top of page

ಕೊಡಚಾದ್ರಿ ಚಾರಣಅಂದು ನವೆಂಬರ್ ಹದಿಮೂರು. ಈ ಬಾರಿ ನಮ್ಮ ಬಾಸ್ಕ್ ತಂಡದಿಂದ ಕೊಡಚಾದ್ರಿಗೆ ಚಾರಣ ಹೋಗುವುದು ಅಂತ ಮುಂಚೆನೇ ಸಿದ್ಧತೆ ಆಗಿತ್ತು. ಕಾರ್ಯಾಲಯದಲ್ಲಿ ಕೆಲಸವಿದ್ದರೂ ಬೇಗ ಬೇಗ ಎಲ್ಲವನ್ನೂ ಒಂದು ಹಂತಕ್ಕೆ ತಂದು, ನಂತರ ಬಿಡುವು ಮಾಡಿಕೊಂಡು ಬೇಡಿಕೆ ಮುಂದಿಟ್ಟಾಗ ಅಂತೂ ಚಾರಣಕ್ಕೆ ಹೋಗಲು ಮೇಲಾಧಿಕಾರಿಯಿಂದ ಅಪ್ಪಣೆ ದೊರೆಯಿತು.


ಮನೆಗೆ ಬಂದಾಗ ಗಡಿಯಾರ ನೋಡಿದ್ರೆ ಸಂಜೆ ೫.೩೦. ಆಗಿಯೇ ಬಿಟ್ಟಿತ್ತು, ಸರಿ, ಚಾರಣದ ಸಿದ್ದತೆ ಭರದಿಂದಲೇ ಶುರು. ಎಂದೋ ಕೊಂಡ ನನ್ನ ಹೊಸ ಬ್ಯಾಗಿಗೆ ಇಂದು ಕೊಡಚಾದ್ರಿಯ ಚಾರಣದಿಂದ ಶುಭಾರಂಭ ದೊರೆಯಿತು. ಎಲ್ಲರೂ ರಾತ್ರಿ ೯.೧೫ ರ ಹೊತ್ತಿಗೆ ಮಜೆಸ್ಟಿಕ್ ಹತ್ತಿರ ಸೇರಬೇಕು ಎಂಬ ಮಾತಾಗಿತ್ತು.  ಸ್ನೇಹಿತರಾದ ಕಾರ್ತಿಕ್ ಮತ್ತು ಕಾರ್ತಿಕ್ ಮೈಸೂರು ಇನ್ನಿತರರೆಲ್ಲರೂ ಸೇರಲು ರಾತ್ರಿ ೧೦ ಗಂಟೆಯೇ ಆಯಿತು. ಅಲ್ಲಿ ಸೇರಿದ ಸ್ವಲ್ಪ ಮಂದಿಯದು ಹೊಸ ಪರಿಚಯವಾದರೆ ಇನ್ನು ಕೆಲವರು ಹಿಂದಿನ ಚಾರಣದ ದೋಸ್ತಿಗಳೇ ಆಗಿದ್ದರು. ತಂಡದ ಮುಖ್ಯಸ್ಥ ಮುದಸ್ಸರನ್ನು ನಾನು ಅಲ್ಲಿಯೇ ಮೊದಲ ಬಾರಿ ಭೇಟಿ ಮಾಡಿದೆ. ಹೀಗೆ ೧೦.೧೫ಕ್ಕೆ ಕೊಡಚಾದ್ರಿಗೆ ನನ್ನ ಪಯಣ ಖಾಸಗಿ ಬಸ್ಸಿನ ಕೊನೆಯ ಸೀಟಿನಿಂದ ಪ್ರಾರಂಭವಾಯಿತು.


ರಾತ್ರೆಯೆಲ್ಲಾ ಪ್ರಯಾಣಿಸಿ ನಿದ್ದೆ ಕನಸು ಎಚ್ಚರಗಳಲ್ಲಿ ಕೇವಲ ಕೊಡಚಾದ್ರಿಯನ್ನೇ ಕನಸುತ್ತ ಬೆಳಗ್ಗೆ ೮ ಕ್ಕೆ ಹೊಸನಗರ, ನಗರ ಎಲ್ಲಾ ದಾಟಿ ನಿಟ್ಟೂರು ಸೇರಿದ್ದೆವು. ಅಲ್ಲೇ ಹತ್ತಿರದ ಉಪಹಾರಗೃಹದಲ್ಲಿ ಮುಖ ತೊಳೆದು ತಿಂಡಿ ಮುಗಿಸಿ ಮಧ್ಯಾಹ್ನದ ಊಟ ಕಟ್ಟಿಸಿಕೊಂಡದ್ದು ಕನಸಿನಲ್ಲೇನೋ ಎಂಬಂತೆ ನಡೆದು ಹೋಯಿತು.


ಮರಕುಟಕ ಎಂಬ ಸ್ಥಳವೇ ನಮ್ಮ ಚಾರಣದ ಪ್ರಾರಂಭ ಸ್ಥಾನ. ೯.೩೦ಕ್ಕೆ ಗುಂಪಿನ ಎಲ್ಲರ ಪರಸ್ಪರ ಒಂದು ಸ್ವ-ಕಿರು ಪರಿಚಯದೊಂದಿಗೆ ನಮ್ಮ ಚಾರಣ ಶುರುವಾಯಿತು. ಸ್ವಲ್ಪ ದೂರ ಜೀಪಿನ ದಾರಿಯಲ್ಲಿ ಸಾಗುತ್ತಿರುವಾಗಲೇ ಎಮ್ಮೆಹೊಂಡ ಎಂಬ ಒಂದು ಪ್ರಾಥಮಿಕ ಶಾಲೆ ಸಿಕ್ಕಿತು. ಅಮ್ದು ಮಕ್ಕಳ ದಿನಾಚರಣೆ, ಅಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಮಕ್ಕಳ ದಿನಾಚರಣೆಯಂದು ಆ ಮಕ್ಕಳೊಡನೆ ನಾವು ಕೆಲ ಕಾಲ ಮಕ್ಕಳಾಗಿ ಛಾಯಾಚಿತ್ರವನ್ನು ತೆಗೆಸಿಕೊಂಡು ಸಂಭ್ರಮಿಸುತ್ತಲೇ ಮುಂದಿನ ದಾರಿ ಹಿಡಿದೆವು.


೧೧ ಘಂಟೆಗೆ ಹಿದ್ಲುಮನೆ ಎಂಬ ಹಳ್ಳಿಯ ಒಂದು ಮನೆ ಸೇರಿದೆವು. ಅಲ್ಲಿಯ ಮನೆಯವರು ಹೇಳಿದ ಮಾಹಿತಿಯಂತೆ ಆ ಹಳ್ಳಿಯಲ್ಲಿರುವುದು ನಾಲ್ಕೇ ಮನೆಗಳು. ಉಳಿದಂತೆ ಎಲ್ಲೆಡೆಯೂ ಬತ್ತ, ಗೋಧಿ, ಕಬ್ಬು ಅಡಿಕೆ, ಬಾಳೆ ತೋಟಗಳಿದ್ದವು. ಮನೆಯ ಬದಿಯಿಂದ ಜಲಪಾತದ ದಾರಿ ಹಿಡಿದು ಸಾಗುವಾಗ ಕಲ್ಲಿನ ಬಂಡೆಗಳು ಎದುರಾದವು. ನಮ್ಮ ನಿಜವಾದ ಚಾರಣ ಶುರುವಾದದ್ದೆ ಆಗ. ಆ ಜಾರುವ ಕಲ್ಲಿನ ಬಂಡೆಗಳು, ಪಾದಗಳು ಉರಿಯೆದ್ದಿದ್ದವು.. ಕೆಸರು ಮಣ್ಣಿನ ಹಾದಿಯಲ್ಲಿ ಸಾಗುತ್ತ, ಪಾಚಿ ಕಟ್ಟಿದ ಮರದ ಕೊಂಬೆಗಳನ್ನು ಆದಾರವಾಗಿ ಹಿಡಿದುಕೊಳ್ಳುತ್ತ ನಮ್ಮ ಚಾರಣ ಮುಂದುವರೆಯಿತು.


ಅವೆಲ್ಲ ದಾಟಿ ಮುಂದೆ ಸಾಗಿ ಸುಮಾರು ೧೨.೧೫ ಕ್ಕೆ ನೋಡಿದರೆ ನಯನ ಮನೋಹರ ೪ ಹಂತವಾಗಿ ಬೀಳುವ ಜಲಪಾತ ಸಿಕ್ಕಿತು. ನೀರನ್ನು ನೋಡಿದೊಡನೆಯೇ ನಮ್ಮ ಚಾರಣದ ಆಯಾಸವೆಲ್ಲ ಒಮ್ಮೆಲೇ ಪರಿಹಾರವಾದಂತೆ ಭಾಸವಾಯಿತು. ಆ ಬೆಳ್ಳನೆ ಮುತ್ತಿನಂತೆ ದಬದಬನೆ ಬೀಳುತ್ತಿದ್ದ ರಭಸವಾದ ನೀರಿನಲ್ಲಿ ಆಡುವುದೇ ಒಂದು ಸಂಭ್ರಮ. ಮೈಯೆಲ್ಲ ಒದ್ದೆ ಮುದ್ದೆಯಾದರೂ ಅದರ ಗೊಡವೆ ಯಾರಿಗೂ ಅರಿವಿಗೆ ಬರಲಿಲ್ಲ, ಇದ್ದ ಅಲ್ಪ ಸ್ವಲ್ಪ ಆಯಾಸವೂ ಮಾಯವಾಗಿ ಅದು ಮುಂದಿನ ಚಾರಣಕ್ಕೆ ನಮಗೆ ಸ್ಪೂರ್ತಿ ನೀಡಿತು.


ಜಲಪಾತ ದಾಟಿ ಬೆಟ್ಟದ ದಾರಿಯಲ್ಲಿ ಮೇಲೇರಿ ೧.೩೦ಕ್ಕೆ ಒಂದು ಬೆಟ್ಟದ ಅಂಚಿನಲ್ಲಿ ಬಂದು ಸೇರಿದ್ದಾಯಿತು.. ಕಟ್ಟಿಕೊಂಡು ಬಂದ ಊಟ ಮುಗಿಸಿ ತುಸು ವಿಶ್ರಮಿಸುತ್ತ ಕುಳಿತೆವು. ಹಿಂದೆ ಉಳಿದ ಎಲ್ಲರೂ ಈಗ ನಮ್ಮನ್ನು ಸೇರಿಕೊಂಡರು. ಕೊಡಚಾದ್ರಿ ಶಿಖರದ ಮಂಜು ಮುಸುಕಿದ ಮೋಡದ ಒಳಗೆ ನಮ್ಮ ಚಾರಣ ಸಾಗಿತು.. ಚಳಿ ಬೇರೆ ಮೈಮನಸ್ಸನ್ನು ನಡುಗಿಸುವಂತಿತ್ತು. ೨.೩೦ಕ್ಕೆ ಅಲ್ಲಿಂದ ಹೊರಟು ಸಣ್ಣ ಬೆಟ್ಟವನ್ನು ಇಳಿದು ಹತ್ತಿ ಜೀಪಿನಲ್ಲಿ ಸಾಗುವ ದಾರಿ ಸೇರಿಕೊಂಡೆವು. ಅದು ಗಾಳಿಪಟ ಚಲನಚಿತ್ರ ಚಿತ್ರೀಕರಣ ನಡೆದ ತಾಣವಂತೆ, ಅದನ್ನು ದಾಟಿ ಪ್ರವಾಸಿ ಗೃಹದ ದಾರಿ ಹಿಡಿದೆವು.


ಕಳೆದ ವರ್ಷ ಕೊಲ್ಲೂರಿನಿಂದ ಜೀಪಿನಲ್ಲಿ ಬರಲಾಗದಿದ್ದ ಕೊಡಚಾದ್ರಿಗೆ ಈ ಸಲ ಬಂದುದು ನನ್ನ ಮನಕ್ಕೆ ಕಳೆದುಕೊಂಡ ಅಮೂಲ್ಯವಾದ ಎಂಥದೋ ಆನಂದ ನೀಡಿತು. ೩.೩೦ಕ್ಕೆ ಪ್ರವಾಸಿ ಮಂದಿರ, ದೇವಸ್ಥಾನ ಸೇರಿದ ನಾವು ಅಲ್ಲೇ ಚಹಾ ಕುಡಿದು, ಕುಡಿಯಲು ನೀರು ತುಂಬಿಸಿಕೊಂಡೆವು. ಜೀಪಿನಲ್ಲಿ ಸಾಗುವ ದಾರಿಗೆ ಅದೇ ಕೊನೆ.


ನಮ್ಮ ರಾತ್ರಿ ಟಿಕಾಣಿಯ ಶಿಖರ ಹತ್ತಿರವಾಗಿತ್ತಾದ್ದರಿಂದ ಊಟವನ್ನೂ ಸಹ ಅಲ್ಲೇ ಕಟ್ಟಿಸಿಕೊಂಡೆವು. ಊಟ ತಯಾರಾದ ಮೇಲೆ ಊಟದ ಚೀಲವನ್ನು ಹೊತ್ತು ನಾನು, ಕಾರ್ತಿಕ್, ಕಾರ್ತಿಕ್–ಮೈಸೂರು ಸರ್ವಜ್ಞ ಪೀಠದತ್ತ ಹೆಜ್ಜೆ ಇಟ್ಟೆವು.


ಸಮುದ್ರ ಮಟ್ಟಕಿಂತ ೧೩೪೩ ಮೀಟರ್ ಗಳ ಎತ್ತರ ತಲುಪಿದ ಆ ಜಾಗವು ಶಂಕರಾಚಾರ್ಯರು ಧ್ಯಾನ ಮಾಡಿದ ಸ್ಥಳವಂತೆ. ಆ ಸುತ್ತಲಿನ ಸುಂದರ ದೃಶ್ಯ ನೋಡಿದ ನಮಗೆ ಶಂಕರಾಚಾರ್ಯರು ಏಕೆ ಈ ಸ್ಥಳವನ್ನೇ ಧ್ಯಾನಕ್ಕಾಗಿ ಆರಿಸಿಕೊಂಡರೆಂಬುದು ಸ್ಪಷ್ಟವಾಗಿ ಹೋಯಿತು. ಅಂತಹ ಪ್ರಶಾಂತ ತಾಣವದು, ಭೂಲೋಕದಲ್ಲಿ ಇಂತಹ ಸುಂದರ ಶಾಂತಿಯ ಪ್ರದೇಶ ಇನ್ನೊಂದು ಇರಲಿಕ್ಕಿಲ್ಲ ಅಂತ ನನಗನಿಸಿತು.


ಸೂರ್ಯಾಸ್ಥದ ವೀಕ್ಷಣೆಗೆಂದು ಕಾದು ಕುಳಿತಿದ್ದ ನಮಗೆ ಸೂರ್ಯ ಮೋಡಗಳ ನಡುವೆ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದುದರಿಂದ ಸೂರ್ಯಾಸ್ಥದ ದೃಶ್ಯವನ್ನು ಸವಿಯಲು ಆಗುವುದೋ ಇಲ್ಲವೋ ಎಂಬ ಆತಂಕ ಮೂಡಿತ್ತು. ಆದರೂ ಸೂರ್ಯ ಮುಳುಗುವ ಸಮಯಕ್ಕೆ ಮೋಡಗಳು ಮರೆಯಾಗಿ, ಒಂದು ಕ್ಷಣ , ಒಂದೇ ಒಂದು ಕ್ಷಣ ಜೀವನದಲ್ಲಿ ಮರೆಯಲಾಗದ ಸುಂದರ ಸೂರ್ಯಾಸ್ಥವನ್ನು ನೋಡಿದ ನನ್ನ ಕಂಗಳು ಮತ್ತು ಸೆರೆಹಿಡಿದ ಕ್ಯಾಮೆರಾ ಧನ್ಯ ಎನಿಸಿತು.


ಸೂರ್ಯಾಸ್ಥವಾದ ಕೆಲವೆ ನಿಮಿಷಗಳೊಳಗಾಗಿ ಎಲ್ಲೆಲ್ಲು ಕತ್ತಲು ಆವರಿಸಿಕೊಂಡಿತು. ಅಷ್ಟರಲ್ಲಿ ಪಕ್ಕದ ಇನ್ನೊಂದು ಬೆಟ್ಟದಂಚಿಗೆ ಹೋಗಿ ಬಂದೆವು. ೭ಕ್ಕೆ ತಂದಿದ್ದ ಊಟ ಮುಗಿಸಿದೆವು. ದಣಿವಾದವರು ಮಲಗಲು ಅಣಿಯಾದರು. ಉಳಿದವರು ಕಾರ್ಡ್ಸ್ ಆಡಲು ಶುರು ಮಾಡಿದರು, ನನಗೋ ವೀಕ್ಷಕನಾಗುವ ಸಂಭ್ರಮ. ಮೋಡಗಳ ಗುಂಪು ನಮನ್ನು ಹಾದುಹೋಗುವಾಗ ಅತೀವ ಚಳಿ ಅನಿಸುತಿತ್ತು. ಮೋಡ ಮರೆಯಾಗಲು ಅಲ್ಲಿ ಇಲ್ಲಿ ಒಂದೊಂದು ನಕ್ಷತ್ರ ಮಿನುಗತೊಡಗಿದವು. ಬೆಟ್ಟದ ಕೆಳಗೆ ಹಳ್ಳಿಯ ಮನೆಗಳ ಸಾಲು ದೀಪಗಳು ಮಿಂಚು ಹುಳುಗಳ ಸಾಲುಗಳಂತೆ ಕಾಣುತಿದ್ದುದು ಬಣ್ಣಿಸಲಸಾಧ್ಯ. ರಾತ್ರಿ ೯.೩೦ ಹೊತ್ತಿಗೆ ಆ ಶುಭ್ರ ನೀಲಾಕಾಶದಲ್ಲಿ ಫಳ ಫಳ ಹೊಳೆಯುವ ನಕ್ಷತ್ರ ನೋಡುತ್ತಾ ಮಲಗಿದ್ದ ಆ ಘಳಿಗೆ ನನ್ನ ಸ್ಮೃತಿಪಟಲದಲ್ಲಿ ಇನ್ನೂ ಹಸಿರಾಗಿದೆ..


ಮುಂಜಾನೆ ೫ಕ್ಕೆ ಎಚ್ಚರವಾದ ನಂತರ ಆ ಚಳಿಗೆ ಮತ್ತೆ ನಿದ್ದೆ ಹತ್ತಲೇ ಇಲ್ಲ. ಎಷ್ಟು ಎಣಿಸಿದರೂ ಮುಗಿಯಲಾರದಷ್ಟು ನಕ್ಷತ್ರ ಪುಂಜ. ನಿಧಾನಕ್ಕೆ ಕತ್ತಲು ಹರಿದು ಬೆಳಕು ಮೂಡಿತು. ನಿಧಾನವಾಗಿ ತಿಪ್ಪ ತಿಪ್ಪ ಹೆಜ್ಜೆಗಳನ್ನಿಟ್ಟು ನಮ್ಮೆಡೆಗೇ ಬರುತ್ತಿರುವಂತೆ ಭಾಸ್ಕರನು ಮೂಡಿಬಂದನು.


೭.೩೦ ಎಲ್ಲಾ ಕೆಳಗಿಳಿಯಲು ಶುರು ಮಾಡಿದೆವು. ದೇವಸ್ಥಾನ ಹತ್ತಿರದ ಉಪಹಾರಗೃಹ ಸೇರಿದೆವು. ಮುಖ ತೊಳೆಯುವಷ್ಟರಲ್ಲಿ ತಿಂಡಿ ತಯಾರಾಗಿತ್ತು. ತಿಂಡಿ ಮುಗಿಸಿ ಒಂದು ಗುಂಪು–ಛಾಯಾಚಿತ್ರ ತೆಗೆಸಿಕೊಂಡ ಬಳಿಕ ಮುಂದಿನ ಚಾರಣ ಶುರುವಾಯಿತು. ಶಿಖರವನ್ನು ಒಂದೊಂದು ಹಂತವಾಗಿ ಇಳಿಯುತ್ತಾ ೧೦.೩೦ಕ್ಕೆ ವಲ್ಲೂರು ಸೇರಿದೆವು.


ಅಲ್ಲಿ ತುಸು ವಿಶ್ರಮಿಸಿ ಮುಂದೆ ಹೋಗುವ ಅರಶಿನಗುಂಡಿ ಜಲಪಾತಕ್ಕೆ ಮಾರ್ಗದರ್ಶಕರು ಸಿಗುತ್ತಾರ ಎಂದು ವಿಚಾರಿಸಿದೆವು. ಯಾರು ಸಿಗಲಿಲ್ಲ. ರಸ್ತೆ ಕಡಿದಾದ ಕಾರಣ ಇಲ್ಲಿಯ ತನಕ ನಮ್ಮ ವಾಹನ ಕೂಡ ಬರಲಾಗುವುದಿಲ್ಲ ಎಂದರು. ೧೧.೩೦ಕ್ಕೆ ಹೊರಟು ಇನ್ನುಳಿದ ೪ ಕಿ.ಮಿ ಚಾರಣ ಮುಗಿಸಿದೆವು.


೧೨.೩೦ಕ್ಕೆ ನಮ್ಮ ವಾಹನವಿದ್ದ ಜಾಗ ಕಾರಕಟ್ಟೆಗೆ ಬಂದಿದ್ದೆವು.(ಇಲ್ಲಿಂದ ಕೊಡಚಾದ್ರಿಗೆ ೧೦ ಕಿ.ಮಿ ಚಾರಣ). ಎಲ್ಲರೂ ಬಂದು ಸೇರಿದ ಮೇಲೆ ಮಧ್ಯಾಹ್ನ ೧ಕ್ಕೆ ಅರಶಿನಗುಂಡಿ ಜಲಪಾತದ ಕಡೆಗೆ ಪಯಣ ಬೆಳೆಸಿದೆವು.


ಮುಂದೆ ಮೂಕಾಂಬಿಕ ಅಭಯಾರಣ್ಯ ದ್ವಾರ ಸೇರಿದೆವು. ಇಲ್ಲಿಂದಲೇ ಅರಶಿನಗುಂಡಿ ಜಲಪಾತಕ್ಕೆ ದಾರಿ. ನಂತರ ೩ ಕಿ.ಮಿ ಚಾರಣದ ಬಳಿಕ ಒಂದು ಸಂಗಮ ಸೇರಿದೆವು. ಎಡಕ್ಕೆ ಸಣ್ಣದೊಂದು ದಾರಿಯಿದ್ದರೆ ಬಲಕ್ಕೆ ದೊಡ್ಡ ರಸ್ತೆಯೇ ಮುಂದುವರೆದಿತ್ತು. ಸಂಶಯದಲ್ಲಿ ಬಲಗಡೆಯ ರಸ್ತೆ ಹಿಡಿದೆವು. ಇನ್ನೂ ೨ ಕಿ.ಮಿ ಕಾಲೆಳೆಯುತ್ತ ಸಾಗಲು ಜಲಪಾತದ ಸುಳಿವೇ ಇಲ್ಲ! ಬಂದ ದಾರಿ ಸರಿ ಇದೆಯಾ ? ಎನ್ನುವ ಪ್ರಶ್ನೆ ಮೂಡಿತು. ಆದರೂ ಕಾರ್ತಿಕ್ ಮತ್ತು ಕಾರ್ತಿಕ್–ಮೈಸೂರು ಮುಂದೆ ಸಾಗಿದರು. ಅವರಿಬ್ಬರೂ ಅಪಾಯವನ್ನೂ ಎದುರಿಸುವ ತಾಕತ್ತಿದ್ದವರು. ಕೆಲವರು ಹಿಂದಿರುಗುತ್ತೇವೆಂದು ಮತ್ತೆ ಬಂದ ದಾರಿ ಹಿಡಿದರು. ನನಗೂ ದಾರಿ ತಪ್ಪಿಯೇ ಬಿಟ್ಟಿದೆ ಅನ್ನಿಸಿ ನಾನು ಕೂಡ ಅವರ ಜೊತೆಯಲ್ಲಿ ಸೇರಿದೆ. ಸಂಗಮ ರಸ್ತೆಯ ಹತ್ತಿರ ಬರಲು ಹಳ್ಳಿಯವರು ಕೆಲವರು ಸಿಕ್ಕಿದರು. ನಾವು ಜಲಪಾತದ ದಾರಿ ಕೇಳಿದಾಗ ಪುನಃ ಅವರು ನಾವು ಬಂದ ದಾರಿಯ ಕಡೆಯೇ ಕೈ ಮಾಡಿ ತೋರಿಸಿದರು.


ಸಮಯ ಆಗಲೇ ೩ ಆಗಿತ್ತು. ನಮ್ಮ ಬಳಿ ಆಹಾರ ಇರಲಿಲ್ಲ, ನೀರು ಕೂಡ ಸ್ವಲ್ಪವಷ್ಟೆ ಉಳಿದಿತ್ತು. ಜೊತೆಗೆ ಜಿಗಣೆಗಳಿಗೆ ನಮ್ಮ ಕಾಲಿನ ರಕ್ತ ಹೀರುವ ಉತ್ಸಾಹ. ಸಮಯದ ಅಭಾವದ ಕಾರಣ ನೀವು ಹಿಂದಿರುಗಲು ಕಷ್ಟವಾಗಬಹುದೆಂದು ಆ ಜನರು ಕಾಳಜಿಯಿಂದಲೇ ಹೇಳಿದರು. ಆದರೂ ನಾನು ಮನಸ್ಸು ಮಾಡಿದೆ ಇಷ್ಟು ಕಷ್ಟಪಟ್ಟು ಇಲ್ಲಿಯತನಕ ಬಂದು ಜಲಪಾತದ ಸೊಬಗನ್ನು ಕಂಡು ಅನುಭವಿಸಿ ಹೋಗದಿದ್ದರೆ ಹೇಗೆ ?


ನಮ್ಮ ಜೊತೆಯಿದ್ದ  ಲಕ್ಷ, ನಿಲೀಮ ಮತ್ತು ಸತೀಶ್ ಕೂಡ ಇದಕ್ಕೆ ಸ್ಪಂದಿಸಿದರು. ಅವರು ಸ್ವಲ್ಪ ನಿಧಾನಕ್ಕೆ ಬರಲು ನಾನು ನನ್ನ ವೇಗದಲ್ಲಿ ಸಾಗಿದೆ. ಕಡಿದಾದ ಕಾಡಿನ ದಾರಿಯಲ್ಲಿ ದಾರಿಮಾಡಿಕೊಂಡು ಸಾಗಿದೆವು. ಸ್ವಲ್ಪ ದೂರದ ಬಳಿಕ ಕಾರ್ತಿಕ್ ಸಿಕ್ಕಿದ. ಕೊನೆಗೂ ಅರಶಿನಗುಂಡಿ ಜಲಪಾತ ಎಡಕ್ಕೆ ಎನ್ನುವ ಚಿಹ್ನಾ ಫಲಕ ಸಿಕ್ಕಿತು.


ಅಲ್ಲಿಂದ ಕೆಳಗೆ ಇಳಿಯುವ ದಾರಿ. ಕೆಲವು ಕಡೆ ಜಾರಿದರೂ ಜಲಪಾತದ ದಾರಿಯಲ್ಲಿದ್ದೆವು. ಎರಡು ಕಡೆ ನೀರಿನ ಹೊಳೆ ದಾಟಲು ಸುಂದರ ನಯನ ಮನೋಹರವಾದ ಧಾರಾಕಾರವಾಗಿ ಬೀಳುತ್ತಿದ್ದ ಜಲಪಾತ ನಮ್ಮ ಮುಂದಿತ್ತು.


ಚಾರಣದ ಆಯಾಸ, ಕಾಲಿಗೆ ಹತ್ತಿಕೊಂಡ ಜಿಗಣೆ ಎಲ್ಲಾ ಮರೆತು ಸ್ಥಬ್ದವಾಗಿ ಆ ಜಲಪಾತವನ್ನೇ ನೋಡುತ್ತಾ ನಿಂತೆವು. ಮೂಕವಾಗಿ ಹೋದೆವು. ಸ್ವಲ್ಪ ಹೊತ್ತು ನೀರಿನಲ್ಲಿ ಆಟವಾಡಿ ಕತ್ತಲು ಆಗುವದರೊಳಗೆ ಹೆದ್ದಾರಿ ಸೇರುವುದು ನಮ್ಮ ಗುರಿಯಾಗಿತ್ತು. ೫.೪೫ಕ್ಕೆ ಸುಂದರ ಸೂರ್ಯಾಸ್ಥವಾಯಿತು .ಬೆಳಕು ಸರಿದು ಕೂಡಲೇ ಕತ್ತಲು ಅವರಿಸತೊಡಗಿತು. ಹೊಟ್ಟೆಗಿಲ್ಲದ ನಾವು ಬಹಳ ಕಷ್ಟಕರ ಚಾರಣದ ನಂತರ ಸಂಗಮ ರಸ್ತೆ ಸೇರಿ ಅಲ್ಲಿಂದ ಹೆದ್ದಾರಿ ಸೇರಲು ೬.೩೦ ಆಯಿತು.


ಅರಶಿನಗುಂಡಿ ಚಾರಣ ಮಾಡಿ ಬಂದ ಮೇಲೆ ಅಲ್ಲಿಗೆ ಬರದೆ ಬಸ್ಸಿನ ಬಳಿಯಲ್ಲೇ ಹೊಳೆಯಲ್ಲಿ ಆಡಿಕೊಂಡಿದ್ದ ನಮ್ಮ ಸಹ ಚಾರಣಿಗರಿಂದ ಚಪ್ಪಾಳೆಯ ಭವ್ಯ ಅಭಿನಂದನೆ ದೊರೆಯಿತು. ಕೊಲ್ಲೂರು ದೇವಸ್ಥಾನಕ್ಕೆ ಹೋಗದಿದ್ದರೂ ಅಲ್ಲಿಗೆ ಹೋಗಿ ಬಂದ ನಮ್ಮ ಸ್ನೇಹಿತರಿಂದ ಪ್ರಸಾದವಂತೂ ಸಿಕ್ಕಿತು.


ಸ್ವಲ್ಪ ವಿಶ್ರಮಿಸಿ ರಾತ್ರಿ ೭.೧೫ ಕ್ಕೆ ಶಿವಮೊಗ್ಗದ ಕಡೆಗೆ ಪಯಣ ಸಾಗಿತು. ೮.೩೦ ಕ್ಕೆ ನಿಟ್ಟೂರಿನಲ್ಲಿ ಮೊದಲ ದಿನ ತಿಂದ ಉಪಹಾರಗೃಹದಲ್ಲಿ ದೋಸೆ ತಿಂದೆವು. ಬೆಳಿಗ್ಗೆ ೬.೩೦ಕ್ಕೆ ಬೆಂಗಳೂರು ಸೇರಿದೆವು. ಬಹು ನಿರೀಕ್ಷೆಯ ಕೊಡಚಾದ್ರಿ ಚಾರಣ ಸಾವಿರ ಸುಂದರ ಸವಿ ನೆನಪುಗಳ ಬುತ್ತಿಯಾಯಿತು. ಚಾರಣ ಆಯೋಜಿಸಿದ ಬಾಸ್ಕ್ ತಂಡದ ಮುದಸ್ಸರ್  ಅವರಿಗೆ ಧನ್ಯವಾದಗಳು.


-ಅಪೂರ್ವ.ಜಿ

ಎಂಜಿನಿಯರ್, ಹವ್ಯಾಸೀ ಬರಹಗಾರ , ಬೆಂಗಳೂರು .  ಬೆಂಗಳೂರು 

66 views0 comments

Comments


bottom of page