top of page

ಕ್ಯಾದಿಗಿ ಬನದಾಗಿನ ಸ್ತ್ರೀ'ಗೀತಾ'

ಕನ್ನಡದ ಬರಹಗಾರರ ಮುಂಚೂಣಿ ಸಾಲಲ್ಲಿ ಸ್ಥಾನ ಪಡೆದ ಗೀತಾ ನಾಗಭೂಷಣ ಅವರ ವ್ಯಕ್ತಿಗತ ಪರಿಚಯ ನನಗೆ ನೇರವಾಗಿ ಆಗಿಲ್ಲದಿದ್ದರೂ ಗುಲ್ಬರ್ಗದ ಅಪ್ಪಟ ಗ್ರಾಮೀಣ ಹಿನ್ನಲೆಯ ಅವರ ಕತೆ ಹಾಗೂ ಕಾದಂಬರಿಗಳ ಪಾತ್ರ ವೈವಿದ್ಯದ ಮೂಲಕವೇ ಗೀತಾ ನಾಗಭೂಷಣ ನನಗೆ ಎಂದಿನಿ೦ದಲೂ ಚಿರಪರಿಚಿತರು. ಅವರ ನೀಲಗಂಗಾ ಎಂಬ ಕಾದಂಬರಿಯೊ೦ದು ಲಂಕೇಶ್ ಪತ್ರಿಕೆಯಲ್ಲಿ ದಾರಾವಾಹಿಯಾಗಿ ಹರಿದು ಬಂದಾಗಿನಿ೦ದ ನಾನವರ ಬರಹಗಳ ಸಹೃದಯೀ ಓದುಗಳು. ಮಯೂರ ತರಂಗ ಪ್ರಜಾವಾಣಿ ಪತ್ರಿಕೆಗಳಲ್ಲಿ ಆಗೆಲ್ಲ ಪ್ರಕಟಗೊಳ್ಳುತ್ತಿದ್ದ ಅವರ 'ಹಸಿಮಾಂಸ ಹದ್ದುಗಳು, ಕಾಗೆ ಮುಟ್ಟಿತು, ಮಾಪುರ ತಾಯಿ ಮುಂತಾದ ಕಾದಂಬರಿಗಳಲ್ಲಿ ದಲಿತ ಶೋಷಿತ ಹೆಣ್ಣುಮಕ್ಕಳೇ ಕಥಾ ವಸ್ತುಗಳಾಗಿರುತ್ತಿದ್ದರು. 'ಬದುಕು' ಕಾದಂಬರಿಯ೦ತೂ ಇಡೀ ಒಂದು ಜನಾಂಗದ ಕತೆ. ಇಲ್ಲಿ ಎಲ್ಲರೂ ಪ್ರಮುಖ ಪಾತ್ರದಾರಿಗಳೇ. ಹಾಗೆ ಸದೃಡವಾಗಿ ಮೂಡಿ ಬಂದ ಕಾಶವ್ವನ ಪಾತ್ರವೊಂದು ಸಂಪೂರ್ಣ ದಲಿತ ಸ್ತ್ರೀ  ಲೋಕಕ್ಕೇ ಕನ್ನಡಿ ಹಿಡಿದಂತಿದೆ. ದಲಿತರ ಜೀವನ ದೃಷ್ಟಿ ಮತ್ತು ಜೀವನ ಪ್ರೀತಿಗಳೆರಡೂ ಇಲ್ಲಿ ಹದವಾಗಿ ಸಂಗಮಿಸಿವೆ. ಕಾಶವ್ವನ ಕೆಚ್ಚು ಮತ್ತು ರೊಚ್ಚು ಸದಾ ನಮ್ಮೆಲ್ಲರನ್ನು ಕಾಡುವಂಥದು.


ಗೀತಾರಷ್ಟು ಸಾಂದ್ರವಾಗಿ ದಲಿತ ಬದುಕಿನ ಅನುಭವಗಳನ್ನು ಗದ್ಯದಲ್ಲಿ ಕಟ್ಟಿ ಕೊಟ್ಟವರು, ದೇವನೂರು ಮಹಾದೇವ ಒಬ್ಬರು ಬಿಟ್ಟರೆ ಈ ಕ್ಷಣದಲ್ಲಿ ಇನ್ನೊಬ್ಬ ಲೇಖಕ ನೆನಪಿಗೆ ಬರುತ್ತಿಲ್ಲ. ಗೀತಾ ತಾವು ಕಂಡು ಅನುಭವಿಸಿದ್ದನ್ನು ಮಾತ್ರ ಕತೆಯಾಗಿಸಿದ್ದಾರೆಂಬುದು ಅವರ ಬರವಣಿಗೆಯ ತೀವ್ರತೆಯಲ್ಲೇ ಗಮನಿಸಬಹುದು. ಗುಲ್ಬರ್ಗದ ಬಿರು ಬೇಸಿಗೆ ಬರಗಾಲದ ಚಿತ್ರಣಗಳು ಮನ ಮಿಡಿಯುವಂಥವು. ಅವರ ಒಟ್ಟೂ ಬರಹಗಳಲ್ಲಿ ಎದ್ದು ಕಾಣುವುದು ಹಟ್ಟಿಯ ಹಾಗೂ ಅಲ್ಲಿಯ ಅಮಾಯಕ ಹೆಂಗಸರ ಮೇಲಾಗುತ್ತಿರುವ ಹಿಂಸೆಗಳ ಅವಲೋಕನ. ಅವರದೇ ಆದ ವಿಶಿಷ್ಟ ಭಾಷಾ ಶೈಲಿಯಲ್ಲಿ ಅಲ್ಲಿಯ ಕ್ಷಣಕ್ಷಣದ ತಲ್ಲಣ ಆತಂಕಗಳು ನಮ್ಮೆದುರು ತೆರೆದುಕೊಳ್ಳುವಾಗ ಅದು ಕತೆಯಷ್ಟೇ ಆಗಿ ನಮ್ಮೊಳಗೆ ಇಳಿಯದೇ ಜೀವನದ ಅನೇಕ ವಾಸ್ತವಿಕ ಮಜಲುಗಳನ್ನೂ ಕಾಣಿಸುತ್ತ ಸಾಗುತ್ತದೆ.


ಸ್ತ್ರೀಯರು ಸಿಡಿದೇಳುವ ದೃಷ್ಟಿಯಿಂದ ಪುರುಷ ಪ್ರಧಾನ ವ್ಯವಸ್ಥೆಯನ್ನು ಉಗ್ರವಾಗಿ ಟೀಕಿಸುವ ಗೀತಾ ಅವರದು ಬಂಡಾಯದ ಮಾದರಿಯಾದರೂ ಅವರು ಸೃಷ್ಠಿಸಿದ ಮಹಿಳೆಯರು, ಬದುಕುವ ತಂತಮ್ಮ ಮಾರ್ಗಗಳನ್ನು ಧೈರ್ಯದಿಂದ ಹುಡುಕಿಕೊಳ್ಳುವ ಗಟ್ಟಿಗಿತ್ತಿಯರೇ ಆಗಿರುತ್ತಾರೆ. ಸಾಂಸ್ಕೃತಿಕ ಸಾಮಾಜಿಕ ಕಾರಣದಿಂದ ಮಹಿಳೆಯರು ಶೋಷಣೆಗೆ ಗುರಿಯಾದವರೆಂಬುದನ್ನು ಮನಗಾಣಿಸುತ್ತ ಅವರು ಸ್ತ್ರೀ ವಾದವನ್ನು ಮೀರಿಯೂ ಒಂದು ಜೀವನ ಕ್ರಮದ ವಿನ್ಯಾಸವನ್ನು ಹೇಳುತ್ತಾರೆ. ಚಿಂಚನಸೂರಲ್ಲಿ ಮಾಪುರ ತಾಯಿಯ ಜಾತ್ರೆಯಲ್ಲಿ ನಡೆವ ಬೆತ್ತಲೆ ಮೆರವಣಿಗೆ, ಸುಂದರ ದಲಿತ ಯುವತಿಯರನ್ನು ಮೋಸದಿಂದ ಜೋಗತಿಯಾಗಿಸಿ ನೀಡುವ ದೈಹಿಕ ಮಾನಸಿಕ ಹಿಂಸೆಗಳನ್ನು ಕರುಳು ಹಿಂಡುವ ಹಾಗೆ ಗೀತಾ ಚಿತ್ರಿಸುತ್ತಾರೆ. ಇವತ್ತಿನ ಆಧುನಿಕತೆಯ ಅಸ್ತವ್ಯಸ್ತ ಜೀವನ ಶೈಲಿಯನ್ನು ಕಡೆಗಣ್ಣಿನಿಂದ ನೋಡುತ್ತಲೇ ತನ್ನದಾಗಿಸಿಕೊಳ್ಳುವ ಛಲ ಮತ್ತು ಆತ್ಮ ವಿಶ್ವಾಸ ಇವರ ಕಥಾನಕಗಳಿಗಿವೆ.


ಗುಲ್ಬರ್ಗಾ ಭಾಗದ ಜವಾರಿ ಕನ್ನಡ ನಾವು ಮೊಟ್ಟ ಮೊದಲು ಓದಿದ್ದು ಗೀತಾರವರ ಕಾದಂಬರಿಗಳಲ್ಲೇ. ನನಗಿಷ್ಟವಾದ ಅವರ ಕತೆಗಳಲ್ಲಿ ಮುಖ್ಯವಾದವುಗಳೆಂದರೆ, ಗೂಡಿನೊಳಗಿನ ಗುಟ್ಟು, ಚಕ್ಕರ ಕಟ್ಟಾ ಚೌಕ, ಹೊಸ ಹಾದಿ, ಬಂಜೆOಬ ಶಬುದ ಮುಂತಾದವು. ರೊಟ್ಟಿ ಚಂದವ್ವನ ಪಾತ್ರದಲ್ಲಿ ಬರುವ ದಲಿತ ಸಂವೇದನೆ ಕತೆಯ ಆಳವನ್ನು ಹೆಚ್ಚಿಸುವಂತಿದೆ. ಇಲ್ಲಿ ಬರುವ ಮಾದರ ಕೇರಿ, ಶಂಭುಲಿ0ಗ ಮಠ, ಹಣಮಂದೇವರ ಗುಡಿಕಟ್ಟಿ, ಮುಡಚೆಟ್ಟ, ಈಬತ್ತಿ, ದಗದಾ, ಸೇಂದಿ ದುಖಾಣ, ಬಗೋಣಿ ಗಂಗಾಳ, ಬಸ್ತಿ. ಇಂಥ ಹಲವಾರು ಪದಗಳು ಪ್ರಾದೇಶಿಕ ಸೊಗಡನ್ನು ಪ್ರತಿಬಿಂಬಿಸುವದಲ್ಲದೇ ಮಾಮಲಾ, ಬೇಚೈನು, ಚೋಬೀಸ್ ಗಂಟೆಯ೦ತಹ ಉರ್ದು ಪದಗಳ ಬಳಕೆಯು ನೆಲದ ಚರಿತ್ರೆಯನ್ನು ನೆನಪಿಸುತ್ತವೆ. ಇವರ ಕತೆಗಳಲ್ಲಿನ ಹೆಣ್ಣು ಗಂಡಿನ ನಡುವಿನ ಸಂಬ೦ಧದ ಎಳೆಗಳು ನಿಸರ್ಗದ ಜಿಜ್ಞಾಸೆಗೆ ಬಿಟ್ಟದ್ದು. ಐನಾರ ಮುತ್ತ್ಯಾ  ಹಾಗೂ ಮಾದರ ಗಿನ್ಯಾನಿ ಆಗಿರಬಹುದು, ಸನಾದಿ ಅಪ್ಪಣ್ಣ ಹಾಗೂ ಐನಾರ ಸಾಂತಿ ಆಗಿರಬಹುದು, ಮನೋಹರ ಮತ್ತು ಚಂದ್ರಿಯರ ಪ್ರಣಯ ಆಗಿರಬಹುದು, ರುದ್ರ ಗೌಡನ ತ್ವಾಟದ ಮನೆಯಾಗ ರಾಜಾರೋಷವಾಗೇ ಇರುವ ಚೆನ್ನಿ ಆಗಿರಬಹುದು, ಮಿಸ್ತ್ರೀ  ಮತ್ತು ನಿಂಗವ್ವನ ಸೆಳೆತ ಆಗಿರಬಹುದು, ಈ ಎಲ್ಲರ ನಡುವೆ ಹರಡಿಕೊಂಡಿರುವ ಒಂದು ಆತ್ಯಂತಿಕ ಪೊರೆ, ಸಮಾಜದ ಎಲ್ಲೆಗಳನ್ನೂ ಮೀರಿ ನಿಂತು ಸಂಬ೦ಧಗಳ ವಿಸ್ತಾರವನ್ನು ಕತೆಯ ನೆಲೆಯಲ್ಲಿ ಗಟ್ಟಿಗೊಳಿಸುವಂಥದು.


'ಒಲಿಮ್ಯಾಲಿಟ್ಟ ಕಡಾಯಿಯಲ್ಲಿಯ ಎಣ್ಣಿ ಹಂಗ ಕೊತ ಕೊತನೆ ಕುದೀಲಿಕ್ಕತ್ತೀನಿ' ಎಂಬ ಮಾತು ಗೀತಾ ಅವರ ಕತೆಗಳಲ್ಲಿ ಮೇಲಿಂದ ಮೇಲೆ ಹೊಸ ರೂಪ ತೊಟ್ಟು ಬರುತ್ತದೆ. ಈ ನುಡಿಗಟ್ಟೇ ಗೀತಾ ಅವರ ಒಟ್ಟೂ ಬರಹದ ಜೀವದನಿಯಂತೆ ನನಗನಿಸುತ್ತಿದೆ. ಇವರು ಜೀವಕೊಟ್ಟ ಎಲ್ಲ ಪಾತ್ರಗಳು ಹಾಗೂ ಸ್ವತಃ ಲೇಖಕಿ ಕೂಡ ಒಂದಿಲ್ಲೊOದು ಸಂದರ್ಭಗಳಲ್ಲಿ ಇಂಥ ಸಂಕಟ ಅವಮಾನ ನೋವುಗಳನ್ನು ಅನುಭವಿಸಿದವರೇ ಅನಿಸುತ್ತದೆ. ಗೀತಾ ಅವರು ಕೂಡ ಅಂಥದ್ದೊ೦ದು ಹಿಂದುಳಿದ ಪ್ರದೇಶ ಹಾಗೂ ಶೋಷಿತ ವರ್ಗದಿಂದಲೇ ಎದ್ದು ನಿಂತು, ಇಂದು ಮಹಿಳಾ ಲೋಕವನ್ನು ಪ್ರತಿನಿಧಿಸುತ್ತಿರುವವರು. ತಮ್ಮ ವ್ಯಕ್ತಿತ್ವದಲ್ಲೇ ಶಿಸ್ತು ಸಂಯಮ ಹಾಗೂ ಅಪೂರ್ವ ಸೃಜನಶೀಲತೆ ತುಂಬಿಕೊ೦ಡು ಕನ್ನಡ ಸಾಹಿತ್ಯದ ಕ್ಯಾದಿಗಿ ಬನದಾಗ ಕತೆಯಾಗಿ ನಿಂತ ಗೀತಾ ಅವರಿಗೆ, ಈವರೆಗೆ ಹರಿದು ಬಂದ ಪುರಸ್ಕಾರಗಳೆಲ್ಲ ತಾವಾಗಿಯೇ ಒದಗಿ ಬಂದದ್ದು. ನಂತರ ಗದುಗಿನ ವೀರನಾರಾಯಣನ ಸನ್ನಧಿಯಲ್ಲಿ ಸಮ್ಮೇಳನಾಧ್ಯಕ್ಷೆಯಾಗುವ ಅವಕಾಶ ಈ ಹಿರಿಯ ಲೇಖಕಿಗೆ ದೊರೆತಾಗ ಮುಖತಃ ಭೇಟಿ ಮಾಡಿ ಮಾತಾಡಲು ಸಿಕ್ಕಿದ್ದರು. ಅವರ ಕತೆ-ಕಾದಂಬರಿಗಳೊ೦ದಿಗೆ ಗೀತಾ ನಾಗಭೂಷಣ ಸದಾ ನಮ್ಮೊಂದಿಗಿರುತ್ತಾರೆ.


-ಸುನ೦ದಾ ಕಡಮೆ


ಕನ್ನಡ ನಾಡು ಕಂಡ ಅಪರೂಪದ ಬಂಡಾಯ ಮನೋಭಾವನೆಯ ಬರಹಗಾರ್ತಿ, ಹಸಿಮಾಂಸ ಮತ್ತು ರಣ ಹದ್ದುಗಳು ಕಾದಂಬರಿಯ ಕರ್ತೃ ,ಸ್ತ್ರೀವಾದಿ ಚಿಂತನೆಯನ್ನು ಬಿತ್ತರಿಸಿದ ಗೀತಾ ನಾಗಭೂಷಣ ನಮ್ಮನ್ನು ಅಗಲಿದ್ದಾರೆ.ಅವರನ್ನು ಕುರಿತು ನಾಡಿನ ಹೆಸರಾಂತ ಲೇಖಕಿ ಹಾಗು ನಮ್ಮ ಆಲೋಚನೆ.ಕಾಂ ಪತ್ರಿಕೆಯ ಹಿತೈಷಿ ಸುನಂದಾ ಕಡಮೆ ಅವರು ಬರೆದ ಲೇಖನ ನಿಮ್ಮ ಓದಿಗಾಗಿ. ಸಂಪಾದಕರು.154 views0 comments

Comments


bottom of page