಿಸಿದ್ದಾರೆ.ನಾಡಿನ ಹಲವು ಪತ್ರಿಕೆಗಳಲ್ಲಿ ೫೦ ಕ್ಕೂ ಹೆಚ್ಚು ಲೇಖನಗಳು, ಕವಿತೆಗಳೂ ಪ್ರಕಟವಾಗಿವೆ. ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಕವಿಗೋಷ್ಟಿಗಳಲ್ಲಿ ಭಾಗವಹಿಸಿ ಪ್ರಬಂಧ, ಕವಿತೆಗಳನ್ನು ಮಂಡಿಸಿದ್ದಾರೆ. ಸಾಹಿತ್ಯ, ಸಂಶೋಧನೆ ಸಾಂಸ್ಕೃತಿಕ ಅಭಿವ್ಯಕ್ತಿ ಕ್ರಮಗಳನ್ನು ವರ್ತಮಾನದೊಂದಿಗೆ ಅನುಸಂಧಾನಗೊಳಿಸುವ ಮೂಲಕ ಅದಕ್ಕೆ ಸಮಕಾಲೀನ ಸ್ಪರ್ಶ ಕೊಡುವಲ್ಲಿ ಇವರದು ಹೆಚ್ಚಿನ ಆಸಕ್ತಿ. -ಸಂಪಾದಕರು
Comentarios