top of page

ಕುಂದನಲಾಲ್ ಸೈಗಲ್

ಭಾರತೀಯ ಚಲನಚಿತ್ರ ರಂಗದ

ಮೊದಲ ನಟ- ಗಾಯಕ

*************************

ಕುಂದನಲಾಲ ಸೈಗಲ್

*****************************

ಭಾರತೀಯರು ಸಂಗೀತಪ್ರಿಯರು. ವಿಶಾಲವಾದ ಮತ್ತು ವೈವಿಧ್ಯಮಯವಾದ ಜನಜೀವನ ಸಂಸ್ಕೃತಿ, ಆಚಾರ ವಿಚಾರ, ಅಭಿರುಚಿಗಳ ಈ ನಮ್ಮ ದೇಶ ಸಂಗೀತ ಕ್ಷೇತ್ರದಲ್ಲಿಯೂ ತನ್ನ ವೈವಿಧ್ಯ ಹಾಗೂ ವೈಶಿಷ್ಟ್ಯಗಳನ್ನು ಕಾದುಕೊಂಡುಬಂದಿದೆ. ಪ್ರತಿಯೊಂದು ಪ್ರದೇಶ, ಜಾತಿಜನಾಂಗಗಳಲ್ಲೂ ಭಿನ್ನ ಭಿನ್ನವಾದ ಸಂಗೀತಪದ್ಧತಿ ಕಂಡುಬರುತ್ತದೆ. ಜಾನಪದ ಸಂಗೀತ, ಶಾಸ್ತ್ರೀಯ ಸಂಗೀತಗಳಲ್ಲದೆ ಹಲವು ಬಗೆಯ ಉಪಪ್ರಕಾರಗಳು ಭಾರತದಲ್ಲಿ ಪ್ರಚಲಿತದಲ್ಲಿವೆ. ಇಂತಹ ನೂರಾರು ಬಗೆಯ ಸಂಗೀತಪ್ರಕಾರಗಳನ್ನೂ ತನ್ನಲ್ಲಿ ಅಳವಡಿಸಿಕೊಂಡ ಕ್ಷೇತ್ರ ಭಾರತೀಯ ಸಿನಿಮಾರಂಗ , ಅದರಲ್ಲೂ ಹಿಂದೀ ಸಿನಿಮಾರಂಗ ಅರ್ಥಾತ್ ಬಾಲಿವುಡ್.

ಭಾರತದಲ್ಲಿ ಮೊದಲ ಧ್ವನಿಚಿತ್ರ ಬಂದಿದ್ದು ೧೯೩೧ ರಲ್ಲಿ. ಅಲ್ಲಿಯ ತನಕ ಮೂಕಿ ಚಿತ್ರಗಳೇ ಇದ್ದವು. ವಾಕಿಚಿತ್ರಗಳ ಯುಗ ಆರಂಭವಾದ ನಂತರ ಹಂತಹಂತವಾಗಿ ತಾಂತ್ರಿಕ ಪ್ರಗತಿಯನ್ನು ಕಂಡುಕೊಂಡ ಚಿತ್ರರಂಗದಲ್ಲಿ ಸುಮಾರು ೧೯೪೦ ರಿಂದ ೮೦ ರತನಕದ ಸುವರ್ಣಯುಗದ ಹಿಂದೀ ಸಿನಿಮಾಗಳಲ್ಲಿ ಸಂಗೀತದ ಪಾತ್ರವೂ ಬಹಳ ಮಹತ್ವದ್ದು. ಚಿತ್ರನಿರ್ದೇಶಕರಿಗಿದ್ದಷ್ಟೇ ಪ್ರಾಮುಖ್ಯತೆ ಸಂಗೀತ ನಿರ್ದೇಶಕರಿಗೂ‌ ಇತ್ತೆಂದರೆ ತಪ್ಪಾಗಲಿಕ್ಕಿಲ್ಲ. ಆ ಕಾಲದ ಮಧುರ ಗೀತೆಗಳನ್ನು ಇಂದಿಗೂ ಜನರು ಕೇಳಿ ಆನಂದಿಸುತ್ತಾರೆ. ಅಚ್ಚರಿಯಾದರೂ ನಿಜ ಎಂಬಂತೆ ಆ ಎರಡು ಮೂರು ದಶಕಗಳ ಅವಧಿಯಲ್ಲಿ ಏಕಕಾಲಕ್ಕೆ ಸಿನಿಮಾ ತಯಾರಿಕೆಯ ಎಲ್ಲ ವಿಭಾಗಗಳಲ್ಲೂ ಶ್ರೇಷ್ಠ ಮಟ್ಟದ ಕಲಾವಿದರು, ಚಿತ್ರಸಾಹಿತಿಗಳು, ಸಂಭಾಷಣಾಕಾರರು, ನಿರ್ದೇಶಕರು, ಸಂಗೀತ ಸಂಯೋಜಕರು, ಹಿನ್ನೆಲೆ ಗಾಯಕರು ಕಂಡುಬಂದರು. ಅದೇ ಕಾರಣದಿಂದ ಅದನ್ನು ಸುವರ್ಣ ಯುಗವೆಂದು ಕರೆಯುವದು. ಇದು ಗಮನಿಸಬೇಕಾದ ಸಂಗತಿ. ಅಂತಹ ಶ್ರೇಷ್ಠರ ಹೆಸರುಗಳ ಒಂದು ಯಾದಿಯನ್ನು ಮುಂದೆ ನೀಡಲಿದ್ದೇನೆ.

೧೯೩೦ ರ ದಶಕದಲ್ಲಿ ಧ್ವನಿಸಹಿತ ಚಿತ್ರಗಳು ಪ್ರಾರಂಭವಾದಾಗ ನಟನಟಿಯರೇ ಹಾಡಿ ಅಭಿನಯಿಸುವ ಪದ್ಧತಿಯಿತ್ತು. ಒಂದು ದಶಕದ ನಂತರ ಪ್ರತ್ಯೇಕ ಹಿನ್ನೆಲೆ ಹಾಡುಗಾರರು ಬಂದರು. ೧೯೩೨ ರಲ್ಲಿ ಮೊದಲ ನಟ- ಗಾಯಕನಾಗಿ ಬಂದವನು ಕುಂದನಲಾಲ ಸೈಗಲ್. ( ಕೆ. ಎಲ್. ಸೈಗಲ್). ಜಮ್ಮುವಿನಲ್ಲಿ ಜನಿಸಿದ ಪಂಜಾಬಿ ಕುಟುಂಬದ ಈತ ಬಾಲ್ಯದಿಂದಲೇ ತನ್ನ ತಾಯಿಯ ಮೂಲಕ ಹಾಡಿನ ಅಭಿರುಚಿ ಪಡೆದು ಮುಂದೆ ಉತ್ತಮ ಗಾಯಕನಾದ. ಭಜನೆ , ಕೀರ್ತನೆ, ಶಬದ್ ಮೊದಲಾದವುಗಳನ್ನು ಕೇಳುತ್ತ ತಾನೂ ಹಾಡುತ್ತ ಕಲ್ಕತ್ತಾಕ್ಕೆ ತನ್ನ ಮಿತ್ರರೊಬ್ಬರೊಡನೆ ಬಂದನಂತರ ಅವನು ಸಿನಿಮಾ ಕ್ಷೇತ್ರದ ಸಂಪರ್ಕ ಬಂತು. ನ್ಯೂ ಥಿಯೇಟರ್ ನಲ್ಲಿ ೨೦೦ ರೂ. ಸಂಬಳಕ್ಕೆ ಸೇರಿದ ಸೈಗಲ್ ಮೊದಲ ಚಿತ್ರ " ಮೊಹಬ್ಬತ್ ಕೆ ಆಸೂಂ" . ನಂತರ ಸುಬಹ ಕಾ ಸಿತಾರಾ, ಜಿಂದಾ ಲಾಶ, ಯಹೂದೀಕಿ ಲಡಕಿ, ಚಂಡಿದಾಸ, ರೂಪಲೇಖಾ ಮೊದಲಾದ ಸಿನಿಮಾಗಳಲ್ಲಿ ಗಾಯಕನಟನಾಗಿ ಕಾಣಿಸಿಕೊಂಡ ಸೈಗಲ್ ಗೆ ಖ್ಯಾತಿ ತಂದುಕೊಟ್ಟ ಚಿತ್ರಗಳೆಂದರೆ " ದೇವದಾಸ್", ಭಕ್ತ ಸೂರದಾಸ್, ತಾನಸೇನ್ ಮೊದಲಾದವು. ದೀಪಕ ರಾಗದ ದಿಯಾ ಜಲಾವೊ, ಬಾಬುಲ್ ಮೋರಾ, ಸಪ್ತಸುರನ ತಿನ ಗಾವೊ ಸಬಜನ, ರುಮಝುಮ ರುಮಝುಮ ಚಲ್ ಶಿಕಾರಿ , ಜಬ್ ದಿಲ್ ಹಿ ಟೂಟಗಯಾ, ಬಾಲಮ ಆವೋ ಬಸೋ ಮೇರೆ ಮನಮೆ, ದುಖಕೆ ಅಬ್ ದಿನ ಬೀತತ ನಾಹಿ, ಮೊದಲಾದ ಹಾಡುಗಳೆಲ್ಲ ಭಾರೀ ಹಿಟ್ ಆದವು. ವಿಶೇಷವಾಗಿ ಕರುಣಾರಸದ ಹಾಡುಗಳಲ್ಲಿ ಸೈಗಲ್ ಹೆಸರಾದರು.

ಕೇವಲ ೪೨ ವರ್ಷ ಬದುಕಿದ ಸೈಗಲ್ ೨೮ ಹಿಂದಿ ಚಿತ್ರ, ೭ ಬಂಗಾಲಿ ಚಿತ್ರ, ೧ ತಮಿಳು ಚಿತ್ರಗಳಲ್ಲಿ ನಟಿಸಿ , ಒಟ್ಟು ೧೮೫ ಹಾಡುಗಳನ್ನು ಹಾಡಿದ. ಪರವಾನಾ ಅವನ ಕೊನೆಯ ಚಿತ್ರ. ಅತಿಯಾದ ಮದ್ಯಪಾನ ಅವನನ್ನು ಕಬಳಿಸಿತು. ೧೯೪೭ ರಲ್ಲಿ ಅವನು ನಿಧನ ಹೊಂದಿದ. ಮಹ್ಮದ ರಫಿ, ಮುಖೇಶ್, ಕಿಶೋರಕುಮಾರ, ಲತಾ ಮಂಗೇಶ್ಕರ್ ಮೊದಲಾದ ಖ್ಯಾತ ಹಿನ್ನೆಲೆ ಗಾಯಕರೆಲ್ಲ ಸೈಗಲ್ ನಿಂದ ಪ್ರೇರಣೆ ಪಡೆದು ಅವನನ್ನು ತಮ್ಮ ಗುರುವೆಂದು ಗೌರವಿಸಿದ್ದಾರೆ. ಲತಾ ಮಂಗೇಶ್ಕರ್ ಅವರಂತೂ ಒಮ್ಮೆ ಅವನೊಡನೆ ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ಆಶಾರಾಣಿ ಅವನ ಪತ್ನಿ. ಮೂವರು ಮಕ್ಕಳಿದ್ದರು. ಕೆ. ಎಲ್. ಸೈಗಲ್ ಹೆಸರು ಭಾರತೀಯ ಚಿತ್ರರಂಗದಲ್ಲಿ ಅಜರಾಮರ.

ಎಲ್.ಎಸ್.ಶಾಸ್ತ್ರಿ






‌‌‌‌ ಚಿತ್ರ ಕೃಪೆ:ಕೆ. ಎಲ್. ಸೈಗಲ್

20 views2 comments

2 commenti


..... ಒಂದು ಸೊಗಸಾದ ಪುಸ್ತಕ-""The Pilgrim Of Swara""-

Prof. Raghava Menon-ಅನ್ನುವವರು ಬರೆದಿದ್ದಾರೆ...ಈ ಗಾನಗಂಧರ್ವನ ಬಗ್ಗೆ ಸವಿಸ್ತಾರ ಚಿತ್ರಣವಿದೆ...ಪ್ರಸ್ತುತ ಲೇಖನ ಚೆನ್ನಾಗಿದೆ.... ಧನ್ಯವಾದಗಳು...🌺🌺🌺🌺👍👍👍👍

Mi piace

Moorthy Deraje
Moorthy Deraje
14 giu 2023

ಖುಶಿಯಾಯ್ತು... ಕೆ.ಎಲ್.ಸೈಗಲ್ ರನ್ನು

ನೆನಪು ಮಾಡಿಕೊಂಡದ್ದು....

Mi piace
bottom of page