top of page

ಕ಼ಣಗಣನೆ

ಒಂದು.....ಎರಡು......ಮೂರು

ಹೀಗೆ ಸುರುವಾಗಿದೆ ಕ಼ಣಗಣನೆ.

ಹಚ್ಚಿಟ್ಟ ಹಣತೆಯ ಬೆಳಕು

ಕೀ಼ಣವಾಗಿದೆ ಈಗಾಗಲೆ.

ಸಮಯ ಬಹಳಿಲ್ಲ ಇನ್ನು.


ಎಣ್ಣೆತೀರಿ,ಬತ್ತಿಸುಟ್ಟು ಕರಕಲು

ಖಮಟುವಾಸನೆ ಒಳಗೆಲ್ಲ-

ತುಂಬಿ ಉಸಿರುಗಟ್ಟಿದ ಅನುಭವ.

ಸಮಯ ಬಹಳಿಲ್ಲ ಇನ್ನು.


ಕಣ್ಣೆದುರು...ಮಬ್ಬು....ಮಬ್ಬು

ಜೀವ,ಜೀವನ ಚಿತ್ರಗಳೆಲ್ಲ ಅಸ್ಪಷ್ಟ,

ಚಿತ್ತದ ಒಳಗೂ.....ಹೊರಗೂ.

ಸಮಯ ಬಹಳಿಲ್ಲ ಇನ್ನು.


ದಡಸೇರಗೊಡದೆ ಕಾವಲು ಅಲೆ,

ಹಟಕ್ಕೆ ಬಿದ್ದಂತೆ ನೂಕಿ....ನೂಕಿ,

ತೂತು ದೋಣಿ, ಕಣ್ಣಳತೆಗೂ ದೂರ-

ಕಡಲ ಮಧ್ಯದಲ್ಲಿ ಅಸ್ಪಷ್ಟ.

ಸಮಯ ಬಹಳಿಲ್ಲ ಇನ್ನು.


ಆಲಯದೊಳಗೆ ಬಂಧಿ,

ಬಯಲ ಬಣ್ಣದ ಹಕ್ಕಿ ಚೀತ್ಕರಿಸಿ

ಚಡಪಡಿಸುತ್ತಿದೆ ಒಂದೇ ಸವನೆ.

ಸಮಯ ಬಹಳಿಲ್ಲ ಇನ್ನು.


ತೊಟ್ಟ ವೇಷಭೂಷಣ,ಮುಖವಾಡ

ಎಲ್ಲ ಕಳಚಿಟ್ಟು ಒಮ್ಮೆಗೇ..

ಬೆತ್ತಲಾಗಿ ನಿರುಮ್ಮಳವಾದಂತೆ...!


ನಡೆದೂ..ನಡೆದೂ ಸವೆಸಿದ ದಾರಿ-

ಯ ಕೊನೆ ಹತ್ತಿರ....ಹತ್ತಿರವಾದಂತೆ...!


ಇನ್ನಾದರೂ ಸಾಧ್ಯವಾಗದ್ದನ್ನು

ಸಾಧ್ಯವಾಗಿಸಿ,ಅಂದುಕೊಂಡದ್ದನ್ನು

ಆಗಮಾಡಿಸಿ,ವಿರಮಿಸಬೇಕು.


ಎದುರು ಇದ್ದಿರಬಹುದು,

ಕಾಲಾತೀತಕ್ಕೊಂದು ಸಣ್ಣ ಏಣಿ,

ಆಮೇಲೆ..ಆಮೇಲೆ......

ಗಡಿಯಾರ ಸ್ತಬ್ಧ.


--ಅಬ್ಳಿ,ಹೆಗಡೆ

2 views0 comments
bottom of page