ಹೋಳಿ ಎರಚುತ್ತಾರೆ ಅವರು
ಕಾಮನ ಹುಣ್ಣಿಮೆಯಲ್ಲಿ
ಹಾಲು ಉಕ್ಕಿದ ಹಾಗೆ ಚಂದ್ರ
ಚೆಲ್ಲುವರಿದಿದ್ದಾನೆ ಬೀದಿಯಲ್ಲಿ
ಎತ್ತರ ಹದಿನಾರು ಬಿಲ್ಲು
ತಿದ್ದಿ ತೀಡಿದ ಹುಬ್ಬು
ಕಣ್ಣು ಕುದಿಯುವ ಕುಲುಮೆ
ಗುಂಪು ಕೂಗುತ್ತಿದೆ ಉಘೇ ಉಘೇ
ಬಣ್ಣ ಬೀರುತ್ತಿದ್ದಾರೆ ಹೃದಯದಲ್ಲಿ
ಉರಿಯುತ್ತಿದೆ ಹರೆಯ ರಸ್ತೆಯಲ್ಲಿ
ಕಿಟಿಕಿ ಕಣ್ಣುಗಳಲ್ಲಿ ಸ್ಫುರಿಸುತ್ತಿರುವ ಕಣ್ಣುಗಳು
ಧುಮುಗುಡುವ ರಾಗಗಳು
ಎದೆಯ ಓಕುಳಿಯಲ್ಲಿ
ಮೌನದಾರ್ಭಟಗಳು
ಕೆಡುಗೆಂಪು ಬೆಂಕಿ
ನುಗ್ಗುತ್ತದೆ ಪ್ರತೀ ಮನೆಗೆ
ಪಿಸುಗುಡುತ್ತದೆ ರಾತ್ರಿ
ಮಾತು ಹೂತಂತೆ ಹೊಕ್ಕುಳಲ್ಲಿ
ಮೆರೆಯುತ್ತಾಳೆ ರತಿ
ಏಳುತ್ತಾನೆ ಶಿವ
ಹೇಳುತ್ತಾನೆ ಚಂದ್ರ,
ಪ್ರಿಯೆ ಬಾರೇ...
ಹಾಲು ಬೆಳದಿಂಗಳಿನಲ್ಲಿ
ರಂಗುರಂಗಿನ ಹೋಳಿ
ಎದೆ ಬಗೆದು
ಚಂದ್ರ ಕರೆಯುತ್ತಾನೆ,
ಪ್ರಿಯೆ ಬಾರೇ...
-ಡಾ. ವಸಂತಕುಮಾರ ಪೆರ್ಲ.
Bình luận