ಕಸಾಪ ಚುನಾವಣೆ ಹಿನ್ನೆಲೆಯಲ್ಲಿ ...
ಕೆಲವು ವಿಚಾರಗಳು....
ಅಪಾಯದಲ್ಲಿ ಕಸಾಪ
ರವಿವಾರ ಚುನಾವಣೆ. ಕಸಾಪ ರಾಜ್ಯ ಹಾಗೂ ಜಿಲ್ಲಾ ಸ್ಪರ್ಧಿಗಳ ಪ್ರಚಾರ ಜೋರಾಗಿದೆ. ರಾಜಕಾರಣಿಗಳಂತೆಯೇ ಬಗೆಬಗೆಯ ಬಣ್ಣ ಬಣ್ಣದ ಭರವಸೆಗಳನ್ನು ನೀಡಲಾಗುತ್ತಿದೆ. ಪ್ರಜ್ಞಾವಂತ ಮತದಾರರು ಇದಕ್ಕೆಲ್ಲ ಮರುಳಾಗಲಿಕ್ಕಿಲ್ಲ. ಆದರೆ ಕಸಾಪ ಮತದಾರರಲ್ಲಿ ಪ್ರಜ್ಞಾವಂತರ ಪ್ರಮಾಣ ಕಡಿಮೆ ಎಂದರೆ ಸಿಟ್ಟಾಗಬೇಕಿಲ್ಲ . ಅದು ವಾಸ್ತವ. ಅದಕ್ಕೆ ಕಾರಣ ಹಿಂದೆ ಕಸಾಪ ಅಧಿಕಾರದಲ್ಲಿದ್ದವರು ಸ್ವಲಾಭಕ್ಕಾಗಿ ತಾವೇ ಹಣ ತುಂಬಿ ಬೇಕಾಬಿಟ್ಟಿಯಾಗಿ ಸದಸ್ಯರ ಸಂಖ್ಯೆ ಹೆಚ್ಚಿಸಿದ್ದು. ಇದು ರಾಜ್ಯ ಮಟ್ಟದಲ್ಲೂ ಆಗಿದೆ, ಜಿಲ್ಲಾ ಮಟ್ಟದಲ್ಲೂ ಆಗಿದೆ. ಕಸಾಪ ಅಂದರೆ ಏನು ಎಂದು, ಸಾಹಿತ್ಯ ಅಂದರೆ ಏನು ಗೊತ್ತಿಲ್ಲದವರನ್ನೆಲ್ಲ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ. ಇದು ತಿರುಗಿ ತಾವೇ ಆರಿಸಿಬರಲು ಮಾಡಿದ ಉಪಾಯ. ಮತ್ತು ಹಾಗೆ ಮರಳಿ ಬರುತ್ತಲೂ ಇದ್ದಾರೆ.
ಸರಿ, ಇಲ್ಲಿ ಇನ್ನೊಂದು ವಿಚಾರ. ಕೆಲವರು ಸದಸ್ಯರ ಸಂಖ್ಯೆಯನ್ನು ಕೋಟಿಗೆ ಹೆಚ್ಚಿಸುವದಾಗಿಯೂ ಹೇಳುತ್ತಿದ್ದಾರೆ. ಈಗ ಇರುವ ಮೂರು ಲಕ್ಷ ಮತದಾರರನ್ನು ತಲುಪಲಿಕ್ಕೇ ಅಭ್ಯರ್ಥಿಗಳು ಹತ್ತಿಪ್ಪತ್ತು ಲಕ್ಷ ಖರ್ಚು ಮಾಡುವ ಪರಿಸ್ಥಿತಿ ಇದೆ. ಹಾಗಿರುವಾಗ ಸದಸ್ಯರ ಸಂಖ್ಯೆ ಕೋಟಿಗೆ ಹೋದಾಗ ಏನು ಅನಾಹುತ ಆದೀತು ಸ್ವಲ್ಪ ಯೋಚಿಸಿ. ಕಸಾಪಕ್ಕೆ ಸ್ಪರ್ಧಿಸುವವರೂ ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕಾದೀತು. ನಿಜವಾದ ಸಾಹಿತಿಗಳು ಎಂದಾದರೂ ಸ್ಪರ್ಧೆಗಿಳಿಯಲು ಸಾಧ್ಯವೇ? ಆಗ ಏನಾಗುತ್ತದೆಂದರೆ ಹಣವಂತ ರಾಜಕಾರಣಿಗಳು ಮತ್ತು ಉದ್ಯಮಿಗಳು ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ನಿಲ್ಲುತ್ತಾರೆ. ಈ ಅಪಾಯ ಈಗಾಗಲೇ ಕಂಡುಬಂದಿದೆ. ಭ್ರಷ್ಟ ನಿವೃತ್ತ ಅಧಿಕಾರಿಗಳೂ ಕಸಾಪ ಪ್ರವೇಶಿಸಿದ್ದಾರೆ.
ಬಹುಶಃ ಕಸಾಪ ವ್ಯವಸ್ಥೆಯ ಸುಧಾರಣೆ ಇನ್ನು ಮುಂದಿನ ದಿನಗಳಲ್ಲಿ ಯಾರಿಂದಲೂ ಸಾಧ್ಯವಿಲ್ಲದ ಸ್ಥಿತಿಗೆ ತಲುಪಲಿದೆ. ಇದೇನೂ ನಿರಾಶಾವಾದವಲ್ಲ. ಕಟುವಾಸ್ತವ. ಈಗಾಗಲೇ ಕಸಾಪ ಬಹಳ ಮಟ್ಟಿಗೆ ಸಾಹಿತ್ಯದಿಂದ ದೂರವಾಗಿದೆ. ರಾಜ್ಯ ಮತ್ತು ಜಿಲ್ಲೆಗಳಲ್ಲಿ ಅ-ಸಾಹಿತಿಗಳೇ ಆಯ್ಕೆಯಾಗುತ್ತಿದ್ದಾರೆ. ಹಣ ಅಧಿಕಾರ ಕಸಾಪವನ್ನು ಆಕ್ರಮಿಸಿಕೊಳ್ಳುತ್ತಿದೆ. ಪ್ರಜ್ಞಾಹೀನ ಮತದಾರರಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಸುಶಿಕ್ಷಿತ ವಿದ್ಯಾವಂತ ಸಾಹಿತಿ ಪ್ರಾಧ್ಯಾಪಕ ವರ್ಗದವರೇ ದೊಡ್ಡ ಜನರ ಬಾಲಬಡುಕರೂ, ಗುಲಾಮರೂ ಆದಾಗ ಯಾರಿಂದ ತಾನೇ ಏನನ್ನು ನಿರೀಕ್ಷಿಸಲು ಸಾಧ್ಯ?
ಏನಾಗುತ್ತೋ ಆಗಲಿ... ಚುನಾವಣೆಯಂತೂ ಆಗಿಯೇ ಆಗುತ್ತದೆ. ಯಾರೋ ಒಂದಿಷ್ಟು ಜನ ಆರಿಸಿ ಬರುತ್ತಾರೆ. ಐದು ವರ್ಷ ದರ್ಬಾರು ನಡೆಸುತ್ತಾರೆ. ಸರಕಾರವಂತೂ ಸಮ್ಮೇಳನಗಳೆಂಬ ಸಂತೆಗೆ ಹಣ ಕೊಡುತ್ತದೆ. ಇವರೂ ಒಂದಿಷ್ಟು ಹಣ ಮಾಡಿಕೊಳ್ಳುತ್ತಾರೆ. ನಿಜವಾದ ಅರ್ಹ ಸಾಹಿತಿಗಳನ್ನು ಪರಿಷತ್ತಿನಿಂದ ದೂರ ಸರಿಸುತ್ತಾರೆ.
ಜೈ ಅಲಕ್ ನಿರಂಜನ್!
ಎಲ್.ಎಸ್.ಶಾಸ್ತ್ರಿ.
コメント