top of page

ಕಾನೂನು ಕುಸುಮ : 2

ಗ್ರಾಹಕರ ಹಿತರಕ್ಷಣ ಅಧಿನಿಯಮ 1986...


ಶೋಷಣೆ ಅನ್ನುವಂತದ್ದು ಕಾಲಕಾಲಕ್ಕೆ ಒಂದಲ್ಲ ಒಂದು ರೀತಿಯಲ್ಲಿ ನಡೆದು ಬಂದಿದ್ದು ಅದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅದೇ ರೀತಿ ಯಾವುದೇ ಸರಕಿನ ಉತ್ಪಾದಕರು, ವಿತರಕರು, ವ್ಯಾಪಾರಸ್ಥರು, ಗ್ರಾಹಕನಿಗೆ ಸೇವೆಯನ್ನು ಒದಗಿಸುವ ವಿವಿಧ ಸಂಸ್ಥೆಗಳು, ಗ್ರಾಹಕನ ಶೋಷಣೆ ಮಾಡುತ್ತ ಬಂದಿರುವುದು ಸರ್ವವಿಧಿತ. ಈ ಶೋಷಣೆಯ ವಿರುದ್ಧ ಗ್ರಾಹಕನನ್ನು ಸಂರಕ್ಷಿಸುವ ಉದ್ದೇಶದಿಂದ ಗ್ರಾಹಕರ ಹಿತರಕ್ಷಣ ಅಧಿನಿಯಮ 1986 ಎನ್ನುವ ಕಾನೂನನ್ನು ಜಾರಿಗೆ ತರಲಾಗಿದೆ. ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತು ಪಡಿಸಿ ಭಾರತಾದ್ಯಂತ 15-4-1987 ರಿಂದ ಜಾರಿಗೆ ಬಂದಿರುತ್ತದೆ.

ಗ್ರಾಹಕರ ವಿವಾದಗಳನ್ನು ಇತ್ಯರ್ಥ ಗೊಳಿಸಲಿಕ್ಕಾಗಿ ಈ ಅಧಿನಿಯಮದಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಗ್ರಾಹಕರ ವಿವಾದಗಳ ಪರಿಹಾರ ವೇದಿಕೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ಗಳನ್ನು ರಚಿಸಲಾಗಿದೆ. ಶೋಷಣೆಗೊಳ ಗಾದ ಗ್ರಾಹಕನು ಇವುಗಳಿಗೆ ದೂರು ಸಲ್ಲಿಸಿ ಪರಿಹಾರವನ್ನು ಪಡೆಯುವ ಹಕ್ಕು ಹೊಂದಿರುತ್ತಾನೆ.

ಹಾಗಾದರೆ ಗ್ರಾಹಕ ಎಂದರೆ ಯಾರು ಅನ್ನುವದನ್ನು ಮೊದಲು ತಿಳಿಯಬೇಕು.

1)ಪ್ರತಿಫಲಕ್ಕೆ ಅಂದರೆ (ಬೆಲೆ ತೆತ್ತು )ಯಾವುದೇ ಸರಕನ್ನು ಖರೀದಿಸಿದ ವ್ಯಕ್ತಿ ಹಾಗೂ ಖರೀದಿಸಲ್ಪಟ್ಟ ಸರಕನ್ನು ಖರೀದಿದಾರನ ಅನುಮತಿಯ ಮೇರೆಗೆ ಉಪಯೋಗಿಸುವ ವ್ಯಕ್ತಿ :ಅಥವಾ

2)ಪ್ರತಿಫಲಕ್ಕೆ (ಬೆಲೆ ತೆತ್ತು )ಯಾವುದೇ ಸೇವೆಯನ್ನು ಬಾಡಿಗೆಗೆ ಪಡೆದ ವ್ಯಕ್ತಿ ಹಾಗೂ ಆ ಸೇವೆಯ ಫಲಾನುಭವಿ:

ಇಂತವರನ್ನು "ಗ್ರಾಹಕ"ಎಂದು ವ್ಯಾಖ್ಯಾನಿಸಲಾಗಿದೆ.


ಸರಕನ್ನು ಮರು ಮಾರಾಟಕ್ಕೆ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಪಡೆಯುವ ವ್ಯಕ್ತಿ ಅಥವಾ ಸೇವೆಯನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಪಡೆದ ವ್ಯಕ್ತಿ "ಗ್ರಾಹಕ "ಎಂದೆನಿಸಿಕೊಳ್ಳುವದಿಲ್ಲ. ಆದರೆ ವ್ಯಕ್ತಿಯೊಬ್ಬ ತನ್ನ ಜೆವನೋಪಾಯಕ್ಕಾಗಿ ಕೈಗೊಂಡ ಸ್ವ ಉದ್ಯೋಗದ ಉಪಯೋಗಕ್ಕಾಗಿ ವಸ್ತುವನ್ನು ಕೊಂಡುಕೊಂಡಲ್ಲಿ ಅಥವಾ ಸೇವೆಯನ್ನು ಬಾಡಿಗೆಗೆ ಪಡೆದುಕೊಂಡಲ್ಲಿ ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ಕೊಂಡದ್ದು ಅಥವಾ ಬಾಡಿಗೆಗೆ ಪಡೆದಿದ್ದು ಎಂದು ಪರಿಗಣಿಸಲಾಗುವುದಿಲ್ಲ.

ಈ ನಿಯಮದ ಪ್ರಕಾರ "ವ್ಯಕ್ತಿ"ಎಂದರೆ :-

1.ನೋಂದಾಯಿತ ಅಥವಾ ನೋಂದಾಯಿತವಲ್ಲದ ಒಂದು ವರ್ತಕಮಂಡಳಿ:

2.ಒಂದು ಹಿಂದೂ ಅವಿಭಕ್ತ ಕುಟುಂಬ :

3.ಒಂದು ಸಹಕಾರಿ ಸಂಘ :

4.ಸಹಕಾರಿ ಸಂಘಗಳ ನೋಂದಣಿ ಅಧಿನಿಯ 1860 ರಡಿಯಲ್ಲಿ ನೋಂದಾಯಿತವಲ್ಲದ ಯಾವುದೇ ಒಂದು ಸಂಘ.ಇವುಗಳನ್ನು ಒಳಗೊಂಡಿರುತ್ತದೆ.

ಆದರೆ ಸರಕಿನ ಅಥವಾ ಸೇವೆಯ ಪ್ರತಿಫಲವನ್ನು ಗ್ರಾಹಕನು ಒಮ್ಮೆಲೇ ಕೊಟ್ಟಿರಬೇಕಾಗಿಲ್ಲ. ಅದನ್ನು ಆತ ಭಾಗಶಃ ಕೊಟ್ಟು ಉಳಿದದ್ದನ್ನು ನಂತರ ಕೊಡುವ ಅಥವಾ ಕಂತುಗಳ ಮೇಲೆ ಕೊಡುವ ಒಪ್ಪಂದದ ಮೇರೆಗೆ ಸರಕನ್ನು ಅಥವಾ ಸೇವೆಯನ್ನು ಪಡೆದಿರಬಹುದು. ಆಗಲೂ ಆತ ಗ್ರಾಹಕನೇ ಆಗುತ್ತಾನೆ.


ಅದೇರೀತಿ "ಸೇವೆ"ಎಂದರೆ, ಲೇವಾದೇವಿ, ಹಣಕಾಸು, ವಿಮೆ, ವಿದ್ಯುತ್, ಅಥವಾ ಬೇರಾವುದೇ ಶಕ್ತಿ ಸರಬರಾಜು, ಊಟ, ವಸತಿ, ಗ್ರಹ ನಿರ್ಮಾಣ ಮನೋರಂಜನೆ, ವಿನೋ ದಾವಳಿ, ಸುದ್ದಿ ಅಥವಾ ಯಾವುದೇ ರೂಪದಲ್ಲಿಯ ಸೇವೆ. ಆದರೆ ಇಂತಹ ಸೇವೆ ಪುಕ್ಕಟೆಯಾಗಿ ಅಥವಾ ವಯಕ್ತಿಕ ಒಪ್ಪಂದದ ಮೇರೆಗೆ ಪಡೆದದ್ದಾಗಿರಬಾರದು.

ಇನ್ನು ಗ್ರಾಹಕ ಯಾವ ಸಂದರ್ಭ ದಲ್ಲಿ ದೂರನ್ನು ಸಲ್ಲಿಸಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯ.

1.ಯಾವುದೇ ವ್ಯಾಪಾರಿಯು ಅನುಸರಿಸಿದ ಅನುಚಿತ ವ್ಯಾಪಾರಿ ಪದ್ದತಿಯ ಪರಿಣಾಮವಾಗಿ -

A)ಗ್ರಾಹಕನು ನಷ್ಟ ಅಥವಾ ಹಾನಿಗೋಳಗಾಗಿದ್ದರೆ :ಅಥವಾ

B)ಗ್ರಾಹಕನು ಪಡೆದುಕೊಂಡ ಸರಕು ಒಂದು ಅಥವಾ ಹೆಚ್ಚಿನ ದೋಷಕ್ಕೋಲಗಾಗಿದ್ದರೆ :ಅಥವಾ

C)ಗ್ರಾಹಕನು ಪಡೆದ ಸೇವೆ ನ್ಯೂನ್ಯ ತೇಯಿಂದ ಕೂಡಿದ್ದರೆ :ಅಥವಾ


2)ವ್ಯಾಪಾರಿಯು ಯಾವುದೇ ಸರಕಿನ ಮೇಲೆ ಶಾಸನಬದ್ದವಾಗಿ ನಿರ್ಧರಿಸಲ್ಪಟ್ಟ ಬೆಲೆಗಿಂತ ಹೆಚ್ಚಿನ ಬೆಲೆ ಪಡೆದಿದ್ದರೆ, ಇಂತಹ ಯಾವುದೇ ಸಂದರ್ಭದಲ್ಲಿ ಗ್ರಾಹಕನು ತನ್ನ ದೂರನ್ನು ಸಲ್ಲಿಸಬಹುದು.


ಗ್ರಾಹಕರ ಸಂರಕ್ಷಣ ಕಾಯ್ದೆ 2019 ರ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಜಿಲ್ಲಾ ಗ್ರಾಹಕರವ್ಯಾಜ್ಯಗಳ ಪರಿಹಾರ ವೇದಿಕೆಯ ಬದಲಾಗಿ ಈ ಕಚೇರಿಯನ್ನು "ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ " ಎಂದು ಬದಲಾಯಿಸಲಾಗಿದೆ

.

ಈ ಹಿಂದಿನ ಕಾಯ್ದೆಯಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಗೆ ಇದ್ದ ಆರ್ಥಿಕ ಪರಿಮಿತಿಯ ವ್ಯಾಪ್ತಿ ರೂಪಾಯಿ 20, 00, 000/-ವರೆ ಗಿನ ಪರಿಹಾರ ಮೊತ್ತವನ್ನು ಮಾತ್ರ ಕೋರಲು ಅವಕಾಶವಿತ್ತು ಹಾಗೂ ಗ್ರಾಹಕರ ದೂರನ್ನು ಸಲ್ಲಿಸುವವಾಗ ಎದುರುದಾರನು ವ್ಯವಹಾರಿಸುವ ಅಥವಾ ವಾಸಿಸುವ ಅಥವಾ ಶಾಖಾ ಕಚೇರಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ವೇದಿಕೆಯ ವ್ಯಾಪ್ತಿಯಲ್ಲಿ ಮಾತ್ರ ದೂರನ್ನು ಸಲ್ಲಿಸಬಹುದಿತ್ತು. ಆದರೆ ಹೊಸ ಕಾಯ್ದೆಯನ್ವಯ ಗ್ರಾಹಕನು ಒಂದು ಕೋಟಿ ರೂಪಾಯಿ ಗಳವರೆಗಿನ ಮೊತ್ತದ ಪರಿಹಾರವನ್ನು ಕೋರಿ ಜಿಲ್ಲಾ ಅಯೋಗದ ಮುಂದೆ ದೂರು ಸಲ್ಲಿಸಬಹುದಾಗಿದೆ. ಮತ್ತು ಪ್ರಮುಖವಾಗಿ ಗ್ರಾಹಕರು ವಾಸಿಸುವ ಜಿಲ್ಲಾ ವ್ಯಾಪ್ತಿಯ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರು ತಮ್ಮ ವಾಸದ ಜಿಲ್ಲಾ ವ್ಯಾಪ್ತಿಯಲ್ಲಿ ದೂರು ಸಲ್ಲಿಸಲು ಅನುಕೂಲವಾಗಿದೆ.

ಖರೀದಿಸಿದ ಸರಕಿನಿಂದ ಉಂಟಾದ ಜೀವಹಾನಿ ಅಥವಾ ಅಸ್ತಿಹಾನಿಗೆ ಸರಕಿನ ಉತ್ಪಾದಕ ರೆ ಪರಿಹಾರ ನೀಡಲು ಭಾದ್ಯಸ್ತರಾಗುತ್ತಾರೆ.

ಒಂದು ವೇಳೆ ಜಿಲ್ಲಾ ಗ್ರಾಹಕ ಆಯೋಗದ ಆದೇಶವನ್ನು ಪಾಲಿಸದಿದ್ದಲ್ಲಿ ದಿವಾಣಿ ನ್ಯಾಯಾಲಯದ ನಿಯಮದಂತೆ ವಸೂಲಾತಿ ಕ್ರಮ ಹಾಗೂ ಕನಿಷ್ಠ 25 ಸಾವಿರ ಹಾಗೂ ಗರಿಷ್ಠ ಗರಿಷ್ಠ 1ಲಕ್ಷ ರೂಪಾಯಿ ವರೆಗೆ ದಂಡ ಅಥವಾ ಕನಿಷ್ಠ ಒಂದು ತಿಂಗಳು

ಹಾಗೂ ಗರಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿ ತರಲಾಗಿದೆ.


ಅಲ್ಲದೆ ದೋಷಪೂರಿತ ವಸ್ತು ಅಥವಾ ಸರಕು ಸರಬರಾಜು ಮಾಡಿ ಅದರಿಂದ ಗ್ರಾಹಕರು ಗಾಯಗೊಂಡಲ್ಲಿ ಕನಿಷ್ಠ 6 ತಿಂಗಳು ಜೈಲು ಶಿಕ್ಷೆ ಮತ್ತು 1ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಬಹುದಾಗಿದೆ. ಒಂದುವೇಳೆ ಸರಕನ್ನು ಖರೀದಿಸಿದ ಗ್ರಾಹಕನು ತೀವ್ರವಾಗಿ ಗಾಯಗೊಂಡಲ್ಲಿ 5 ಲಕ್ಷ ರೂಪಾಯಿ ದಂಡ ಮತ್ತು 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಒಂದುವೇಳೆ

ಗ್ರಾಹಕರಿಗೆ ಪ್ರಾಣಹಾನಿ ಉಂಟಾದಲ್ಲಿ ಕನಿಷ್ಠ 7 ವರ್ಷ ಕ್ಕೆ ಕಡಿಮೆ ಇಲ್ಲದಂತೇ ಅಥವಾ ಜೀವಾವಧಿ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ವರೆಗೂ ದಂಡ ವಿಧಿಸಬಹುದಾಗಿದೆ.


ಇನ್ನೂ ದೂರು ಸಲ್ಲಿಸಲು ಕಾಲ ಪರಿಮಿತಿ ಅವಧಿಯು ತುಂಬಾ ಮುಖ್ಯ ಸಂಗತಿಯಾಗಿರುತ್ತದೆ. ಗ್ರಾಹಕನಿಗೆ ವ್ಯಾಜ್ಯಕಾರಣ ಉದ್ಭವಿಸಿದ ದಿನಾಂಕದಿಂದ ಎರಡು ವರ್ಷಗಳೊಳಗೆ ಸಲ್ಲಿಸಬೇಕಾಗುತ್ತದೆ. ಕೆಲವೊಮ್ಮೆ ಪಿರ್ಯಾದಿಗೆ ಈ ಅವಧಿಯಲ್ಲಿ ದೂರು ಸಲ್ಲಿಸಲು ಆಗದಿದ್ದಲ್ಲಿ, ಆಯೋಗದ ಮುಂದೆ ದೂರು ಸಲ್ಲಿಸಲು ಆದ ವಿಳಂಬಕ್ಕೆ ಸರಿಯಾದ ಕಾರಣ ಇತ್ತೆಂದು ಮನವರಿಕೆ ಮಾಡಿಕೊಟ್ಟಲ್ಲಿ ಜಿಲ್ಲಾ , ರಾಜ್ಯ, ರಾಷ್ಟ್ರ ಆಯೋಗವು ದೂರು ಸಲ್ಲಿಸಲು ಆದ ವಿಳಂಬವನ್ನು ಮನ್ನಾ ಮಾಡಿ ಅವಧಿ ಮೀರಿದ ದೂರನ್ನು ವಿಚಾರಣೆಗೆ ಅಂಗಿಕರಿಸಬಹುದು.


ಗ್ರಾಹಕನು ತನ್ನ ದೂರನ್ನು ತಾನೇ ನೇರವಾಗಿ ಸಂಬಂಧ ಪಟ್ಟವೇದಿಕೆಗೆ ಅಥವಾ ಆಯೋಗಕ್ಕೆ ಸಲ್ಲಿಸಲು ಅವಕಾಶವಿದ್ದು, ಇವುಗಳ ವ್ಯವಹರಣಿಗಳು ಸರಳ. ದೂರು ದಾಖಲಾದ ನಂತರ ಎದ್ರುದಾರ ಹಾಜರಾಗಲು, ಆತನು ಹಾಜರಾಧಾ ನಂತರ ತನ್ನ ತಕರಾರುಗಳನ್ನು ಸಲ್ಲಿಸಲು ಮತ್ತು ವಿಚಾರಣೆಯಾ ವಿವಿಧ ಹಂತಗಳಲ್ಲಿ, ಎದುರುದಾರನಿಗೆ ಹೆಚ್ಚಿನ ಕಾಕವಕಾಶ ಕೊಡಲಾಗದು. ಆದ್ದರಿಂದ ಇಲ್ಲಿ ಒಂದು ಪ್ರಕರಣ ಇತ್ಯರ್ಥಗೊಳ್ಳಲು ಸಿವಿಲ್ ನ್ಯಾಯಾಲಯದಲ್ಲಿ ಬೇಕಾಗುವಷ್ಟು ಸಮಯ ಬೇಕಿಲ್ಲ. ಹೀಗಾಗಿ ನ್ಯಾಯಾಕಾಂಕ್ಷಿಗಳಿಗೆ ನ್ಯಾಯ ಶೀಘ್ರವಾಗಿ, ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ.


 - ಉಮಾ ಡಿ.ನಾಯ್ಕ ವಕೀಲರು

ಉಮಾ ದಾಮೋದರ ನಾಯ್ಕ ಎಂ.ಎ.ಎಲ್.ಎಲ್.ಬಿ ಪದವೀಧರರಾಗಿರುವ ಅಪಾರವಾದ ಜೀವನ ಪ್ರೀತಿಯ ಇವರು ಹೊನ್ನಾವರ ತಾಲೂಕಿನ ಮಾವಿನಕುರ್ವೆ ಊರಿನವರು. ವೃತ್ತಿಯಲ್ಲಿ ವಕೀಲರಾಗಿರುವ ಇವರು ತಮ್ಮ ಪ್ರಾಥಮಿಕ ಶಿಕ್ಷಣ ಬೆಳ್ಳಿ ಕುರ್ವೆ  ಹಾಗೂ ಮಾವಿನಕುರ್ವೆ ಯಲ್ಲಿ ಮಾಧ್ಯಮಿಕ ಶಿಕ್ಷಣ ಶರಾವತಿ ಹೈಸ್ಕೂಲ್ ಹೊಸಾಡನಲ್ಲಿ ಮತ್ತು ಎಸ್. ಡಿ ಎಮ್ ಕಾಲೇಜು ಹೊನ್ನಾವರ ದಲ್ಲಿ ಬಿ.ಎ ಪದವಿ ಯನ್ನು ಎಂ.ಇ.ಎಸ್.ಲಾ ಕಾಲೇಜು ಸಿರ್ಸಿಯಲ್ಲಿ ಕಾನೂನು ಪದವಿ ಯನ್ನು ಕರ್ನಾಟಕ ಮುಕ್ತ ವಿಶ್ವ ವಿದ್ಯಾ  ಲಯ ದಲ್ಲಿರಾಜ್ಯಶಾಸ್ತ್ರವಿಷಯದಲ್ಲಿ ಎಂ.ಎ..ಪದವಿ ಯನ್ನು ಪಡೆದಿದ್ದು ಹದಿನೈದು ವರ್ಷಗಳಿಂದ ಹೊನ್ನಾವರದ ನ್ಯಾಯಾಲಯದಲ್ಲಿ ವಕೀಲವೃತ್ತಿಯನ್ನು ನಡೆಸುತ್ತಿರುವುದರ ಜೊತೆಗೆ ಕಾನೂನು ಸೇವಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಹಲವಾರು ಕಾನೂನು ಶಿಬಿರ ಗಳಲ್ಲಿ ಕಾನೂನು ಉಪನ್ಯಾಸ ನೀಡಿರುತ್ತಾರೆ ಬರವಣಿಗೆ ಇವರ ಬಾಲ್ಯದ ಹವ್ಯಾಸಗಳಲ್ಲಿ ಒಂದು.ಅವರ ಬರಹಗಳು ನಿಮ್ಮ ಓದಿಗಾಗಿ. ಸಂಪಾದಕ


 
 
 

Comentarios


©Alochane.com 

bottom of page