ಮರೆಯಲಾಗದ ಮಹಾನುಭಾವರು -೧೩೮
೧೯೫೦-೮೦ ರ ದಶಕಗಳ ನಡುವಿನ ಕಾದಂಬರೀಯುಗದಲ್ಲಿ ಓದುಗರ ಮೆಚ್ಚಿನ ಕಾದಂಬರಿಕಾರರಾಗಿದ್ದವರಲ್ಲಿ ಕೊರಟಿ ಶ್ರೀನಿವಾಸರಾಯರೂಒಬ್ಬರು. ಅವರು ಕೇವಲ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿಯೇ ಸುಮಾರು ೨೦ ಐತಿಹಾಸಿಕ ಕಾದಂಬರಿಗಳನ್ನು ಬರೆದಿದ್ದಾರೆ. ಒಟ್ಟು ೬೦ ಕ್ಕೂ ಹೆಚ್ಚು ಐತಿಹಾಸಿಕ, ಸಾಮಾಜಿಕ, ಧಾರ್ಮಿಕ ಕೃತಿಗಳನ್ನು ನೀಡಿದ ಅವರು ಹಲವು ಜೀವನಚರಿತ್ರೆ, ಕಥೆಗಳನ್ನೂ ಬರೆದಿದ್ದಾರೆ.
ಹೊಸಕೋಟೆ ತಾಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ೧೯೨೫ ರ ಅಕ್ಟೋಬರ್ ೧೯ ರಂದು ಜನಿಸಿದ ಶ್ರೀನಿವಾಸರಾಯರು ಕರ್ನಾಟಕ ಬಿ. ವಿ. ದಿಂದ ಎಂ. ಎ. ಪದವಿ ಪಡೆದು ಮೊದಲು ಹೊಸಕೋಟೆ ಪ್ರೌಢಶಾಲಾ ಶಿಕ್ಷಕರಾಗಿ, ಬೆಂಗಳೂರು ಲೆಕ್ಕಪತ್ರ ಕಚೇರಿಯಲ್ಲಿ, ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ನೌಕರರಾಗಿ, ನಂತರ ಸಂಯುಕ್ತ ಕರ್ನಾಟಕ ಪತ್ರಿಕೆ ಹುಬ್ಬಳ್ಳಿ ಆವೃತ್ತಿಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿ ಮುಂದೆ ಬೆಂಗಳೂರಿನ ಆಚಾರ್ಯ ಪಾಠಶಾಲೆ ಕಾಲೇಜಿನಲ್ಲಿ ಉಪಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದರು.
ಅಂದಿನ ಹಿರಿಯ ಕಾದಂಬರಿಕಾರರ ಪ್ರಭಾವಕ್ಕೊಳಗಾಗಿ ತಾವೂ ಕಾದಂಬರಿ ಬರೆಯಲಾರಂಭಿಸಿದ ಅವರು ವಿಶೇಷವಾಗಿ ಐತಿಹಾಸಿಕ ಕಾದಂಬರಿಗಳಲ್ಲಿ ಆಸಕ್ತಿ ಹೊಂದಿದ್ದರು. ದೇವಗಿರಿ ಪತನ, ಕನ್ನಡಿಗರ ಕಾಳರಾತ್ರಿ, ಬಲಿದಾನ, ದೇವಗಿರಿ ಪತನ, ಗಜಬೇಂಟೆಕಾರ, ಅಮಾತ್ಯರತ್ನ, ರಕ್ಕಸತಂಗಡಿ, ರಾಜ್ಯಕ್ಷಯ , ಮೈಸೂರು ಹುಲಿ ,ಧರ್ಮದೀಕ್ಷೆ, ಮಮತೆಯ ಸುಳಿ, ಮಂಗಳದೀಪ ಮೊದಲಾದ ಕಾದಂಬರಿಗಳ ಮೂಲಕ ವ್ಯಾಪಕ ಓದುಗ ವಲಯವನ್ನು ತಲುಪಿದರು.
ಕೊರಟಿಯವರ " ಮಿಸ್ ಲೀಲಾವತಿ" ಸಿನಿಮಾವಾಗಿ ಬಹಳ ಜನಪ್ರಿಯತೆ ಪಡೆದುಕೊಂಡಿತು. ಅವರದೇ ಕಣ್ಣೀರಿನ ಕಡಲು ಕಾದಂಬರಿ ಗೃಹಿಣಿ ಎಂಬ ಹೆಸರಿನಿಂದ ಚಲನಚಿತ್ರವಾಯಿತು. ತಿರುಪತಿ, ಮಧ್ವಾಚಾರ್ಯ,ವ್ಯಾಸರಾಯರು, ಜಯತೀರ್ಥರು, ಪುರಂದರರು ಮೊದಲಾದ ಜೀವನ ಚರಿತ್ರೆ, ಅಲ್ಲದೆ, ೯ ಐತಿಹಾಸಿಕ ಕಥಾಸಂಕಲನಗಳನ್ನು ನೀಡಿದ ಕೊರಟಿಯವರು ಭಾರತ ಭಾರತಿ ಮಾಲಿಕೆಯಲ್ಲೂ ಹಲವು ಕೃತಿ ರಚಿಸಿದ್ದಾರೆ. ಅವರ ಅಮಾತ್ಯ ರತ್ನಕ್ಕೆ ರಾಜ್ಯಸರ್ಕಾರದ ಪ್ರಥಮ ಬಹುಮಾನ ಬಂದಿದೆ.
ಆಕರ್ಷಕ ಶೈಲಿಯ ಬರೆಹಗಾರರಾದ ಕೊರಟಿ ಶ್ರೀನಿವಾಸರಾಯರು ಬರೆದ ಕೃತಿಗಳು ಇಂದಿಗೂ ಓದುಗರ ಬೇಡಿಕೆ ಪಡೆದಿವೆ. ಅವರು ೧೯೮೩ ರ ಎಪ್ರಿಲ್ ೨೫ ರಂದು ನಿಧನ ಹೊಂದಿದರು.
- ಎಲ್. ಎಸ್. ಶಾಸ್ತ್ರಿ
ಉಪಯುಕ್ತ ಮಾಹಿತಿ. ಧನ್ಯವಾದಗಳು.