ಕಾಣುವ ನೀರಿನ ಸೆಲೆಯ ಮೂಲಬಲ ಎಲ್ಲಿಂದ? ಗುಡ್ಡದಿಂದ, ನೆಲದಾಳದಿಂದ ಎಂದಷ್ಟೇ ಹೇಳಬಹುದು. ಬಸಿ ಬಸಿದು ಕೂಡಿ ಹನಿ ಹನಿಯಾಗಿ ಎಲ್ಲಿಂದಲೋ, ನೆಲದಾಳದಲ್ಲೋ, ನೆಲದಲ್ಲೋ, ಗುಡ್ಡದ ಓರೆಯಲ್ಲೋ ಒಡಮೂಡುವ ಸೆಲೆ ಜೀವ ಜಗತ್ತಿಗೆ ನಿಸರ್ಗದ ಆಶೀರ್ವಾದ. ಬರಡಾದ ನೆಲ ಜಲದಿಂದ ಹಸಿರಾಗುತ್ತದೆ. ನೆರಳನ್ನು ನೀಡುವ ಗಿಡಮರಗಳ ಹೂವು ಹಣ್ಣುಗಳು ಬದುಕಿನ ಸಮೃದ್ಧಿಗೆ ಹಸೆ ಹಾಸುತ್ತವೆ. ಎಲ್ಲೆಲ್ಲಿಯೋ ಒಡಮೂಡುವ ಸೆಲೆಯಂತೆ ಮಹಾತ್ಮರ ದರ್ಶನ ಮತ್ತು ನುಡಿ ಎಷ್ಟೋ ಬದುಕುಗಳ ಸಾಧನೆ, ಸಿದ್ಧಿ, ನೆಮ್ಮದಿಗೆ ಊತಾಗುವ ದೇವರ ಕಾರುಣ್ಯವೆಂದೇ ನನ್ನ ನಂಬಿಕೆ.
ಅಂದು ನನ್ನ ತಾಯಿ (ಅಕ್ಕ) ಏನನ್ನೋ ರುಬ್ಬುತ್ತಾ ಇದ್ದವಳು ನೆನೆಸಿಕೊಂಡಂತೆ ಗಜಾನ್ನ ಇಲ್ಲಿ ಬಾ ಎಂದು ಕರೆದಳು. ಹೊಳ್ಳಿಯ ಮಂಚದ ಮೇಲೆ ಒರಗಿದ್ದವನು ಎದ್ದು ಅಕ್ಕನ ಹತ್ತಿರ ಹೋಗಿ ನಿಂತೆ. ನನ್ನನ್ನು ನೋಡುತ್ತಾ “ಗಜಾನ್ನ, ವಿಷ್ಣು ಮೂರ್ತಿ ದೇವಸ್ಥಾನಕ್ಕೆ ಶ್ರೀಧರ ಸ್ವಾಮಿಗಳು ಬಂದ್ರು. ಅವ್ರು ದೊಡ್ಡ ಸ್ವಾಮಿಗಳು. ವಾಕ್ ಸಿದ್ಧಿ ಇದ್ದಡ. ಅವ್ರ ಆಶೀರ್ವಾದ ಪಡ್ಕೊ” ಎಂದಳು. “ಈಗ್ಲೆ ಹೋಗೋವಾ” ನಾನು ರಾಗ ಎಳೆದೆ. “ನಾಳಿಂಗೆ ಇರ್ತೋ ಇಲ್ಲೆಯೋ. ಇಂದೇ ಹೋಗು” ಎಂದಳು. “ವಾಕ್ ಸಿದ್ಧಿ ಅಂದ್ರೆ ಎಂತದೇ?” ಕೇಳಿದೆ. “ಅವ್ರ್ ಆಶೀರ್ವಾದ ಮಾಡ್ದ್ರೆ ಒಳ್ಳೆದಾಗ್ತು. ಅದ್ಕೆ ಹಾಂಗ್ ಹೇಳ್ತೊ”. ಲಗುಬಗೆಯಿಂದ ಸ್ನಾನ ಮುಗಿಸಿ ಬಂದು ಚಡ್ಡಿ ಏರಿಸಿದೆ. ಅಂಗಿ ತೊಡುತ್ತಾ ಅಕ್ಕನ ಹತ್ತಿರ ಹೋದೆ. ನಾನು ಮಾತಾಡುವ ಮೊದಲೇ ನನ್ನನ್ನು ನೋಡುತ್ತ “ಇದ್ದ್ ಒಂದು ಅಂಗೀನ್ನೂ ಬೆಳ್ಳಗೆ ಇಟ್ಕೊಂಬಲು ಆಗ್ತಿಲ್ಲೆ. ಹೋಗು ಅಣ್ಣಂದ್ ಹಾಯ್ಕೊ” ಎಂದು ಅಕ್ಕ ನುಡಿಯುತ್ತಿದ್ದಂತೆ ಗಿಳಿಗೂಟಕ್ಕೆ ನೇತಿದ್ದ ಅಣ್ಣನ ಅಂಗಿ ಹಾಕಿಕೊಂಡೆ. ಆ ಅಂಗಿಯ ಕೈತೋಳು ನನ್ನ ಮೊಣಕೈ ದಾಟಿತ್ತು. ಎದೆಯ ಹತ್ತಿರ ದೊಗಳೆಯಾಗಿತ್ತು. ಆಗ ನನ್ನಲ್ಲಿ ಜಾಗೃತವಾಗಿದ್ದ ದೊಡ್ಡ ಸ್ವಾಮಿಗಳನ್ನು ನೋಡುವ ಕುತೂಹಲದಿಂದ ಏನನ್ನೂ ಗಮನಿಸದೆ ಅಕ್ಕನಿಗೆ ಬತ್ತೆ ಎಂದು ಹೇಳಿ ಅವಳ ಉತ್ತರಕ್ಕೆ ಕಾಯದೆ ಹೊರಟುಬಿಟ್ಟೆ.
ಮರಗಳ ಮಧ್ಯೆ ನುಗ್ಗಿ ದಾರಿಯನ್ನು ಬಿಸಿ ಮಾಡಿದ ಬಿಸಿಲು ಮೈ ಸುಡುತ್ತಿತ್ತು. ಈಗ ಸಮಯ ಎಷ್ಟಾಗಿರಬಹುದು? ಕಾಲಡಿಯ ನೆರಳನ್ನು ನೋಡಿದೆ. ಅದು ಪೂರ್ವಕ್ಕೆ ಚಾಚಿತ್ತು. ಊಟದ ಸಮಯ ಆಗಿಹೋಗಿದೆ. ಸ್ವಾಮಿಗಳು ಈಗ ಎಲ್ಲಿರಬಹುದು? ಅವರಿದ್ದಲ್ಲಿ ನಾನೊಬ್ಬನೇ ಹೋಗುವುದಾಗುತ್ತೋ ಏನೋ? ಅವಸರದಲ್ಲಿ ಒಂದು ತೆಂಗಿನಕಾಯನ್ನೂ ತಂದಿಲ್ಲ. ಬರಿಗೈಯಲ್ಲಿ ಅವರ ಹತ್ತಿರ ಹೋಗುವುದೇ? ಅಲ್ಲಿ ನನ್ನ ಗುರುತಿನವರು ಯಾರಾದರೂ ಇರುತ್ತಾರೆಯೋ ಇಲ್ಲವೋ? ನನ್ನಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರ ಹೊಳೆಯಲಿಲ್ಲ. ಮನೆಗೆ ಹಿಂತಿರುಗುವುದು ಒಳ್ಳೆಯದೆಂದುಕೊಂಡೆ. ದಾರಿ ನೋಡಿದೆ. ನಾನಾಗಲೇ ಗೌಡರ ಕೇರಿಯ ಕೊನೆಯನ್ನು ಮುಟ್ಟಿಯಾಗಿತ್ತು. ಇನ್ನೇನು ಎನ್ನಿಸುವಷ್ಟರಲ್ಲಿ ಈಶ್ವರ ದೇವಾಲಯದ ಮುಂದಿದ್ದ ಒಂದು ಹಳ್ಳವನ್ನೂ ದಾಟಿಯಾಗಿತ್ತು. ದೇವಸ್ಥಾನದತ್ತ ಕೈಮುಗಿದು ಮುಂದೆ ಮುಂದೆ ನಡೆದೆ. ದಾರಿಯಲ್ಲಿ ನನಗೆ ಯಾರೂ ಸಿಗಲಿಲ್ಲ.
ಮೇಲಿದ್ದ ವಿಷ್ಣುಮೂರ್ತಿ ದೇವಸ್ಥಾನದ ಕೆಳಗೆ ರಸ್ತೆಯಲ್ಲಿ ತೋರಣ ಕಟ್ಟಿದ್ದರು. ದೇವಸ್ಥಾನಕ್ಕೆ ಏರಿ ಹೋಗುವ ಮೆಟ್ಟಿಲುಗಳ ಕಳೆ ಕಿತ್ತು ಚೊಕ್ಕಟ ಮಾಡಿದ್ದರು. ರಸ್ತೆಯಲ್ಲಿ ನಿಂತು ದೇವಸ್ಥಾನದ ಕಡೆ ನೋಡಿದೆ. ಒಳ ಹೊರಗೆ ಹೋಗಿ ಬರುವವರಾರೂ ಕಾಣಲಿಲ್ಲ. ತೋರಣದ ಬಾಳೆಯ ಕಂಬಕ್ಕೆ ಆತುಕೊಂಡಂತೆ ಹತ್ತಿರ ನಿಂತೆ. ದೇವಾಲಯದ ಒಳಗಿನಿಂದ ಊಟಕ್ಕೆ ಕುಳಿತವರು ಹೇಳಿದ ಶ್ಲೋಕದ ಅನಂತರ ಉಳಿದವರು “ಹರ ಹರ ವiಹಾದೇವ, ಲಕ್ಷ್ಮೀರಮಣ ಗೋವಿಂದ” ಎಂದು ಹೇಳುತ್ತಿದ್ದ ಘೋಷ ಕೇಳಿಬಂತು. ಮತ್ತೆ ದೇವಾಲಯದ ಕಡೆ ನೋಡಿದೆ. ದೇವಾಲಯದ ಒಳಗೆ ಊಟದ ಸಂಭ್ರಮದಲ್ಲಿ ಜನರಿದ್ದರೆ ಸ್ವಾಮಿಗಳು ದೇವಾಲಯದ ಮುಂದುಗಡೆ ಒಂದು ಸಣ್ಣ ಮರದ ಅಡಿಯಲ್ಲಿ ಕಲ್ಲುಹಾಸಿನ ಮೇಲೆ ಕುಳಿತದ್ದು ಕಾಣಿಸಿತು. ಅವರ ಹಿಂಬದಿಗೆ ಬೆಳ್ಳಗಿನ ಬಟ್ಟೆ ಧರಿಸಿದ, ಜುಟ್ಟನ್ನು ಗಂಟಿಕ್ಕಿದ ಇಬ್ಬರು ಪಿಸುಗುಡುತ್ತಾ ನಿಂತಿದ್ದರು. ಕುರುಚಲು ಗಡ್ಡವಿದ್ದ, ಭಸ್ಮಧಾರಣೆ ಮಾಡಿದ್ದ ಸ್ವಾಮಿಗಳು ಕಾವಿ ಬಟ್ಟೆಯನ್ನು ತೊಟ್ಟಿದ್ದರು. ಮುಂಬೆಳಗು ಮೋಡದ ಮರೆಯಿಂದ ತೂರಿಬರುವ ಪ್ರಭೆಯಂತೆ ಅವರ ಭಸ್ಮಲೇಪಿತ ಹಣೆಯಿಂದ ಕಾಂತಿ ಹೊರ ಹೊಮ್ಮುತ್ತಿತ್ತು. ಸ್ವಾಮಿಗಳ ಅತ್ತಿತ್ತ ಬೆಳೆದು ನಿಂತ ಗಿಡಮರಗಳು ಇದ್ದವು. ಅವುಗಳಲ್ಲಿ ಅರಳಿದ ಹೂಗಳನ್ನೂ, ಕಾಯಿಗಳನ್ನೂ ನೋಡುತ್ತಿದ್ದ ಸ್ವಾಮಿಗಳ ಮುಖಮಂಡಲ ಪ್ರಸನ್ನವಾಗಿತ್ತು.
ಸ್ವಾಮಿಗಳ ಹತ್ತಿರ ಹೋಗುವುದೆಂದರೆ ದೇವಾಲಯಕ್ಕೆ ಹೋಗುವ ಮುಂದಿನ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ದೇವಾಲಯಕ್ಕೆ ಹೋಗುವುದೆಂದರೆ ಸ್ವಾಮಿಗಳ ಮುಂದೆಯೇ ಹೋಗಬೇಕು. ನನಗೆ ಯಾವುದಕ್ಕೂ ಧೈರ್ಯ ಬರಲಿಲ್ಲ. ನನ್ನೊಂದಿಗೆ ಇನ್ನೊಬ್ಬರು ಇದ್ದರೆ ಚೆನ್ನಾಗಿತ್ತೆಂದು ತೋರಿತು. ಒಂದು ತೆಂಗಿನ ಕಾಯನ್ನೂ ತಂದಿಲ್ಲವಲ್ಲ ಎಂದು ಮತ್ತೆ ಮತ್ತೆ ಚಡಪಡಿಸುತ್ತಿದ್ದ ಮನಸ್ಸು ಮತ್ತೂ ಗಲಿಬಿಲಿಗೊಂಡಿತು. ಇನ್ನೇನು ಊಟ ಮಾಡಿ ದೇವಾಲಯದಿಂದ ಒಬ್ಬೊಬ್ಬರೇ ಹೊರಗೆ ಬರುತ್ತಾರೆ. ನನ್ನನ್ನು ಇಲ್ಲಿ ಕಂಡು ಸ್ವಾಮಿಗಳ ಆಶೀರ್ವಾದ ತೆಗೆದುಕೊಂಡೆಯಾ ಎಂದು ಕೇಳಬಹುದು, ಏನು ಹೇಳುವುದು? ಅಲ್ಲಿಂದ ಹೊರಟುಹೋಗಲೂ ತೋರದೆ ಅಲ್ಲಿ ನಿಲ್ಲಲೂ ಆರದೆ ಚಡಪಡಿಸಿದೆ.
ಅಳುಕುತ್ತಿದ್ದ ನನಗೆ ತೋರಣದ ಹತ್ತಿರ ನಿಲ್ಲಲಾಗಲಿಲ್ಲ. ಅಲ್ಲಿಂದ ದೂರ ಹೋಗವುದಾದರೂ ಎಲ್ಲಿಗೆ? ದೇವಸ್ಥಾನದಿಂದ ತುಸು ದೂರ ಇಳಿಜಾರಿನಲ್ಲಿ ಮಣ್ಣನ್ನು ತೆಗೆದು ಕೆಂಪಾಗಿದ್ದ ದರೆ ಕಂಡಿತು. ಮೆಟ್ಟಿಲಿಳಿದು ಬರುವ ಜನರಿಂದ ತಪ್ಪಿಸಿಕೊಳ್ಳಲು ನನಗೇ ಅರಿವಿಲ್ಲದಂತೆ ಆ ದರೆಯ ಹತ್ತಿರ ನಡೆದಿದ್ದೆ. ಅಲ್ಲಿ ಎಡಗೈಯನ್ನು ದರೆಗೆ ಆತು ಬಲಗೈಯ ಒಂದು ಕಡ್ಡಿಯಿಂದ ದರೆಯಲ್ಲಿ ಎದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕೆಡಗುತ್ತಾ ನಿಂತೆನು. ತಲೆ ತಗ್ಗಿಸಿದ್ದ ನನಗೆ ಸ್ವಾಮಿಗಳು ಕಾಣುತ್ತಿರಲಿಲ್ಲ. ಆದರೆ ಸ್ವಾಮಿಗಳು ಕುಳಿತಿದ್ದ ಸ್ಥಳದಿಂದ ಅವರಿಗೆ ನಾನು ಕಾಣುತ್ತಿದ್ದೆ. ನನ್ನ ಅರಿವಿಲ್ಲದೆ ಅವರಿಗೆ ಹತ್ತಿರವಾಗಿದ್ದೆ.
ಊಟ ಮಾಡಿ ಮನೆಗೆ ಮರಳುತ್ತಿದ್ದ ಇಬ್ಬರು ನಾನು ಇದ್ದ ದಾರಿಯಲ್ಲಿಯೇ ಬಂದರು. ಅವರಲ್ಲಿ ಒಬ್ಬರು ಕೇಳಿದರು “ಗಜಾನ್ನ ಅಲ್ಲಿ ಎಂತ ಮಾಡ್ತೆ? ಉಂಬೂದಕ್ಕೂ ಬಂದಿಲ್ಲೆ”. “ದರೆ ಕೆರೀತಿದ್ದ ನೋಡು, ಎಂತಕ್ಕೋ ಏನೋ” ಇನ್ನೊಬ್ಬರು ದನಿ ಕೂಡಿಸಿದರು. ಹಾಗೆಯೇ ಮುಂದೆ ನಡೆದರು. ನಾನು ಸಂಕೋಚ ನಾಚಿಕೆಗಳಿಂದ ಕುಗ್ಗಿ ಹೋದೆ. ಇಲ್ಲಿಗೆ ಬಂದಿದ್ದೇ ತಪ್ಪಾಯಿತು ಎನ್ನಿಸಿದರೂ ಏನು ಮಾಡಲೂ ತೋರದೆ ಆ ದರೆಗೇ ಆತು ನಿಂತುಬಿಟ್ಟೆ. “ಮಾಣಿ ಇಲ್ಲಿ ಬಾ” ಎಂದು ಕರೆದಂತಾಯಿತು. ಅತ್ತಿತ್ತ ನೋಡಿದೆ ಯಾರೂ ಕಾಣಲಿಲ್ಲ. ಮೇಲುಗಡೆ ನೋಡಿದಾಗ ಸ್ವಾಮಿಗಳ ಹತ್ತಿರವಿದ್ದ ಒಬ್ಬರು ಕೈಸನ್ನೆಯಿಂದ ಬಾ ಬಾ ಎಂದು ಕರೆಯುತ್ತಿದ್ದರು. ಮೆಟ್ಟಿಲುಗಳನ್ನೇರಿ ಹೋಗಿ ಆ ಮೆಟ್ಟಿಲುಗಳ ಮೇಲೆಯೇ ತುಸು ದೂರದಲ್ಲಿ ನಿಂತೆನು. ಕೈಸನ್ನೆಯಿಂದ ಮತ್ತೂ ಹತ್ತಿರ ಬಾ ಎಂದು ಕರೆದ ಸ್ವಾಮಿಗಳ ಅನತಿದೂರದಲ್ಲಿ ಹೋಗಿ ನಿಂತೆನು. ನನ್ನ ಕೈ ಕಾಲು ತಲೆ ಎಲ್ಲವೂ ಎಂತೆಂತೋ ಅಲ್ಲಾಡುತ್ತಿದ್ದವು.
ಸ್ವಾಮಿಗಳು ಕೈಸನ್ನೆಯಿಂದಲೇ ಮತ್ತೂ ಹತ್ತಿರ ಬಾ ಎಂದು ಪುನಃ ಕರೆದರು. ಸ್ವಾಮಿಗಳು ಕುಳಿತಿದ್ದ ಹಾಸುಬಂಡೆಗೆ ಹತ್ತಿರವಾಗಿ ನಿಂತೆನು. “ನಿನ್ನ ಹೆಸರೆಂತದು?” “ಗಜಾನ್ನ”. “ಗಜಾನನ ಇಲ್ಲಿಗೆ ಎಂತಕ್ಕೆ ಬಂದದ್ದು?” “ನಿಮ್ಮನ್ನು ನೋಡುಲೆ”. “ಉಪನಯನ ಆಯ್ದಾ?” ಸ್ವಾಮಿಗಳ ಪ್ರಶ್ನೆ ನನಗೆ ಅರ್ಥವಾಗಲಿಲ್ಲ. ಅತ್ತಿತ್ತ ನೋಡಿ ತಲೆ ತಗ್ಗಿಸಿದೆ. “ಮುಂಜಿ ಆಗಿದ್ಯಾ?” ಮತ್ತೆ ಸ್ವಾಮಿಗಳು ಕೇಳಿದರು. ಇಲ್ಲವೆಂದು ತಲೆ ಅಲ್ಲಾಡಿಸಿದೆ. ಸ್ವಾಮಿಗಳು ನನ್ನನ್ನು ದೃಷ್ಟಿಸಿ ನೋಡುತ್ತಿದ್ದರು. ನಾನು ತಲೆ ಬಗ್ಗಿಸಿ ನಿಂತಿದ್ದೆ. ಅಲ್ಲಿದ್ದ ಒಬ್ಬರು ಕೈಮುಂದೆ ಮಾಡು ಎಂದರು. ಕೈ ಮುಂದೆ ಮಾಡಿದೆ. ತಕ್ಷಣ ಅಲ್ಲಿದ್ದ ಇನ್ನೊಬ್ಬರು “ಒಂದು ಕೈಯನ್ನಲ್ಲ ಎರಡನ್ನೂ. ಬೊಗಸೆ ಮಾಡು” ಎಂದರು. ಬೊಗಸೆಯೊಡ್ಡಿದೆ. ಪೂಜ್ಯರು ಮಂತ್ರಾಕ್ಷತೆ ಅನುಗ್ರಹಿಸುತ್ತಾ “ಮಾಣಿ, ಮುಂಜಿ ಆಗ್ತು, ಒಳ್ಳೇದಾಗ್ತು” ಎಂದರು.
ಅಲ್ಲಿಯವರೆಗೂ ಮಂಕನಂತೆ ಇದ್ದ ನನಗೆ ಮಂತ್ರಾಕ್ಷತೆಯನ್ನು ಕೈಯಲ್ಲಿ ಹಿಡಿದಾಗ ಪೂಜ್ಯರಿಗೆ ನಮಸ್ಕಾರವನ್ನೂ ಮಾಡಿಲ್ಲ ಎಂದು ಹೊಳೆಯಿತು. ಕೈಯಲ್ಲಿದ್ದ ಮಂತ್ರಾಕ್ಷತೆಯನ್ನು ಕಿಸೆಯಲ್ಲಿ ತೂರುತ್ತಾ ಸ್ವಾಮಿಗಳಿಗೆ ತಲೆಬಾಗಿ ಉದ್ದಂಡ ನಮಸ್ಕರಿಸಿದೆ. ಮತ್ತೆ ಮತ್ತೆ ಅವರನ್ನು ನೋಡುತ್ತಾ ನೋಡುತ್ತಾ ಮೆಟ್ಟಿಲು ಇಳಿದು ಮನೆಗೆ ಬಂದೆ. ಅಕ್ಕ ಕೇಳಿದಳು “ಮಂತಾಕ್ಷತೆ ತಂದ್ಯಾ?” ಕಿಸೆಯಿಂದ ಮಂತ್ರಾಕ್ಷತೆ ತೆಗೆದು ತೋರಿಸಿದೆ. ದೇವರ ಮುಂದೆ ಇಡು ಎಂದಳು. ಗುರುಕೃಪೆ, ದೈವಕೃಪೆಯಿಂದ ನನ್ನ ಹದಿನಾರು ಹದಿನೇಳನೇ ವಯಸ್ಸಿನಲ್ಲಿ ನನಗೆ ಉಪನಯನವಾಯಿತು.
ಅದಾಗಿ ವರ್ಷದಲ್ಲಿಯೇ ಹಡಿನಬಾಳದ ಕನ್ನಡ ಶಾಲೆಯಲ್ಲಿಯೇ ಐದನೆಯ ತರಗತಿ ಆರಂಭವಾಯಿತು. ಪೂಜ್ಯ ನಾರಾಯಣ ಪರಮೇಶ್ವರ ಕಡಲೆ ಎಂಬ ಶಿಕ್ಷಕರು ಮನೆ ಮನೆಗೆ ಅಲೆದಾಡಿ ನನ್ನಂತೆಯೇ ನಾಲ್ಕನೆಯ ತರಗತಿ ಪಾಸಾಗಿ ಮನೆಗೆಲಸ ಮಾಡಿಕೊಂಡಿದ್ದ, ಮೀಸೆ ಮೊಳೆಯುತ್ತಿದ್ದ ಹರೆಯದ ಹುಡುಗರನ್ನೂ ಐದನೆಯ ತರಗತಿಗೆ ಸೇರಿಸಿದರು. ಮುಂದೆ ಓದಬೇಕೆಂಬ ಆಸಕ್ತಿ ನನಗಿಲ್ಲದಿದ್ದರೂ ಅವರ ಆತ್ಮೀಯ ಪ್ರೋತ್ಸಾಹಕ್ಕೆ ತಲೆಬಾಗಿದೆ. ಏಳನೇ ತರಗತಿಯಲ್ಲಿ ಉತ್ತೀರ್ಣನಾದ ನನ್ನನ್ನು ಮಂದಿನ ವಿದ್ಯಾಭ್ಯಾಸಕ್ಕೆ ಕಳುಹಿಸಿರೆಂದು ಒತ್ತಾಯಿಸಲು ಶಾಲೆಯ ಹೆಡ್ ಮಾಸ್ಟರ್ ಒಂದಿಗೆ ಶಿಕ್ಷಕರೆಲ್ಲರೂ ನಮ್ಮ ಮನೆಗೆ ಬಂದರು, ತಂದೆಯನ್ನು ಒಪ್ಪಿಸಿದರು. ಉಂಚೂಡಿಯ ಶ್ರೀಮತಿ ಸುಬ್ಬತ್ತೆ ಮತ್ತು ಶ್ರೀ ತಿಮ್ಮಪ್ಪ ಹೆಗಡೆ ಶ್ರೀಧರ ಸ್ವಾಮಿಗಳ ಭಕ್ತರಾಗಿದ್ದು ಅವರ ಆಶೀರ್ವಾದದಿಂದ ಮಗನನ್ನು ಪಡೆದವರು. ಅವರ ಮನೆಯಲ್ಲಿ ಮಗನಂತೆ ಇದ್ದು ಅರೆ ಅಂಗಡಿಯ ಹೈಸ್ಕೂಲಿಗೆ ಹೋಗತೊಡಗಿದೆ, ಎಸ್.ಎಸ್.ಎಲ್.ಸಿ.ಯಲ್ಲಿ ತೇರ್ಗಡೆಯಾದೆ.
ಅನಂತರ ಮುಂದಿನ ಯೋಚನೆಯಿಲ್ಲದೆ ಮನೆಯಲ್ಲಿಯೇ ಇದ್ದೆನು. ಒಂದು ದಿನ ಖರ್ವಾ ಹೈಸ್ಕೂಲಿನ ಹೆಡ್ ಮಾಸ್ಟರ್ ಕೆ.ಎಸ್. ರಾಮರಾವ್ ನಮ್ಮ ಮನೆಗೆ ಬಂದು ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಓದಲು ಸೂಚಿಸಿದರು. ಶಿವಮೊಗ್ಗೆಯ ಹತ್ತಿರದ ಭದ್ರಾವತಿಯಲ್ಲಿ ಇದ್ದ ತಮ್ಮ ಬಂಧುವೊಬ್ಬರಿಗೆ ಪತ್ರವೊಂದನ್ನು ಕೊಟ್ಟು ನನಗೆ ಎಲ್ಲಾ ಅನುಕೂಲಗಳೂ ಆಗುವುದೆಂದು ಪ್ರೋತ್ಸಾಹಿಸಿದರು. ಸಹ್ಯಾದ್ರಿ ಕಾಲೇಜಿನಲ್ಲಿ ಪೂಜ್ಯ ಪ್ರೊಫೆಸರ್ ಜಿ.ಎಸ್. ಸಿದ್ಧಲಿಂಗಯ್ಯನವರ ಪರಿಚಯವಾಯಿತು. ಕಾರಣಾಂತರದಿಂದ ಭದ್ರಾವತಿಯನ್ನು ಬಿಟ್ಟ ನಾನು ಕೆಲಕಾಲ ಅವರ ಮನೆಯಲ್ಲಿದ್ದು ಪಿ.ಯು.ಸಿ. ಮುಗಿಸಿದೆ. ಅವರ ಪ್ರೋತ್ಸಾಹದಿಂದ ಬಿ.ಎ. ತರಗತಿಗೂ ಸೇರಿದೆ. ಕಂಬದ ಕೋಣೆಯ ಕೆ. ವೆಂಕಟರಮಣ ಭಟ್ಟರು ಮತ್ತು ತೆಕ್ಕಟ್ಟೆಯ ಮಂಜುನಾಥ ಪುರಾಣಿಕರು ಪೂರ್ವಾಪರ ಪರಿಚಯವಿಲ್ಲದ ನನ್ನ ಅಶನ ವಸನಕ್ಕೆ ನೆರವಾದರು.
ಕನ್ನಡ ಎಂ.ಎ. ಪದವಿಯನ್ನು ಮಾನಸ ಗಂಗೋತ್ರಿಯಲ್ಲಿ ಪಡೆಯಲು ಪ್ರೊಫೆಸರ್ ದೇ.ಜವರೇಗೌಡರು, ಡಾ. ಹೆಚ್. ತಿಪ್ಪೇರುದ್ರಸ್ವಾಮಿಯವರು, ಜಾನಪದ ತಜ್ಞ ಡಾ. ತಿಪ್ಪೇಸ್ವಾಮಿಯವರು ನನ್ನ ನೆರವಿಗೆ ನಿಂತರು. ಜೆ. ಎಸ್. ಎಸ್. ಹಾಸ್ಟೆಲಿನಲ್ಲಿ ಊಟದ ಅನುಕೂಲತೆಯನ್ನು ಒದಗಿಸಿಕೊಟ್ಟರು. ಸ್ಕಾಲರ್ ಶಿಪ್ ಕೊಟ್ಟರು. ಎಂ.ಎ. ಪದವಿಯ ಫಲಿತಾಂಶ ಬರುವ ಪೂರ್ವದಲ್ಲಿಯೇ ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾಸಂಸ್ಥೆಯ ಎಂ.ಬಿ.ಆರ್. ಪ್ರಥಮ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗೆಂದು ಡಾ. ತಿಪ್ಪೇರುದ್ರಸ್ವಾಮಿಯವರು ನನ್ನನ್ನು ಕಳುಹಿಸಿಕೊಟ್ಟರು. ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾಸಂಸ್ಥೆಯ ಪೋಷಕರೂ, ಮಾರ್ಗದರ್ಶಕರೂ ಆದ ಹಿರಿಯ ಜಗದ್ಗುರುಗಳಾದ ಪೂಜ್ಯ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ 14-6-1970ರಂದು ಸಿರಿಗೆರೆಯ ಕಾಲೇಜಿನಲ್ಲಿ ಪಾಠ ಪ್ರವಚನ ಪ್ರಾರಂಭಿಸಿದೆ. 26-6-1970ರಂದು ಎಂ.ಎ. ಫಲಿತಾಂಶ ಬಂದಿತು. 27-6-1970ರಂದು ಪರ್ಮನೆಂಟ್ ಕನ್ನಡ ಅಧ್ಯಾಪಕನೆಂದು ನೇಮಕಾತಿ ಪತ್ರ ಪಡೆದೆ. ಒಳ್ಳೆಯ ರೀತಿಯ ಬದುಕು ಪಲ್ಲವಿಸಿತು.
ಹಿರಿಯರ ಮುಂದೆ ಬಾಗಿ ನಮಸ್ಕರಿಸುವ, ಮಂತ್ರಾಕ್ಷತೆಗೆ ಬೊಗಸೆಯೊಡ್ಡುವ, ಗುರುಕಾಣಿಕೆ ಇಡುವ ಸಾಮಾನ್ಯ ಅರಿವೂ ಇಲ್ಲದ ಅತಿ ಸಾಮಾನ್ಯ ಆಗಿದ್ದವನು ನಾನು. ಮಳೆಗಾಲದ ಜಡಿಮಳೆಗೆ ನೀರಿನ ಬುಗ್ಗೆ ಚಿಮ್ಮುವ ಕೆಂಪನೆಯ ದರೆಗೆ ಮಂದನಂತೆ ಒರಗಿ ನಿಂತಿದ್ದ ನನ್ನನ್ನು ಬಾ ಎಂದು ಹತ್ತಿರ ಕರೆದು ಅನುಗ್ರಹಿಸಿದ ಪೂಜ್ಯ ಶ್ರೀಧರ ಸ್ವಾಮಿಗಳ ಕಾರುಣ್ಯ ಜಲ ನನ್ನ ಬದುಕಿನ ದಿಕ್ಕನ್ನು ಬದಲಾಯಿಸಿ ತನ್ನ ಕರುಣೆಯ ಸ್ರೋತದಲ್ಲಿ ತೇಲಾಡಿಸಿತು. ನನ್ನ ಜೀವನ ಮಾರ್ಗದ ಪ್ರತಿ ತಿರುವಿನಲ್ಲಿಯೂ ಸದ್ಗುರುವಿನ ಆಶೀರ್ವಚನ ಅವ್ಯಕ್ತ ವ್ಯಕ್ತ ಶಕ್ತಿಗಳ ಸಾಲು ದೀಪದಂತೆ ಬೆಳಗಿದುದು ಅಚ್ಚರಿಯ, ಅವಿಸ್ಮರಣೀಯ ಪರಮ ಭಾಗ್ಯದ ಸಂಗತಿ.
Commenti